ತೇಜಸ್ವಿ, ಕೆದಂಬಾಡಿ ಮತ್ತು ಪ್ರಧಾನಿ ಮೋದಿಯ ‘ಮ್ಯಾನ್ ವರ್ಸಸ್ ವೈಲ್ಡ್’

Team Udayavani, Aug 2, 2019, 10:00 AM IST

ಈ ಹೊತ್ತು ಎರಡು ವಿದ್ಯಮಾನಗಳು ಸುತ್ತೆಲ್ಲ ವಿಶಿಷ್ಟವಾಗಿ ಸದ್ದು ಮಾಡುತ್ತಿವೆ. ಒಂದನೆಯದು ಮತ್ತು ಹೆಚ್ಚು ಜನಪ್ರಿಯತೆ ಗಳಿಸಿರುವುದು ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಂಡಿರುವ ಡಿಸ್ಕವರಿ ಚಾನೆಲ್‌ನ ಮ್ಯಾನ್ ವರ್ಸಸ್ ವೈಲ್ಡ್ ಸರಣಿಯ ಎಪಿಸೋಡ್. ಆ.12ರಂದು ಪ್ರಸಾರವಾಗಲಿರುವ ಈ ಕಂತಿನ ಪ್ರೊಮೋ ಈಗಾಗಲೇ ಹುಚ್ಚೆಬ್ಬಿಸಿದೆ, ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದೆ.

ಎರಡನೆಯದು ದೇಶದಲ್ಲಿ ಈಗ ಹುಲಿಗಳ ಸಂಖ್ಯೆ ಹೆಚ್ಚಿದೆ ಎಂಬ ಸುದ್ದಿ. ಚಿರತೆ, ಕರಡಿಗಳ ಜತೆಗೆ ಮುಖಾಮುಖಿ ನಾವು ಹತ್ತಿರದಿಂದ ಕಂಡು-ಕೇಳಿರುವಂಥದ್ದೇ.

ಈ ಹೊತ್ತಿನಲ್ಲಿ ಬೇಟೆ ಮತ್ತು ವನ್ಯಜೀವಿಗಳ ಜತೆಗೆ ಮುಖಾಮುಖಿಯನ್ನು ಚಿತ್ರಿಸುವ ಕನ್ನಡ ಸಾಹಿತ್ಯ ಸ್ಮರಣೆಗೆ ಬರುತ್ತದೆ. ಕೆದಂಬಾಡಿ ಜತ್ತಪ್ಪ ರೈಗಳು ಬರೆದ ಬೇಟೆಯ ನೆನಪುಗಳು ಅಂತಹ ಕೃತಿಗಳ ಸಾಲಿನಲ್ಲಿ ಮೊದಲನೆಯದಾದರೆ ಕನ್ನಡದ ಅರ್ನೆಸ್ಟ್ ಹೆಮಿಂಗ್ವೇ ಎನ್ನಬಹುದಾದ ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ ‘ರುದ್ರಪ್ರಯಾಗದ ಭಯಾನಕ ನರಭಕ್ಷಕ’, ‘ಮುನಿಸ್ವಾಮಿ ಮತ್ತು ಮಾಗಡಿಯ ಚಿರತೆ’ ಮತ್ತು ಕಾಡಿನ ಕತೆಗಳು ಸರಣಿಯ ಹಲವು ಪುಸ್ತಕಗಳು ಮನುಷ್ಯ ಮತ್ತು ಪ್ರಾಣಿಜಗತ್ತು ಹಾಸುಹೊಕ್ಕಾಗುವ ಸಂದರ್ಭಗಳನ್ನು ವಿಶ್ಲೇಷಿಸುತ್ತವೆ.

ಕನ್ನಡದಲ್ಲಿ ವಿಜ್ಞಾನ ಮತ್ತು ಪರಿಸರ ಸಾಹಿತ್ಯವನ್ನು ಸರಳವಾದ, ವಿಶಿಷ್ಟವಾದ ಮತ್ತು ಆಪ್ತವಾಗುವ ಶೈಲಿಯಲ್ಲಿ ಬರೆದುಕೊಟ್ಟವರು ಪೂರ್ಣಚಂದ್ರ ತೇಜಸ್ವಿ. ಅವರ ‘ರುದ್ರಪ್ರಯಾಗದ ಭಯಾನಕ ನರಭಕ್ಷಕ’ ಇಂಗ್ಲಿಷ್‌ನ ‘ಮ್ಯಾನ್ ಈಟಿಂಗ್ ಲಿಯೊಪಾರ್ಡ್ ಆಫ್ ರುದ್ರಪ್ರಯಾಗ್’ ಎಂಬ ಕೃತಿಯ ಕನ್ನಡ ರೂಪಾಂತರ. ಆಸಕ್ತಿಕರ ವಿಚಾರ ಎಂದರೆ, ಈ ಪುಸ್ತಕವನ್ನು ಬರೆದವರು ಜಿಮ್ ಕಾರ್ಬೆಟ್. ಆತ ಬ್ರಿಟಿಶ್ ಕರ್ನಲ್, ಈಗಿನ ಉತ್ತರಾಖಂಡ, ಉತ್ತರಪ್ರದೇಶ ಭಾಗದಲ್ಲಿ ಮನುಷ್ಯನನ್ನು ಬೇಟೆಯಾಡುವ ಅಭ್ಯಾಸ ಬೆಳೆಸಿಕೊಂಡ ಹುಲಿ-ಚಿರತೆಗಳ ಬೇಟೆಯಲ್ಲಿ ಸಿದ್ಧಹಸ್ತನೆನಿಸಿದ್ದವನು.

ಈ ಬೇಟೆಯ ಪ್ರವೃತ್ತಿಯ ಜತೆಗೆ ಸ್ವಾತಂತ್ರ್ಯಪೂರ್ವದ ಆ ಕಾಲಘಟ್ಟದಲ್ಲಿಯೇ ‘ಭಾರತ ವನ್ಯಮೃಗಗಳ ರಕ್ಷಣೆಯತ್ತ ಎಚ್ಚರ ತಾಳಬೇಕೆಂಬ ಕಾಳಜಿಯನ್ನೂ ಹೊಂದಿದ್ದವನು. ಜಿಮ್ ಕಾರ್ಬೆಟ್ ಬರೆದ ಪುಸ್ತಕ ನರಭಕ್ಷಕ ಚಿರತೆಯೊಂದರ ಬೇಟೆಯ ಅನುಭವ ಮಾತ್ರವಾಗದೆ ಆ ಕಾಲದ ಜನಜೀವನ ಹಾಗೂ ಪರಿಸರ ಮತ್ತು ಮನುಷ್ಯನ ಅಂತರ್‌ ಸಂಬಂಧಗಳನ್ನು ಪರಿಶೀಲಿಸುತ್ತದೆ. ಈತನ ಹೆಸರನ್ನೇ ಹೊಂದಿರುವ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಪ್ರಧಾನಿ ಮೋದಿ ಮ್ಯಾನ್ ವರ್ಸಸ್ ವೈಲ್ಡ್ ಸರಣಿಯ ಎಪಿಸೋಡ್‌ ನಲ್ಲಿ ಕಾಣಿಸಿಕೊಂಡಿದ್ದಾರೆ.

‘ಕೆದಂಬಾಡಿ ಜತ್ತಪ್ಪ ಗೌಡರ ‘ಬೇಟೆಯ ನೆನಪುಗಳು’ ಕೃತಿಯಿಂದ ತೊಡಗಿ ತೇಜಸ್ವಿಯವರು ಕನ್ನಡಕ್ಕೆ ತಂದಿರುವ ‘ರುದ್ರಪ್ರಯಾಗದ ಭಯಾನಕ ನರಭಕ್ಷಕ’ದ ಸಹಿತ ಬೇಟೆಯ ಸಾಹಿತ್ಯ ಅಥವಾ ಪರಿಸರ ಸಾಹಿತ್ಯ ಎನ್ನಬಹುದಾದ ಎಲ್ಲವೂ ‘ಭಾರತ ಸ್ವಾತಂತ್ರ್ಯಪಡೆದ 1950ರ ಹಿಂದುಮುಂದಿನ ದಶಕಗಳ ವನ್ಯಜೀವಿ ಬಾಹುಳ್ಯದ ಕಾಲಕ್ಕೆ ಸಂಬಂಧಿಸಿದಂಥವು. ಈಗ ದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿರುವುದು, ಪ್ರಧಾನಿ ಮೋದಿ ‘ಮ್ಯಾನ್ ವರ್ಸಸ್ ವೈಲ್ಡ್’ ಸರಣಿಯಲ್ಲಿ ‘ಭಾಗವಹಿಸಿರುವುದು ಎರಡೂ ಕ್ಷೀಣಿಸುತ್ತಿರುವ ವನ್ಯಮೃಗಗಳ ಉಳಿವು, ಹೆಚ್ಚುತ್ತಿರುವ ಮನುಷ್ಯ- ಕಾಡುಮೃಗಗಳ ಸಂಘರ್ಷವನ್ನು ವಿಶ್ಲೇಷಿಸುವಂಥವು.

ಇದೇ ಕಾರಣಕ್ಕೆ ಜಿಮ್ ಕಾರ್ಬೆಟ್‌ ನಂತಹ ಇನ್ನೊಬ್ಬ ಕೆನೆತ್ ಆ್ಯಂಡರ್ಸನ್‌ ನ ಅನುಭವಗಳನ್ನು ಹೇಳುವ ‘ಕಾಡಿನ ಕತೆಗಳು-1’ರ ಪ್ರವೇಶಿಕೆಯಲ್ಲಿ ತೇಜಸ್ವಿಯವರು, ‘ಕೆನೆತ್ ಆ್ಯಂಡರ್ಸನ್ ಮತ್ತು ಜಿಮ್ ಕಾರ್ಬೆಟ್ ತಮ್ಮ ಅನುಭವಗಳನ್ನು ಬರೆದ ಕಾಲ ಐತಿಹಾಸಿಕವಾಗಿ ಒಂದು ವಿಚಿತ್ರ ಪರ್ವಕಾಲವೆಂದು ಕರೆಯಬಹುದು’’ ಎನ್ನುತ್ತಾರೆ. ಜನಸಂಖ್ಯೆ ಹೆಚ್ಚಿದಂತೆ ನಾಗರಿಕತೆ ವಿಸ್ತರಿಸಿ ಕಾಡಿನ ವಿಸ್ತೀರ್ಣ ಕುಗ್ಗಿದಂತೆ ಮಾಂಸಾಹಾರಿ ಪ್ರಾಣಿಗಳು ಒತ್ತಡಕ್ಕೆ ಸಿಲುಕಿದ ಕಾರಣಕ್ಕೆ ಅದು ಪರ್ವಕಾಲ ಎಂದಿದ್ದಾರೆ.

ನಾಡಿದ್ದು ಪ್ರಸಾರವಾಗಲಿರುವ ‘ಮ್ಯಾನ್ ವರ್ಸಸ್ ವೈಲ್ಡ್’ ಕಂತನ್ನು ವೀಕ್ಷಿಸುವ ಜತೆಗೆ ತೇಜಸ್ವಿ, ಜತ್ತಪ್ಪ ಗೌಡರಂಥವರು ಬರೆದ ಪರಿಸರ ಮತ್ತು ಬೇಟೆಯ ಸಾಹಿತ್ಯವನ್ನು ಓದಿದರೆ ನಮ್ಮಲ್ಲಿ ಹೊಸ ಎಚ್ಚರ ಮತ್ತು ಪರಿಸರ ಪ್ರೀತಿಯೊಂದು ಹುಟ್ಟಬಹುದೇನೋ!

– ಚಾರು


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ