ನೈಟ್ ಕ್ಲಬ್‍ನಲ್ಲಿ ಬದುಕು ಕಟ್ಟಿಕೊಂಡು ಬೀದಿಗೆ ಬಿದ್ದಾಕೆ ಈಗ ಮತ್ತೆ ಸ್ಟಾರ್ ಸಿಂಗರ್!

ಲಕ್ಷ್ಮಿ ಗೋವಿಂದ್ ರಾಜ್, Sep 5, 2019, 4:40 PM IST

ಲಾಟರಿ ಹೊಡೆದು ದಿಢೀರ್‌ ಶ್ರೀಮಂತರಾಗೋದನ್ನ ನೋಡಿದ್ದೀವಿ… ಪಂದ್ಯ ಗೆದ್ದು ಒಮ್ಮಿಂದೊಮ್ಮೆಲೆ ಕೀರ್ತಿ ಸಂಪಾದಿಸುವುದನ್ನು ನೋಡಿದ್ದೀವಿ….ಆದರೆ, ಇದಕ್ಕೆಲ್ಲಾ ಮೀರಿದ ಒಂದು ವಿಷಯವೊಂದಿದೆ. ಅದೆಂದರೆ, ಒಪ್ಪೊತ್ತಿನ ಊಟಕ್ಕಾಗಿ ರೈಲು ನಿಲ್ದಾಣದಲ್ಲಿ ಹಾಡು ಹೇಳುತ್ತಿದ್ದ ಭಿಕ್ಷುಕಿಯದು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಭಿಕ್ಷುಕಿ ಇಂದು ಸಣ್ಣಪುಟ್ಟ ಪಬ್‌, ನೈಟ್‌ ಕ್ಲಬ್‌ಗಳಲ್ಲಿ ಹಾಡುಗಳನ್ನು ಹಾಡಿ ಕಣ್ಮರೆಯಾಗುತ್ತಿದ್ದಳು.

ಆದರೆ, ವಿಧಿಯಾಟ. ಸುಮಾರು ವರ್ಷಗಳ ನಂತರ ಆಕೆಯ ಅದೃಷ್ಟವೇ ಬದಲಾಗಿ ಹೋಗಿದೆ. ಹೌದು, ಈ ಕಥೆಯ ನಾಯಕಿಯೇ ರಾನು ಮೊಂಡಲ್. ತನ್ನ ಜೀವನದಲ್ಲಿ ನಡೆದ ಎಲ್ಲಾ ಕಹಿ ಘಟನೆಗಳನ್ನು ಮರೆತು ಈಗ, ಮಗಳ ಜೊತೆ ಸಂತಸದ ಕ್ಷಣಗಳನ್ನು ಅನುಭವಿಸಲು ಮುಂದಾಗಿದ್ದಾರೆ. ಮೂಲತಃ ಪಶ್ಚಿಮ ಬಂಗಾಳದ ರಣಘಾಟ್‍ಗೆ ಸೇರಿದ ರಾನು ಅವರು, ಮುಂಬೈನ ಬಾಬುಲ್‌ ಮೊಂಡಾಲ್‌ರನ್ನು ವಿವಾಹವಾಗಿ ಅಲ್ಲಿಯೇ ವಾಸವಿದ್ದರು. ಆಗ ಅವರಿಗೆ 20 ವರ್ಷ.

ಅನಂತರ ಕ್ಲಬ್‌ನಲ್ಲಿ ಸಿಂಗರ್‌ ಆಗಿ ವೃತ್ತಿ ಆರಂಭಿಸಿ ಎಲ್ಲರನ್ನೂ ರಂಜಿಸುತ್ತಿದ್ದರು. ತಿಂಗಳುಗಳು ಕಳೆಯುವಷ್ಟರಲ್ಲೇ ಆಕೆ, ರಾನು “ಬಾಬಿ’ ಎಂದೇ ಚಿರಪರಿಚಿತರಾದರು. ಈ ಮಧ್ಯೆ ತನ್ನ ಪತಿ ಕುಟುಂಬ ರಾನು “ಬಾಬಿ’ ಕ್ಲಬ್‌ನಲ್ಲಿ ಹಾಡುವುದನ್ನು ಇಷ್ಟ ಪಟ್ಟಿರಲಿಲ್ಲ. ಇನ್ನೇನು ಕೆಲಸ ತೊರೆದ ರಾನುಗೆ ಬರಸಿಡಿಲು ಎಂಬಂತೆ ಪತಿ ಬಾಬುಲ್‌ ಮೊಂಡಾಲ್‌ ಸಾವನ್ನಪ್ಪಿದರು. ಪತಿ ಕಳೆದುಕೊಂಡ ರಾನು, ತನ್ನ ಹಳ್ಳಿಗೆ ಮರಳಿ ಜೀವನ ನಿರ್ವಹಿಸಲು ಸಾಕಷ್ಟು ಕಷ್ಟ ಎದುರಿಸಬೇಕಾಯಿತು.

ಅಲ್ಲದೇ, ಕೆಲಸವೇ ಸಿಗದಿದ್ದಾಗ, ಕೊನೆಗೆ ರೈಲು ನಿಲ್ದಾಣವೇ ಹಸಿವು ನೀಗಿಸುವ ಸ್ಥಳವಾಯಿತು. ಈ ಹಿಂದೆ ನೈಟ್‌ ಕ್ಲಬ್‌ಗಳಲ್ಲಿ ಹಾಡುತ್ತಿದ್ದ ಹಾಡುಗಳನ್ನೇ ಹಾಡಿ ಭಿಕ್ಷೆ ಬೇಡಲು ಮುಂದಾದರು. ಈ ಮಧ್ಯೆ ಭಿಕ್ಷೆ ಬೇಡುವುದನ್ನು ಸಹಿಸದ ಪುತ್ರಿಯೂ ರಾನುರಿಂದ ದೂರವಾದಳು. ಅಲ್ಲದೇ, ನರಸಂಬಂಧಿ ಕಾಯಿಲೆಗೆ ತುತ್ತಾದರು. ಸಂಕಷ್ಟದ ದಿನಗಳಲ್ಲೇ ಜೀವನ ಸಾಗಿಸಿದ ರಾನು ಅವರಿಗೆ ಕೆಲವರು ಹಣ ನೀಡಿದರೆ ಮತ್ತೆ ಕೆಲವರು ಬಿಸ್ಕತ್‌ ನೀಡುತ್ತಿದ್ದರು. ಯಾವುದಾದರೂ ಸರಿ, ಹೊಟ್ಟೆ ತುಂಬಿದರೆ ಸಾಕು ಎಂದುಕೊಂಡಿದ್ದರು. ಅಲ್ಲದೇ, ಕೆಲವರಿಂದ ನಿಂದನೆಯನ್ನೂ ಅನುಭವಿಸಿದ್ದರು.

ರೈಲಿನಲ್ಲಿ ಒಲಿದ ಅದೃಷ್ಟ: ಅದೃಷ್ಟ ಎನ್ನುವುದು ಯಾರಿಗೆ ಹೇಗೆ, ಯಾವ ಸಂದರ್ಭದಲ್ಲಿ ಬರುತ್ತೋ ಗೊತ್ತಿಲ್ಲ. ರಾನು ಅವರಿಗೆ ಅದೃಷ್ಟ ಒಲಿದು ಬಂದಿದ್ದು ರೈಲಿನಲ್ಲಿ. ಅದೊಂದು ದಿನ, ಪಶ್ಚಿಮ ಬಂಗಾಳದ ರಾಣಘಾಟ್‌ ನಿಲ್ದಾಣದಲ್ಲಿ ರಾನು ಭಿಕ್ಷೆ ಬೇಡುತ್ತಿದ್ದರು. ಈ ವೇಳೆ, 1972ರಲ್ಲಿ ಬಿಡುಗಡೆಯಾದ “ಶೋರ್‌’ ಚಿತ್ರದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ ಹಾಡಿದ “ಏಕ್‌ ಪ್ಯಾರ್‌ ಕಾ ನಗ್ಮಾ ಹೇ’ ಚಿತ್ರದ ಹಾಡೊಂದನ್ನು ಹಾಡಿದ್ದರು. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಾಫ್ಟ್ವೇರ್‌ ಎಂಜಿನಿಯರ್‌ ಅತೀಂದ್ರ ಚಕ್ರವರ್ತಿ, ರಾನು ಕಂಚಿನ ಕಂಠದ ಹಾಡನ್ನು ಗಮನಿಸಿ ವಿಡಿಯೋ ಮಾಡಿದ್ದರು.

ಅಲ್ಲದೇ, ರೆಕಾರ್ಡಿಂಗ್‌ ಮಾಡಿ ಫೇಸ್‌ಬುಕ್‌ನಲ್ಲಿ ಹರಿಯಬಿಟ್ಟಿದ್ದರು. ಅಲ್ಪ ಸಮಯದಲ್ಲೇ ರಾನು ಹಾಡು ಫ‌ುಲ್‌ ವೈರಲ್‌ ಆಗಿತ್ತು. ಬಳಿಕ, ರಾನು ಅವರಿಗೆ ಮುಂಬೈನಲ್ಲಿ ನಡೆಯುವ ರಿಯಾಲಿಟಿ ಶೋನಲ್ಲಿ ಅವಕಾಶವೂ ಸಿಕ್ಕಿತು. ಇದರಿಂದ ಅವರ ಜೀವನವೇ ಬದಲಾಯಿತು. ಈ ಎಲ್ಲಾ ಕಷ್ಟದ ದಿನಗಳ ಕುರಿತು ಸೋನಿ ಟೀವಿಯಲ್ಲಿ ಪ್ರಸಾರವಾದ ಸೂಪರ್‌ ಸ್ಟಾರ್ಸ್‌ ಸಿಂಗರ್‌ ಶೋನಲ್ಲಿ ರಾನು ಹೇಳಿ ಕಣ್ಣೀರು ಹಾಕಿದಾಗ, ಪ್ರೇಕ್ಷಕರ ಕಣ್ಣಾಲಿಗಲು ಒದ್ದೆಯಾಗಿದ್ದಂತೂ ಸತ್ಯ.

ಕಂಚಿನ ಕಂಠಕ್ಕೆ ಮಾರುಹೋದ ಬಾಲಿವುಡ್‌: ಈ ನಡುವೆ ಬಾಲಿವುಡ್‌ ಸಹ ರಾನು ಮೊಂಡಾಲ್‌ ಕಂಠಕ್ಕೆ ಮಾರು ಹೋಗಿದ್ದಲ್ಲದೇ, ಖ್ಯಾತ ಬಾಲಿವುಡ್‌ ಗಾಯಕ ಹಿಮೇಶ್‌ ರೇಶ್ಮಿಯಾ, ತಮ್ಮ ಮುಂದಿನ “ಹ್ಯಾಪಿ ಹಾರ್ಡಿ ಮತ್ತು ಹೀರ್‌’ ಚಿತ್ರದ “ತೇರಿ ಮೇರಿ ಕಹಾನಿ’ ಹಾಡನ್ನು ಹಾಡಲು ರಾನುಗೆ ಅವಕಾಶ ನೀಡಿದ್ದಾರೆ. ಈ ವಿಷಯವನ್ನು ಸ್ವತಃ ಅವರೇ ತಮ್ಮ ಇನ್‍ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಾಕುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಅಲ್ಲದೇ ರಾನು ಮೊದಲ ಹಾಡಿಗೆ 6-7 ಲಕ್ಷ ರೂ. ಸಂಭಾವನೆ ಸಿಕ್ಕಿದ್ದು, ನಿರಾಕರಿಸಿದರೂ ಗಾಯಕ ಹಿಮೇಶ್‌ ರೇಶ್ಮಿಯಾ ಬಲವಂತವಾಗಿ ಹಣ ನೀಡಿದ್ದಾರೆ. ಅಲ್ಲದೇ, “ನೀವು ಬಾಲಿವುಡ್‌ಲ್ಲಿ ಸೂಪರ್‌ ಸ್ಟಾರ್‌ ಆಗುವುದನ್ನು ಯಾರು ತಡೆಯಲು ಸಾಧ್ಯವಿಲ್ಲ’ ಎಂದೂ ಹೇಳಿದ್ದಾರೆ. ಬಾಲಿವುಡ್‌ ಬಾಯ್‌ಜಾನ್‌ ಸಲ್ಮಾನ್‌ ಖಾನ್‌ ಕೂಡ ತಮ್ಮ ಚಿತ್ರದಲ್ಲಿ ಹಾಡು ಹಾಡಲು ರಾನು ಅವರಿಗೆ ಅವಕಾಶ ನೀಡುತ್ತಾರೆ ಎಂಬ ಮಾತುಗಳು ಹರಿದಾಡುತ್ತಿದ್ದು, ಭೋಜ್‌ಪುರಿ ಸಿನಿಮಾದಲ್ಲಿ ಹಾಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ನಟ ಪ್ರದೀಪ್‌ ಪಾಂಡೆ ಚಿಂಟು ತಮ್ಮ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದಾರೆ.

ರಾನು ಮೊಂಡಲ್ ಅವರ ಹಾಡನ್ನು ಕೇಳಿ ಸ್ವತಃ ನಾನೇ ಅವರ ಅಭಿಮಾನಿ ಆಗಿದ್ದೇನೆ. ನಾನು ಅವರನ್ನು ಹುಡುಕಿ ನನ್ನ ಸಿನಿಮಾದಲ್ಲಿ ಹಾಡಲು ಅವಕಾಶ ನೀಡುತ್ತೇನೆ. ಇದು ನನ್ನ ಇಚ್ಛೆ ಕೂಡ. ಅವರ ಧ್ವನಿ ಒಬ್ಬರ ಹೃದಯ ಮುಟ್ಟುತ್ತದೆ. ಅವರು ನನ್ನ ಜೊತೆ ಭೋಜ್‌ಪುರಿ ಹಾಡು ಹಾಡಲಿ ಎಂದು ನಾನು ಬಯಸುತ್ತೇನೆ. ಶೀಘ್ರದಲ್ಲೇ ನಾನು ಎಲ್ಲರಿಗೂ ಈ ಸುದ್ದಿ ನೀಡುತ್ತೇನೆ ಎಂದು ಹೇಳಿದ್ದಾರೆ. ಈ ನಡುವೆಯೇ ರಾನು ಕಂಚಿನ ಕಂಠಕ್ಕೆ ಮನಸೋತಿರುವ ಬಾಲಿವುಡ್‌ ನಟ ಸಲ್ಮಾನ್‌ಖಾನ್‌, ಮುಂಬೈ ಹೊರವಲಯದಲ್ಲಿ 55 ಲಕ್ಷ ರೂ.ಮೌಲ್ಯ ಮನೆ ಖರೀದಿಸಿ ನೀಡಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

20 ವರ್ಷಗಳ ಬಳಿಕ ಪುತ್ರಿ ಆಗಮನ: ಇತ್ತ ಫೇಸ್‌ಬುಕ್‌ನಲ್ಲಿ ರಾನು ಹಾಡು ವೈರಲ್‌ ಆಗುತ್ತಿದ್ದಂತೆ 10 ವರ್ಷದ ಬಳಿಕ ರಾನು ಮೊಂಡಲ್‌ ಅವರನ್ನು ಮಗಳು ಭೇಟಿಯಾಗಿದ್ದಾಳೆ. “ನನಗೆ ಖುಷಿಯಾಗಿದೆ, ನನಗೆ ಹೊಸ ಬದುಕು ದೊರಕಿದೆ’. ಇದನ್ನು ನಾನು ಹಾಳು ಮಾಡಿಕೊಳ್ಳುವುದಿಲ್ಲ. ಸಿಕ್ಕ ಅವಕಾಶವನ್ನು ದೂರ ಮಾಡಿಕೊಳ್ಳುವುದಿಲ್ಲ’ ಎಂದು ರಾನು ಹೇಳಿದ್ದಾರೆ.

* ಲಕ್ಷ್ಮಿಗೋವಿಂದರಾಜು ಎಸ್.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ