8ನೇ ವಯಸ್ಸಿಗೆ ರಂಗಪ್ರವೇಶ ಮಾಡಿದ್ದ ಹಿಂದುಸ್ಥಾನಿ ಸಂಗೀತ ದಿಗ್ಗಜ “ಗುಲಾಂ ಮುಸ್ತಫಾ “

ವಿಷ್ಣುದಾಸ್ ಪಾಟೀಲ್, Jun 10, 2019, 4:52 PM IST

ಖಾನ್‌ ಉಪಪನಾಮದ ಭಾರತೀಯ ಕಲಾ ದಿಗ್ಗಜರಲ್ಲಿ ಮೇಲ್ಪಂಕ್ತಿಯಲ್ಲಿ ಕಾಣಿಸಿಕೊಳ್ಳುವ ಹೆಸರು ಉಸ್ತಾದ್‌ ಗುಲಾಮ್‌ ಮುಸ್ತಫಾ ಖಾನ್‌ ಅವರದ್ದು. ಹಿಂದುಸ್ಥಾನಿ ಸಂಗೀತದ ಮೇರು ಗಾಯಕರಾಗಿರುವ ಅವರು ಸಂಗೀತಲೋಕಕ್ಕೆ ನೀಡಿದ ಕೊಡುಗೆ ತುಲನೆಗೆ ಸಿಗಲಾರದಷ್ಟು ಅಪಾರ.

ಸಹಸ್‌ವಾನ್‌ ಘರಾನಾ ಶೈಲಿಯ ಘನ ಸಂಗೀತಗಾರರಾಗಿ ಖ್ಯಾತಿಯ ಉತ್ತುಂಗಕ್ಕೇರಿರುವ ಗುಲಾಂ ಮುಸ್ತಫಾ ಅವರಿಗೆ ರಕ್ತಗತವಾಗಿ ಕಲೆ ಮೈಗಂಟಿಕೊಂಡಿತ್ತು. ಉತ್ತರ ಪ್ರದೇಶದ ಬದಾಯೂನ್‌ನಲ್ಲಿ ಜನಿಸಿದ ಗುಲಾಂ ಮುಸ್ತಫಾ ಅವರ ತಂದೆ ಖ್ಯಾತ ಉಸ್ತಾದ್‌ ಇನಾಯತ್‌ ಹುಸೇನ್‌ ಖಾನ್‌.

ಸಂಗೀತ ಪರಂಪರೆಯ ಕುಟುಂಬದಲ್ಲಿ ಜನಿಸಿದ ಗುಲಾಂ ಅವರ ತಂದೆ , ತಾಯಿಗೆ ಮಗ ಪ್ರಖ್ಯಾತ ಗಾಯಕನಾಗಬೇಕು ಎನ್ನುವ ಕನಸಿತ್ತು. ಹಾಗಾಗಿ 5 ನೇ ವರ್ಷಕ್ಕೆ ಸಂಗೀತ ಅಭ್ಯಾಸಕ್ಕೆ ಕಳುಹಿಸಿಕೊಟ್ಟರು. ಹೆತ್ತವರ ಶ್ರಮ ಮತ್ತು ಬಾಲಕ ಗುಲಾಂ ಅವರ ಆಸಕ್ತಿಯಿಂದ 8 ನೇ ವಯಸ್ಸಿಗೆ ರಂಗಪ್ರವೇಶ ಮಾಡಿದವರು ಮತ್ತೆ ಹಿಂತಿರುಗಿ ನೋಡಿಯೇ ಇಲ್ಲ, ತನ್ನ ಮಧುರ ಕಂಠದ ಮೂಲಕ ಕೋಟ್ಯಂತರ ಸಂಗೀತಾಸಕ್ತರ ಕಿವಿಗಳಿಗೆ ಇಂಪನ್ನಿಟ್ಟಿದ್ದಾರೆ.

ಬರೋಡಾದ ರಾಜ ದರ್ಬಾರ್‌ನ ಗಾಯಕರಾಗಿದ್ದ ಫಿದಾ ಹುಸೇನ್‌ ಖಾನ್‌ ಮತ್ತು ರಾಮ್‌ಪುರ್‌, ಗ್ವಾಲಿಯರ್‌ ಮತ್ತು ಸಹಸ್ವಾನ್‌ ಘರಾನಾ ಶೈಲಿಯ ಗಾಯಕ ನಿಸಾರ್‌ ಹೈಸೇನ್‌ ಖಾನ್‌ ಅವರಲ್ಲಿ ಸಂಗೀತಾಭ್ಯಾಸ ಮಾಡಿ ಗಾಯನಶೈಲಿಯನ್ನು ಕರಗತಮಾಡಿಕೊಂಡರು.

8ರ ಹರೆಯದಲ್ಲೇ ಜನ್ಮಾಷ್ಠಮಿ ಕಾರ್ಯಕ್ರಮದ ವೇದಿಕೆ ಏರಿದ ಗುಲಾಂ ಮುಸ್ತಫಾ ಅವರಲ್ಲಿರುವ ಸಂಗೀತದ ಆಸಕ್ತಿ ವಯಸ್ಸು 89 ಆದರೂ ಬತ್ತಿಲ್ಲ.

ಮೊದಲಿಗೆ ಮರಾಠಿ ಮತ್ತು ಗುಜರಾತಿ ಚಿತ್ರಗಳಿಗೆ ಹಿನ್ನಲೆ ಸಂಗೀತಗಾರನಾಗಿ ಹಾಡುತ್ತಿದ್ದ ಗುಲಾಂ ಮುಸ್ತಫಾ 70 ಕ್ಕೂ ಹೆಚ್ಚು ಡಾಕ್ಯುಮೆಂಟರಿಗಳಿಗೆ ಧ್ವನಿ ನೀಡಿದ್ದಾರೆ. ಯುರೋಪ್‌ ಖಂಡದ ವಿವಿಧೆಡೆಯೂ ಗಾಯನ ಮೋಡಿ ಮಾಡಿರುವ ಗುಲಾಂ ಮುಸ್ತಫಾ ಅವರಿಗೆ ಅಂತರಾಷ್ಟ್ರೀಯ ಪ್ರಶಸ್ತಿಗಳು ಹುಡುಕಿ ಬಂದಿದ್ದವು.

ದಿಗ್ಗಜ ಗಾಯಕರಾದ ಆಶಾ ಭೋಸ್ಲೆ, ಮನ್ನಾಡೇ , ಕಮಲ್‌ ಬಾರೋಟ್‌, ವಾಹಿದಾ ರೆಹಮಾನ್‌, ರಾನು ಮುಖರ್ಜಿ, ಗೀತಾ ದತ್‌, ಎ.ಆರ್‌.ರೆಹಮಾನ್‌ , ಹರಿಹರನ್‌ , ಶಾನ್‌, ಸೋನು ನಿಗಮ್‌ , ಸಾಗರಿಕಾ ಮೊದಲಾದವರಿಗೆ ಸಂಗೀತ ವಿದ್ಯೆ ಧಾರೆ ಎರೆದು ಗುರು ಎನಿಸಿದರು.

ಗುರುವಿಗೆ ಗೌರವ ನೀಡಿದ ಎ. ಆರ್‌.ರೆಹಮಾನ್‌ ಅವರು ಗುಲಾಂ ಅವರ ಮೂರು ತಲೆಮಾರಿನ ಸಂಗೀತವನ್ನು ಒಂದೆಡೆ ಆಯೋಜಿಸಿದ್ದರು. ಗುಲಾಂ ಅವರ ಪುತ್ರರಾದ ಮುರ್ತಜಾ ಮುಸ್ತಫಾ, ಖಾದಿರ್‌ ಮುಸ್ತಫಾ, ರಬ್ಟಾನಿ ಮುಸ್ತಫಾ ಮತ್ತು ಹಸನ್‌ ಮುಸ್ತಫಾ ಮತ್ತು 12 ರ ಹರೆಯದ ಮೊಮ್ಮಗ ಫೈಜ್‌ ಅವರನ್ನು ಸಹಯೋಗದಲ್ಲಿ ಪಾಲ್ಗೊಂಡಿದ್ದರು.

ಸಂಗೀತ ಲೋಕದಲ್ಲಿ ಸಾಧನೆಗೈದವೆಲ್ಲರೂ ತನ್ನದೇ ಆದ ಕಠಿಣ ಹಾದಿ ಮತ್ತು ಶ್ರಮದಿಂದ ಬಂದಿರುತ್ತಾರೆ,ಯುವ ಕಲಾವಿದರು ಏಕಾಏಕಿ ಯಶಸ್ಸು ಬೇಕೆಂದು ನಿರೀಕ್ಷಿಸುವುದು ತಪ್ಪು, ದೇವರಅನುಗ್ರವಿದ್ದರೆ ನಮ್ಮ ಶ್ರಮಕ್ಕೆ ಫ‌ಲ ದೊರಕುತ್ತದೆ ಎನ್ನುತ್ತಾರೆ ಗುಲಾಂ ಮುಸ್ತಫಾ.

ಗುಲಾಂ ಮುಸ್ತಫಾ ಅವರ ಕಲಾ ಸಾಧನೆಯನ್ನು ಗಮನಿಸಿ ಸರ್ಕಾರಗಳು ಅತ್ಯುನ್ನತ ಗೌರವ ನೀಡಿವೆ. 2018ರಲ್ಲಿ ಪದ್ಮವಿಭೂಷಣ ಪ್ರಶಸ್ತಿ. 2006 ರಲ್ಲಿ ಪದ್ಮಭೂಷಣ, 2003 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 1991 ರಲ್ಲಿ ಪದ್ಮಶ್ರಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಕಲಾ ಸೇವೆಯ ಇಳಿ ವಯಸ್ಸಿನಲ್ಲಿರುವ ಗುಲಾಂ ಮುಸ್ತಫಾ ಅವರು ಕುಟುಂಬದೊಂದಿಗೆ ಮುಂಬಯಿಯಲ್ಲಿ ನೆಲೆಸಿದ್ದಾರೆ. ಅವರು ಇನ್ನಷ್ಟು ಕಾಲ ಕಲಾವಿದರಿಗೆ ಮಾರ್ಗದರ್ಶನ ನೀಡಲಿ ಎನ್ನುವುದು ಆಶಯ .

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ