ಈಗ ಭಾರತೀಯ ಚಿತ್ರರಂಗದಲ್ಲಿ ಭರ್ಜರಿ “ಬಯೋಪಿಕ್’ ಸಿನಿಮಾ ಭರಾಟೆ

ಲಕ್ಷ್ಮಿ ಗೋವಿಂದ್ ರಾಜ್, Feb 22, 2019, 12:43 PM IST

ಭಾರತೀಯ ಚಿತ್ರರಂಗದಲ್ಲಿ ಈಗ ಬರೀ ಬಯೋಪಿಕ್‍ಗಳದ್ದೇ ಭರಾಟೆ. ಕೆಲವು ವರ್ಷಗಳ ಹಿಂದೆ ಮಿಲ್ಕಾಸಿಂಗ್ ಅವರ ಜೀವನವನ್ನು ಆಧರಿಸಿದ “ಭಾಗ್ ಮಿಲ್ಕಾ ಭಾಗ್’, “ಡರ್ಟಿ ಪಿಕ್ಚರ್’ ಚಿತ್ರ ಯಶಸ್ವಿಯಾದ ಬೆನ್ನಲ್ಲೇ ಬಯೋಪಿಕ್‍ಗಳ ಸರಮಾಲೆ ಶುರುವಾಗಿದೆ. ಈ ವರ್ಷವೇ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ “ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’, “ಎನ್.ಟಿ.ಆರ್ ಕಥಾನಾಯಕುಡು’, “ಠಾಕ್ರೆ’, “ಸೈನಾ’, “ಶಕೀಲಾ’, “ಕಪಿಲ್ ದೇವ್’, “ದಿ ಐರನ್ ಲೇಡಿ’, “ಪಿಎಂ ನರೇಂದ್ರ ಮೋದಿ’ ಸೇರಿದಂತೆ ಕನ್ನಡದಲ್ಲಿ ಚಿತ್ರದುರ್ಗದ ಮದಕರಿ ನಾಯಕನ ಕುರಿತ ಐತಿಹಾಸಿಕ ಚಿತ್ರವು ತೆರೆಗೆ ಬಂದಿದೆ. ಹೀಗೆ ಈ ಬಯೋಪಿಕ್ ಚಿತ್ರಗಳ ಪಟ್ಟಿ ಬೆಳೆಯುತ್ತದೆ.

ಈಗಾಗಲೇ ಬಿಡುಗಡೆಗೊಂಡ ದಿವಂಗತ ನಟಿ ಸಾವಿತ್ರಿ ಅವರ ಜೀವನವನ್ನಾಧರಿಸಿದ “ಮಹಾನಟಿ’ ಚಿತ್ರವು ಸುದ್ದಿ ಮಾಡಿತ್ತು. ಕೀರ್ತಿ ಸುರೇಶ್ ಈ ಚಿತ್ರದಲ್ಲಿ ನಟಿಸಿದ್ದರು. ಮರಾಠಿಯಲ್ಲಿ ದಾದಾ ಸಾಹೇಬ್ ಫಾಲ್ಕೆ ಅವರ ಕುರಿತಾದ “ಹರಿಶ್ಚಂದ್ರಾಚಿ ಫ್ಯಾಕ್ಟರಿ”, ನಟ ಭಗವಾನ್ ಅವರ ಕುರಿತ “ಎಕ್ ಅಲಬೇಲ’ ಬಿಡುಗಡೆಯಾಗಿ ಗೆದ್ದಿವೆ. ಇತ್ತೀಚೆಗಷ್ಟೆ ಬಾಲಿವುಡ್ ನಟ ಸಂಜಯ್ ದತ್ ಅವರ ಜೀವನ ಕುರಿತು ರಣ್ಬೀರ್ ಕಪೂರ್ “ಸಂಜು’ ಎಂಬ ಸಿನಿಮಾ ಮಾಡಿದರು. ರಾಜಕುಮಾರ್ ಹಿರಾನಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು.

ಈ ಸಿನಿಮಾ ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಬರೆಯಿತು. ಅದೇ ರೀತಿ, ಮಲಯಾಳಂ ಚಿತ್ರರಂಗದ ಜನಕ ಜೆ.ಸಿ. ಡೇನಿಯಲ್ ಅವರ ಬದುಕಿನ ಕುರಿತಾದ “ಸೆಲ್ಯುಲಾಯ್ಡ್’ ಎಂಬ ಚಿತ್ರ ಬಂದಿವೆ. ಇನ್ನು ಈ ವಿಷಯದಲ್ಲಿ ಕನ್ನಡವೂ ಹಿಂದೆ ಬಿದ್ದಿಲ್ಲ. ದಿವಂಗತ ನಟಿ ಕಲ್ಪನಾ ಅವರ ಕುರಿತಾದ “ಅಭಿನೇತ್ರಿ’. ಪೂಜಾ ಗಾಂಧಿ ಅಭಿನಯದ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ, ಈ ಪ್ರಯೋಗ ಕನ್ನಡ ಚಿತ್ರರಂಗದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿ ಕಾಣಲಿಲ್ಲ. ಅದೇನೇ ಇರಲಿ, ಬಯೋಪಿಕ್ ಚಿತ್ರಗಳು ದೊಡ್ಡ ಮಟ್ಟದಲ್ಲಿ ಅಲ್ಲದಿದ್ದರೂ ಆಗೊಂದು ಈಗೊಂದು ಬಿಡುಗಡೆಯಾಗುತ್ತಲೇ ಇವೆ. ಸದ್ದು ಮಾಡುತ್ತಲೂ ಇವೆ.

ಅಷ್ಟಕ್ಕೂ ಈ ಬಯೋಪಿಕ್ ಅಂದರೇನು ಅಂತೀರಾ? ಸರಳವಾಗಿ ಹೇಳುವುದಾದರೆ ಅದು ಜೀವನ ಚರಿತ್ರೆ. ಬಯೋಗ್ರಫಿಯ ಸರಳ ರೂಪವೇ ಈ ಬಯೋಪಿಕ್. ಸದ್ಯಕ್ಕೆ ಚಿತ್ರರಂಗದಲ್ಲಿ ನಡೆಯುತ್ತಿರುವುದು ಇದೇ ಆತ್ಮಚರಿತ್ರೆ ಅಥವಾ ಬಯೋಪಿಕ್ಗಳ ಟ್ರೆಂಡ್. ಈ ಬಯೋಪಿಕ್‍ಗಳು ಯಾವುದೇ ಚಿತ್ರರಂಗಕ್ಕೂ ಹೊಸದೇನಲ್ಲ. ಆಯಾ ಪ್ರಾಂತ್ಯದ ಮಹನೀಯರ ಕುರಿತಾದ ಚಿತ್ರಗಳು ಎಲ್ಲಾ ಭಾಷೆಗಳಲ್ಲೂ, ಎಲ್ಲಾ ಕಾಲಕ್ಕೂ ಬರುತ್ತಿದ್ದವು. ಕನ್ನಡದಲ್ಲಿಯೇ ಇದುವರೆಗೂ ಹಲವು ಬಯೋಪಿಕ್ ಚಿತ್ರಗಳು ಬಂದಿವೆ. ಆದರೆ, ಒಂದೇ ಹೊಸದು ಎಂದರೆ ಈ ಬಯೋಪಿಕ್ ಎಂಬ ಹೆಸರು. ಮುಂಚೆಲ್ಲಾ ಈ ತರಹದ ಚಿತ್ರಗಳು ಐತಿಹಾಸಿಕ, ಭಕ್ತಿ ಪ್ರಧಾನ ಚಿತ್ರಗಳ ಪಟ್ಟಿಗೆ ಸೇರುತ್ತಿದ್ದವು. ಆದರೆ, ಅವೆಲ್ಲಾ ಆತ್ಮಚರಿತ್ರೆಗಳೇ ಆಗಿದ್ದವು.

“ಶ್ರೀದೇವಿ’ ಕುರಿತ ಬಯೋಪಿಕ್: ಈ ಮಧ್ಯೆ ಮುಖ್ಯವಾಗಿ ಕಳೆದ ವರ್ಷ ಸಾವನ್ನಪ್ಪಿದ ಮೋಹಕ ಚೆಲುವೆ ಶ್ರೀದೇವಿ ಅವರ ಜೀವನಚರಿತ್ರೆ ಕೂಡ ತೆರೆ ಮೇಲೆ ಬರುತ್ತಿದೆ. ಈ ವಿಷಯವನ್ನು ಸ್ವತಃ ಶ್ರೀದೇವಿ ಪತಿ ಬೋನಿ ಕಪೂರ್ ಸ್ಪಷ್ಟಪಡಿಸಿದ್ದಾರೆ. ಟಾಲಿವುಡ್ ಮೂಲಕ ತಮ್ಮ ಸಿನಿಮಾ ಕೆರಿಯರ್ ಆರಂಭಿಸಿ ಬಾಲಿವುಡ್, ಮಾಲಿವುಡ್, ಕಾಲಿವುಡ್, ಸ್ಯಾಂಡಲ್‍ವುಡ್ ಎಲ್ಲಾ ಸಿನಿಮಾ ಕ್ಷೇತ್ರದಲ್ಲೂ ಹೆಸರು ಮಾಡಿದ ಶ್ರೀದೇವಿ ಪ್ರತಿಯೊಬ್ಬರಿಗೂ ಮೋಸ್ಟ್ ಫೇವರಿಟ್. ಕಳೆದ ವರ್ಷ ಫೆಬ್ರವರಿಯಲ್ಲಿ ದುಬೈನಲ್ಲಿ ನಡೆಯುತ್ತಿದ್ದ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಹೋಗಿದ್ದ ಶ್ರೀದೇವಿ ಅಲ್ಲಿಯೇ ವಿಧಿವಶರಾಗಿದ್ದರು.

“ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’: 2004ರಿಂದ 2008ರವರೆಗೆ ಮನಮೋಹನ್ ಸಿಂಗ್ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬಾರು ಅವರ ಕೃತಿ ಆಧರಿಸಿ “ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರವನ್ನು ನಿರ್ಮಾಣ ಮಾಡಲಾಗಿದ್ದು, ವಿಜಯ್ ರತ್ನಾಕರ್ ಗುಟ್ಟೆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಮನಮೋಹನ್ ಸಿಂಗ್ ಅವರ ಪಾತ್ರವನ್ನು ಚಿತ್ರದಲ್ಲಿ ಬಾಲಿವುಡ್ ಹಿರಿಯ ಹಾಗೂ ಪ್ರತಿಭಾವಂತ ನಟ ಅನುಪಮ್ ಖೇರ್, ಸಂಜಯ್ ಬಾರು ಪಾತ್ರವನ್ನು ಅಕ್ಷಯ ಖನ್ನಾ, ಸೋನಿಯಾ ಗಾಂಧಿ ಪಾತ್ರವನ್ನು ಜರ್ಮನಿ ಮೂಲದ ನಟಿ ಸುಝೇನ್ ಬರ್ನೆಟ್, ಪ್ರಿಯಾಂಕಾ ಗಾಂಧಿ ಪಾತ್ರವನ್ನು ಅಹನಾ ಕುಬ್ರಾ ಹಾಗೂ ರಾಹುಲ್ ಗಾಂಧಿ ಪಾತ್ರವನ್ನು ಅರ್ಜುನ್ ಮಾರ್ಥು ನಿರ್ವಹಿಸಿದ್ದಾರೆ. ಇನ್ನು ಈ ಚಿತ್ರ ಬಿಡುಗಡೆಯಾಗಿ, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪರಸ್ಪರ ಚಿತ್ರದ ಕುರಿತು ವಾಕ್ಸಮರಕ್ಕೆ ಕಾರಣವಾಯಿತು.

“ಎನ್.ಟಿ.ಆರ್ ಜೀವನಾಧಾರಿತ ಚಿತ್ರ’: ಸೌತ್ ಸಿನಿಲೋಕದ ಬಹುದೊಡ್ಡ ಬಯೋಪಿಕ್ ಚಿತ್ರ “ಎನ್.ಟಿ.ಆರ್ ಕಥಾನಾಯಕುಡು’. ದಿವಂಗತ ನಟ ಹಾಗೂ ರಾಜಕಾರಣಿ ಎನ್.ಟಿ ರಾಮರಾವ್ ಅವರ ಜೀವನ ಆಧಾರಿತ ಕಥೆ ಇದಾಗಿದೆ. ಚಿತ್ರ ಈಗಾಗಲೇ ಬಿಡುಗಡೆಯಾಗಿದ್ದು, ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಎನ್.ಟಿ ರಾಮರಾವ್ ಅವರ ಮಗ ನಂದಮೂರಿ ಬಾಲಕೃಷ್ಣ ಈ ಚಿತ್ರದಲ್ಲಿ ಎನ್.ಟಿ.ಆರ್ ಆಗಿ ನಟಿಸುತ್ತಿದ್ದಾರೆ. ಕ್ರಿಷ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ವಿದ್ಯಾಬಾಲನ್ ಎನ್.ಟಿ.ಆರ್ ಅವರ ಹೆಂಡತಿ ಬಸವತಾರಕಮ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇನ್ನು ನಂದಮೂರಿ ಕಲ್ಯಾಣ ರಾಮ್, ಹರಿಕೃಷ್ಣನ ಪಾತ್ರದಲ್ಲಿ ಹಾಗೂ ರಾಣಾ ದಗ್ಗುಬಾಟಿ ಎನ್‍ಟಿಆರ್ ಅಳಿಯ ಚಂದ್ರಬಾಬು ನಾಯ್ಡು ಆಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಹಂಸಿಕಾ ಮೋಟ್ವಾನಿ, ರಾಕುಲ್ ಪ್ರೀತ್ ಸಿಂಗ್, ಸಚಿನ್ ಖೇದ್ಕರ್, ಹಿಮಾಂಶು ಚೌಧರಿ, ಭರತ್ ರೆಡ್ಡಿ, ನಿತ್ಯಾ ಮೆನನ್ ಸೇರಿದಂತೆ ಹಲವರು ಪೋಷಕ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾವನ್ನು ಎನ್​ಬಿಕೆ ಫಿಲ್ಮ್ಸ್​, ವರಾಹಿ ಚಲನಚಿತ್ರಂ, ವಿಬ್ರಿ ಮೀಡಿಯಾ ನಿರ್ಮಿಸಿದ್ದು, ಎಂ.ಎಂ. ಕೀರವಾಣಿ ಸಂಗೀತ ನೀಡಿದ್ದಾರೆ. ಅಲ್ಲದೇ ಸಾಯಿ ಮಾಧವ ಬರ್ರಾ ಕಥೆ, ಅರ್ರಾಮ್ ರಾಮಕೃಷ್ಣ ಸಂಕಲನ ಸೇರಿದಂತೆ ಜ್ಙಾನ ಶೇಖರ್ ಅವರ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. ಕೆಲವೇ ದಿನಗಳಲ್ಲಿ ಈ ಚಿತ್ರದ ಭಾಗ-2 ಕೂಡ ತೆರೆಗೆ ಬರಲಿದೆ.

“ಠಾಕ್ರೆ’: ಶಿವಸೇನೆ ಮುಖಂಡ ಬಾಳಾಠಾಕ್ರೆ ಜೀವನಚರಿತ್ರೆ ಆಧಾರಿತ, ಅಭಿಜಿತ್ ಪನ್ಸೆ ನಿರ್ದೇಶನದ “ಠಾಕ್ರೆ’ ಚಿತ್ರದಲ್ಲಿ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಠಾಕ್ರೆ ಪಾತ್ರವನ್ನು ಮಾಡಿದ್ದಾರೆ. ಅಲ್ಲದೇ ಚಿತ್ರದ ಟ್ರೈಲರ್ ಕೂಡಾ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಸಿನಿಮಾದಲ್ಲಿ ಶಿವಸೇನೆ ಸಂಘಟನೆಯ ಜನನ, ಕರ್ನಾಟಕ-ಮಹಾರಾಷ್ಟ್ರ ನಡುವೆ ಬಹಳ ವರ್ಷಗಳಿಂದ ಇರುವ ಬೆಳಗಾವಿ ಸಮಸ್ಯೆ, ರಾಮಜನ್ಮಭೂಮಿ ಸಮಸ್ಯೆ ಹಾಗೂ ಇನ್ನಿತರ ಪ್ರಮುಖ ವಿವಾದಗಳ ಬಗ್ಗೆ ಚಿತ್ರಿಸಲಾಗಿದೆ. ವಯಾಕಾಮ್ 18 ಮೋಷನ್ ಪಿಕ್ಚರ್ಸ್, ಕಾರ್ನಿವಲ್ ಮೋಷನ್ ಪಿಕ್ಚರ್ಸ್ ಜೊತೆಗೂಡಿ ಹಿಂದಿ, ಮರಾಠಿ ಎರಡೂ ಭಾಷೆಗಳಲ್ಲೂ ಈ ಸಿನಿಮಾವನ್ನು ನಿರ್ಮಿಸಲಾಗಿದೆ. ನವಾಜುದ್ದೀನ್ ಸಿದ್ಧಿಕಿ ಜೊತೆಗೆ ಅಮೃತ ರಾವ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಹುತೇಕ ಜನವರಿಯಲ್ಲಿ ಇದು ತೆರೆ ಕಾಣಲಿದೆ.

“ಸೈನಾ’: ಬಾಲಿವುಡ್‍ನಲ್ಲಿ ಈಗಾಗಲೇ ಕ್ರೀಡಾಧಾರಿತ ಬಯೋಪಿಕ್ ಸಿನಿಮಾಗಳು ಸಾಕಷ್ಟು ಬಂದಿದ್ದು, ಆ ಸಾಲಿಗೆ ಈಗ “ಸೈನಾ’ ಚಿತ್ರವೂ ಒಂದು. ಸ್ಟಾರ್ ಶೆಟ್ಲರ್ ಸೈನಾ ನೆಹ್ವಾಲ್ ಜೀವನಾಧಾರಿತ ಸಿನಿಮಾ ಇದಾಗಿದ್ದು, ಸೈನಾ ಪಾತ್ರಕ್ಕೆ ಶ್ರದ್ಧಾ ಕಪೂರ್ ಜೀವ ತುಂಬುತ್ತಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಕೂಡಾ ಬಿಡುಗಡೆಯಾಗಿದ್ದು, ಶ್ರದ್ಧಾ ಕಪೂರ್ ಥೇಟ್ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ರೀತಿಯೇ ಕಾಣಿಸುತ್ತಿದ್ದರು. ಅಲ್ಲದೇ ಶ್ರದ್ಧಾ ಅವರು ಸೈನಾ ಆಗಿ ಪರಕಾಯ ಪ್ರವೇಶಿಸುವುದು ಸುಲಭವಾಗಿಲ್ಲ. ಪಾತ್ರಕ್ಕೆ ನೈಜತೆ ಬರಬೇಕಾದರೆ ಶ್ರದ್ಧಾ ಅವರು ಖುದ್ದಾಗಿ ಸೈನಾ ಮತ್ತು ಬ್ಯಾಡ್ಮಿಂಟನ್ ರಾಷ್ಟ್ರೀಯ ಕೋಚ್ ಗೋಪಿ ಚಂದ್ ಅವರೊಟ್ಟಿಗೆ ತರಬೇತಿ ಪಡೆಯಬೇಕಾಗಿ ಬಂದಿದ್ದಿದೆ. ಸೈನಾ ಪಾತ್ರಕ್ಕಾಗಿ ಸಾಕಷ್ಟು ಶ್ರಮ ಪಟ್ಟಿರುವ ಶ್ರದ್ಧಾ, ಬಹಳ ದಿನಗಳ ಕಾಲ ಬ್ಯಾಡ್ಮಿಂಟನ್ ಅಭ್ಯಾಸ ನಡೆಸಿದ್ದಾರೆ. ಸೈನಾ ಲುಕ್ ಬರಲು ಸಾಕಷ್ಟು ಕಸರತ್ತು ಕೂಡ ಮಾಡಿದ್ದಾರೆ. ಇನ್ನು ಚಿತ್ರವನ್ನು ಅಮೊಲ್ ಗುಪ್ತ್ ನಿರ್ದೇಶನ ಮಾಡಿದ್ದಾರೆ.

“ಶಕೀಲಾ’: 90ರ ದಶಕದಲ್ಲಿ ಮಲಯಾಳಂ ಚಿತ್ರರಂಗವನ್ನು ಆಳಿದ ವಯಸ್ಕರ ಚಿತ್ರಗಳ ತಾರೆ ಶಕೀಲಾ ಅವರ ಬದುಕಿನ ನೈಜ ಘಟನೆಗಳನ್ನಾಧರಿಸಿದ ಸಿನಿಮಾ “ಶಕೀಲಾ’ ಚಿತ್ರವು ತೆರೆಗೆ ಬರಲು ಸಜ್ಜಾಗಿದ್ದು, “ನಾಟ್ ಎ ಪೋರ್ನ್ ಸ್ಟಾರ್’ ಎಂಬ ಅಡಿ ಬರಹ ಚಿತ್ರಕ್ಕಿದೆ. ಅಲ್ಲದೇ ಚಿತ್ರದ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿದ್ದು, ಬಾಲಿವುಡ್ ನಟಿ ರೀಚಾ ಚಡ್ಡ ಶಕೀಲಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಕನ್ನಡದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆ್ಯಕ್ಷನ್ ಕಟ್ ಹೇಳಿದ್ದು, ಹಿಂದಿ ಭಾಷೆಯಲ್ಲಿ ಚಿತ್ರ ತಯಾರಾಗುತ್ತಿದೆ. ಚಿತ್ರದ ಪಾತ್ರಕ್ಕೆ ನ್ಯಾಯ ಒದಗಿಸುವುದಕ್ಕಾಗಿ ನಾಯಕಿ ರಿಚಾ ಸ್ವತಃ ಶಕೀಲಾ ಅವರನ್ನು ಭೇಟಿಯಾಗಿ ಸಲಹೆ ಸೂಚನೆ ಪಡೆದುಕೊಂಡಿದ್ದಾರೆ ಎನ್ನಲಾಗಿದ್ದು, ಶಕೀಲಾ ಅವರ ಜೀವನದ ಮೇಲೆ ಬೆಳಕು ಚೆಲ್ಲುವ ಈ ಚಿತ್ರ ಅವರ ಅಭಿಮಾನಿಗಳಿಗೆ ತೀವ್ರ ಕುತೂಹಲ ಹುಟ್ಟಿಸಿದೆ. ಇನ್ನು ಸಿನಿಮಾದಲ್ಲಿ ಶಕೀಲಾ ಅವರ ಸಿನಿಮಾ ಕೆರಿಯರ್ ಆರಂಭಿಕ ಜೀವನದ ಕಥೆಯನ್ನು ಬಿಂಬಿಸಲಾಗಿದೆ ಎಂದು ತಿಳಿದು ಬಂದಿದೆ. ಮುಖ್ಯವಾಗಿ ಹದಿನಾರನೇ ವಯಸ್ಸಿಗೇ ಚಿತ್ರರಂಗಕ್ಕೆ ಕಾಲಿಟ್ಟ ಶಕೀಲಾ, ಕನ್ನಡ, ಮಲಯಾಳಂ, ತಮಿಳು ಚಿತ್ರಗಳಲ್ಲಿ ನಟಿಸಿದ್ದರು. ವಿಶೇಷವಾಗಿ ವಯಸ್ಕರ ಸಿನಿಮಾಗಳಲ್ಲಿ ನಟಿಸಿದ್ದರು.

“ದಿ ಐರನ್ ಲೇಡಿ’: ತಮಿಳು ಚಿತ್ರರಂಗದಲ್ಲಿ ಭಾರೀ ಸಂಚಲನ ಮೂಡಿಸಲು ಸಿದ್ಧವಾಗಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಜೀವನಾಧಾರಿತ ಚಿತ್ರ “ದಿ ಐರನ್ ಲೇಡಿ’ ಕೂಡಾ ಒಂದು. ದೇಶ ಕಂಡ ಪ್ರಭಾವಿ ರಾಜಕಾರಣಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಬಯೋಪಿಕ್ ತಯಾರಾಗುತ್ತಿದ್ದು, ಪ್ರಿಯದರ್ಶಿನಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅಲ್ಲದೇ ಜಯಲಲಿತಾರ ಎರಡನೇ ವರ್ಷದ ಪುಣ್ಯತಿಥಿ ದಿನವೇ ಅವರ ಜೀವನಾಧಾರಿತ ಚಿತ್ರದ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಲಾಗಿತ್ತು. ಚಿತ್ರದಲ್ಲಿ ಜಯಲಲಿತಾ ಅವರ ಪಾತ್ರದಲ್ಲಿ ಬಹುಭಾಷಾ ನಟಿ ನಿತ್ಯ ಮೆನನ್ ಅಭಿನಯಿಸುತ್ತಿದ್ದು, ಥೇಟ್ ಜಯಲಲಿತಾ ಅವರಂತೆ ಕಾಣುತ್ತಾರೆ. ಜಯಲಲಿತಾ ಅವರ ಬಾಲ್ಯದಿಂದ ಅವರು ಕೊನೆಯುಸಿರೆಳೆವವರೆಗಿನ ಅವರ ಜೀವನದ ಸಂಪೂರ್ಣ ವಿವರ ಚಿತ್ರದಲ್ಲಿ ಕಾಣಬಹುದಾಗಿದೆ. ಈಗಾಗಲೇ ಚಿತ್ರದ ಶೂಟಿಂಗ್ ಹೈದರಾಬಾದ್ನಲ್ಲಿರುವ ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯುತ್ತಿದ್ದು, ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆಯಂತೆ.

“ಕಪಿಲ್ ದೇವ್ 83′: ಭಾರತೀಯ ಕ್ರಿಕೆಟ್ ಕಂಡ ಅತ್ಯುತ್ತಮ ಆಲ್ರೌಂಡರ್​​ಗಳಲ್ಲಿ ಕಪಿಲ್‍ದೇವ್‍ಗೆ ಅಗ್ರಸ್ಥಾನ. ಒಂದು ಕಾಲದಲ್ಲಿ ಟೀಮ್ ಇಂಡಿಯಾ ನಾಯಕರಾಗಿದ್ದ ಕಪಿಲ್ದೇವ್, ಅದ್ಭುತ ಬೌಲಿಂಗ್, ಬ್ಯಾಟಿಂಗ್‍ನಿಂದ ಮಿಂಚಿದ್ದರು. 1983ರ ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಅದ್ಭುತವಾಗಿ ಮುನ್ನಡೆಸಿ ಭಾರತಕ್ಕೆ ಚೊಚ್ಚಲ ವಿಶ್ವಕಪ್ ಕಿರೀಟ ತಂದುಕೊಟ್ಟಿದ್ದರು. ಈ ಕುರಿತಂತೆ “83′ ಎನ್ನುವ ಹೆಸರಿನಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ಬಾಲಿವುಡ್‍ನ ಖ್ಯಾತ ನಟ ರಣ್​​​​​ವೀರ್ ಸಿಂಗ್, ಕಪಿಲ್ ದೇವ್ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಕಬೀರ್ ಖಾನ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಕಪಿಲ್ ದೇವ್ ಪಾತ್ರಕ್ಕಾಗಿ ರಣ್​​​​​ವೀರ್ ಸ್ವತಃ ಕಪಿಲ್‍ದೇವ್‍ರ ಮಾರ್ಗದರ್ಶನದಲ್ಲಿ ಕ್ರಿಕೆಟ್ ತರಬೇತಿ ಪಡೆಯುತ್ತಿದ್ದಾರೆ. ಕಪಿಲ್ ದೇವ್ ಆನ್​ಫೀಲ್ಡ್​ನಲ್ಲಿ ತಾವು ಹೇಗೆ ಕಾಣಿಸಿಕೊಳ್ಳುತ್ತಿದ್ರು ಅನ್ನೋದನ್ನ ರಣ್​ವೀರ್​ಗೆ ಹೇಳಿಕೊಟ್ಟಿದ್ದಾರೆ. ಅಲ್ಲದೇ ಕಪಿಲ್ ದೇವ್ ಅವರ ಬೌಲಿಂಗ್ ಶೈಲಿ ಕಾಪಿ ಮಾಡೋದು ತುಂಬಾ ಕಷ್ಟ ಎಂದು ರಣ್​​​​​ವೀರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

“ಪಿಎಂ ನರೇಂದ್ರ ಮೋದಿ’: ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧರಿತ ಕುರಿತ ಚಿತ್ರ ಕೂಡ ಬರುತ್ತಿದ್ದು, “ಪಿಎಂ ನರೇಂದ್ರ ಮೋದಿ’ ಎಂದು ಚಿತ್ರಕ್ಕೆ ಹೆಸರಿಡಲಾಗಿದೆ. ಬಾಲಿವುಡ್ ನಟ ವಿವೇಕ್ ಒಬೆರಾಯ್ ಮೋದಿ ಅವರ ಪಾತ್ರಕ್ಕೆ ಜೀವ ತುಂಬಲಿದ್ದು, “ಮೇರಿಕೋಮ್’ ಚಿತ್ರದ ನಿರ್ದೇಶಕ ಓಂಮುಂಗ್​ ಕುಮಾರ್ ನಿರ್ದೇಶನದಲ್ಲಿ ಚಿತ್ರ ಮೂಡಿಬರುತ್ತಿದೆ. “ಪಿಎಂ ನರೇಂದ್ರ ಮೋದಿ’ ಚಿತ್ರದ ಫಸ್ಟ್ ಲುಕ್ ಪೊಸ್ಟರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ದೇಶಾದ್ಯಂತ 23 ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ. ಇನ್ನು ಚಿತ್ರದ ನಾಯಕ ವಿವೇಕ್ ಒಬೆರಾಯ್, “ಪಿಎಂ ನರೇಂದ್ರ ಮೋದಿ’ ಚಿತ್ರದ ಫಸ್ಟ್ ಲುಕ್ ಫೊಸ್ಟರ್ ಅನ್ನು ತಮ್ಮ ಟ್ವಿಟ್ಟರ್​​ನಲ್ಲಿ ಹಂಚಿಕೊಂಡಿದ್ದು, ಜೈಹಿಂದ್, ನಮ್ಮ ಅದ್ಭುತ ಪಯಣಕ್ಕೆ ನಿಮ್ಮೆಲ್ಲರ ಪ್ರಾರ್ಥನೆ ಮತ್ತು ಆಶೀರ್ವಾದ ಇರಲಿ ಎಂದು ನಾವು ಪ್ರೀತಿಯಿಂದ ಕೇಳುತ್ತೇವೆ ಎಂದು ಹ್ಯಾಷ್​ಟ್ಯಾಗ್​ನಲ್ಲಿ “ಅಖಂಡಭಾರತ್, ಪಿಎಂನರೇಂದ್ರ ಮೋದಿ’ ಎಂದು ಬರೆದುಕೊಂಡಿದ್ದಾರೆ.

ಈ ಎಲ್ಲ ಬಯೋಪಿಕ್ ಸಿನಿಮಾಗಳೂ ಭಾರತದ ಸಿನಿ ಪ್ರೇಕ್ಷಕರಿಗೆ ಬಹುದೊಡ್ಡ ಮನರಂಜನೆ ಜತೆಗೆ ಮಾದರಿಗಳೂ ಆಗಲಿದ್ದು, ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿವೆ.

* ಲಕ್ಷ್ಮಿಗೋವಿಂದರಾಜು ಎಸ್.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಭಾರತದ ಗೋಪರಂಪರೆಯಲ್ಲೂ ಹೈನುಗಾರಿಕೆ ತಳಿಗಳಲ್ಲಿ ಗೀರ್‌ ವಿಶಿಷ್ಟ ಸ್ಥಾನ. ಭಾರತೀಯ ಪರಂಪರೆಯಲ್ಲಿ ಹೆಚ್ಚು ಹಾಲು ಕೊಡುವ ತಳಿಗಳಲ್ಲಿ ಇದು ಎರಡನೆಯದು. ಗುಜರಾತಿನ...

  • ಕಡಬ: ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ರಾಮಕುಂಜದಲ್ಲಿ ಶನಿವಾರ ಚರಂಡಿಗೆ ಬಿದ್ದು ಗಾಯಗೊಂಡಿದ್ದ ರಾಮಕುಂಜ ಗ್ರಾಮದ ಶಾರದಾನಗರ ಕಾಲನಿಯ ನಿವಾಸಿ...

  • ಮಡಿಕೇರಿ: ದಕ್ಷಿಣ ಕೊಡಗಿನ ವಿವಿಧಡೆ ಹುಲಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗುತ್ತಿರುವ ವಿಷಯ ಹಸಿರಾಗಿರು ವಾಗಲೇ ಬಿಟ್ಟಂಗಾಲ ಸಮೀಪದ ವಿ.ಬಾಡಗದಲ್ಲಿ ಹುಲಿ ಹೆಜ್ಜೆ...

  • ಈ ವಾರ ಬೆಂಗಳೂರಿನಲ್ಲಿ ಪ್ರತೀವರ್ಷದಂತೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗುತ್ತಿದೆ. ಸುಮಾರು 200ಕ್ಕಿಂತಲೂ ಹೆಚ್ಚಿನ ದೇಶವಿದೇಶಗಳ ಚಿತ್ರಗಳನ್ನೂ...

  • ಉಡುಪಿ: ಪಡುಅಲೆವೂರು ಶ್ರೀ ದುರ್ಗಾಪರಮೇಶ್ವರೀ ದೇಗುಲದ ನವೀಕರಣ ಬ್ರಹ್ಮಕಲಶಾಭಿಷೇಕ ಪೂರ್ವಕ ಶತಚಂಡಿಕಾ ಯಾಗ, ಶೈವೋ ತ್ಸವ, ರಂಗಪೂಜೆ ಮಹೋತ್ಸವವು ಫೆ. 24ರಿಂದ 29ರ...