ರಂಗಭೂಮಿಯ ‘ಮಾಸ್ಟರ್‌’ ಬ್ಲಾಸ್ಟರ್‌ ಕೊನೆ ನೋಟ…

Team Udayavani, May 9, 2019, 11:00 AM IST

‘ರಂಗಭೂಮಿ’ ಹೆಸರಿನ ಆ ಮನೆಯ ಗೇಟು ತೆರೆದಿತ್ತು. ಆಗ ತಾನೇ ಬಾಗಿಲು ಸಾರಸಿ, ಗುಡಿಸಿ ರಂಗೋಲಿ ಇಟ್ಟಿದ್ದರು. ಬಲಗಡೆಗೆ ಒಂದು ವ್ಹೀಲ್ ಚೇರು ಗುಡುಗುಡು ಅಂತ ಬಂದು ನಿಂತಿತು. ಇಬ್ಬರು ಹಿಂದೆ ತಳ್ಳಿಕೊಂಡು ಬಂದರು. ತಿರುಗಿದರೆ, ಎದುರಿಗಿದ್ದ ಜೋಡಿ ಕಣ್ಣುಗಳು ನೋಡಿದವು. ಯಾವುದೇ ರಿಯಾಕ್ಷನ್‌ ಇಲ್ಲ. ನಿಸ್ತೇಜ ಮುಖಕ್ಕೆ ಒಂದು ಜೊತೆ ಕಣ್ಣು, ಮೂಗು, ಬಾಯಿ ಇಟ್ಟಂತಿದೆ. ದಢೂತಿ ಹೊಟ್ಟೆಯನ್ನು ಮುಚ್ಚಿಡಲು ಒಂದು ಟವೆಲ್‌. ಎಳೆ ಬಿಸಿಲು ಕೂಡ ಹಿರಣ್ಣಯ್ಯನವರ ಹಳೇ ಗತ್ತನ್ನು ನೆನಪಿಸಿಕೊಂಡು ದೂರ ನಿಂತಂತೆ ಇತ್ತು. ನನ್ನ ಮುಖ ನೋಡುತ್ತಿದ್ದಂತೆ – ಗುಮ್ಮನ ನೋಡಿದ ಮಗುವಿನಂತೆ, ಗಾಬರಿ ಗೆರೆಗಳು ಮುಖದ ತುಂಬ ಮುತ್ತಿ ಕೊಂಡು, ಕಣ್ಣುಗಳು ಚೂರು ದಪ್ಪನಾಗಿ ಪಕ್ಕದಲ್ಲಿದವರ ಕಡೆ ಅಪರಿಚತವಾಗಿ ನೋಡಿದರು.

ಜಗತ್ತಿನ, ಅದರ ಓರೆಕೋರೆಗಳು, ಜನನಾಯಕರ ಅಂಕುಡೊಂಕುಗಳನ್ನು ಎಕ್ಸಿಮಿಷನ್‌ನಲ್ಲಿ ಫೋಟೋಗಳಂತೆ ಬಂದವರ ಕೈ ಹಿಡಿದು ಕರೆದುಕೊಂಡು ಹೋಗುತ್ತಿದ್ದ ಗತ್ತಿನ ವ್ಯಂಗ್ಯಗಳನ್ನು ಮಾಡುತ್ತಿದ್ದ ಹಿರಣ್ಣಯ್ಯ ಇವರೇನಾ ಅನಿಸಿಬಿಟ್ಟಿತು? ಹಿರಣ್ಣಯ್ಯನವರು ಯಾವತ್ತೂ ಈ ರೀತಿ ಕಳಾಹೀನರಾಗಿರಲಿಲ್ಲ. ಎದುರಿಗೆ ಯಾರೇ ಕಂಡರು- ಮಾತಿಗೂ ಮುನ್ನ ಫ‌ಳ್‌ ಅಂತ ನಗುವಿನ ಪ್ರಾಂಜಲ ಬೆಳಕನ್ನು ಹೊತ್ತಿಸಿ, ಜೋಕು ಸಿಡಿಸಿ ಹಿನ್ನೆಲೆ ಸಂಗೀತದಂತೆ ‘ಕಕಕಕಕ…’ ಅಂತ ನಕ್ಕು ಆನಂತರ ಮಾತಿಗಿಳಿಯುತ್ತಿದ್ದರು.

ನಮ್ಮ ಕಾಲದಲ್ಲಿ ನಾಡಿಗೇರ ಕೃಷ್ಣರಾಯ ಅಂತಿದ್ದ. ಅದೇನು ನಗಿಸೋನು ಗೊತ್ತಾ? ಹೀಗೇಳಿ.. ಎರಡು ಜೋಕು ಬೀಡೋರು… ಅವರಂತೆಯೇ ಅವರ ಮೊಮ್ಮಗ ಚೇತನ್‌ ನಾಡಿಗೇರ್‌ ನಮ್ಮ ಜೊತೆ ಇದ್ದಾನೆ ಸಾರ್‌ ಆಂದಾಗ.. ಕರ್ಕೊಂಡು ಬನ್ರೀ ಅವರನ್ನ.. ಕೂತು ಫ‌ುಲ್‌ ಲೋಟ ಕಾಫಿ ಕುಡಿಯೋಣ ಅಂತ ಮಗುವಿನಂತೆ ಕೇಳಿದ್ದು ಇವರೇನ ಅನಿಸಿಬಿಟ್ಟಿತು…

ಆದರೆ, ನಾವಿಬ್ಬರೂ ಹೋಗಲಾಗಲೇ ಇಲ್ಲ… ಆವತ್ತು, ನನಗೂ ಈ ಜಗತ್ತಿಗೂ ಸಂಬಂಧವೇ ಇಲ್ಲ, ನನ್ನ ಈ ಜಗತ್ತಿಗೂ ನಿಮಗೂ ಸಂಬಂಧ ಇಲ್ಲ ಅನ್ನೋ ರೀತಿ ತೆಳುಗಡ್ಡದಲ್ಲಿ ಕುಳಿತಿದ್ದರು ಮಾಸ್ಟರ್‌. ಉಬ್ಬಿದ ಹೊಟ್ಟೆಯಿಂದ ಎರಡು, ಮೂರು ತೇಗು ಬಂತು.. ಪಕ್ಕದಲ್ಲಿದ್ದವರು ಹೊಟ್ಟೆ ನೀವಿ, ಅದೇ ಟುವೆಲ್‌ನಿಂದ ಮೂತಿ ಒರೆಸಿದರು.

ಎರಡೂ ಕಾಲುಗಳು ಚೇರಿನ ಪೆಡಲುಗಳಿಗೆ ಅಂಟಿಕೊಂಡಿದ್ದವು. ಹಿರಣ್ಣಯ್ಯನವರನ್ನು ನೋಡುತ್ತಿದ್ದಂತೆ- ಅವರ ಮಗ ಬಾಬು ಹಿರಣ್ಣಯ್ಯ ಹೇಳಿದ ಸತ್ಯ ಕಿವಿಯೊಳಗೆ ಕೂಗಿತು.. “ಅಪ್ಪ ಇದ್ದಾರೆ, ಆದರೆ, ನಮ್ಮ ಜೊತೆ ಇರಲ್ಲ …’ ಹಿರಣ್ಣಯ್ಯನವರು ಭೌತಿಕ ಜಗತ್ತಿನ ಸಂಪರ್ಕ ಕಳೆದುಕೊಂಡು ಒಂದು ವರ್ಷವೇ ದಾಟಿಹೋಗಿತ್ತು…

ಅವರು ತಮ್ಮದೇ ಲೋಕದಲ್ಲಿ ಬದುಕುತ್ತಿದ್ದರು. ದಿನಂಪ್ರತಿ ಬೆಳಗ್ಗೆ, ಸಂಜೆ ಎಳೆ ಬಿಸಲಲ್ಲಿ ಕೂರುವುದು, ಪೇಪರ್‌ ಓದುವಂತೆ ಮಾಡುತ್ತಿದ್ದರು, ಆದರೆ ಯಾವ ವಿಷಯವೂ ತಲೆಗೆ ಹೋಗುತ್ತಿರಲಿಲ್ಲ. ಸಂಜೆ ಬೇಜಾರಿಗೆ ಒಂದಷ್ಟು ಧಾರಾವಾಹಿಗಳನ್ನು ನೋಡುತ್ತಿದ್ದರು. ಅದೇ ಸೀರಿಯಲ್‌ ನೋಡಿದರೂ, ಇವತ್ತು ರಾಧಾರಮಣ ಬರಲಿಲ್ವಾ ಅನ್ನೋರು… ಕೇಬಲ್‌ ಕೆಟ್ಟೋಗಿದಿಯಪ್ಪಾ…ಬರುತ್ತೆ ಅಂತ ಸಮಾಧಾನ ಮಾಡೋರು ಮಕ್ಕಳು. ಏಕೆಂದರೆ, ಒಂದು ಪಕ್ಷ ಪ್ರಸಾರ ಆಗುತ್ತಿದ್ದರೆ. ನೀವೇ ನೋಡ್ತಾ ಇದ್ದೀರಾ.. ಅಂದು ಬಿಟ್ಟರೆ.. ಹೌದಾ, ಅಂತ ಚಿಂತೆಗಿಳಿಯುತ್ತಾರೆ ಅನ್ನೋ ಆತಂಕ ಬೇರೆ.

ಅವರಿಗೆ ಹಿಂದಿನ ಎಲ್ಲಾ ನೆನಪುಗಳು ಅಳಿಸಿಹೋಗಿದ್ದವು. ಅವುಗಳನ್ನು ನವೀಕರಿಸಲು ಸಾಧ್ಯವಾಗದಷ್ಟು ಖಾಯಿಲೆ ಅಮರಿಕೊಂಡಿತ್ತು. ಹೊಸ ನೆನಪು ಜಮೆಯಾಗುತ್ತಿರಲಿಲ್ಲ, ಇರುವ ನೆನಪು ಕ್ಷಣಾರ್ಧದಲ್ಲಿ ಜಾರಿಬಿಡುತ್ತಿತ್ತು… ನೀವು ಯಾರು? ಅಂತ ಮನೆಯವರನ್ನೇ ಕೇಳಿಬಿಡುವಟ್ಟಿಗೆ, ಜಠರ ಕೆಲಸ ನಿಲ್ಲಿಸಿಬಿಟ್ಟುತ್ತು. ಹಾಗಾಗಿ, ತಿಂದದ್ದು ಜೀರ್ಣವಾಗುತ್ತಿರಲಿಲ್ಲ. ಬರೀ ಲಿಕ್ವಿಡ್‌. ತಿಂದದ್ದು ಬ್ಲಾಕ್‌ ಆದರೆ ದೇಹದ ಎಲ್ಲ ಕ್ರಿಯೆ ಏರುಪೇರಾಗುತ್ತದೆ ಅಂತ 10-15 ದಿನಕ್ಕೆ ದುಭಾರಿ ಇಂಜೆಕ್ಷನ್‌ ಕೊಡಿಸುತ್ತಿದ್ದರು, ಮೂರು ಗಂಟೆಗಳ ಕಾಲ..

ದೇವರೇ.. ಮಾತಿನಿಂದ ಬದುಕಿದವರಿಗೇ ಮಾತೇ ಕಿತ್ತುಕೊಳ್ಳೋದು ಈ ರೀತೀನ ಅನಿಸಿಬಿಟ್ಟಿತು.
ಆವತ್ತು, ಅವರ ಮನೆಯಿಂದ ಹೊರಡುವಾಗ ಚೇರಿತ್ತು, ಹಿರಣ್ಣಯ್ಯನರು ಇರಲಿಲ್ಲ, ಮೌನವನ್ನು ಹಾಸಿ ಹೋಗಿದ್ದರು. ಅದರ ಮೇಲೆ ಘರ್ಜನೆ, ತುಂಟತನ, ತಮಾಷೆಗಳು, ತಮ್ಮನ್ನು ತಾವೇ ಕಾಲು ಎಳೆದು ಕೊಳ್ಳುವ ಮಾತುಗಳನ್ನು ಸಪಾಟಾಗಿ ಮಲಗಿಸಿದಂತಿತ್ತು. ತಿರುಗಾ ಬರ್ತೀನಿ ಅಂತ.
‘ಇನ್ನ ಮೇಲೆ ನಮ್ಮಪ್ಪ ಹೀಗೆ. ಅದಕ್ಕೆ ಯಾರಾದರು ಬಂದರೆ ಅವರನ್ನು ತೋರಿಸೋಕೆ ಹಿಂಸೆಯಾಗುತ್ತೆ…’ ಮಗ ಬಾಬು ಅವರು ಗೇಟಿನ ತನಕ ಬಂದು ಹೀಗಂದರು.

“ಇವನ್ನೆಲ್ಲಾ ಹೇಳಬೇಡವೋ…’ ಅನ್ನೋ ರೀತಿ ಅವರ ಕಣ್ಣಲ್ಲಿ ಒತ್ತರಿಸಿ ಬಂತು ನೀರು…
ಅವರ ಜೋಂಪು ಹತ್ತಿದ್ದ ಮನಸ್ಸು, ಈಗಿನ ಹಾಗೂ ಹಳೆ ಹಿರಣ್ಣಯ್ಯನವರ ಪಟಗಳನ್ನು ತಾಳೆ ಮಾಡುತಲಿತ್ತು…

— ಕಟ್ಟೆ ಗುರುರಾಜ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ