ವಿಶ್ವಾಮಿತ್ರರ ತಪಃಶಕ್ತಿ ಪ್ರಭಾವ… ತ್ರಿಶಂಕು ಸ್ವರ್ಗದ ಹಿಂದಿನ ರಹಸ್ಯ

ಪಲ್ಲವಿ, Apr 9, 2019, 12:57 PM IST

ಕಾಮಧೇನುವನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ ಮಹಾತ್ಮರಾದ ವಸಿಷ್ಠರ ಮೇಲೆ ಯುದ್ಧವನ್ನು ಮಾಡಿ, ವಸಿಷ್ಠರು ಪ್ರಯೋಗಿಸಿದ ಬ್ರಹ್ಮಾಸ್ತ್ರದಿಂದ ತನ್ನಲ್ಲಿದ್ದ ಕ್ಷಾತ್ರತೇಜಸ್ಸಿನ ಅಸ್ತ್ರಗಳೆಲ್ಲವೂ ನಾಶವಾಗಲು ಸ್ವತಃ ವಿಶ್ವಾಮಿತ್ರರು ಕ್ಷತ್ರಿಯ ಬಲಕ್ಕೆ ಧಿಕ್ಕಾರವನ್ನು ಹೇಳಿ, ಬ್ರಹ್ಮತೇಜಸ್ಸಿನಿಂದ ಪ್ರಾಪ್ತವಾಗುವ ಬಲವೇ ವಾಸ್ತವವಾದ ಬಲವಾಗಿದೆ ಎಂದು ಒಪ್ಪಿಕೊಂಡು ತನ್ನ ಪರಾಜಯವನ್ನು ಅಂಗೀಕಾರ ಮಾಡಿ ತನ್ನ ಪತ್ನಿಯೊಂದಿಗೆ ದಕ್ಷಿಣ ದಿಕ್ಕಿಗೆ ಹೋಗಿ ಘೋರ ತಪಸ್ಸಿಗೆ ತೊಡಗಿದನು. ಅಲ್ಲಿ ಅವರಿಬ್ಬರೂ ಕೇವಲ ಕಂದ-ಮೂಲ, ಫಲಾದಿಗಳನ್ನು ತಿನ್ನುತ್ತಾ, ಹವಿಷ್ಪಂದ, ಮಧುಷ್ಪಂದ, ಧೃಢನೇತ್ರ ಹಾಗೂ ಮಹಾರಥರೆಂಬ ನಾಲ್ಕು ಪುತ್ರರಿಗೆ ಜನ್ಮವನ್ನಿಟ್ಟು ಸತ್ಯಧರ್ಮದಲ್ಲಿ ತತ್ಪರರಾಗಿ ಒಂದು ಸಾವಿರವರ್ಷದ ತನಕ ತಪಸ್ಸನ್ನಾಚರಿಸಲು ಬ್ರಹ್ಮದೇವರ  ಸಾಕ್ಷಾತ್ಕಾರವಾಯಿತು.

ಬ್ರಹ್ಮದೇವರು ” ಎಲೈ ಕುಶಿಕಾನಂದನನೇ! ನೀನು ತಪಸ್ಸಿನಿಂದ ರಾಜಋಷಿಗಳ ಲೋಕವನ್ನು ಜಯಿಸಿರುವೆ. ಈ ತಪಸ್ಸಿನ ಪ್ರಭಾವದಿಂದ ನಾನು ನಿನ್ನನ್ನು ನಿಜರಾಜರ್ಷಿಯೆಂದು ತಿಳಿಯುವೆನು” ಎಂದು ಹೇಳಿ ಬ್ರಹ್ಮಲೋಕಕ್ಕೆ ಹೊರಟುಹೋದನು. ಆಗ ವಿಶ್ವಾಮಿತ್ರರು , ನಾನು ಇಷ್ಟು ದೊಡ್ಡ ತಪಸ್ಸು ಮಾಡಿದರೂ ಋಷಿಗಳ ಸಹಿತ ದೇವತೆಗಳೆಲ್ಲರೂ ನನ್ನನ್ನು ರಾಜರ್ಷಿಯೆಂದೇ ತಿಳಿಯುವರು. ಬ್ರಹ್ಮರ್ಷಿ ಪದವಿಯನ್ನು ಪಡೆಯುವ ನನ್ನ ಬಯಕೆ ಸಿದ್ಧಿಸಲಿಲ್ಲ ಎಂದು ವಿಶ್ವಾಮಿತ್ರರು ಪುನಃ ಘೋರ ತಪಸ್ಸಿಗೆ ತೊಡಗಿದರು.

ಈ ಸಮಯದಲ್ಲಿ ಇಕ್ಷ್ವಾಕು ಕುಲದ ಕೀರ್ತಿಯನ್ನು ಹೆಚ್ಚಿಸುವ ತ್ರಿಶಂಕು ನಾಮಕನಾದ ರಾಜನೊಬ್ಬನು ರಾಜ್ಯಭಾರಮಾಡುತ್ತಿದ್ದನು . ಅವನಿಗೆ ಸಶರೀರವಾಗಿ ಸ್ವರ್ಗ ಲೋಕಕ್ಕೆ ಹೋಗಬೇಕೆಂಬ ಬಯಕೆಯನ್ನು ಪೂರ್ಣಗೊಳಿಸುವ , ಮಹಾಯಜ್ಞವನ್ನು ಮಾಡುವ ಸಂಕಲ್ಪಉಂಟಾಯಿತು. ಈ ವಿಚಾರವನ್ನು ವಸಿಷ್ಠರಲ್ಲಿ ಅರುಹಲು, ನಿನ್ನ ಸಂಕಲ್ಪವು ಸತ್ಯಕ್ಕೆ ವಿರುದ್ಧವಾದುದರಿಂದ ಇದನ್ನು ಪೂರೈಸುವುದು ಅಸಂಭವವೆಂದು ಹೇಳಿ ತಿರಸ್ಕರಿಸಿಬಿಟ್ಟರು.                ತನ್ನ ಮನದಾಸೆಯನ್ನು ಹೇಗಾದರೂ ಮಾಡಿ ಸಿದ್ಧಿಸಬೇಕೆಂಬ ಹಟದಿಂದ ದಕ್ಷಿಣ ದಿಕ್ಕಿನಲ್ಲಿ ದೀರ್ಘಕಾಲದ ತಪಸ್ಸಿನಲ್ಲಿ ತೊಡಗಿರುವ ಪರಮ ತೇಜಸ್ವಿಗಳಾದ ವಸಿಷ್ಠರ ನೂರು ಮಂದಿ ಪುತ್ರರ ಬಳಿಗೆ ಹೋಗಿ ಅವರೆಲ್ಲರಿಗೂ ನಮಸ್ಕರಿಸಿ , ಸತ್ಕರಿಸಿ ವಿನೀತಾಗಿ ಕೈ ಮುಗಿದು ,”  ಗುರುಪುತ್ರರೇ ನಾನು ನಿಮಗೆ ಶರಣು ಬಂದಿರುವೆನು. ಸಶರೀರವಾಗಿ ಸ್ವರ್ಗವನ್ನು ಹೊಂದುವ ನನ್ನ ಬಯಕೆಯನ್ನು ಪೂರ್ಣಗೊಳಿಸಲು ಗುರುಗಳಾದ ವಸಿಷ್ಠರು ಒಪ್ಪಲಿಲ್ಲ . ಗುರುಪುತ್ರರಾದ ತಾವು ನನ್ನ ಮನದಿಂಗಿತವನ್ನು ಪೂರ್ಣಗೊಳಿಸಲು  ಬೇಕಾದ ಯಜ್ಞವನ್ನು ಪೂರೈಸಿಕೊಡಬೇಕು ” ಎಂದು ಪ್ರಾರ್ಥಿಸಿದನು.

ಆಗ ಗುರುಪುತ್ರರು “ಇಕ್ಷ್ವಾಕು ವಂಶದ ಕ್ಷತ್ರಿಯರಿಗೆ ವಸಿಷ್ಠರೇ ಪುರೋಹಿತರು. ಅವರು ಒಪ್ಪದಿರುವ ಕರ್ಮಾಂಗವನ್ನು ಮಾಡಲು ನಾವೂ ಅಸಮರ್ಥರಾದ ಕಾರಣ ನೀನು ನಗರಕ್ಕೆ ಮರಳಿಹೋಗಿ ವಸಿಷ್ಠರ ಮಾತನ್ನು ಅನುಸರಿಸು” ಎಂದು ಸೂಚಿಸಿದರು.

ಆಗ ತ್ರಿಶಂಕು ರಾಜನು ” ತಪೋಧನರೆ ವಸಿಷ್ಠರಾದರೋ ನನ್ನನ್ನು ನಿರಾಕರಿಸಿದರು. ಗುರುಪುತ್ರರಾದ ನೀವು ಕೂಡ ನನ್ನ ಪ್ರಾರ್ಥನೆಯನ್ನು ಅಂಗೀಕರಿಸದಿದ್ದಲ್ಲಿ ನಾನು ಬೇರೆ ಯಾರಿಗಾದರೂ ಶರಣು ಹೊಂದುವೆನು” ಎಂದು ಹೇಳಿದನು .

ತ್ರಿಶಂಕುವಿನ ಅತ್ಯಂತ ಕಟುವಾದ ಈ ಮಾತನ್ನು ಕೇಳಿ ಗುರುಪುತ್ರರು ಅತ್ಯಂತ ಕುಪಿತರಾಗಿ ” ಎಲವೋ ದುಷ್ಟನೇ , ನೀನು ಚಂಡಾಲನಾಗಿ ಹೋಗು ಎಂದು ಶಪಿಸಿದರು. ಅವರ ಶಾಪದಿಂದ ತ್ರಿಶಂಕುರಾಜನು ನೀಲಿ ಬಣ್ಣದ ದೇಹವನ್ನೂ, ನೀಲವರ್ಣದ ವಸ್ತ್ರವನ್ನು ಧರಿಸಿದವನಾಗಿ , ದೇಹವೆಲ್ಲ ರೋಗಗಳಿಂದ ಕೂಡಿದ, ಚಿಕ್ಕದಾದ ತಲೆಕೂದಲುಗಳುಳ್ಳ ಚಾಂಡಾಲನ ರೂಪವನ್ನು ಹೊಂದಿದನು. ಆತನು ತನ್ನ ದೇಹಗಳಲ್ಲಿ ಕಬ್ಬಿಣದ ಒಡವೆಗಳನ್ನು ಧರಿಸಿಕೊಂಡಿದ್ದನು.

ತನ್ನ ರಾಜನು ಚಂಡಾಲನಾಗಿರುವುದನ್ನು ಕಂಡ ಮಂತ್ರಿಗಳು ಹಾಗೂ ಪ್ರಜೆಗಳು ಅವನನ್ನು ತಿರಸ್ಕರಿಸ ತೊಡಗಿದರು. ಇದರಿಂದ ಧೀರಸ್ವಭಾವದ ತ್ರಿಶಂಕುರಾಜನು  ದಿನದಿಂದ ದಿನಕ್ಕೆ ಚಿಂತಾಕ್ರಾಂತನಾದನು.  ಕೊನೆಗೆ ಒಬ್ಬಂಟಿಗನಾಗಿ ಮಹಾತಪಸ್ವಿಗಳಾದ ವಿಶವಮಿತ್ರರಿಗೆ ಶರಣು ಹೊಂದಿದನು. ವಿಶ್ವಾಮಿತ್ರರು ಚಂಡಾಲ ರೂಪದಲ್ಲಿರುವ ತ್ರಿಶಂಕುವನ್ನು ನೋಡಿ, ” ಎಲೈ ರಾಜನೇ ! ನಿನಗೆ ಒಳ್ಳೆಯದಾಗಲಿ, ನೀನು ಬಂದಿರುವ ಉದ್ದೇಶವೇನು” ಎಂದು ಕೇಳಿದರು.  ಆಗ ತ್ರಿಶಂಕುವು ನಡೆದ ಘಟನೆಯನ್ನೆಲ್ಲ ವಿವರಿಸಿ, ಆರ್ತನಾದ ನನ್ನ ಅಭೀಷ್ಟವನ್ನು ಪೂರೈಸಬೇಕೆಂದು ಕಳಕಳಿಯಿಂದ ಬೇಡಿಕೊಂಡನು. ಆಗ ವಿಶ್ವಾಮಿತ್ರರು ದಯಾರ್ದ್ರರಾಗಿ , ರಾಜನೇ  ನೀನು ಧರ್ಮಾತ್ಮನಾಗಿರುವೆ ಎಂದು ನಾನು ಬಲ್ಲೆ, ಆದಕಾರಣ ನಿನಗೆ ನಾನು ಆಶ್ರಯವನ್ನು ಕೊಟ್ಟು ನಿನ್ನ ಯಜ್ಞ ಕಾರ್ಯಕ್ಕೆ ಸಹಕರಿಸುವೆನು” ಎಂದು ಹೇಳಿದರು.

ತದನಂತರ ತನ್ನ ಪುತ್ರರಿಗೆ ಯಜ್ಞದ ಸಾಮಗ್ರಿಗಳನ್ನು ಅಣಿಮಾಡಲು ಆಜ್ಞಾಪಿಸಿದರು. ಶಿಷ್ಯರನ್ನು ಕರೆದು ಎಲ್ಲ ವಿಷಯಗಳಲ್ಲೂ ಜ್ಞಾನಿಗಳಾದ ವಸಿಷ್ಠಪುತ್ರಾದಿ ಸಮಸ್ತ ಋಷಿಮುನಿಗಳನ್ನೂ, ಋತ್ವಿಜರನ್ನೂ,ತ್ರಿಶಂಕುವಿನ ಯಜ್ಞಕೋಸ್ಕರ ಆಹ್ವಾನಿಸಿ ಕರೆದುಕೊಂಡು ಬನ್ನಿರೆಂದು ಅಪ್ಪಣೆಯನ್ನಿತ್ತನು.  ಅದರ ಜೊತೆಗೆ ನನ್ನ ಆಮಂತ್ರಣವನ್ನು ಯಾರಾದರೂ ತಿರಸ್ಕರಿಸಿದರೆ ಅಥವಾ ಯಜ್ಞದ ವಿಷಯದಲ್ಲಿ ಏನಾದರು ಅವಹೇಳನಕಾರಿ ಮಾತನ್ನಾಡಿದರೆ ಅದನ್ನು ನನಗೆ ಪೂರ್ಣವಾಗಿ ತಿಳಿಸಬೇಕೆಂದು ಆಜ್ಞಾಪಿಸಿದರು.

ಗುರುಗಳ ಆಜ್ಞೆಯಂತೆ ಎಲ್ಲ ಶಿಷ್ಯರು ನಾಲ್ಕು ದಿಕ್ಕುಗಳಿಗೂ ತೆರಳಿ ಎಲ್ಲ ಋಷಿಮುನಿಗಳಿಗೂ ಯಾಗದ ವಿಷಯವನ್ನು ತಿಳಿಸಿ ಯಥಾವಿಧಿ ಎಲ್ಲರನ್ನು ಆಹ್ವಾನಿಸಿ ಗುರುಕುಲಕ್ಕೆ ಬಂದು ಮಹೋದಯ ಹಾಗೂ ವಸಿಷ್ಠರ ಪುತ್ರರನ್ನು ಹೊರತುಪಡಿಸಿ ಉಳಿದವರೆಲ್ಲರೂ ಯಾಗದಲ್ಲಿ ಪಾಲ್ಗೊಳ್ಳಲು ಬರುತ್ತಿರುವುದಾಗಿ ತಿಳಿಸಿದರು. ಅಲ್ಲದೆ ಮಹೋದಯ ಹಾಗು  ವಸಿಷ್ಠರ ಪುತ್ರರು, ಚಂಡಾಲನು ಮಾಡುವ ಯಾಗ ಹಾಗೂ ಪ್ರಧಾನಹೋತೃಗಳಾದ ವಿಶ್ವಾಮಿತ್ರರ ಬಗ್ಗೆ ಆಡಿದ ಕುಹಕದ ನುಡಿಗಳನ್ನು ಗುರುಗಳಿಗೆ ತಿಳಿಸಿದರು.

ಇದನ್ನು ಕೇಳಿದ ವಿಶ್ವಾಮಿತ್ರರು ಕೋಪದಿಂದ ಕೆಂಡಾಮಂಡಲರಾಗಿ ” ನನ್ನಮೇಲೆ ವೃಥಾದೋಷಾರೋಪಣೆಯನ್ನು ಮಾಡಿದ ಋಷಿಗಳೆಲ್ಲರೂ ಏಳುನೂರು ಜನ್ಮಗಳವರೆಗೆ ಹೆಣಗಳನ್ನು ಕಾಯುವ ಶ್ವಾನ ಮಾಂಸವನ್ನು ಭಕ್ಷಿಸುವ ಮುಷ್ಠಿಕಾಯೆಂಬ ಚಂಡಾಲ ಜಾತಿಯಲ್ಲಿ ಹುಟ್ಟಲಿ” ಎಂದು ಶಪಿಸಿದರು.

ನಂತರ ವಿಶ್ವಾಮಿತ್ರರೇ ಪ್ರಧಾನ ಅಧ್ವರ್ಯುಗಳಾಗಿದ್ದು ಉಳಿದ ಋಷಿಮುನಿಗಳ ಸಹಕಾರದೊಂದಿಗೆ ಯಾಗದ ಕಾರ್ಯಗಳನ್ನು ಪೂರೈಸಿದರು. ಆದರೆ ಇಂದ್ರಾದಿ ಯಾವ ದೇವತೆಗಳೂ ತಮ್ಮ ಹವಿರ್ಭಗವನ್ನು ಸ್ವೀಕರಿಸಲಿಲ್ಲ ಇದರಿಂದ ಕ್ರೋಧಗೊಂಡ ವಿಶ್ವಾಮಿತ್ರರು ಯಜ್ಞಸ್ರುವವನ್ನು ಎತ್ತಿ ತನ್ನ ತಪಸ್ಸಿನ ಬಲದಿಂದ ತ್ರಿಶಂಕುವನ್ನು ಸಶರೀರಿಯಾಗಿ ಸ್ವರ್ಗಲೋಕಕ್ಕೆ ಕಳುಹಿಸಿಬಿಟ್ಟನು.

ತ್ರಿಶಂಕುವು ಸ್ವರ್ಗಲೋಕಕ್ಕೆ ಬಂದಿರುವುದನ್ನು ಕಂಡ ಇಂದ್ರನು ” ಎಲೈ ಮೂರ್ಖ ತ್ರಿಶಂಕುವೆ ! ನೀನು ಗುರುಶಾಪಗ್ರಸ್ತನಾದ್ದರಿಂದ ನಿನಗೆ ಸ್ವರ್ಗದಲ್ಲಿ ಸ್ಥಾನವಿಲ್ಲ. ಆದರಿಂದ ಇಲ್ಲಿಂದ ಮರಳಿ ಭೂಲೋಕಕ್ಕೆ ಹೋಗಿ ಬೀಳು” ಎಂದು ಸ್ವರ್ಗದಿಂದ ಕೆಳಮುಖನಾಗಿ ದೂಡಿದನು.

ಆಗ ತ್ರಿಶಂಕುವು ವಿಶ್ವಾಮಿತ್ರರನ್ನು ಕೂಗುತ್ತ ಕೆಳಕ್ಕೆ ಬೀಳಲು, ಕೌಶಿಕಮುನಿಗೆ ಬಹಳ ಸಿಟ್ಟುಬಂದು ತ್ರಿಶಂಕುವನ್ನು ಮಧ್ಯದಲ್ಲೇ ನಿಲ್ಲುವಂತೆ ಮಾಡಿದರು. ನಂತರ ವಿಶ್ವಾಮಿತ್ರರು ಇನ್ನೊಬ್ಬ ಪ್ರಜಾಪತಿಯಂತೆ ಸಪ್ತಋಷಿಮಂಡಲವನ್ನೂ,  ನಕ್ಷತ್ರ ಪುಂಜಗಳನ್ನೂ ಸೃಷ್ಟಿಸಿ ಇನ್ನೊಬ್ಬ ಇಂದ್ರನನ್ನು ಅಥವಾ ಇಂದ್ರರಹಿತ ಸ್ವರ್ಗಲೋಕವನ್ನೇ ಸೃಷ್ಟಿಸುವೆನೆಂದು ಶಪಥಮಾಡಲು ದೇವಾದಿ ಋಷಿಮುನಿಗಳೆಲ್ಲರೂ ಬಂದು “ಮಹಾತ್ಮರೇ ! ಈ ತ್ರಿಶಂಕುವು ಗುರುಶಾಪದಿಂದ ತನ್ನ ಪುಣ್ಯವನ್ನು ಕಳೆದುಕೊಂಡು ಚಂಡಾಲನಾಗಿರುವನು ಆದ್ದರಿಂದ ಈತನು ಸಶರೀರನಾಗಿ ಸ್ವರ್ಗಕ್ಕೆ ಹೋಗಲು ಅಧಿಕಾರಿಯಲ್ಲ” ಎಂದು ಹೇಳಿದರು.

ಆಗ ಕೌಶಿಕರು “ದೇವತೆಗಳಿರಾ ! ನಾನು ತ್ರಿಶಂಕುವನ್ನು ಸಂದೇಹವಾಗಿ ಸ್ವರ್ಗಕ್ಕೆ ಕಳಿಸುವ ಪ್ರತಿಜ್ಞೆ ಮಾಡಿರುವೆನು . ಆದ್ದರಿಂದ ಅದನ್ನು ನಾನು ಸುಳ್ಳಾಗಿಸಲಾರೆ. ಈ ತ್ರಿಶಂಕು ಮಹಾರಾಜನಿಗೆ ಸದಾ ಸ್ವರ್ಗಲೋಕದ ಸುಖವೇ ಇರಲಿ. ನಾನು ನಿರ್ಮಿಸಿದ ನಕ್ಷತ್ರ ಪುಂಜಾದಿಗಳು ಜಗತ್ತು ಇರುವ ತನಕ ಶಾಶ್ವತವಾಗಿರಲಿ ಎಂದು ನೀವೆಲ್ಲರೂ ಅನುಮೋದಿಸಿರಿ” ಎಂದು ಹೇಳಿದರು.

ಆಗ ದೇವತೆಗಳೆಲ್ಲರೂ ” ಮಹರ್ಷಿಯೇ ಹಾಗೆಯೇ ಆಗಲಿ , ನೀವು ರಚಿಸಿದ ನಕ್ಷತ್ರಗಳೆಲ್ಲವೂ ಆಕಾಶದಲ್ಲಿ ವೈಶ್ವಾನರಪಥದಿಂದ ಹೊರಗೆ ಪ್ರಕಾಶಿತವಾಗುವುದು ಅದೇ ಜ್ಯೋತಿರ್ಮಯ ನಕ್ಷತ್ರದ ನಡುವೆ ತ್ರಿಶಂಕುವು ತಲೆಕೆಳಗಾಗಿ ಪ್ರಕಾಶಿಸುತ್ತಿರಲಿ. ಅಲ್ಲಿ ಅವನ ಸ್ಥಿತಿ ಸ್ವರ್ಗಲೋಕದ ದೇವತೆಗಳಂತೆಯೇ ಇರುವುದು” ಎಂದು ಹೇಳಿ ತಮ್ಮ ತಮ್ಮ ಸ್ಥಾನಕ್ಕೆ ಹೊರಟುಹೋದರು.

ಪಲ್ಲವಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ