ಶಿವರಾತ್ರಿ ಮಹಿಮೆ! ಬೇಟೆಗಾಗಿ ಜಾಗರಣೆ ಮಾಡಿದ ಬೇಡನಿಗೆ ಒಲಿದ ಶಿವ

Team Udayavani, Feb 26, 2019, 11:50 AM IST

ಹಿಂದೆ ಶಬರೀ ನದಿ ತೀರದಲ್ಲಿನ ಅರಣ್ಯದಲ್ಲಿ ಕುಲೀನನಾದ ವ್ಯಾಧನು ತನ್ನ ಹೆಂಡತಿ, ಮಕ್ಕಳೊಂದಿಗೆ ವಾಸಮಾಡುತ್ತಿದ್ದನು. ಆತ ಬೇಟೆಯ ಹೊರತು ಬೇರೇನೂ ಆಲೋಚಿಸುತ್ತಿರಲಿಲ್ಲ. ಬೇಟೆಗೆ ಹೋಗುವುದು, ಪ್ರಾಣಿಗಳನ್ನು ಕೊಲ್ಲುವುದು, ಅವುಗಳನ್ನು ಸುಟ್ಟು ತಾನೂ ತಿಂದು, ತನ್ನ ಹೆಂಡತಿ – ಮಕ್ಕಳಿಗೂ ತಿನ್ನಿಸುವುದರ ಹೊರತು ಬೇರೇ ಯಾವುದು ಅವನಿಗೆ ತಿಳಿದಿರಲಿಲ್ಲ. ಅದೇ ಅವನ ದಿನಚರಿಯಾಗಿತ್ತು. ಅವನಲ್ಲಿ ಎಂದಿಗೂ ಕರುಣೆ ಕನಿಕರಗಳಿರಲಿಲ್ಲ, ಮಹಾ ಕ್ರೂರಿಯಾಗಿದ್ದನು. ಬೇಟೆಯಾಡುವುದರಲ್ಲಿ ಸಿದ್ಧಹಸ್ತನು. ಕ್ರೂರಮೃಗಗಳು ಕೂಡ ವ್ಯಾಧನನ್ನು ನೋಡಿ, ಹೆದರಿ ಓಡಿಹೋಗುತ್ತಿದ್ದವು. ಅದರಿಂದ ಆತ ಕಾಡಲೆಲ್ಲಾ ನಿರ್ಭಯದಿಂದ ತಿರುಗಾಡುತ್ತಿದ್ದನು.

                 ಪ್ರತಿದಿನದಂತೆ ಒಂದು ದಿನ ಬೇಟೆಗೆಂದು ಕಾಡಿಗೆ ಬಂದನು ಆದರೆ ಆ ದಿನ ಅವನಿಗೆ ಕಾಡೆಲ್ಲಾ ತಿರುಗಾಡಿದರು ಯಾವ ಪ್ರಾಣಿಯೂ ಕಣ್ಣಿಗೆ ಬೀಳಲಿಲ್ಲ. ಬರಿಗೈಯಲ್ಲಿ ಮನೆಗೆ ಹೋಗಲು ಮನಸಾಗಲಿಲ್ಲ, ಹೆಂಡತಿ ಮಕ್ಕಳು ಆಹಾರಕ್ಕಾಗಿ ಕಾಯುತಿರುತ್ತಾರೆಂದು ಅವನಿಗೆ ತಿಳಿದಿತ್ತು. ಹೊತ್ತು ಮುಳುಗುತ್ತಿದ್ದಂತೆ ಕಾಡೆಲ್ಲಾ ಅಲೆದು ಅಲೆದು ಸುಸ್ತಾಗಿ ನದಿಯು ಹರಿಯುತಿದ್ದ ಸ್ಥಳಕ್ಕೆ ಬಂದನು. ಪ್ರಾಣಿಗಳು ನೀರು ಕುಡಿಯಲು ಅಲ್ಲಿಗೆ ಬಂದೆ ಬರುತ್ತವೆಂದು ತಿಳಿದು ನದಿ ದಾಟಿ ಇನ್ನೊಂದು ದಡಕ್ಕೆ ತೆರಳಿ ಪ್ರಾಣಿಗಾಗಿ ಕಾಯುತ್ತ ಒಂದು ವೃಕ್ಷವನ್ನು ಏರಿ ಕುಳಿತನು. ರಾತ್ರಿ ಇಡೀ ನಿದ್ದೆ ಬರದಂತೆ ತಡೆಯಲು ಅಲ್ಲೇ ಪಕ್ಕದಲ್ಲಿದ್ದ ಮತ್ತೊಂದು (ಬಿಲ್ವ) ವೃಕ್ಷದ ರೆಂಬೆಯಿಂದ ಎಲೆಗಳನ್ನು ಕಿತ್ತು ಕಿತ್ತು ಕೆಳಗೆಸೆಯುತ್ತಿದ್ದನು. ರಾತ್ರಿ ಇಡೀ ಅವನು ನಿದ್ರೆ ಇಲ್ಲದೆ ಬೇಟೆಗಾಗಿ ಎಚ್ಚರವಾಗಿಯೇ ಕಾಲಕಳೆದನು .ಆ ಮರದಡಿಯಲ್ಲಿ ಒಂದು ಶಿವಲಿಂಗವಿತ್ತು ಆ ಎಲೆಗಳೆಲ್ಲ ಆ ಶಿವಲಿಂಗದ ಮೇಲೆಯೇ ಬೀಳುತ್ತಿದ್ದವು. ಅಷ್ಟೇ ಅಲ್ಲದೆ ಆ ದಿನ ಮಹಾ ಶಿವರಾತ್ರಿಯಾಗಿತ್ತು. ಅವನಿಗರಿವಿಲ್ಲದಂತೆಯೇ  ಅವನು ನದಿಯಲ್ಲಿ ಮಿಂದು ರಾತ್ರಿಯಿಡಿ ಜಾಗರಣೆ ಮಾಡಿದ್ದನು ಹಾಗೆ ಬೇಟೆ ಸಿಗದ ಕರಣದಿಂದ ದಿನವೆಲ್ಲ ಉಪವಾಸವಿದ್ದನು.  ಆದ್ದರಿಂದ ಉಪವಾಸವು ನೆರವೇರಿಸಿದಂತಾಯಿತು. ಕಲಹರಣಕ್ಕಾಗಿ ಮಾಡಿದ ಕೆಲಸದಿಂದ ಶಿವಪೂಜೆಯಾಯಿತು.  ತಿಳಿಯದೆ ಮಾಡಿದ್ದರು ಪೂಜೆ ಪೂಜೆಯೇ ಅಲ್ಲವೇ? ಹಾಗಾಗಿ ಶಿವರಾತ್ರಿಯ ಫಲ ವ್ಯಾಧನಿಗೆ ದೊರೆಯಿತು.

            ಜರಾಮರಣಗಳಿಗೆ ಮೇಲು ಕೀಳುಗಳಾಗಲಿ, ಶಿಶು-ವೃದ್ಧ ಎಂಬ ಭೇದಗಳಿಲ್ಲ ಪೂರ್ವದಲ್ಲಿ ಮಾಡಿದ ಪಾಪ-ಪುಣ್ಯಗಳನ್ನು ಹಿಡಿದು ಮನುಷ್ಯನು ತನ್ನ ಜೀವನವನ್ನು ಕಳೆಯಬೇಕಾಗುತ್ತದೆ. ಮತ್ತೆ ಕೆಲವು ವರ್ಷಗಳಿಗೆ ಆ ವ್ಯಾಧ್ಯನು ವೃದ್ದಾಪ್ಯ ಉಂಟಾಗಿ, ಮರಣಸನ್ನಿಹಿತವಾಗಿ ಪ್ರಾಣಬಿಟ್ಟನು. ತಕ್ಷಣ ಯಮದೂತರು ಬಂದು, ಆತನ ಪ್ರಾಣವನ್ನು ತೆಗೆದುಕೊಂಡು ಹೋಗುತ್ತಿದ್ದಾಗ, ಕೈಲಾಸದಿಂದ ಶಿವದೂತರು ಬಂದು ಯಮದೂತರನ್ನು ಓಡಿಸಿ ವ್ಯಾಧನ ಜೀವಾತ್ಮವನ್ನು ಕರೆದುಕೊಂಡು ಕೈಲಾಸಕ್ಕೆ ಹೋದರು. ಯಮದೂತರು ಏನು ಮಾಡಲಾಗದೆ, ಬರಿಗೈಯಲ್ಲಿ ಹಿಂದಿರುಗಿ ಯಮನಲ್ಲಿ ನಡೆದ ವೃತ್ತಾಂತವನ್ನು ತಿಳಿಸಿದರು.

                ಯಮನು ಶಿವನ ಸನ್ನಿಧಿಗೆ ಬಂದು ನಮಸ್ಕರಿಸಿ,  ಮಹಾದೇವ ! ಬಹಳ ದಿನಗಳಾದ ನಂತರ ನಿಮ್ಮ ದರ್ಶನ ಭಾಗ್ಯ ಸಿಕ್ಕಿದೆ. ನಾನು ಇಲ್ಲಿ ಬರಲು ಈ ಮೊದಲು ತಮ್ಮ ದೂತರು ಕರೆದುಕೊಂಡು ಬಂದ ವ್ಯಾಧನು ಮಹಾ ಪಾಪಿಯು, ದಯೆ-ದಾಕ್ಷಿಣ್ಯವಿಲ್ಲದೆ ಪ್ರಾಣಿ ಹಿಂಸೆ ಮಾಡಿದವನು ಹಾಗಾಗಿ ದಯಮಾಡಿ ಅವನನ್ನು ನನ್ನೊಂದಿಗೆ ಕಳುಹಿಸಿ ಕೊಡಬೇಕೆಂದು ಕೇಳಿಕೊಂಡನು.

                ಶಿವನು ಮುಗುಳ್ನಗುತ್ತ   ಯಮರಾಜನೇ ! ನನಗೆ ಅತ್ಯಂತ ಪ್ರಿಯವಾದ ಮಹಾ ಶಿವರಾತ್ರಿ ಪರ್ವದಿನದಲ್ಲಿ ಬಿಲ್ವಪತ್ರೆಗಳನ್ನು ನನ್ನ ಮೇಲೆ ಹಾಕಿ , ಆಹಾರವಿಲ್ಲದೆ ಜಾಗರಣೆ ಮಾಡಿದ್ದಾನೆ ಆದ್ದರಿಂದ ಅವನು ಮಹಾ ಪಾತಕಗಳಿಂದ ಮುಕ್ತನಾಗಿದ್ದಾನೆ ಎಂದು ಉತ್ತರಿಸಿದನು.

ಯಮರಾಜನು ಹೇ ಮಹಾದೇವ “ ಒಂದು ಮಹಾಶಿವರಾತ್ರಿಯಂದು ಆತನು ಪ್ರಾಣಿಗಳು ಸಿಗದ ಕಾರಣ ಆಹಾರ ಸೇವಿಸಲಿಲ್ಲ, ಪ್ರಾಣಿಗಳನ್ನು ಬೇಟೆಯಾಡುವ ಸಲುವಾಗಿ ರಾತ್ರಿಯೆಲ್ಲಾ ಎಚ್ಚರವಾಗಿದ್ದನೇ ಹೊರತು ಚಿತ್ತಶುದ್ಧಿಯಿಂದ ಅಲ್ಲ ಹಾಗೂ ಅನಿರೀಕ್ಷಿತವಾಗಿ ಶಿವಲಿಂಗದ ಮೇಲೆ ಬಿಲ್ವಪತ್ರೆಗಳು ಬಿದ್ದವೇ ಹೊರತು ಭಕ್ತಿಯಿಂದ ಪೂಜಿಸಲಿಲ್ಲ, ಬೇಟೆಯಾಡುವ ಸಲುವಾಗಿ ನದಿ ದಾಟಿದ್ದನೇ ಹೊರತು ದೇಹಶುದ್ದಿ ಮಾಡಲಿಲ್ಲ”  ಹೀಗಿರುವಾಗ ಅವನನ್ನು ಶಿವದೂತರು ಕೈಲಾಸಕ್ಕೆ ಕರೆತಂದದ್ದು ಎಷ್ಟು ಸರಿ?  ಎಂದು ಕೇಳಿದನು.

ಮಹಾದೇವನು ಯಮನನ್ನು ಕುರಿತು “ ಏಕಾದಶಿ ಮಹಾವಿಷ್ಣುವಿಗೆ ಹೇಗೆ ಪ್ರೀತಿಕರವಾದದ್ದೋ ಅದೇ ರೀತಿ ಮಾಘ ಶುದ್ಧ ಚತುರ್ದಶಿ ನನಗೆ (ಶಿವನಿಗೆ) ಪ್ರಿಯವಾದದ್ದು ಇದನ್ನು ಮಹಾಶಿವರಾತ್ರಿ ಎನ್ನುತ್ತಾರೆ, ಪ್ರತಿ ತಿಂಗಳು ಶಿವರಾತ್ರಿ ಬರುತ್ತದೆ ಅದನ್ನು ಮಾಸ ಶಿವರಾತ್ರಿ ಎನ್ನುತ್ತಾರೆ ಆದರೆ ಮಾಘಮಾಸದ ಶಿವರಾತ್ರಿ ಬಹಳ ವಿಶೇಷವಾಗಿದೆ. ಆ ದಿನ ನದಿ-ಸರೋವರಗಳಲ್ಲಿ ಮಿಂದೆದ್ದು ಉಪವಾಸದಿಂದ ರಾತ್ರಿಯೆಲ್ಲಾ ಎಚ್ಚರವಾಗಿದ್ದು, ಗಂಗಾಜಲದಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಿ ಬಿಲ್ವಪತ್ರೆಗಳಿಂದ ಪೂಜಿಸಬೇಕು.  ಪ್ರಪಂಚದ ಯಾವುದೇ ಜೀವಿಯು ಹೀಗಿ ಶಿವರಾತ್ರಿಯ ವ್ರತವನ್ನು, ಶಿವಲಿಂಗದ ಪೂಜೆಯನ್ನು ಮಾಡಿದರೆ, ಅವನು ಮಾಡಿದ ಎಲ್ಲ ಪಾಪಗಳು ದೂರವಾಗಿ ಅವನಿಗೆ ಕೈಲಾಸ ಪ್ರಾಪ್ತಿಯಾಗುವುದು ” ಎಂದು ಶಿವರಾತ್ರಿಯ ಮಹಿಮೆಯನ್ನು ತಿಳಿಸಿದನು.

               ಶಿವನು ಅಭಿಷೇಕ ಪ್ರಿಯನು, ಭಕ್ತಿಯಿಂದ ಗಂಗಾಜಲದಿಂದ ಅಭಿಷೇಕ ಮಾಡಿದರು ಪರಮೇಶ್ವರನು ಒಲಿಯುತ್ತಾನೆ. ಇನ್ನು ಶಿವರಾತ್ರಿಯಂದು ಬಿಲ್ವ ಪತ್ರೆಗಳಿಂದ ಪೂಜಿಸಿದವನ ಪಾಪಗಳು ಉಳಿಯಲು ಸಾಧ್ಯವೇ?  ಶಿವರಾತ್ರಿಯ ದಿನ ಪ್ರತಿಯೊಬ್ಬರೂ ಜಾತಿ-ಭೇದಗಳಿಲ್ಲದೆ ಶಿವಪೂಜೆಯನ್ನು ಮಾಡುವುದರಿಂದ ಕೈಲಾಸವನ್ನು ಪಡೆಯುತ್ತಾನೆ.

ಪಲ್ಲವಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ