ತಾರೆ ಮೇಲೆ ಚಂದ್ರನ ವ್ಯಾಮೋಹ, ಬುಧನ ಜನ್ಮ ಹೇಗಾಯಿತು ಗೊತ್ತಾ?

Team Udayavani, Jun 12, 2018, 4:45 PM IST

ಬ್ರಹ್ಮದೇವರ ಮಾನಸಪುತ್ರರಾದ ಕಶ್ಯಪ,ಅಗಸ್ತ್ಯ ,ಪುಲಹ, ಪುಲಸ್ತ್ಯ, ಅಂಗೀರಸ ಮೊದಲಾದವರಲ್ಲಿ ಅತ್ರಿ ಋಷಿಗಳು ಒಬ್ಬರು, ಇವರ ಮಗನೇ ಚಂದ್ರ. ಚಂದ್ರನು ಒಮ್ಮೆ ರಾಜಸೂಯ ಯಾಗವನ್ನು ಮಾಡಲು ಪ್ರಾರಂಭಿಸಿದನು, ಅವನು ಬಹಳ ಅಹಂಕಾರದಲ್ಲಿ ಮೆರೆಯುತ್ತಿದ್ದನು. ಅಲ್ಲಿಗೆ ದೇವಗುರುಗಳು , ಪುರೋಹಿತರು ಆದ ಬೃಹಸ್ಪತಾಚಾರ್ಯರು ತಮ್ಮ ಪತ್ನಿ ತಾರೆಯೊಂದಿಗೆ ಆಗಮಿಸಿದರು. ತಾರೆಯನ್ನು ನೋಡಿ ಚಂದ್ರನು ಮೋಹಿಸಿಬಿಟ್ಟನು. ಯಜ್ಞವು ಸಮಾಪ್ತಿಯಾದೊಡನೆ ಚಂದ್ರನು ತಾರೆಯನ್ನು ಅಪಹರಿಸಿ ಬಲಾತ್ಕಾರದಿಂದ ತನ್ನ ಅರಮನೆಗೆ ಒಯ್ದುಬಿಟ್ಟನು. ತಾರೆಯನ್ನು ಮೋಸಗೊಳಿಸಿದನು..

ಬೃಹಸ್ಪತಾಚಾರ್ಯರು ಚಂದ್ರನಲ್ಲಿಗೆ ಬಂದು ತಮ್ಮ ಹೆಂಡತಿಯನ್ನು ವಾಪಸ್ಸು ಕಳುಹಿಸಬೇಕೆಂದು ಬಹು ವಿಧದಿಂದ ಕೇಳಿದರು. ದೈನ್ಯದಿಂದ ಬೇಡಿಕೊಂಡರು. ಆದರೂ ಚಂದ್ರನು ತಾರೆಯನ್ನು ಕಳಿಸಲಿಲ್ಲ. ಇದರಿಂದ ಸಿಟ್ಟಿಗೆದ್ದ ಬೃಹಸ್ಪತಾಚಾರ್ಯರು ಚಂದ್ರನ ವಿರುದ್ಧ ಯುದ್ಧ ಮಾಡಿ ತಮ್ಮ ಪತ್ನಿಯನ್ನು ಕರೆದೊಯ್ಯಲು ನಿಶ್ಚಯಿಸಿದರು.

ಇದನ್ನು ಅರಿತ ದೈತ್ಯಗುರು ಶುಕ್ರಾಚಾರ್ಯರು ಬೃಹಸ್ಪತಾಚಾರ್ಯರ ಮೇಲಿನ ದ್ವೇಷದಿಂದ ಅಸುರರೊಡನೆ ಚಂದ್ರನ ಪಕ್ಷವನ್ನು ವಹಿಸಿದರು. ದೇವೇಂದ್ರನು ಸಮಸ್ತ ದೇವತೆಗಳೊಂದಿಗೆ ತನ್ನ ಗುರುವಾದ ಬೃಹಸ್ಪತಿಯ ಪಕ್ಷವನ್ನು ವಹಿಸಿದ.  ಯುದ್ಧವು ಮಹಾಅನರ್ಥ ಸಂಭವಿಸಬಹುದೆಂದು ಬ್ರಹ್ಮದೇವರು ತಿಳಿದು ತಮ್ಮ ಮಾನಸ ಪುತ್ರರು ಬೃಹಸ್ಪತಾಚಾರ್ಯರ ತಂದೆಯೂ ಆದ ಅಂಗೀರಸ ಋಷಿಗಳನ್ನು ಕರೆದು ಚಂದ್ರನಿಂದ ತಾರೆಯನ್ನು ಮುಕ್ತಗೊಳಿಸಿ ಯುದ್ಧವಾಗದಂತೆ ನೋಡಿಕೊಳ್ಳಲು ಸೂಚಿಸಿದರು.

 ಅಂಗೀರಸ ಮುನಿಗಳು ಚಂದ್ರನಲ್ಲಿಗೆ ಬಂದು ಅವನನ್ನು ಬೆದರಿಸಿ ಹೆದರಿಸಿ ಬ್ರಹ್ಮಾಜ್ಞೆಯಾಗಿದೆಯೆಂದು ಹೇಳಿ ತಮ್ಮ ಸೊಸೆಯನ್ನು ಬಿಡಿಸಿ ಯುದ್ಧ ತಪ್ಪಿಸಿದರು.

ತಾರೆಯು ಪತಿಗೃಹಕ್ಕೆ  ಬಂದಾಗ ಗರ್ಭ ಧರಿಸಿದ್ದಳು. ಬೃಹಸ್ಪತಾಚಾರ್ಯರು ಇದನ್ನರಿತು ಬಹಳ ಸಿಟ್ಟಿಗೆದ್ದರು.  ” ನೀಚಳೇ, ಜಾರಿಣಿಯೇ , ಪರಪುರುಷನ ಸಂಗಮಾಡಲು ನಿನಗೆ ನಾಚಿಗೆ ಬರಲಿಲ್ಲವೇ ? ನಿನಗೆ ಹೇಸಿಕೆಯಾಗಲಿಲ್ಲವೇ? ಈಗಿಂದೀಗಲೇ ನನ್ನ ಆಶ್ರಮದಿಂದ ಹೊರಟುಹೋಗು. ಈ ಗರ್ಭವನ್ನು ವಿಸರ್ಜಿಸಿ ನನ್ನ ಮನೆಗೆ ಬಾ” ಎಂದು ಗರ್ಜಿಸಿದರು.

ತಾರೆಯು ಗಾಬರಿಯಾದಳು, ಹೆದರಿ ಗಡಗಡನೆ ನಡುಗತೊಡಗಿದಳು. ದುಃಖ ಉಕ್ಕಿಬಂದು ಬಹಳವಾಗಿ ಅತ್ತಳು. ಇದರಲ್ಲಿ ತನ್ನ ತಪ್ಪಿಲ್ಲವೆಂದು ಗೋಳಾಡಿದಳು. ತನ್ನನ್ನು ಕ್ಷಮಿಸಲು ಆಚಾರ್ಯರನ್ನು ಪರಿಪರಿಯಾಗಿ ಬೇಡಿಕೊಳ್ಳತೊಡಗಿದಳು. ಬೃಹಸ್ಪತಾಚಾರ್ಯರು ತಾರೆಯಲ್ಲಿ ದಯೆತೋರಿದರು. ಇದರಲ್ಲಿ ತಾರೆಯ ತಪ್ಪು ಇಲ್ಲವೆಂದು   ಅರಿತು, ಭಯಪಡಬೇಡ , ನಾನು ನಿನ್ನನ್ನು ದಹಿಸುವುದಿಲ್ಲ ಏಕೆಂದರೆ, ನೀನು ಸ್ತ್ರೀಯಾಗಿರುವೆ ಮೇಲಾಗಿ ನಿನ್ನಲ್ಲಿ ಸಂತಾನ  ಪಡೆಯುವ ಆಶಯವು ನನಗಿದೆ.

ದೇವಿಯಾದ್ದರಿಂದ ನೀನು ನಿರ್ದೋಷಿಯಾಗಿರುವೆ.  ಸರಿ ” ಯೋಗ್ಯ ಸಮಯಕ್ಕೆ ಪ್ರಸವಿಸು. ಮಗು ಯೋಗ್ಯನಾಗಿದ್ದರೆ ನಾನು ಅವನನ್ನು ಸ್ವೀಕರಿಸುವೆನು. ಇಲ್ಲದಿದ್ದರೆ ಇಲ್ಲ ” ಎಂದು ಹೇಳಿಬಿಟ್ಟರು. ತಾರೆಯು ಆಶ್ರಮದಲ್ಲಿಯೇ ಉಳಿದಳು .  ಒಂದು ಶುಭ ಮುಹೂರ್ತದಲ್ಲಿ ತಾರೆಯು ಒಳ್ಳೆ ಚಿನ್ನದ ಕಾಂತಿಯಿಂದ ಕೂಡಿದ ಸುಂದರ ಸದೃಢಕಾಯನಾದ  ಗಂಡು ಮಗುವನ್ನು ಹೆತ್ತಳು, ಅವನೇ ಬುಧ.

ಬೃಹಸ್ಪತಿಯು ಬಹಳ ಸಂತೋಷದಿಂದ ಮಗುವನ್ನು ಸ್ವೀಕರಿಸಿದರು, ಆದರೆ ಮಗುವಿನ ತೇಜಸ್ಸನ್ನು ಕಂಡ ಚಂದ್ರನಿಗೆ ವ್ಯಾಮೋಹ ಬೆಳೆಯಿತು. ಆ ಮಗುವು ತನ್ನದೆಂದು ಅದನ್ನು ತನಗೆ ಕೊಡಬೇಕೆಂದು ಬೃಹಸ್ಪತಾಚಾರ್ಯರನ್ನು ಚಂದ್ರನು ಕೇಳತೊಡಗಿದನು. ಬೃಹಸ್ಪತಿಗಳು ಇದಕ್ಕೆ ಒಪ್ಪಲಿಲ್ಲ. ಈ ಬಗ್ಗೆ ಚಂದ್ರ ಮತ್ತು ಬೃಹಸ್ಪತಿಗಳ ನಡುವೆ ಜಗಳ ಶುರುವಾಯಿತು. ಇದನ್ನು ಬಗೆ ಹರಿಸಲು ದೇವತೆಗಳು ಋಷಿಮುನಿಗಳು ತಾರೆಯ ಬಳಿಯಲ್ಲಿ ಕೇಳಿದರು.  ಆದರೆ ತಾರೆಯು ಏನೂ ಹೇಳಲಿಲ್ಲ.

ಅದೇ ಸಮಯದಲ್ಲಿ ಬ್ರಹ್ಮದೇವನು ಬಂದು ಏಕಾಂತಸ್ಥಳದಲ್ಲಿ ತಾರೆಯಲ್ಲಿ ಕೇಳಲು, ಆಗ ತಾರೆಯು ಇದು ಚಂದ್ರನಿಗೆ ಸೇರಿದ್ದು ಎಂದು ಉತ್ತರಿಸಿದಳು. ಬ್ರಹ್ಮದೇವರು ಆ ಮಗುವಿಗೆ ಬುಧ ಎಂದು ಹೆಸರಿಟ್ಟರು. ಏಕೆಂದರೆ ಅವನ ಬುದ್ದಿಯು ಬಹಳ ಗಂಭೀರವಾಗಿತ್ತು.  ತಾರೆಯ ಉತ್ತರದಂತೆ ಮಗುವನ್ನು ಚಂದ್ರನೊಟ್ಟಿಗೆ  ಕಳುಹಿಸಿಕೊಟ್ಟರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ