ಕೈಕೊಟ್ಟ ಅದೃಷ್ಟ; ಕ್ರಿಕೆಟ್ ಲೋಕದಲ್ಲಿ ವಿನೋದ್ ಕಾಂಬ್ಳಿ ಮಿಂಚಲೇ ಇಲ್ಲ ಯಾಕೆ?

ಮೈದಾನದಲ್ಲೇ ಕಣ್ಣೀರು ಹಾಕಿದ್ದ ಸಚಿನ್ ಬಾಲ್ಯದ ಗೆಳೆಯ

ಕೀರ್ತನ್ ಶೆಟ್ಟಿ ಬೋಳ, Apr 22, 2019, 6:18 PM IST

ಗುಡಿಸಲ ಬಾಲ್ಯ, ಶಾಲಾ ದಿನಗಳಲ್ಲೇ ವಿಶ್ವದಾಖಲೆ, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸಾಲು ಸಾಲು ಶತಕಗಳು, ವರ್ಣರಂಜಿತ ಜೀವನಶೈಲಿ, ಮೈದಾನದಲ್ಲಿ ಕಣ್ಣೀರು, ತಂಡದಿಂದ ಗೇಟ್ ಪಾಸ್, ರಾಜಕೀಯ, ಸಿನಿಮಾ, ಸಚಿನ್ ಎಂಬ ಜೀವದ ಗೆಳೆಯ, ಒಂದಷ್ಟು ವಿವಾದಗಳು . . . ಇದು ವಿನೋದ್ ಕಾಂಬ್ಳಿ ಎಂಬ ಅಪ್ಪಟ ಪ್ರತಿಭಾನ್ವಿತ ಆಟಗಾರನ ಜೀವನದ ಒನ್ ಲೈನ್ ಸ್ಟೋರಿ.

ವಿನೋದ್ ಗಣಪತ್ ಕಾಂಬ್ಳಿ ಹುಟ್ಟಿದ್ದು ಜನವರಿ 18-1972ರಂದು. ಮಾಯಾ ನಗರಿ ಮುಂಬೈನ ಇಂದ್ರಾ ನಗರ್ ಎಂಬಲ್ಲಿನ ಗುಡಿಸಲು ಕಾಂಬ್ಳಿಯ ಜನ್ಮಸ್ಥಾನ. ತಂದೆ ಗಣಪತಿ ಒಬ್ಬ ಸಾಮಾನ್ಯ ಮೆಕ್ಯಾನಿಕ್. ಏಳು ಮಕ್ಕಳಲ್ಲಿ ಕೊನೆಯವನಾದ ವಿನೋದ್ ಕ್ರಿಕೆಟ್ ಪ್ರಾಕ್ಟೀಸ್ ಮಾಡಲು ಪ್ರತಿದಿನ ಮುಂಬೈನ ಲೋಕಲ್ ಟ್ರೈನ್ ನಲ್ಲಿ ಜನಜಂಗುಳಿಯ ನಡುವೆ ಪ್ರಯಾಣ ಮಾಡಬೇಕಿತ್ತು.

ದಾಖಲೆಯ ಜೊತೆಯಾಟ
ಮುಂಬೈನ ಶಾರದಾಶ್ರಮ ಶಾಲೆಯ ಪರವಾಗಿ ಆಡುತ್ತಿದ್ದ ವಿನೋದ್ ಕಾಂಬ್ಳಿ ತನ್ನ ಶಾಲಾ ದಿನಗಳ ಗೆಳೆಯ ಸಚಿನ್ ತೆಂಡುಲ್ಕರ್ ಜೊತೆಗೂಡಿ ವಿಶ್ವ ದಾಖಲೆಯ ಜೊತೆಯಾಟವಾಡಿದರು. ಸಚಿನ್ ಮತ್ತು ಕಾಂಬ್ಳಿ ಇಬ್ಬರು ಜೊತೆಗೂಡಿ ಗಳಿಸಿದ್ದು ಬರೋಬ್ಬರಿ 664 ರನ್. ಇದರಲ್ಲಿ ಕಾಂಬ್ಳಿ ಪಾಲು 349 ರನ್. ಈ ಒಂದು ಇನ್ನಿಂಗ್ಸ್ ಕೋಚ್ ರಮಾಕಾಂತ್ ಅಚ್ರೇಕರ್ ಹುಡುಗರನ್ನು ವಿಶ್ವಮಟ್ಟಕ್ಕೆ ಪರಿಚಯಿಸಿತ್ತು.

ಸಚಿನ್ ಗಿಂತ ಪ್ರಾಯದಲ್ಲಿ ಎರಡು ವರ್ಷ ಹಿರಿಯನಾದ ಕಾಂಬ್ಳಿಗೆ ಅದೃಷ್ಟ ಮಾತ್ರ ಸುಲಭದಲ್ಲಿ ಕೈಗೆಟಕುತ್ತಿರಲಿಲ್ಲ. ತೆಂಡುಲ್ಕರ್ ಗೆ ಸಮನಾಗಿ ಬ್ಯಾಟ್ ಬೀಸುತ್ತಿದ್ದ ಕಾಂಬ್ಳಿ ರಣಜಿ ಕ್ರಿಕೆಟ್ ಗೆ ಕಾಲಿಡುವ ಹೊತ್ತಲ್ಲಿ ಸಚಿನ್ ಭಾರತ ತಂಡದ ಪರ ಆಡಲು ಪಾಕಿಸ್ತಾನ ಪ್ರವಾಸ ಬೆಳೆಸಿಯಾಗಿತ್ತು.

1991ರ ಜನವರಿ 29ರಂದು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಕಾಂಬ್ಳಿ ತನ್ನ ಮೂರನೇ ಟೆಸ್ಟ್ ಪಂದ್ಯದಲ್ಲೇ ದ್ವಿಶತಕ ಬಾರಿಸಿದ್ದರು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 224 ರನ್ ಬಾರಿಸಿದ ಕಾಂಬ್ಳಿ, ಜಿಂಬಾಬ್ವೆ ವಿರುದ್ಧದ ಮುಂದಿನ ಪಂದ್ಯದಲ್ಲೇ 227 ರನ್ ಬಾರಿಸಿದ್ದರು. ಶ್ರೀಲಂಕಾ ವಿರುದ್ಧದ ಮುಂದಿನ ಎರಡು ಪಂದ್ಯಗಳಲ್ಲಿ 125 ಮತ್ತು 120 ರನ್ ಹೊಡೆದು ವಿಶ್ವಕ್ರಿಕೆಟ್ ನಲ್ಲಿ ತನ್ನ ಆಗಮನವನ್ನು ಭರ್ಜರಿಯಾಗಿಯೇ ಸಾರಿದ್ದರು. ಸತತ ಮೂರು ಇನ್ನಿಂಗ್ಸ್ ನಲ್ಲಿ ಮೂರು ಶತಕ ಬಾರಿಸಿದ ಏಕೈಕ ಆಟಗಾರ ವಿನೋದ್ ಕಾಂಬ್ಳಿ. ತನ್ನ ಮೊದಲ ಎಂಟು ಟೆಸ್ಟ್ ಇನ್ನಿಂಗ್ಸ್ ನಲ್ಲಿ ಎರಡು ದ್ವಿಶತಕ, ಎರಡು ಶತಕ ಬಾರಿಸಿದ ಕಾಂಬ್ಳಿ ತನ್ನ ಕ್ರಿಕೆಟ್ ಜೀವನದಲ್ಲಿ ಆಡಿದ್ದು ಕೇವಲ 17 ಟೆಸ್ಟ್ ಅಂದರೆ ನಂಬಲೇ ಬೇಕು !

ಕೇವಲ 14 ಇನ್ನಿಂಗ್ಸ್ ಗಳಲ್ಲಿ 1000 ಟೆಸ್ಟ್ ರನ್ ಗಳಿಸಿದ ವಿನೋದ್ ಕಾಂಬ್ಳಿ, ಅತೀ ಕಡಿಮೆ ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ ಭಾರತೀಯ ಎಂಬ ದಾಖಲೆ ಬರೆದಿದ್ದರು. ಮೊದಲ ಇನ್ನಿಂಗ್ಸ್ ನಲ್ಲಿ ಅದ್ಭುತ ಬ್ಯಾಟಿಂಗ್ ಮಾಡುತ್ತಿದ್ದ ಕಾಂಬ್ಳಿ, ಎರಡನೇ ಇನ್ನಿಂಗ್ಸ್ ನಲ್ಲಿ ಮಾತ್ರ ರನ್ ಗಳಿಸಲು ಪರದಾಡುತ್ತಿದ್ದರು. ಇದಕ್ಕೆ ಸಾಕ್ಷಿ ಕಾಂಬ್ಳಿ ಮೊದಲ ಇನ್ನಿಂಗ್ಸ್ ಸರಾಸರಿ 69.17 ಮತ್ತು ಎರಡನೇ ಇನ್ನಿಂಗ್ಸ್ ಸರಾಸರಿ ಕೇವಲ 9.40 !

1991ರಲ್ಲಿ ಪಾಕಿಸ್ತಾನ ವಿರುದ್ಧ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಕಾಂಬ್ಳಿ, ಒಟ್ಟು 104 ಏಕದಿನ ಪಂದ್ಯವಾಡಿದ್ದರು. ಆದರೆ ಟೆಸ್ಟ್ ನಂತೆ ನಿಗದಿತ ಓವರ್ ಕ್ರಿಕೆಟ್ ನಲ್ಲಿ ಬ್ಯಾಟ್ ಬೀಸಲು ಕಾಂಬ್ಳಿಗೆ ಸಾಧ್ಯವಾಗಿರಲಿಲ್ಲ. 32.59ರ ಸರಾಸರಿಯಲ್ಲಿ 2477 ರನ್ ಗಳಿಸಿದ್ದ ಕಾಂಬ್ಳಿ ಸಿಡಿಸಿದ್ದು ಕೇವಲ ಎರಡು ಏಕದಿನ ಶತಕ. ಕಾಂಬ್ಳಿ ಗೆಳೆಯ ಸಚಿನ್ ಆಗಲೇ ಸಾಲು ಸಾಲು ಶತಕ ಬಾರಿಸಿ ವಿಶ್ವಕ್ರಿಕೆಟ್ ನ ಪ್ರಮುಖ ಆಟಗಾರನಾಗಿದ್ದರು.

ಕೈಕೊಟ್ಟ ಅದೃಷ್ಟ: ಕ್ರಿಕೆಟ್ ಬದುಕಿನ ಆರಂಭದಲ್ಲೇ ಸಾಲು ಸಾಲು ಶತಕ ಬಾರಿಸಿ ವಿಶ್ವ ಕ್ರಿಕೆಟ್ ನಲ್ಲಿ ಸದ್ದು ಮಾಡಿದ್ದ ವಿನೋದ್ ಬ್ಯಾಟ್ ನಂತರ ಯಾಕೋ ಮಂಕಾಯಿತು. 12 ಪಂದ್ಯಗಳಲ್ಲಿ ಒಂದು ಸಾವಿರ ರನ್ ಗಡಿ ದಾಟಿದ್ದ ಕಾಂಬ್ಳಿ 17 ಪಂದ್ಯಗಳಿಂದ ಗಳಿಸಿದ್ದು 1084 ರನ್ ಮಾತ್ರ. ಒಂದೆರಡು ಪಂದ್ಯಗಳ ವೈಫಲ್ಯ ಕಾಂಬ್ಳಿಯನ್ನು ತಂಡದಿಂದ ಹೊರಬೀಳುವಂತೆ ಮಾಡಿತು. ಇದೇ ಸಮಯದಲ್ಲಿ ತಂಡಕ್ಕೆ ಆಯ್ಕೆಯಾದ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ತಮ್ಮ ಸ್ಥಾನ ಭದ್ರ ಪಡಿಸಿದ್ದರಿಂದ ಕಾಂಬ್ಳಿ ನಂತರ ಟೆಸ್ಟ್ ತಂಡದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಹೀಗೆ ಪ್ರತಿಭಾನ್ವಿತ ಆಟಗಾರನ ಟೆಸ್ಟ್ ಬದುಕು ಕೇವಲ 24ನೇ ವರ್ಷದಲ್ಲೇ ಅಂತ್ಯವಾಯಿತು.

2000ನೇ ಇಸವಿಯವರೆಗೂ ಭಾರತ ಏಕದಿನ ತಂಡದ ಸದಸ್ಯನಾಗಿದ್ದ ಕಾಂಬ್ಳಿ ಶ್ರೀಲಂಕಾ ವಿರುದ್ಧ ಕೊನೆಯ ಪಂದ್ಯವಾಡಿದ್ದರು. ಆದರೆ ಕಾಂಬ್ಳಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಣೆ ಮಾಡಿದ್ದು ಬರೋಬ್ಬರಿ 11 ವರ್ಷಗಳ ನಂತರ. ಅಂದರೆ 2011ರಲ್ಲಿ !

ಮೈದಾನದಲ್ಲಿ ಕಣ್ಣೀರು

 1996ರ ವಿಶ್ವಕಪ್ ಸೆಮಿ ಫೈನಲ್. ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಆತಿಥೇಯ ಭಾರತ ಮತ್ತು ಶ್ರೀಲಂಕಾ ನಡುವಿನ ಸೆಣಸಾಟದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಲಂಕಾ 8 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಭಾರತ ಕೇವಲ120 ರನ್ ಗಳಿಗೆ ಎಂಟು ವಿಕೆಟ್ ಕಳೆದುಕೊಂಡಿತ್ತು. ಕಾಂಬ್ಳಿ 10 ರನ್ ಗಳಿಸಿ ಆಡುತ್ತಿದ್ದರು. ಭಾರತ ಸೋಲುವ ಬೇಸರದಿಂದ ಅಭಿಮಾನಿಗಳು ಮೈದಾನಕ್ಕೆ ಬಾಟಲಿಗಳನ್ನು ಎಸೆದು ಮತ್ತು ಮೈದಾನಕ್ಕೆ ಇಳಿದು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಪಂದ್ಯಕ್ಕೆ ಅಡ್ಡಿಯಾದಾಗ ಮ್ಯಾಚ್ ರೆಫ್ರೀ ಶ್ರೀಲಂಕಾ ವಿಜಯಿ ಎಂದು ಘೋಷಿಸಿದರು. ಇದರಿಂದ ಬೇಸರಗೊಂಡ ಕಾಂಬ್ಳಿ ಕಣ್ಣೀರು ಹಾಕಿಕೊಂಡು ಮೈದಾನದಿಂದ ಹೊರಬಂದಿದ್ದು ದೊಡ್ಡ ಸುದ್ದಿಯಾಗಿತ್ತು.

ವೈವಾಹಿಕ ಬದುಕು: ಕ್ರಿಕೆಟ್ ಆಟದಂತೆ ಕಾಂಬ್ಳಿ ವೈವಾಹಿಕ ಜೀವನದಲ್ಲೂ ಏಳು ಬೀಳು ಕಂಡವರು. ಪುಣೆಯ ಬ್ಲೂ ಡೈಮಂಡ್ ಹೋಟೆಲ್ ಕೆಲಸ ಮಾಡುತ್ತಿದ್ದ ನಿಯೋಲಾ ಲೀವಿಸ್ ಅವರನ್ನು ಕಾಂಬ್ಳಿ 1998ರಲ್ಲಿ ಮದುವೆಯಾಗುತ್ತಾರೆ. ಇವರಿಬ್ಬರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿ ನಿಯೋಲಾಗೆ ವಿಚ್ಛೇದನ ನೀಡಿ, ಫ್ಯಾಶನ್ ಮಾಡೆಲ್ ಆಗಿದ್ದ ಆಂಡ್ರಿಯಾ ಹೆವೈಟ್ ಅವರನ್ನು ವಿವಾಹವಾದರು. ನಂತರ ಕಾಂಬ್ಳಿ ಕ್ರೈಸ್ತ ಧರ್ಮಕ್ಕೆ ಸೇರ್ಪಡೆಯಾಗುತ್ತಾರೆ.

ಸಿನಿಮಾ ನಟನೆ: ಕ್ರಿಕೆಟ್ ನಿಂದ ದೂರವಾದ ನಂತರ ಕಾಂಬ್ಳಿ ಬಾಲಿವುಡ್ ಪ್ರವೇಶ ಮಾಡಿದ್ದರು. 2002ರಲ್ಲಿ ಸಂಜಯ್ ದತ್ ಅಭಿನಯದ ‘ಅನರ್ಥ್’ ಚಿತ್ರದಲ್ಲಿ ನಟಿಸಿದ್ದ ಕಾಂಬ್ಳಿ, ನಂತರ 2009ರಲ್ಲಿ ‘ಪಲ್ ಪಲ್ ದಿಲ್ ಕೇ ಸಾಥ್’ ಚಿತ್ರದಲ್ಲಿ ನಟಿಸಿದ್ದರು. 2015ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಕಾಂಬ್ಳಿ ಬೆತ್ತನಗೆರೆ ಎಂಬ ಚಿತ್ರದಲ್ಲಿ ನಟಿಸಿದ್ದರು. DD ನ್ಯಾಷನಲ್ ವಾಹಿನಿಯ ಮಿಸ್ ಇಂಡಿಯಾ ಧಾರವಾಹಿಯಲ್ಲಿ ನಟಿಸಿದ್ದ ವಿನೋದ್ ಕಾಂಬ್ಳಿ ಬಿಗ್ ಬಾಸ್ ಸ್ಪರ್ಧಿಯೂ ಆಗಿದ್ದರು.

ರಾಜಕೀಯ ಪ್ರವೇಶ: ರಾಜಕೀಯ ಕ್ಷೇತ್ರದಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಕಾಂಬ್ಳಿ, 2009ರಲ್ಲಿ ಲೋಕ್ ಭಾರತಿ ಪಕ್ಷ ಸೇರಿ ಮುಂಬೈನ ವಿಕ್ರೋಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಆದರೆ ಕಾಂಬ್ಳಿ ಚುನಾವಣೆಯಲ್ಲಿ ಸೋಲನುಭವಿಸಿದ್ದರು.

ಸಚಿನ್ ಗೆಳೆತನ: ಶಾಲಾ ದಿನಗಳಿಂದಲೇ ಒಟ್ಟಿಗೆ ಕ್ರಿಕೆಟ್ ಆಡುತ್ತಿದ್ದ ಸಚಿನ್ ತೆಂಡುಲ್ಕರ್ ಜೊತೆಗೆ ಕಾಂಬ್ಳಿಗೆ ವಿಶೇಷ ಗೆಳೆತನವಿತ್ತು. ಕೇವಲ ಒಂದು ವರ್ಷಗಳ ಅಂತರದಲ್ಲಿ ಟೀಮ್ ಇಂಡಿಯಾ ಸೇರಿದ್ದ ಇಬ್ಬರೂ, ಅಲ್ಲೂ ಒಟ್ಟಿಗೆ ಆಡಿದ್ದರು. ಆದರೆ ಕಾಂಬ್ಳಿ ತಂಡದಿಂದ ಹೊರಬಿದ್ದ ನಂತರ ಇಬ್ಬರ ಗೆಳೆತನದಲ್ಲಿ ಬಿರುಕು ಮೂಡಿತ್ತು. ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕಾಂಬ್ಳಿ, ನಾನು ತಂಡದಿಂದ ಹೊರ ಬೀಳುವ ಸಂದರ್ಭದಲ್ಲಿ ಸಚಿನ್ ಯಾವ ರೀತಿಯ ಸಹಾಯವನ್ನೂ ಮಾಡಿರಲಿಲ್ಲ ಎಂದು ತಮ್ಮ ಅಸಮಧಾನ ಹೊರಹಾಕಿದ್ದರು. ಆದರೆ ಸಚಿನ್ ಮಾತ್ರ ಕಾಂಬ್ಳಿ ವಿಚಾರದಲ್ಲಿ ಎಲ್ಲೂ ತುಟಿ ಬಿಚ್ಚಿರಲಿಲ್ಲ. ತಮ್ಮ ಕ್ರಿಕೆಟ್ ವಿದಾಯದ ಭಾಷಣದಲ್ಲಿ ಎಲ್ಲರ ಹೆಸರು ಹೇಳಿದರೂ, ಬಾಲ್ಯದ ಗೆಳೆಯ ಕಾಂಬ್ಳಿ ಹೆಸರನ್ನು ಮಾತ್ರ ಸಚಿನ್ ಹೇಳಿರಲೇ ಇಲ್ಲ.

ಕೀರ್ತನ್ ಶೆಟ್ಟಿ ಬೋಳ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ