ಭಾರತೀಯ ಚಿತ್ರರಂಗವೆಂದರೆ ಬಾಲಿವುಡ್ ; ಉಳಿದವರ ಕಥೆ ಏನು?

ಪುರಸ್ಕಾರಗಳಲ್ಲಿ ಬಾಲಿವುಡ್‌ ಗೆ ಸಿಂಹಪಾಲು ; ಇತರೆ ಭಾಷೆಗಳಿಗೆ ದಕ್ಕಿದ ಮಾನ್ಯತೆ ಎಷ್ಟು?

Team Udayavani, Sep 29, 2019, 10:01 PM IST

ಭಾರತೀಯ ಚಲನಚಿತ್ರೋದ್ಯಮದಲ್ಲಿ ಬಾಲಿವುಡ್‌ ಸತತವಾಗಿ ಪ್ರಾಬಲ್ಯ ಮೆರೆಯುತ್ತಾ ಬಂದಿದೆ. ಭಾರತೀಯ ಭಾಷೆಗಳ ಸಿನೆಮಾಗಳಿಗೆ ಲಭಿಸುವ ಮಾನ್ಯತೆಗಳಲ್ಲಿ ಹಿಂದಿ ಚಿತ್ರರಂಗ ಯಾವತ್ತೂ ಅಗ್ರಸ್ಥಾನದಲ್ಲಿರುತ್ತದೆ. ಮಾತ್ರವಲ್ಲದೇ ರಾಷ್ಟ್ರದಲ್ಲಿ ನೀಡಲಾಗುತ್ತಿರುವ ಹಲವು ಪ್ರಶಸ್ತಿಗಳಲ್ಲಿ  ಹಿಂದಿ ಚಿತ್ರರಂಗಕ್ಕೆ ಸಿಂಹಪಾಲನ್ನು ಪಡೆದುಕೊಳ್ಳುತ್ತಲೇ ಇದೆ. ವಿವಿಧ ಭಾಷೆಯ ಚಲನಚಿತ್ರಗಳಿಗೆ ಲಭ್ಯವಾದ ಪ್ರಶಸ್ತಿಗಳನ್ನು ಇಲ್ಲಿ ಕೊಡಲಾಗಿದೆ.

– ಕಾರ್ತಿಕ್ ಅಮೈ

1957ರ ಬಳಿಕ ಆಸ್ಕರ್ ರೇಸಿನಲ್ಲಿ ಬಾಲಿವುಡ್ ಪ್ರಾಬಲ್ಯ
1957ರ ಬಳಿಕ ಆಸ್ಕರ್‌ ಪ್ರಶಸ್ತಿಗಳಿಗೆ ಆಯ್ಕೆಯಾದ 52 ಚಿತ್ರಗಳ ಪೈಕಿ 31 ಚಿತ್ರಗಳು ಹಿಂದಿ ಭಾಷೆ ಅಥವಾ ಬಾಲಿವುಡ್‌ ಚಿತ್ರಗಳಾಗಿವೆ. 52 ಭಾಷೆಗಳಲ್ಲಿ ಬಾಲಿವುಡ್‌ ಹೊರತುಪಡಿಸಿ 9 ತಮಿಳು, 3 ಮರಾಠಿ, 2 ಬೆಂಗಾಲಿ, 2 ಮಲಯಾಳಂ, 2 ಉರ್ದು, 1 ತೆಲುಗು, 1 ಗುಜರಾತ್‌ ಮತ್ತು ಅಸ್ಸಾಮಿ ಚಿತ್ರಗಳು ಸೇರಿವೆ.

2019
2019ರಲ್ಲಿ ‘ಗಲ್ಲಿ ಬಾಯ್‌’ ಚಲನಚಿತ್ರ ಆಸ್ಕರ್‌ ಪ್ರಶಸ್ತಿ ಆಯ್ಕೆಗೆ ಕಳುಹಿಸಿಕೊಡಲಾಗಿದೆ. 2018ರಲ್ಲಿ ‘ವಿಲೇಜ್‌ ರಾಕರ್ಸ್‌’ ಎಂಬ ಚಲನಚಿತ್ರ ಮೊತ್ತ ಮೊದಲ ಅಸ್ಸಾಮಿ ಚಲನ ಚಿತ್ರವಾಗಿ ಅಸ್ಕರ್‌ ಪ್ರಶಸ್ತಿಗಾಗಿ ಕಳುಹಿಸಿಕೊಡಲಾಗಿತ್ತು. 2017ರಲ್ಲಿ ಹಿಂದಿ ಚಿತ್ರ ‘ನ್ಯೂಟನ್‌’ ಆಯ್ಕೆಯಾಗಿತ್ತು.

ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಯಲ್ಲೂ ಹಿಂದಿಗೆ ಸಿಂಹಪಾಲು
ಭಾರತೀಯ ಚಿತ್ರರಂಗಕ್ಕೆ ನೀಡಲಾದ ಅನುಪಮ ಸೇವೆಗಾಗಿ ಕೊಡಲ್ಪಡುವ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಯಲ್ಲೂ ಬಾಲಿವುಡ್‌ ಮೆಲುಗೈ ಸಾಧಿಸಿದೆ. ಈಗಾಗಲೇ ನೀಡಲಾದ 50 ಪ್ರಶಸ್ತಿಗಳಲ್ಲಿ 27 ಪ್ರಶಸ್ತಿಗಳನ್ನು ಬಾಲಿವುಡ್‌ ಬಾಚಿಕೊಂಡಿದ್ದು. 11 ಪುರಸ್ಕಾರಗಳು ಬೆಂಗಾಲಿ ಭಾಷೆಗೆ ಸಂದಿವೆ.

ಇನ್ನು ತೆಲುಗು 6, ತಮಿಳು 2, ಅಸ್ಸಾಮೀ, ಕನ್ನಡ, ಮಲಯಾಳಂ ಮತ್ತು ಮರಾಠಿ ಭಾಷಾ ಸಿನೆಮಾ ರಂಗಗಳು ತಲಾ 1 ಪ್ರಶಸ್ತಿಯನ್ನು ಪಡೆದುಕೊಂಡಿವೆ. ಈ ಬಾರಿಯ ಫಾಲ್ಕೆ ಪುರಸ್ಕಾರಕ್ಕೆ ಹಿಂದಿ ಚಿತ್ರರಂಗದ ಮೇರುನಟ ಅಮಿತಾಬ್‌ ಬಚ್ಚನ್‌ ಅವರನ್ನು ಆಯ್ಕೆಮಾಡಲಾಗಿದೆ.

ರಾಷ್ಟ್ರೀಯ ಪುರಸ್ಕಾರ
ಆದರೆ ರಾಷ್ಟ್ರೀಯ ಪ್ರಶಸ್ತಿಗಳ ವಿಚಾರಕ್ಕೆ ಬಂದರೆ ಹಿಂದಿ ಸಿನೇಮಾಗಳಿಗಿಂತ ಬೆಂಗಾಲಿ ಸಿನೇಮಾಗಳು ಒಂದು ಹೆಜ್ಜೆ ಮುಂದಿವೆ. ಇತ್ತೀಚಿನ 10 ವರ್ಷಗಳಿಂದ ಅತ್ಯುನ್ನತ ಚಿತ್ರಗಳಿಗೆ ನೀಡಲಾಗುತ್ತಿರುವ ರಾಷ್ಟ್ರೀಯ ಪುರಸ್ಕಾರಗಳು ಬೆಂಗಾಲಿ ಭಾಷೆಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಂದಿವೆ. ಒಟ್ಟು 22 ಪುರಸ್ಕಾರಗಳನ್ನು ಬೆಂಗಾಲಿ ಸಿನೆಮಾ ದಕ್ಕಿಸಿಕೊಂಡಿದ್ದು, 12 ಹಿಂದಿ ಚಿತ್ರಗಳು, 11 ಮಲಯಾಳಂ ಸಿನೆಮಾ, 6 ಕನ್ನಡ ಚಲನಚಿತ್ರಗಳು, 5 ಮರಾಠಿ ಸಿನೆಮಾ, ಅಸ್ಸಾಮಿ, ಸಾಂಸ್ಕೃತ, ತಮಿಳು ಚಿತ್ರ ತಲಾ 2 ಮತ್ತು ಇಂಗ್ಲಿಷ್‌, ಗುಜರಾತಿ, ಬ್ಯಾರಿ ಹಾಗೂ ತೆಲುಗು ಸಿನೆಮಾಗಳು ತಲಾ 1 ಪ್ರಶಸ್ತಿಗೆ ಆಯ್ಕೆಯಾಗಿದೆ.

ಬಾಲಿವುಡ್‌ ಸಿನೆಮಾ ಹೆಚ್ಚು ಬಿಡುಗಡೆ
2016-17ರ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಬೇರೆ ಭಾಷೆಯ ಚಿತ್ರಗಳಿಗೆ ಹೋಲಿಸಿದರೆ ಹಿಂದಿ ಚಿತ್ರ ಅತೀ ಹೆಚ್ಚು ತೆರೆಕಾಣುತ್ತಿವೆ. ಸಿಬಿಎಫ್ಸಿಯ 2017ರ ಅಂಕಿ-ಅಂಶಗಳ ಪ್ರಕಾರ 364 ಹಿಂದಿ ಚಿತ್ರಗಳು, ತಮಿಳು-304, ತೆಲುಗು-294, ಕನ್ನಡ-220, ಬೆಂಗಾಲಿ-163, ಮಲಯಾಳಂ-156, ಮರಾಠಿ-117, ಬೋಜಪುರಿ-102, ಗುರಾತಿ-73, ಒಡಿಯಾ-42 ಚಿತ್ರಗಳು ಬಿಡುಗಡೆಯಾಗಿವೆ ಎಂದು “ದಿ ಎಕನಾಮಿಕ್‌ ಟೈಮ್ಸ್‌’ನ ವರದಿಯೊಂದು ಹೇಳಿದೆ.

ಬಾಲಿವುಡ್ ನ ಆದಾಯವೂ ದ್ವಿಗುಣ
ಬಾಲಿವುಡ್‌ನ‌ ಆದಾವೂ ಇತರ ಭಾಷೆಗಳಿಗೆ ಹೋಲಿಸಿದರೆ ದ್ವಿಗುಣವಾಗಿದೆ. ಹಿಂದಿ ಭಾಷಿಕರು ರಾಷ್ಟ್ರ ಮತ್ತು ವಿಶ್ವದ ಮೂಲೆ ಮೂಲೆಯಲ್ಲೂ ಇರುವ ಕಾರಣ ಬಾಲಿವುಡ್ ಚಿತ್ರಗಳು ಅತೀ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗುತ್ತಿದೆ. ಇದು ಸಹಜವಾಗಿ ಇದರ ಆದಾಯ ದ್ವಿಗುಣವಾಗಲು ಒಂದು ಕಾರಣ.

ಒಟ್ಟಾರೆಯಾಗಿ ಬಾಲಿವುಡ್ ಭಾರತೀಯ ಚಿತ್ರರಂಗದ ಮೇಲೆ ಪಾರಮ್ಯವನ್ನು ಸಾಧಿಸುತ್ತಲೇ ಬಂದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತ ಚಿತ್ರರಂಗ ಬಾಲಿವುಡ್ ಗೆ ಸರಿಸಮನಾಗಿ ಅಥವಾ ಅದಕ್ಕಿಂತ ಒಂದು ಕೈ ಮೇಲೆ ಎನ್ನಬಹುದಾದ ರೀತಿಯಲ್ಲಿ ತಾಂತ್ರಿಕವಾಗಿ ಮತ್ತು ಕಥಾವಸ್ತುವಿನಲ್ಲಿ ಉನ್ನತ ಗುಣಮಟ್ಟದ ಚಿತ್ರಗಳನ್ನು ನಿರ್ಮಿಸುತ್ತಿರುವುದರಿಂದ ಬಾಲಿವುಡ್ ಮಂದಿ ನಿಧಾನವಾಗಿ ದಕ್ಷಿಣ ಭಾರತ ಚಿತ್ರರಂಗದತ್ತ ನೋಡುತ್ತಿರುವುದು ಮಾತ್ರ ಸುಳ್ಳಲ್ಲ.

ಉದಾಹರಣೆಗೆ ರಾಜಮೌಳಿ ಅವರ ಬಾಹುಬಲಿ ಸರಣಿ, ಪ್ರಶಾಂತ್ ನೀಲ್ ಅವರ ಕೆ.ಜಿ.ಎಫ್., ಶಂಕರ್ ಅವರ ರೋಬೋ, ಐ, ಸೇರಿದಂತೆ ಇನ್ನೂ ಹಲವಾರು ಯುವ ನಿರ್ದೇಶಕರು ತಮ್ಮ ವಿಭಿನ್ನ ಮಾದರಿಯ ಚಿತ್ರಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ದಕ್ಷಿಣ ಭಾರತ ಚಿತ್ರರಂಗದ ಹೆಸರನ್ನು ಪಸರಿಸುವ ಕೆಲಸವನ್ನು ಮಾಡುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆಯೇ ಸರಿ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ