ಕೆಜೆ ಎಂಬ ಗಾನಗಂಧರ್ವನ ಮರೆಯಲು ಸಾಧ್ಯವೆ…ದೇಶಕ್ಕಾಗಿ ಹಾಡುಹಾಡಿ ಹಣಸಂಗ್ರಹಿಸಿದ “ಲೆಜೆಂಡ್”

ನಾಗೇಂದ್ರ ತ್ರಾಸಿ, Sep 7, 2019, 6:32 PM IST

ಇಂಪಾದ, ಮಧುರವಾದ ಸಂಗೀತಕ್ಕೆ ಮನಸೋಲದವರು ಯಾರಿದ್ದಾರೆ. ಮಧುರ ಕಂಠದ ಸಂಗೀತಕ್ಕೆ ಇರುವ ಶಕ್ತಿಯೇ ಅದಾಗಿದೆ. ಹೀಗೆ ಸಂಗೀತದ ಮೂಲಕವೇ ಲಕ್ಷಾಂತರ ಜನರ ಮನಸೂರೆಗೊಂಡ ಗಾನಗಂಧರ್ವರಲ್ಲಿ ಕೆಜೆ ಯೇಸುದಾಸ್ ಕೂಡಾ ಒಬ್ಬರು.

ಕನ್ನಡ, ಹಿಂದಿ, ಮಲಯಾಳಂ, ಬೆಂಗಾಲಿ, ಒರಿಯಾ, ಅರೆಬಿಕ್, ಇಂಗ್ಲಿಷ್, ಲ್ಯಾಟಿನ್, ರಷ್ಯಯನ್ ಸೇರಿದಂತೆ 14 ಭಾಷೆಗಳಲ್ಲಿ 50 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಹೆಗ್ಗಳಿಕೆ ಅವರದ್ದು, ಇಂದಿಗೂ ದಣಿವರಿಯದ ಅವರ ಗಾನ ಮಾಧುರ್ಯ ಇನ್ನೂ ಮುಂದುವರಿದಿದೆ.

ರೋಮನ್ ಕ್ಯಾಥೋಲಿಕ್ ಕುಟುಂಬದಲ್ಲಿ 1940 ಜನವರಿ 10ರಂದು ಕೇರಳದಲ್ಲಿ ಜನಿಸಿದ್ದ ಯೇಸುದಾಸ್ ಶ್ರೀಕೃಷ್ಣನ ಭಕ್ತ. ಪ್ರಸಿದ್ಧ ಗುರುವಾಯೂರಿನ ಶ್ರೀಕೃಷ್ಣ ದೇವಸ್ಥಾನದಲ್ಲಿ ಕೃಷ್ಣನ ಎದುರು ನಿಂತು ಹಾಡಬೇಕೆಂಬ ಯೇಸುದಾಸ್ ಆಸೆ ಇಂದಿಗೂ ನೆರವೇರಿಲ್ಲ. ಹಿಂದೂ ಅಲ್ಲ ಎಂಬ ಕಾರಣಕ್ಕೆ ಯೇಸುದಾಸ್ ಗೆ ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಲಾಗಿತ್ತು. ಅದು ಭಾರೀ ವಿವಾದಕ್ಕೂ ಎಡೆ ಮಾಡಿಕೊಟ್ಟಿತ್ತು. ಇತ್ತೀಚೆಗೆ ಪ್ರತಿವರ್ಷ ಕೊಲ್ಲೂರು ಶ್ರೀಮೂಕಾಂಬಿಕಾ ಕ್ಷೇತ್ರದಲ್ಲಿ ತನ್ನ ಜನ್ಮದಿನದಂದು ಭಕ್ತಿಗೀತೆ ಹಾಡುವುದರೊಂದಿಗೆ ತಮ್ಮ ಸಂಗೀತ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಆಗಸ್ಟಿನ್ ಜೋಸೆಫ್ ಹಾಗೂ ಎಲಿಜಬೆತ್ ದಂಪತಿಯ ಪುತ್ರರಾದ ಯೇಸುದಾಸ್ ಅವರ ತಂದೆ ಆ ಕಾಲದಲ್ಲಿ ಜನಪ್ರಿಯ ಗಾಯಕರಾಗಿದ್ದರು. ಅಷ್ಟೇ ಅಲ್ಲ ರಂಗಭೂಮಿ ನಟರೂ ಕೂಡಾ. ಕೇವಲ ಎರಡೂವರೆ ವರ್ಷದ ಮಗುವಾಗಿದ್ದಾಗಲೇ ಕೆಜೆ ಅವರು ಸಂಗೀತವನ್ನು ತನ್ಮಯರಾಗಿ ಆಲಿಸತೊಡಗಿದ್ದರಂತೆ! ಸಂಗೀತದ ಯಾವುದೇ ಪ್ರಾಥಮಿಕ ತರಬೇತಿ ಪಡೆಯದೇ ಸಂಗೀತ ಒಲಿಸಿಕೊಂಡಿದ್ದರು. ತಂದೆಯೇ ಕೆಜೆ ಅವರಿಗೆ ಮೊದಲ ಗುರುವಾಗಿಬಿಟ್ಟಿದ್ದರು. ತಾನು ಗಾನಗಂಧರ್ವನಾಗಲು ತಂದೆಯ ಆಶೀರ್ವಾದವೇ ಕಾರಣ ಎಂಬುದು ಕೆಜೆ ಒಮ್ಮೆ ಸಂದರ್ಶನವೊಂದರಲ್ಲಿ ಹೇಳಿದ್ದರು.

“ನೀನು ಯಾವುದರಲ್ಲೂ ಅರ್ಹನಲ್ಲವೊ ಆ ಕೆಲಸವನ್ನು ಯಾವತ್ತೂ ಮಾಡಬಾರದು ಎಂಬ ಪಾಠವನ್ನು ತಾನು ತಂದೆಯಿಂದ ಕಲಿತಿದ್ದೇನೆ. ಅವರೊಬ್ಬ ಅದ್ಭುತ ಹಾಡುಗಾರರಾಗಿದ್ದರು. ನನ್ನ ತಂದೆ ಯಾವತ್ತೂ ಕ್ಲಾಸಿಕಲ್ ಕಾರ್ನಾಟಿಕ್ ಸಂಗೀತವನ್ನು ಹಾಡಲೇ ಇಲ್ಲವಾಗಿತ್ತು. ಯಾಕೆಂದರೆ ಅವರು ದಕ್ಷಿಣ ಭಾರತದ ಭಾಗದ ಶಾಸ್ತ್ರೀಯ ಸಂಗೀತವನ್ನು ಕಲಿಯಲೇ ಇಲ್ಲವಾಗಿತ್ತು. ಆ ಪಾಠವನ್ನು ನಾನೆಂದಿಗೂ ಮರೆಯಲು ಸಾಧ್ಯವಿಲ್ಲ ಎಂದಿದ್ದರು ಯೇಸುದಾಸ್!

5ನೇ ವಯಸ್ಸಿಗೆ ಸಂಗೀತಾಭ್ಯಾಸ:

ಕೆಜೆ ಯೇಸುದಾಸ್ 5ವರ್ಷದ ಪುಟ್ಟ ಬಾಲಕನಾಗಿದ್ದಾಗಲೇ ಸಂಗೀತ ಕಲಿಯಲು ಆರಂಭಿಸಿದ್ದರು. ಆಗ ಅವರ ಮನಸ್ಸಿನಲ್ಲಿ ಇದ್ದದ್ದು ಒಂದೇ ಅದು ಸಂಗೀತ. ತಾನು ಮುಂದೊಂದು ದಿನ ತುಂಬಾ ಜನಪ್ರಿಯನಾಗಬೇಕು ಮತ್ತು ಹಣ ಸಂಪಾದಿಸಬೇಕೆಂಬ ಹಂಬಲ ಮನದಾಳದಲ್ಲಿ ತುಂಬಿ ಹೋಗಿತ್ತಂತೆ. ತಂದೆಯ ಒತ್ತಾಸೆಯಂತೆ ಸಂಗೀತ ಕಲಿಯಲು ಹೋಗಿದ್ದೆ. ಇದೆಲ್ಲದರ ಪರಿಣಾಮ ತಾನು ನನ್ನ ಗುರಿಯನ್ನು ಮುಟ್ಟಬಲ್ಲೆ ಎಂಬ ವಿಶ್ವಾಸ ಕೆಜೆ ಅವರಲ್ಲಿ ತುಂಬತೊಡಗಿತ್ತು.

ತಂದೆಯ ಆರೋಗ್ಯ ತೀರಾ ಹದಗೆಟ್ಟಾಗ ಮನೆಯ ಆರ್ಥಿಕ ನಿರ್ವಹಣೆ ಹೊಣೆ ಮೈಮೇಲೆ ಬಿದ್ದಾಗ ಕೆಜೆ ಯೇಸುದಾಸ್ ಅವರು 21ನೇ ವಯಸ್ಸಿನಲ್ಲಿ ಸಿನಿಮಾದಲ್ಲಿ ಹಾಡಲು ಆರಂಭಿಸುವ ಮೂಲಕ ವೃತ್ತಿಜೀವನಕ್ಕೆ ಕಾಲಿಟ್ಟಿದ್ದರು. ನೀನು ಯಾವುದಕ್ಕೆ ಅರ್ಹನೋ ಅದರಿಂದ ನಿನ್ನ ಜೀವನ ಸಾಗುತ್ತದೆ. ಯಾವುದೇ ಕಾರಣಕ್ಕೂ ನೀನು ಇನ್ನೊಬ್ಬರ ಮುಂದೆ ಕೈಯೊಡ್ಡಬಾರದು ಎಂದು ತಂದೆ ಯೇಸುದಾಸ್ ಗೆ ಹೇಳಿದ್ದರಂತೆ!

ಸಂಗೀತ ಕಲಿಯಲು ಕೈಯಲ್ಲಿ ಬಿಡಿಗಾಸು ಇಲ್ಲದಿದ್ದಾಗ ಕೈಹಿಡಿದು ದಾರಿ ತೋರಿಸಿದ್ದು ಶಿಕ್ಷಕರು…

ದಕ್ಷಿಣ ಕೇರಳದ ಥಿರುಪುನಿತುರಾ ಎಂಬಲ್ಲಿ ಆರ್ ಎಲ್ ವಿ ಸಂಗೀತ ಅಕಾಡೆಮಿಯಲ್ಲಿ ಯೇಸುದಾಸ್ ಸಂಗೀತಾಭ್ಯಾಸಕ್ಕೆ ಹೋಗುತ್ತಿದ್ದರಂತೆ. ಆ ಸಂದರ್ಭದಲ್ಲಿ ಕುಟುಂಬದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಎಲ್ಲಿಯವರೆಗೆ ಅಂದರೆ ಸಂಗೀತಾಭ್ಯಾಸದ ಫೀಸ್ ಕಟ್ಟಲು ಹಣವಿರಲಿಲ್ಲವಾಗಿತ್ತು. ಆಗ ಕಟ್ಟಬೇಕಾಗಿದ್ದದ್ದು 5 ರೂಪಾಯಿ ಶುಲ್ಕ, ಅದನ್ನೂ ಪಾವತಿಸುವ ಆರ್ಥಿಕ ಬಲ ಇರಲಿಲ್ಲವಾಗಿತ್ತು. ಈ ಸಂದರ್ಭದಲ್ಲಿ ಯೇಸುದಾಸ್ ನೆರವಿಗೆ ಬಂದವರು ಸಂಸ್ಕೃತ ಶಿಕ್ಷಕಿ ಪದ್ಮ. ಅವರೇ ಯೇಸುದಾಸ್ ಸಂಗೀತ ಕಲಿಕೆಯ ಶುಲ್ಕ ಕಟ್ಟುತ್ತಿದ್ದರಂತೆ!

ಅದೇ ರೀತಿ ಕಾಲೇಜು ಸಮೀಪ ಇದ್ದ ಸಣ್ಣ ಚಹಾ ಅಂಗಡಿಯ ರಾವ್ ಎಂಬವರಿಗೆ ಯೇಸುದಾಸ್ ಮನೆಯ ಆರ್ಥಿಕ ಪರಿಸ್ಥಿತಿ ತಿಳಿದಿದ್ದರಿಂದ ಉಚಿತವಾಗಿ ತಿನ್ನಲು ನೀಡುತ್ತಿದ್ದರಂತೆ. ಕುಮಾರಸ್ವಾಮಿ ಹಾಗೂ ಕಲ್ಯಾಣಸುಂದರಂ ಎಂಬ ಇಬ್ಬರು ಶಿಕ್ಷಕರು ಯೇಸುದಾಸ್ ಮೇಲೆ ಅಪಾರ ಪ್ರಭಾವ ಬೀರಿದ್ದರು. ಇಂದು ಸಂಗೀತಾಗಾರನಾಗಲು ಅವರೇ ಕಾರಣ ಎಂಬುದು ಯೇಸುದಾಸ್ ಅವರ ಮನದಾಳದ ಮಾತು.

ಭಾರತ, ಚೀನಾ, ಇಂಡೋ ಪಾಕ್ ಯುದ್ಧದ ವೇಳೆ ದೇಶಕ್ಕಾಗಿ ಹಾಡು ಹಾಡಿ ಹಣ ಸಂಗ್ರಹಿಸಿದ್ದರು:

1965ರಲ್ಲಿ ಚೀನಾ ಭಾರತದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಕೆಜೆ ಯೇಸುದಾಸ್ ಅವರು ಸೇನೆಗಾಗಿ ವಿವಿಧೆಡೆ ಸಂಗೀತ ಹಾಡಿ ದೇಣಿಗೆ ಸಂಗ್ರಹಿಸಿದ್ದರು. ಅಲ್ಲದೇ 1971ರಲ್ಲಿ ಬಾಂಗ್ಲಾ ವಿಮೋಚನೆಗಾಗಿ ನಡೆದ ಭಾರತ-ಪಾಕ್ ನಡುವಿನ ಯುದ್ಧದ ಸಂದರ್ಭದಲ್ಲಿ ಇಡೀ ಕೇರಳದ ಮೂಲೆ, ಮೂಲೆಗೆ ತೆರೆದ ಲಾರಿಯಲ್ಲಿ ಸಂಚರಿಸಿ ದೇಶಕ್ಕಾಗಿ ಹಣ ಸಂಗ್ರಹಿಸಿದ್ದರು. ಅಂದು ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಗೆ ನವದೆಹಲಿಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಸಂಗ್ರಹವಾದ ಹಣವನ್ನು ನೀಡಿದ್ದರು. ಹಾಡಿನ ಮೂಲಕ ದೇಶದ ಒಗ್ಗಟ್ಟನ್ನು ಎತ್ತಿಹಿಡಿಯುವ ಮೂಲಕ ದೇಶದ ಜನರಿಗಾಗಿ ದೇಣಿಗೆ ಸಂಗ್ರಹಿಸಿ ಕೊಟ್ಟಿದ್ದಕ್ಕೆ ಗಾಂಧಿ ಮುಕ್ತಕಂಠದಿಂದ ಪ್ರಶಂಶಿಸಿದ್ದರಂತೆ.

ಏಳು ನ್ಯಾಷನಲ್ ಅವಾರ್ಡ್ಸ್, 23 ರಾಜ್ಯ ಪ್ರಶಸ್ತಿ, ಪದ್ಮಭೂಷಣ, ಪದ್ಮಶ್ರೀ, ಅಣ್ಣಾಮಲೈ ಯೂನಿರ್ವಸಿಟಿಯಿಂದ ಗೌರವ ಡಾಕ್ಟರೇಟ್ ಸೇರಿದಂತೆ ನೂರಾರು ಪ್ರಶಸ್ತಿ, ಬಿರುದು ಪಡೆದಿರುವ ಕೆಜೆ ಯೇಸುದಾಸ್ ಗೆ ಈಗ 79 ವರ್ಷ. ಪತ್ನಿ ಪ್ರಭಾ, ವಿನೋದ್ ಯೇಸುದಾಸ್, ವಿಜಯ್ ಯೇಸುದಾಸ್, ವಿಶಾಲ್ ಯೇಸುದಾಸ್ ಮಕ್ಕಳು. ಇನ್ನಷ್ಟು ಕಾಲ ಯೇಸುದಾಸ್ ಅವರ ಸುಶ್ರಾವ್ಯ ಕಂಠದಿಂದ ಹಾಡು ಹರಿದು ಬರಲಿ ಎಂಬುದೇ ಆಶಯ…


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ