ಪೋಲಿಯೋ ಪೀಡಿತನಾದ “ಈ ಯುವಕ” ಸಾಧನೆ ಮೂಲಕ ಎಲ್ಲರ ಮನಗೆದ್ದು ಬಿಟ್ಟಿದ್ದ!

ಗುಲ್ಫಾನ್ ಮಾಡೆಲಿಂಗ್, ಸ್ಪೂರ್ತಿದಾಯಕ ಮಾತುಗಾರ, ಸ್ಟ್ಯಾಂಡ್ ಅಪ್ ಕಾಮೆಡಿಯನ್...

ಸುಹಾನ್ ಶೇಕ್, Nov 27, 2019, 7:00 PM IST

ಕೆಲವೊಂದು ಸಾಧಕರು ಹುಟ್ಟೋದೇ ಹಾಗೆ. ತನ್ನಲ್ಲಿರುವ ಸಂಕಷ್ಟಗಳಿಗೆ, ಕೊರತೆಗಳಿಗೆ ಸವಾಲು ಹಾಕಿ, ಗೆದ್ದು ತನ್ನನ್ನು ತುಳಿದ ಸಮಾಜದ ಮುಂದೆಯೇ ಬೆಳೆದು ನಿಲ್ಲುತ್ತಾರೆ. ಉತ್ತರ ಪ್ರದೇಶದ ಪುಟ್ಟ ಗ್ರಾಮವೊಂದರಲ್ಲಿ ಹುಟ್ಟಿದ ಗುಲ್ಫಾನ್ ಅಹ್ಮದ್ ಗೆ ಬಾಲ್ಯದಿಂದಲೇ ಪೋಲಿಯೋ ಪಿಡುಗು ಅಂಟುಕೊಳ್ಳುತ್ತದೆ. ಆಡಬೇಕು, ನಲಿಯ ಬೇಕು,  ಓಡ ಬೇಕು, ಅಲೆಯಬೇಕೆನ್ನುವ ಎಲ್ಲಾ ಆಕಾಂಕ್ಷೆಗಳನ್ನು ಅನುಭವಿಸಲಾಗದ ಪರಿಸ್ಥಿತಿಯಲ್ಲಿ  ಗುಲ್ಫಾನ್ ಅಪ್ಪ ಅಮ್ಮ ಹಾಗೂ ಅಣ್ಣನ ಆರೈಕೆಯಲ್ಲಿ ಬೆಳೆಯುತ್ತಾನೆ.

ಒಂದು ದಿನ ತಾನು ಕಲಿಯಬೇಕು ಎನ್ನುವ ಆಸೆ ಕಣ್ಣುಗಳಿಂದ, ತನ್ನ ಮನೆಯ ಪಕ್ಕ ಇರುವ ಶಾಲೆಯ ಮೈದಾನದಲ್ಲಿ ಆಡುತ್ತಿರುವ ಮಕ್ಕಳ ಖುಷಿಯನ್ನು ನೋಡುತ್ತಾ ಕೂರುತ್ತಾನೆ. ಇದೇ ಸಂದರ್ಭದಲ್ಲಿ ಆ ಶಾಲೆಯ ಮುಖ್ಯ ಶಿಕ್ಷಕರು ಗುಲ್ಫಾನ್ ನನ್ನು ಕರೆದು ಮಾತಾನಾಡಿಸಿದಾಗ, ಆತ ತನಗೆ ಕಲಿಯಬೇಕು ಎನ್ನುವ ಇಂಗಿತವನ್ನು ವ್ಯಕ್ತಪಡಿಸುತ್ತಾನೆ. ಅಪ್ಪ ಅಮ್ಮನ ಒಪ್ಪಿಗೆ ಪಡೆದು ತನ್ನ ಎಂಟನೇ ವಯಸ್ಸಿನಲ್ಲಿ ಮೊದಲ ಬಾರಿ ಶಾಲಾ ಮೆಟ್ಟಿಲನ್ನು ಹತ್ತುತ್ತಾನೆ. ಪೋಲಿಯೋ ಪೀಡಿತನಾಗಿದ್ರೂ, ನಡೆದಾಡಲು ಆಗದ ಪರಿಸ್ಥಿತಿಯಲ್ಲೂ ಗುಲ್ಫಾನ್ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ದಿನಂಪ್ರತಿ ಉತ್ಸಾಹದಿಂದ ಕಲಿಯಲು ಆರಂಭಿಸುತ್ತಾನೆ.

ನಾಯಿಗಳ ಅಟ್ಟಹಾಸ.! :

ಗುಲ್ಫಾನ್ ಐದನೇ ತರಗತಿಯವರೆಗೆ ಕಲಿತು ಅಲ್ಲಿಂದ ತನ್ನ ಗ್ರಾಮದಿಂದ ಸ್ವಲ್ಪ ದೂರದಲ್ಲಿರುವ ಶಾಲೆಯೊಂದಕ್ಕೆ ಸೇರಿಕೊಳ್ಳುತ್ತಾನೆ. ಪ್ರತಿನಿತ್ಯ ಅಣ್ಣ ಸೈಕಲ್ ನಲ್ಲಿ ಶಾಲೆಗೆ ಬಿಡುತ್ತಿದ್ದರೂ, ಅದೊಂದು ದಿನ ಗುಲ್ಫಾನ್ ಒಬ್ಬನೇ ಶಾಲೆಗೆ ಹೋಗಲು ಸಾಹಸ ಪಟ್ಟು ನಾಲ್ಕು ಕಾಲಿನಲ್ಲಿ ತೆವಳುತ್ತಾ ಶಾಲಾ ದಾರಿಯಲ್ಲಿ ಸಾಗುತ್ತಾನೆ. ಇದೇ ಸಂದರ್ಭದಲ್ಲಿ ಅದೊಂದು ಘಟನೆ ಗುಲ್ಫಾನ್ ನನ್ನು ಕುಗ್ಗಿಸಿ ಬಿಡುತ್ತದೆ. ಶಾಲಾ ಮಾರ್ಗದಲ್ಲಿ ಹೋಗುವಾಗ ಅಲ್ಲಿದ್ದ ಬೀದಿ ನಾಯಿಗಳು ಏಕಾಏಕಿ ಗುಲ್ಫಾನ್ ತೆವಳುತ್ತಾ ಹೋಗುವಾಗ ದಾಳಿ ಮಾಡಿ ಕಚ್ಚಲು ಆರಂಭಿಸುತ್ತವೆ. ಬೀದಿ ನಾಯಿಗಳ ದಾಳಿಯಿಂದ ಸ್ಥಳೀಯ ವ್ಯಕ್ತಿಯೊಬ್ಬರು ಗುಲ್ಫಾನ್ ನನ್ನು ರಕ್ಷಣೆ ಮಾಡುತ್ತಾರೆ.

ಈ ಘಟನೆ ಗುಲ್ಫಾನ್ ಮನಸ್ಸನ್ನು ಕುಗ್ಗಿಸುವುದರ ಜೊತೆ ಇದರಿಂದ ಹೊರಗೆ ಬರಬೇಕು. ತಾನು ಪ್ರತಿನಿತ್ಯ ಅದೇ ದಾರಿಯಲ್ಲಿ ಹೋಗಬೇಕು ಎನ್ನುವ ನಿರ್ಧಾರ ಮಾಡಿ ಮರುದಿನ ಬಿಸ್ಕತ್ತು ‌ಪ್ಯಾಕ್ ಒಂದನ್ನು ಕಿಸೆಯಲ್ಲಿ ಹಿಡಿದುಕೊಂಡು ದಾರಿ ಬದಿ ಇರುವ ಶ್ವಾನಗಳಿಗೆ ಹಾಕಿ ಅವುಗಳ ಪ್ರೀತಿಗಳಿಸುವ ಮೂಲಕ ಶಾಲೆಗೆ ಧೈರ್ಯದಿಂದ ಹೋಗುವ ಪರಿಹಾರ ಕಂಡುಕೊಂಡುಬಿಟ್ಟಿದ್ದ.

ಚಿಗುರಿದ ಬಾಡಿ ಬಿಲ್ಡಿಂಗ್ ಕನಸು :

ಗುಲ್ಫಾನ್ ಆಗಷ್ಟೇ ಎಂಟನೇ ಕ್ಲಾಸ್ ಗೆ ಬಂದ ದಿನಗಳವು. ಬಾಲಿವುಡ್ ನಟ ಸಲ್ಮಾನ್ ಮೇಲಿನ ಅಭಿಮಾನದಿಂದಾಗಿ ದೇಹವನ್ನು ಬೆಳೆಸಿಕೊಳ್ಳುವ ಆಸೆಯಿಂದ ಜಿಮ್ ಸೇರಿಕೊಳ್ಳುತ್ತಾನೆ. ತಾನು ಏನು ಮಾಡಿದರೂ ಗುಲ್ಫಾನ್ ಗೆ ಅಪ್ಪ ಅಮ್ಮನ ಅಪಾರ ಸಹಕಾರ ಸಿಗುತ್ತಿತ್ತು. ಅದೊಂದು ದಿನ ಕಾರ್ಯಕ್ರಮವೊಂದರಲ್ಲಿ ಡಾ.ಧವನ್ ಎನ್ನುವ ಭಾರತದ ಅಂತಾರಾಷ್ಟ್ರೀಯ ತರಬೇತುದಾರ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿರುವ ವ್ಯಕ್ತಿ ಪರಿಚಯ ಆಗುತ್ತದೆ. ಗುಲ್ಫಾನ್ ದೇಹವನ್ನು ನೋಡಿ ಡಾ.ಧವನ್, ಆತನನ್ನು  ಪ್ಯಾರಾ ಒಲಿಂಪಿಕ್ ನಂಥ ಕ್ರೀಡೆಯಲ್ಲಿ ನೀನು ಭಾಗವಹಿಸಬಹುದು ಎನ್ನುವ ಆತ್ಮಸ್ಥೈರ್ಯ ತುಂಬುವ ಮಾತನ್ನು ಆಡುತ್ತಾರೆ.

ಗುಲ್ಫಾನ್ ಧವನ್ ಬಳಿ ತರಬೇತಿ ಪಡೆಯುತ್ತಾನೆ. 2008 ರಲ್ಲಿ ತನ್ನ ಪ್ರಥಮ ಪಿಯುಸಿಯಲ್ಲಿ ತರಬೇತಿಯಲ್ಲಿ ಪಳಗಿ  ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗುತ್ತಾನೆ. ಮನೆಯವರಲ್ಲಿ ಮಗನ ಈ ಸಾಧನೆ ಖುಷಿಯ ಜೊತೆ  ಮುಂದೆ ಇದನ್ನೆಲ್ಲಾ ಹೇಗೆ ಮಾಡುತ್ತೀಯಾ ಎನ್ನುವ ಆತಂಕ ಕಾಡುತ್ತಿತ್ತು. ಆದರೆ ಗುಲ್ಫಾನ್ ನಾಗ್ಪುರದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ ಮೂರನೇ ಸ್ಥಾನವನ್ನು ಪಡೆದುಕೊಳ್ಳುತ್ತಾನೆ. ತನ್ನ ಮೊದಲ ‌ಪ್ರಯತ್ನದಲ್ಲೇ ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟರ್ ಎನ್ನುವ ಹೆಗ್ಗಳಿಕೆಯನ್ನು ಗಳಿಸಿಕೊಳ್ಳುತ್ತಾನೆ. ಹೀಗೆ ಮುಂದುವರೆಯುತ್ತಾ 2012 ರ ವರೆಗೆ ಸತತ ರಾಜ್ಯ – ರಾಷ್ಟ್ರ ಮಟ್ಟದಲ್ಲಿ ಚಿನ್ನ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆಲ್ಲುತ್ತಾನೆ.

ಬದುಕು ಕಾಣಿಸಿದ ತಿರುವು :

2010 ರ ವೇಳೆಯಲ್ಲಿ ಗುಲ್ಫಾನ್ ನ ತಂದೆ ವಯೋ ಸಹಜತೆಯಿಂದ ತನ್ನ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡು ಮನೆಯಲ್ಲಿ ಕೆಲಸ ಕಾರ್ಯ ಬಿಟ್ಟು ಕೂರುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಗುಲ್ಫಾನ್ ಅನಿವಾರ್ಯವಾಗಿ ತನ್ನ ಕಲಿಕೆ ಬಿಟ್ಟು ಕೆಲಸ ಹುಡುಕುವ ಪಯಣವನ್ನು ಆರಂಭಿಸುತ್ತಾನೆ. ಪ್ರತಿನಿತ್ಯ ‌ಅಲ್ಲಿ ಇಲ್ಲಿ ಎನ್ನದೆ ಕೆಲಸಕ್ಕಾಗಿ ತೆವಳುತ್ತಾ ಸಂದರ್ಶನದಲ್ಲಿ ಭಾಗವಹಿಸಿ‌ ಕೊನೆಗೆ ನಿರಾಸೆಯಿಂದ ಮರಳುವುದೇ ಒಂದು ಕಾಯಕವಾಯಿತು. ಸುಮಾರು 45 ಸಂದರ್ಶನಗಳನ್ನು ಕೊಟ್ಟು ತನ್ನ ಪೋಲಿಯೋ ಪಿಡುಗಿನಿಂದ ಕೆಲ ಕಡೆ ಅವಮಾವನ್ನು ಕೇಳಿ ಸಹಿಸಿಕೊಂಡು, ಬಿ.ಪಿ.ಓ ಒಂದರಲ್ಲಿ ಟೆಲಿ ಕಾಲರ್ ಹುದ್ದೆಯನ್ನು ಪಡೆದುಕೊಳ್ಳುತ್ತಾನೆ. ಸತತ ಮೂರು ಭಡ್ತಿ (ಪ್ರೋಮೋಷನ್) ಯಿಂದ ಸೇಲ್ಸ್ ಮ್ಯಾನೇಜರ್ ಆಗುತ್ತಾನೆ.

ಅದೊಂದು ದಿನ ಗೆಳತಿಯೊಬ್ಬಳು ಗುಲ್ಫಾನ್ ಬಳಿ ‘ಸರ್ಜರಿ ಮಾಡಿಸಿಕೊಂಡರೆ ಬಹುಶಃ ‌ನೀನು ನಡೆಯಬಹುದು…’ ಎನ್ನುವ ಮಾತನ್ನು ಹೇಳುತ್ತಾಳೆ. ವೈದ್ಯರ ಬಳಿ ಮಾತಾನಾಡಿ, ಎರಡು ಸರ್ಜರಿ ಮಾಡಿಕೊಂಡು ಒಂದು ವರ್ಷ ಎಲ್ಲೂ ಹೊರಗೆ ಹೋಗದೆ ಬೆಡ್ ರೆಸ್ಟ್ ತೆಗೆದುಕೊಳ್ಳುತ್ತಾನೆ. ಈ ವೇಳೆ ವೈದ್ಯರು ಹೇಳಿಕೊಡುತ್ತಿದ್ದ ಒಂದು ಗಂಟೆಯ ವ್ಯಾಯಾಮವನ್ನು ಗುಲ್ಫಾನ್ ಸವಾಲಾಗಿ ದಿನಕ್ಕೆ ಹತ್ತರಿಂದ- ಹನ್ನೆರಡು ಗಂಟೆ ಮಾಡತೊಡಗುತ್ತಾನೆ. ಸರ್ಜರಿ ಆದ ಬರೀ  ತೊಂಬತ್ತು ದಿನಗಳ ಒಳಗೆ ಗುಲ್ಫಾನ್ ಎಲ್ಲರನ್ನೂ ಅಚ್ಚರೊಗೊಳಿಸುವಂತೆ ಎದ್ದು ನಡೆಯಲು ಆರಂಭಿಸುತ್ತಾನೆ.

ಪ್ರಯತ್ನ + ಪರಿಶ್ರಮ = ಪ್ರತಿಫಲ :

ಸರ್ಜರಿಯ ಬಳಿಕ ಪವರ್ ‌ಲಿಫ್ಟಿಂಗ್ ಮುಂದುವರೆಸಲು ವೈದ್ಯರು ನಿರಾಕರಿಸಿದ ಕಾರಣ, ಗುಲ್ಫಾನ್ ವೀಲ್ ಚೇರ್ ನಲ್ಲೇ ಕೂತು ಥೈಗೊಂಡೋ ಕಲೆಯನ್ನು ಕರಗತ ಮಾಡಿಕೊಳ್ಳುತ್ತಾನೆ. ಇದರಲ್ಲಿ ದಿಲ್ಲಿಯಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮೂರು ಬಾರಿ ಚಿನ್ನವನ್ನು ಗೆಲ್ಲುತ್ತಾನೆ. 2015 ರಲ್ಲಿ ಮುಂಬೈನಲ್ಲಿ ನಡೆದ ಮಿಸ್ಟರ್ ಆ್ಯಂಡ್ ಮಿಸೆಸ್ ವ್ಹೀಲ್ ಚೇರ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ತನ್ನ ಜೀವನದ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಮಿಸ್ಟರ್ ವೀಲ್ ಚೇರ್ ಇಂಡಿಯಾ ಎನ್ನುವ ಹೆಗ್ಗಳಿಕೆ ಪಡೆದುಕೊಳ್ಳುತ್ತಾನೆ.

ಇಂದು ಗುಲ್ಫಾನ್ ಪೋಲಿಯೋ ಪೀಡಿತನಾಗಿರಬಹುದು.ಆತನ ನ್ಯೂನತೆ ಆತನನ್ನು ಇಂದು ಸಾಧಕನಾಗಿ ಮಾಡಿದೆ. ಗುಲ್ಫಾನ್ ಮಾಡೆಲಿಂಗ್, ಸ್ಪೂರ್ತಿದಾಯಕ ಮಾತುಗಾರ, ಸ್ಟ್ಯಾಂಡ್ ಅಪ್ ಕಾಮೆಡಿಯನ್, ವೀಲ್ ಚೇರ್ ಡ್ಯಾನ್ಸರ್ ಎನ್ನುವ ಹಲವಾರು ಯಶಸ್ಸಿನ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾನೆ.

– ಸುಹಾನ್ ಶೇಕ್


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ