ಭಗವನ್ನಾಮಸ್ಮರಣೆಯ ಮಹಿಮೆ ! ಅಜಾಮಿಳನ ಮುಕ್ತಿಯ ಮಾರ್ಗ…


Team Udayavani, Nov 20, 2018, 3:40 PM IST

ajamila-1.jpg

ಪೂರ್ವ ಕಾಲದಲ್ಲಿ ಕಾನಕುಬ್ಜದೇಶದಲ್ಲಿ ಅಜಾಮಿಳನೆಂಬ ಓರ್ವ ಬ್ರಾಹ್ಮಣ­­­­ನಿದ್ದನು. ಆತನು ದೊಡ್ಡ ಶಾಸ್ತ್ರಜ್ಞನೂ, ಶೀಲ, ಸದ್ಗುಣ-ಸದಾಚಾರಸಂಪನ್ನನೂ ಆಗಿದ್ದು ವಿನಯಿಯೂ, ಸತ್ಯ ನಿಷ್ಠನೂ, ಪವಿತ್ರಾತ್ಮನೂ ಆಗಿದ್ದನು. ಆತನು ದೇವ-ಬ್ರಾಹ್ಮಣ – ಸಾಧು – ಅಗ್ನಿ – ಗುರುಹಿರಿಯರ ಸೇವೆಮಾಡುತಿದ್ದು ನಿರಹಂಕಾರಿಯಾಗಿದ್ದನು. ಎಲ್ಲ ಪ್ರಾಣಿಗಳ ಹಿತವನ್ನು ಬಯಸುತ್ತ ಪರೋಪಕಾರಿಯಾಗಿದ್ದು ಮಿತ ಭಾಷಿಯಾಗಿದ್ದನು. ಯಾರದೋಷವನ್ನು ಎತ್ತಿ ಹಿಡಿದು ಹೀಯಾಳಿಸುತ್ತಿರಲಿಲ್ಲ.

             ಒಂದು ದಿನ ಅಜಾಮಿಳನು ತನ್ನ ತಂದೆಯ ಅಪ್ಪಣೆಯಂತೆ ಯಾಗಕ್ಕೆ ಬೇಕಾದ ಫಲ, ಪುಷ್ಪ, ಸಮಿತ್ತು, ಧರ್ಬೆಗಳನ್ನು ಸಂಗ್ರಹಿಸಿಕೊಂಡು ಮನೆಗೆ ಹಿಂದಿರುಗುವಾಗ ದಾರಿಯಲ್ಲಿ ಭ್ರಷ್ಟನಾದ ಅತಿಕಾಮಿಯೂ ಆದ ಓರ್ವ ವೃಷಲನು ನಿರ್ಲಜ್ಜನಾಗಿ ಸುರಾಪಾನವನ್ನು ಮಾಡಿಕೊಂಡು ಉನ್ಮತ್ತಳಾದ ಅರ್ಧ ನಗ್ನಸ್ಥಿತಿಯಲ್ಲಿರುವ ಗಣಿಕಾಸ್ತ್ರೀಯೊಂದಿಗೆ ವಿಹರಿಸುತ್ತಿದ್ದನು. ಆತನು ಅವಳೊಂದಿಗೆ ನಗುತ್ತಾ, ಹಾಡುತ್ತಾ, ನಾನಾ ಬಗೆಯ ಕುಚೇಷ್ಟೆಗಳನ್ನು ಮಾಡುತ್ತ ಅವಳನ್ನು ಸಂತೋಷ ಪಡಿಸುತ್ತಿದ್ದನು. ಆತನು ತನ್ನ ದೇಹಕ್ಕೆ ಕಾಮೋದ್ದೀಪಕವಾದ  ಅಂಗರಾಗವನ್ನು ಪೂಸಿಕೊಂಡು ಕುಲಟೆಯನ್ನು ಆಲಿಂಗಿಸಿಕೊಂಡಿದ್ದನು.

              ಅವರನ್ನು ನೋಡಿದ ಅಜಾಮಿಳನು ಮೋಹಗೊಂಡು ಕಾಮಪರವಶನಾಗಿಬಿಟ್ಟನು ಆಗ ಅಜಾಮಿಳನು ತನ್ನ ಧೈರ್ಯ ಜ್ಞಾನಕ್ಕನುಸಾರವಾಗಿ ಕಾಮಪರವಶವಾದ ಮನಸ್ಸನ್ನು ಹತೋಟಿಗೆ ತರಲು ಬಹಳ ಪ್ರಯತ್ನಿಸಿದನು. ಆದರೆ ಅವನ ಪ್ರಯತ್ನವೆಲ್ಲ ವ್ಯರ್ಥವಾಗಿ ಹೋಯಿತು. ಆ ವೇಶ್ಯೆಯನ್ನು ನಿಮಿತ್ತೀಕರಿಸಿಕೊಂಡು ಕಾಮಪಿಶಾಚಿಯು ಅಜಾಮಿಳನ ಮನಸ್ಸನ್ನು ಆಕ್ರಮಿಸಿಬಿಟ್ಟಿತು. ಇವನ ಸದಾಚಾರ ಹಾಗೂ ಶಾಸ್ತ್ರಜ್ಞಾನವು ನಷ್ಟವಾಗಿ ಹೋಯಿತು. ಅಜಾಮಿಳನು ಮನಸ್ಸಿನಲ್ಲಿಯೇ ಆ ಸ್ತ್ರೀಯನ್ನು ಚಿಂತಿಸುತ್ತಾ ತನ್ನ ಧರ್ಮದಿಂದ ವಿಮುಖನಾಗಿ ಆಕೆಯನ್ನು ಸಂತೋಷಪಡಿಸಲಿಕ್ಕೋಸ್ಕರ ಬಹಳಷ್ಟು ವಸ್ತ್ರ-ಒಡವೆಗಳನ್ನು ತಂದುಕೊಡತೊಡಗಿದನು. ತನ್ನ ತಂದೆಯ ಸಂಪತ್ತುಗಳನೆಲ್ಲ ವೆಚ್ಚಮಾಡಿ ಆಕೆಯನ್ನು ಮೆಚ್ಚಿಸಿ, ಅವಳು ಯಾವುದರಿಂದ ಪ್ರಸನ್ನಳಾಗುವಳೋ ಆರೀತಿಯಲ್ಲಿ ಚೇಷ್ಟೆಗಳನ್ನು ಮಾಡುತ್ತಾ ಅವಳ ದಾಸನಾಗಿದ್ದನು. ಕೊನೆಗೆ ಆ ಸ್ವೇಚ್ಚಾಚಾರಿಣಿಯ ಸಹವಾಸಕ್ಕಾಗಿ ಕುಲೀನೆಯೂ, ತರುಣಿಯೂ, ಸುಂದರಿಯೂ ಆದ ತನ್ನ ಧರ್ಮಪತ್ನಿಯನ್ನು ತೊರೆದುಬಿಟ್ಟು ಆ ವೇಶ್ಯಾ ಸ್ತ್ರೀಯನ್ನು ತನ್ನ ಹೆಂಡತಿಯನ್ನಾಗಿಸಿಕೊಂಡು ಆಕೆಯ ಸಹವಾಸದಿಂದ ದೂಷಿತನಾಗಿ ,ಸದಾಚಾರವನ್ನು ತೊರೆದು ಪೂರ್ಣ ಭ್ರಷ್ಟನಾಗಿದ್ದನು. ಆತನು ಲೂಟಿ,ಕಳ್ಳತನ ಮುಂತಾದ ನೀಚ ವೃತ್ತಿಯಿಂದ ತನ್ನ ಕುಲಟೆಯಾದ ಹೆಂಡತಿ ಹಾಗೂ ಅವಳ ಮಕ್ಕಳನ್ನು ಸಾಕುತ್ತಿದ್ದನು.

              ಹೀಗೆ ಆ ದಾಸಿಯ ಸಹವಾಸದಲಿರುತ್ತ ಆಕೆಯನ್ನು ಮತ್ತು ಅವಳ ದೊಡ್ಡ ಕುಟುಂಬವನ್ನು ಸಾಕುವುದರಲ್ಲೇ ಬಹಳಷ್ಟುವರ್ಷಗಳು ಕಳೆದು ಹೋದವು. ಎಂಭತ್ತೆಂಟು ವರ್ಷದ ಮುದುಕನಾದ ಅಜಾಮಿಳನಿಗೆ ಹತ್ತು ಜನ ಮಕ್ಕಳಿದ್ದರು ಅವರಲ್ಲಿ ಎಲ್ಲರಿಗಿಂತಲೂ ಕಿರಿಯವನ ಹೆಸರು “ನಾರಾಯಣ” ಎಂಬುದಾಗಿತ್ತು.  ತಂದೆತಾಯಿಯರು ಅವನನ್ನು ಬಹಳ ಪ್ರೀತಿಸುತ್ತಿದ್ದರು. ಮುದುಕನಾದ ಅಜಾಮಿಳನು ಕಡು ಮೋಹದಿಂದ ತನ್ನ ಪೂರ್ಣವಾದ ಮನಸ್ಸನ್ನು ನಾರಾಯಣನಲ್ಲಿಟ್ಟಿದ್ದನು. ಆತನ ತೊದಲ್ನುಡಿಗಳನ್ನು ಕೇಳುತ್ತಾ, ಅವನ ಆಟ, ಪಾಠಗಳನ್ನು ನೋಡುತ್ತಾ ಆನಂದ ಪಡುತ್ತಿದ್ದನು.

                 ಮಗನ ಸ್ನೇಹ ಪಾಶದಲ್ಲಿ ಬಂಧಿತನಾದ ಅವನು, ತಾನು ತಿನ್ನುವಾಗ, ಕುಡಿಯುವಾಗ ಅವನಿಗೂ ಕೊಡುತ್ತಾ ದಿನದೂಡುತ್ತಿದ್ದ ಅಜಾಮಿಳನಿಗೆ ಮೃತ್ಯುವು ತಲೆಯಮೇಲೆ ಬಂದು ಕುಳಿತಿರುವುದು ತಿಳಿಯದೆ ಹೋಯಿತು. ಹೀಗೆ ಮೂರ್ಖನಾದ ಅಜಾಮಿಳನು ತನ್ನ ಜೀವನವನ್ನು ಸಾಗಿಸುತ್ತಿರಲು ಜೀವನದ ಕೊನೆಯಕಾಲವು ಬಂದೇಬಿಟ್ಟಿತು. ಆಗಲೂ ತನ್ನ ಮಗನಾದ ನಾರಾಯಣನನ್ನೇ ಸ್ಮರಿಸಿಕೊಂಡಿದ್ದನು. ಇಷ್ಟರಲ್ಲಿ ತನ್ನನು ಸೆಳೆದೊಯ್ಯಲು ಅತ್ಯಂತ ಭಯಂಕರರಾದ ಮೂವರು ಯಮದೂತರು ಬಂದಿರುವುದನ್ನು ನೋಡಿದನು. ಅವರು ತಮ್ಮ ಕೈಗಳಲ್ಲಿ ಪಾಶಗಳನ್ನು ಹಿಡಿದಿದ್ದು ವಿಕಾರರೂಪಿಗಳಾಗಿದ್ದರು. ಶರೀರದ ಮೇಲೆ ರೋಮಗಳು ನಿಮಿರಿನಿಂತಿದ್ದವು.

              ಆ ಪುಟ್ಟ ಬಾಲಕನಾದ ನಾರಾಯಣನು ಸ್ವಲ್ಪದೂರದಲ್ಲಿ ಆಡುತಿದ್ದನು, ಯಮದೂತರನ್ನು ಕಂಡು ಅಜಾಮಿಳನು ಅತ್ಯಂತ ವ್ಯಾಕುಲನಾಗಿ, ಭಯಗೊಂಡು ಗಟ್ಟಿಯಾಗಿ ‘ನಾರಾಯಣ’ ಎಂದು ಕೂಗಿದನು. ಆಕಾಶ ಮಾರ್ಗದಲ್ಲಿ ಸಂಚರಿಸುತ್ತಿದ್ದ  ದೇವದೂತರು ನೋಡಿದರು – ಇವನು ಸಾಯುವಾಗ ನಮ್ಮ ಸ್ವಾಮಿಯಾದ ಭಗವಾನ್ ನಾರಾಯಣನ ನಾಮದ ಕೀರ್ತನೆ ಮಾಡುತ್ತಿದ್ದಾನೆ ಎಂಬುದನ್ನು ಗಮನಿಸಿ ಅತ್ಯಧಿಕ ವೇಗದಿಂದ ತಕ್ಷಣವೇ ಅಲ್ಲಿಗೆ ಬಂದು ತಲುಪಿದರು. ಆ ಸಮಯದಲ್ಲಿ ಯಮನ ದೂತರು ದಾಸಿಪತಿಯಾದ ಅಜಾಮಿಳನ ಶರೀರದಿಂದ ಅವನ ಸೂಕ್ಷ್ಮಶರೀರವನ್ನು ಸೆಳೆಯುತ್ತಿದ್ದರು. ವಿಷ್ಣುದೂತರು ಅವರನ್ನು ತಡೆದರು.

               ಅವರು ಹೀಗೆ ತಡೆದಾಗ ಯಮನ ದೂತರು ವಿಷ್ಣುದೂತರಲ್ಲಿ ” ಯಮಧರ್ಮನ ಶಾಸನವನ್ನು ತಡೆಯುವವರು ನೀವು ಯಾರು ?  ನೀವು ಯಾರ ದೂತರು? ಎಲ್ಲಿಂದ ಬಂದಿರುವಿರಿ? ಇವನನ್ನು ಕೊಂಡುಹೋಗುವುದನ್ನು ಏಕೆ ತಡೆಯುತ್ತಿರುವಿರಿ? ನೀವು ಯಾರಾದರೂ ದೇವತೆಗಳೋ ಅಥವಾ ಸಿದ್ದಶ್ರೇಷ್ಠರೋ ? ನಿಮ್ಮ ಕಣ್ಣುಗಳು ಕಮಲದ ದಳಗಳಂತೆ ಸುಂದರ ಸುಕೋಮಲವಾಗಿವೆ. ನೀವು ಹಳದಿಬಣ್ಣದ ಪೀತಾಂಬರವನ್ನು ಧರಿಸಿರುವಿರಿ. ನಿಮ್ಮ ತಲೆಯ ಮೇಲೆ ಕಿರೀಟವೂ, ಕುಂಡಲಾದಿ ಕಮಲದ ಮಾಲೆಗಳು ಬೆಳಗುತ್ತಿವೆ. ನಿಮ್ಮ ಪ್ರಕಾಶವು ಎಲ್ಲ ದಿಕ್ಕುಗಳ ಅಂಧಕಾರವನ್ನು ಕಳೆಯುವಂತಿದೆ. ನಾವು ಯಮರಾಜನ ಸೇವಕರು. ನಮ್ಮನ್ನು ನೀವುಗಳು ಏಕೆ ತಡೆಯುತ್ತಿದ್ದೀರಿ? ಎಂದು ವಿಚಾರಿಸಿದರು.

                ನಾರಾಯಣನ ಅಜ್ಞಾಕಾರಿ ಪಾರ್ಷದರು ನಗುತ್ತಾ ಯಮದೂತರೇ ಧರ್ಮದ ಲಕ್ಷಣ ಮತ್ತು ತತ್ವವನ್ನು ತಿಳಿಸುವಂತವರಾಗಿ… ದಂಡನೆಯನ್ನು ಹೇಗೆ ಕೊಡಲಾಗುತ್ತದೆ ? ದಂಡನೆಗೆ ಯಾವನು ಪಾತ್ರನು? ಮನುಷ್ಯರಲ್ಲಿ ಪಾಪವನ್ನು ಆಚರಿಸಿದವರೆಲ್ಲರೂ ದಂಡನೆಗೆ ಅರ್ಹರೋ, ಅಥವಾ ಅವರಲ್ಲಿ ಕೆಲವರೋ? ತಿಳಿಸಿರಿ ಎಂದರು.

               ಯಮದೂತರು ” ವೇದಗಳು ತಿಳಿಸಿದ ಕರ್ಮಗಳೇ ಧರ್ಮವು. ನಿಷಧ ಮಾಡಿರುವುದೆಲ್ಲವೂ ಅಧರ್ಮವಾಗಿದೆ. ವೇದಗಳು ಸ್ವಯಂ ಭಗವಂತನ ಸ್ವರೂಪಗಳಾಗಿವೆ. ಜೀವಿಯು ಶರೀರ ಅಥವಾ ಮನೋವೃತ್ತಿಯಿಂದ ಮಾಡುವ ಕರ್ಮಗಳಿಗೆ – ಸೂರ್ಯ, ಅಗ್ನಿ, ಆಕಾಶ, ವಾಯು , ಇಂದ್ರಿಯಗಳು ಚಂದ್ರ, ಸಂಧ್ಯೆಗಳು, ರಾತ್ರಿ, ಹಗಲು, ದಿಕ್ಕುಗಳು, ನೀರು, ಪೃಥಿವಿ, ಕಾಲ ಮತ್ತು ಧರ್ಮ ಇವುಗಳ ಮೂಲಕ ಅಧರ್ಮವನ್ನು ಪತ್ತೆಮಾಡಿ ದಂಡನೆ ನೀಡಲಾಗುತ್ತದೆ ” ಎಂದು ತಿಳಿಸಿದರು.

                 ಎಲೈ ದೇವತೆಗಳಿರಾ !  ಅಜಾಮಿಳನ ವೃತ್ತಾಂತವೆಲ್ಲ ನಿಮಗೆ ತಿಳಿದೇ ಇದೆ, ಇವನು ಇಲ್ಲಿಯವರೆಗೂ ತನ್ನ ಪಾಪಗಳಿಗೆ ಯಾವ ಪ್ರಾಯಶ್ಚಿತ್ತವನ್ನು ಮಾಡಿಕೊಂಡಿಲ್ಲ ಅದಕ್ಕಾಗಿ ನಾವು ಈ ಪಾಪಿಯನ್ನು ದಂಡಪಾಣಿಯಾದ ಯಮರಾಜನ ಬಳಿಗೆ ಕೊಂಡುಹೋಗುವೆವು. ಅಲ್ಲಿ ಇವನು ತನ್ನ ಪಾಪಗಳನ್ನು ಭೋಗಿಸಿ ಶುದ್ಧನಾಗಿ ಹೋಗುವನು.

             ದೇವದೂತರು ಈ ಮಾತನ್ನು ಕೇಳಿ – ಎಲೈ ಯಮದೂತರೇ ! ಈ ಅಜಾಮಿಳನು ಕೋಟಿ ಕೋಟಿ ಜನ್ಮಗಳಲ್ಲಿ ಮಾಡಿದ್ದ ಪಾಪಗಳಿಗೂ ಪೂರ್ಣವಾಗಿ ಪ್ರಾಯಶ್ಚಿತ್ತವನ್ನು ಮಾಡಿಕೊಂಡಿರುವನು. ಏಕೆಂದರೆ, ಬೇರಾವುದೋ ವ್ಯಾಮೋಹದಿಂದಲೇ ಆದರೂ ಇವನು ಶ್ರೀಹರಿಯ ಪರಮ ಕಲ್ಯಾಣಮಯವಾದ ಮೋಕ್ಷಪ್ರದವಾದ ನಾಮವನ್ನು ಉಚ್ಚರಿಸಿರುವನು. ಇವನು ‘ನಾರಾಯಣ’ ಎಂಬ ಈ ನಾಲ್ಕು ಅಕ್ಷರಗಳನ್ನು ಉಚ್ಚರಿಸುವುದರಿಂದಲೇ ಈ ಪಾಪಿಯ ಎಲ್ಲ ಪಾಪಗಳ ಪ್ರಾಯಶ್ಚಿತ್ತವು ಆಗಿಹೋಯಿತು. ಎಂತಹ ಪಾತಕಗಳನ್ನು ಮಾಡಿದ್ದರೂ ಭಗವಂತನ ನಾಮವನ್ನು ಉಚ್ಛರಿಸುವುದೇ ದೊಡ್ಡ ಪ್ರಾಯಶ್ಚಿತ್ತವು. ಏಕೆಂದರೆ ಭಗವಂತನ ನಾಮಗಳು ಜ್ಞಾನವನ್ನು ಮೂಡಿಸುತ್ತವೆ. ಬೇರೆ ರೀತಿಯ ಪ್ರಾಯಶ್ಚಿತ್ತದಿಂದ ಜೀವಿಯು ಮತ್ತೆ ದುರ್ಗಮದ ಹಾದಿಯನ್ನು ತುಳಿಯಬಲ್ಲನು. ಆದರೆ ಭಗವಂತನ ಜ್ಞಾನವನ್ನು ಪಡೆದವನ ಪಾಪಗಳೆಲ್ಲವೂ  ಬುಡ ಸಹಿತ ನಾಶ ಹೊಂದುವವು. ತಿಳಿದು ತಿಳಿಯದೆಯೇ ಭಗವಂತನ ನಾಮವನ್ನು ಉಚ್ಚರಿಸಿದರೂ ಅದು ತನ್ನ ಫಲವನ್ನು ಕೊಟ್ಟೆ ಕೊಡುವುದು”. ಎಂದು ಭಗವನ್ನಾಮ ಹಾಗೂ ಭಾಗವತ ಧರ್ಮದ ಸಮಗ್ರ ನಿರ್ಣಯವನ್ನು ತಿಳಿಸಿ ಅಜಾಮಿಳನನ್ನು ಯಮನ ದೂತರಿಂದ ಬಿಡಿಸಿ ಮೃತ್ಯುಕೂಪದಿಂದ ಪಾರು ಮಾಡಿದರು.

                     ಯಮದೂತರ ಹಾಗೂ ದೇವದೂತರ ಮಾತುಗಳನ್ನು ಕೇಳಿಸಿಕೊಂಡು ಯಮದೂತರ ಪಾಶಗಳಿಂದ ಬಿಡುಗಡೆಹೊಂದಿದ ಅಜಾಮಿಳನು ಆನಂದಮಗ್ನನಾಗಿ ದೇವದೂತರಿಗೆ ತಲೆಬಾಗಿ ವಂದಿಸಿದನು. ನೋಡುನೋಡುತ್ತಿದ್ದಂತೆಯೇ ಅವರೆಲ್ಲ ಮಾಯವಾಗಿಬಿಟ್ಟರು. ಅಜಾಮಿಳನು ತಾನು ಮಾಡಿದಂತ ಪಾಪ ಕರ್ಮಗಳೆಲ್ಲವನ್ನು ಅರಿತು ಪಶ್ಚಾತ್ತಾಪ ಪಟ್ಟನು. ದೇವದೂತರ ಕ್ಷಣಕಾಲದ ಸತ್ಸಂಗದಿಂದಲೇ ಅಜಾಮಿಳನ ಚಿತ್ತದಲ್ಲಿ ತೀವ್ರವಾದ ವೈರಾಗ್ಯ ಉಂಟಾಗಿ, ಸಂಸಾರದ ಎಲ್ಲ ಸಂಬಂಧಗಳನ್ನೂ, ಮೋಹವನ್ನು ತೊರೆದು ಹರಿದ್ವಾರಕ್ಕೆ ಹೊರಟುಹೋದನು.

               ದೇವಭೂಮಿಯಾದ ಪವಿತ್ರ ಕ್ಷೇತ್ರಕ್ಕೆ ಹೋಗಿ ಒಂದು ಭಗವಂತನ ಮಂದಿರದಲ್ಲಿ ಯೋಗಾಸನದಲ್ಲಿ ಕುಳಿತು. ಯೋಗವನ್ನು ಆಚರಿಸುತ್ತ ತನ್ನ ಎಲ್ಲ ಇಂದ್ರಿಯಗಳನ್ನು ಅದರ ವಿಷಯಗಳಿಂದ ತೊರೆದು, ಮನಸ್ಸನ್ನು ಬುದ್ದಿಯಲ್ಲಿ ಸೇರಿಸಿಬಿಟ್ಟನು. ಅನಂತರ ಆತ್ಮಚಿಂತನೆಯಿಂದ ಬುದ್ದಿಯನ್ನು ವಿಷಯಗಳಿಂದ ಬೇರ್ಪಡಿಸಿ, ಪರಬ್ರಹ್ಮನಲ್ಲಿ ಸೇರಿಸಿಬಿಟ್ಟನು. ಹೀಗೆ ಅಜಾಮಿಳನ ಬುದ್ದಿಯು ತ್ರಿಗುಣಮಯ ಪ್ರಕೃತಿಯನ್ನು ಮೀರಿ ಭಗವಂತನ ಸ್ವರೂಪದಲ್ಲಿ ನೆಲೆಸಿದಾಗ, ಅವನು ಹಿಂದೆ ನೋಡಿದ ನಾಲ್ಕು ದೇವದೂತರು ತನ್ನ ಎದುರಿನಲ್ಲಿ ನಿಂತಿರುವುದನ್ನು ಕಂಡು ತಲೆಬಾಗಿ ನಮಿಸಿ ಗಂಗಾತೀರದಲ್ಲಿ ತನ್ನ ಶರೀರವನ್ನು ತ್ಯಜಿಸಿದನು ಹಾಗೂ ಒಡನೆಯೇ ಭಗವಂತನ ಪಾರ್ಷದರ ಸ್ವರೂಪವನ್ನು ಪಡೆದುಕೊಂಡನು.

                 ಅಜಾಮಿಳನು ಭಗವಂತನ ಪಾರ್ಷದರೊಂದಿಗೆ ಸ್ವರ್ಣಮಯ ವಿಮಾನದಲ್ಲಿ ಹತ್ತಿ ಆಕಾಶಮಾರ್ಗದಿಂದ ಭಗವಾನ್ ಲಕ್ಷ್ಮೀಪತಿಯ ನಿವಾಸಸ್ಥಳವಾದ ವೈಕುಂಠವನ್ನು ಸೇರಿದನು.

              ಅಜಾಮಿಳನಂತಹ ಪಾಪಿಯು ಸಾಯುವಾಗ ತನ್ನ ಪುತ್ರನನ್ನು ಕೂಗುವ ನೆಪದಿಂದ ಭಗವಂತನ ನಾಮವನ್ನು ಉಚ್ಚರಿಸಿದನು. ಅವನಿಗೂ ವೈಕುಂಠದ ಪ್ರಾಪ್ತಿಯಾಗಿಹೋಯಿತು. ಹಾಗಿರುವಾಗ ಶ್ರದ್ದೆಯಿಂದ ಭಗವನ್ನಾಮವನ್ನು ಉಚ್ಚರಿಸುವವರ ಕುರಿತು ಹೇಳುವುದೇನಿದೆ. ಭಗವಂತನ ನಾಮಸ್ಮರಣೆಯಿಂದ ಜೀವಿಯು ಎಂದಿಗೂ ನರಕಕ್ಕೆ ಹೋಗುವುದಿಲ್ಲ. ಯಮದೂತರು ಕಣ್ಣೆತ್ತಿಯೂ ನೋಡಲಾರರು. ವೈಕುಂಠದಲ್ಲಿ ಆ ಜೀವಿಯು ಪೂಜಿಸಲ್ಪಡುತ್ತಾನೆ.

ಪಲ್ಲವಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.