ಗ್ರೆಗ್ ಚಾಪೆಲ್; ಟೀಂ ಇಂಡಿಯಾವನ್ನು ಬಲಿಷ್ಠ ತಂಡವಾಗಿಸುತ್ತೇನೆ ಎಂದು ಬಂದವ ಹಳ್ಳ ಹಿಡಿಸಿದ್ದ

ಚಾಪೆಲ್ - ಗಂಗೂಲಿ ಗಲಾಟೆಗೆ ಬಂಗಾಳ ಹೊತ್ತಿ ಉರಿದಿತ್ತು, ಸಂಸತ್ ನಲ್ಲಿ ಚರ್ಚೆಯಾಗಿತ್ತು

Team Udayavani, Aug 19, 2019, 6:00 PM IST

2003ರ ವಿಶ್ವಕಪ್‌ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ನಂತರದ ಕೆಲವು ಸರಣಿಗಳಲ್ಲಿ ಹೇಳಿಕೊಳ್ಳುವಂತಹ ಆಟವಾಡಲಿಲ್ಲ. ಅದೇ ಸಮಯಕ್ಕೆ ಸರಿಯಾಗಿ ಕೋಚ್ ಜಾನ್ ರೈಟ್ ಅವರ ಕೋಚಿಂಗ್ ಅವಧಿ ಕೂಡ ಮುಗಿದಿತ್ತು. ಮತ್ತೆ ತಂಡವನ್ನು ಸುಭದ್ರಗೊಳಿಸಬೇಕೆಂದು ಬಿಸಿಸಿಐ ಬಿಗ್ ಬಾಸ್ ಗಳು ಗ್ರೆಗ್ ಚಾಪೆಲ್ ಅವರನ್ನು ಕರೆತಂದರು. ಆತ ರಫ್ ಆಂಡ್‌ ಟಫ್ ಮನುಷ್ಯ. ಭಾರತ ತಂಡವನ್ನು ಆಸ್ಟ್ರೇಲಿಯಾದಂತೆ ಮಾಡುತ್ತೇನೆ ಎಂದು ಕೋಚ್ ಆದ ಚಾಪೆಲ್ ಭಾರತ ತಂಡವನ್ನು ಹಳ್ಳಹಿಡಿಸಿದ್ದರು!

ಸೌರವ್ ಗಂಗೂಲಿ, ಟೀಂ ಇಂಡಿಯಾ ಕಂಡ ಅದ್ಭುತ ನಾಯಕ. ಮೊಹಮ್ಮದ್‌ ಅಜರುದ್ದೀನ್ ಗೆ ಮ್ಯಾಚ್ ಫಿಕ್ಸಿಂಗ್ ಆರೋಪ ಎದುರಾಗಿ ತಂಡದಿಂದ ಹೊರನಡೆಯಬೇಕಾಗಿ ಬಂದಾಗ ಒಮ್ಮೆ ಭಾರತೀಯ ಕ್ರಿಕೆಟ್ ನಲ್ಲಿ ತಲ್ಲಣ ಉಂಟಾಗಿತ್ತು. ಈ ಸಮಯದಲ್ಲಿ ನಾಯಕತ್ವ ವಹಿಸಿದ ಬೆಂಗಾಲ್ ಟೈಗರ್ ಸೌರವ್ ಗಂಗೂಲಿ ತಂಡವನ್ನು ಮತ್ತೆ ಕಟ್ಟಿದರು. ಕಠಿಣ ನಿರ್ಧಾರಗಳು ಮತ್ತು ಆಕ್ರಮಣಕಾರಿ ವ್ಯಕ್ತಿತ್ವದಿಂದ ತಂಡ ಮುನ್ನಡೆಸಿದ ಸೌರವ್ 2003ರ ವಿಶ್ವಕಪ್‌ ನಲ್ಲಿ ಫೈನಲ್ ಗೂ ಕೊಂಡೊಯ್ದುರು. ಹೀಗೆ ಸುಭದ್ರ ತಂಡ ಕಟ್ಟಿದ ಗಂಗೂಲಿಯನ್ನೇ ತಂಡದಿಂದ ಹೊರಹಾಕಿದ್ದು ಅದೇ ಗ್ರೆಗ್ ಚಾಪೆಲ್ !

2005ರಲ್ಲಿ ಚಾಪೆಲ್ ಕೋಚಿಂಗ್ ವಹಿಸಿಕೊಂಡ ನಂತರ  ಭಾರತ ಮೊದಲ ಸರಣಿ ಆಡಲು ಲಂಕೆಗೆ ಪ್ರಯಾಣ ಬೆಳೆಸಿತ್ತು. ಆದರೆ ಸೌರವ್ ಗಂಗೂಲಿಗೆ ಅದರ ಹಿಂದಿನ ಸರಣಿಯ ನಿಧಾನಗತಿಯ ಓವರ್ ಗಳ ಕಾರಣದಿಂದ 4 ಪಂದ್ಯ ನಿಷೇಧ ಹೇರಲಾಗಿತ್ತು. ಹೀಗಾಗಿ ದ್ರಾವಿಡ್ ಟೀಮ್ ಇಂಡಿಯಾ ನಾಯಕತ್ವ ವಹಿಸಿದ್ದರು. ಈ ಸರಣಿಯಲ್ಲಿ ಚಾಪೆಲ್ , ಸುರೇಶ್ ರೈನಾರನ್ನು ಅಂತಾರಾಷ್ಟೀಯ ಮಟ್ಟಕ್ಕೆ ಪರಿಚಯಿಸಿದರು.

ಜಿಂಬಾಬ್ವೆ ಸರಣಿ: ಹತ್ತಿದ ವಿವಾದದ ಕಿಡಿ
ನಿಷೇಧದಿಂದ ಹೊರಬಂದ ಗಂಗೂಲಿ ಮತ್ತೆ ತಂಡದ ಚುಕ್ಕಾಣಿ ಹಿಡಿದರು. ಭಾರತ ಜಿಂಬಾಬ್ವೆ ಸರಣಿಗೆ ಹೊರಟಿತ್ತು. ಅಲ್ಲೇ ನೋಡಿ ಚಾಪೆಲ್‌ ರ ಹೊಸ ಆವಿಷ್ಕಾರಗಳು ಆರಂಭವಾಗಿದ್ದು. ಒಂದು ಅಭ್ಯಾಸ ಪಂದ್ಯವಾದ ನಂತರ ಅಷ್ಟೇನು ಫಾರ್ಮ್‌ ನಲ್ಲಿ ಇರದ ಗಂಗೂಲಿಗೆ ಚಾಪೆಲ್‌ ಒಂದು ಸಲಹೆ ನೀಡಿದರು. ಅದೇ ಸಲಹೆ ಮುಂದೆ ಅನೇಕ ವಿದ್ಯಮಾನಗಳಿಗೆ ಕಾರಣವಾಯಿತು.

ನಾಯಕತ್ವ ತ್ಯಜಿಸಲು ಹೇಳಿದ ಗ್ರೇಗ್
ಅಭ್ಯಾಸ ಪಂದ್ಯದ ನಂತರ ನಾಯಕ ಗಂಗೂಲಿಗೆ ಕೋಚ್‌ ಚಾಪೆಲ್‌ ನಾಯಕತ್ವದಿಂದ ಕೆಳಗಿಳಿಯುವಂತೆ ಹೇಳುತ್ತಾರೆ.  ಇದರೊಂದಿಗೆ ಆಗ ತಂಡದಲ್ಲಿ ಸ್ಥಾನ ಪಡೆಯಲು ಒದ್ದಾಡುತ್ತಿದ್ದ ಯುವರಾಜ್‌ ರನ್ನು ಗಂಗೂಲಿ ಸ್ಥಾನಕ್ಕೆ ತರಬೇಕೆಂದು ಚಾಪೆಲ್ ಇಚ್ಛೆಯಾಗಿತ್ತು. ಇದರಿಂದ ರೋಸಿಹೋದ ಗಂಗೂಲಿ ಸರಣಿಯ ಮಧ್ಯದಲ್ಲೇ ಭಾರತಕ್ಕೆ ಹಿಂದೆ ಬರಲು ಬಯಸಿದ್ದರು, ಆದರೆ ದ್ರಾವಿಡ್‌ ಸೇರಿದಂತೆ ಹಿರಿಯ ಆಟಗಾರರು ಸೌರವ್‌ ಮನಸ್ಸು ಬದಲಾಯಿಸಿದ್ದರು ಎಂದು ವರದಿಯಾಗಿತ್ತು. “ತಂಡದ ಹಿರಿಯ ಅಧಿಕಾರಿಯೋರ್ವರು ತಾನು ನಿವೃತ್ತಿಯಾಗಬೇಕೆಂದು ಒತ್ತಾಯಿಸುತ್ತಿದ್ದಾರೆ” ಎಂದು ಚಾಪೆಲ್‌ ಹೆಸರು ಹೇಳದೆ ಗಂಗೂಲಿ ಮಾಧ್ಯಮ ಹೇಳಿಕೆಯನ್ನೂ ನೀಡಿದ್ದರು.


ಬಹಿರಂಗವಾಗಿತ್ತು ಅದೊಂದು ಇ ಮೇಲ್!‌

ಜಿಂಬಾಬ್ವೆ ಸರಣಿಯ ನಡುವಿನಲ್ಲೇ ಕೋಚ್‌ ಚಾಪೆಲ್‌ ಬಿಸಿಸಿಐಗೆ ಒಂದು ಇ ಮೇಲ್‌ ಕಳುಹಿಸಿದ್ದರು. ಆ ಒಂದು ಇ ಮೇಲ್‌ ನಿಂದಾಗಿ ಗಂಗೂಲಿ- ಚಾಪೆಲ್‌ ನಡುವಿನ ಮುಸುಕಿನ ಗುದ್ದಾಟ ಜಗಜ್ಜಾಹೀರಾಗಿತ್ತು. “ತಂಡದ ನಾಯಕತ್ವದಲ್ಲಿ ಮುಂದುವರಿಯಲು ಸೌರವ್‌ ಗಂಗೂಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಮರ್ಥರಾಗಿಲ್ಲ” ಎಂಬ ಒಕ್ಕಣೆ ಹೊಂದಿತ್ತು ಇ ಮೇಲ್‌. ಭಾರತಕ್ಕೆ ಮರಳಿದ ನಂತರ ಗಂಗೂಲಿ ಮತ್ತು ಚಾಪೆಲ್‌ ಇಬ್ಬರಿಗೂ ಬಿಸಿಸಿಐ ಕರೆದು ವಿಚಾರಣೆ ನಡೆಸಿತ್ತು. ಈ ಮೀಟಿಂಗ್‌ ಗೂ ಮೊದಲು ಒಂದು ಪತ್ರಿಕೆಗೆ ಮಾತನಾಡಿದ ದಾದ “ಏನು ಹೇಳಬೇಕೋ ಎಲ್ಲಾ ಹೇಳುತ್ತೇನೆ. ಅಂತಹ ಇ ಮೇಲ್‌ ಬರೆಯುವ ವ್ಯಕ್ತಿಯ ನಿಜಬಣ್ಣವನ್ನು ಕೆಲವೇ ಗಂಟೆಗಳಲ್ಲಿ ತಿಳಿಯಬಹುದು” ಎಂದು ಖಾರವಾಗಿ ಹೇಳಿದ್ದರು. ಬಿಸಿಸಿಐ ಅಧಿಕಾರಿಗಳ ಜೊತೆಗೆ ನಡೆದ ಸಂಧಾನದಲ್ಲಿ ತಂಡದ ಹಿತಕ್ಕಾಗಿ ಇಬ್ಬರೂ ಸುಮ್ಮನಿರಲು ಒಪ್ಪಿದ್ದರು.

ಅಕ್ಟೋಬರ್‌ ನಲ್ಲಿ ಗಂಗೂಲಿ ಗಾಯಗೊಂಡ ಕಾರಣ ಶ್ರೀಲಂಕಾ ಏಕದಿನ ಪ್ರವಾಸಕ್ಕೆ ಆಯ್ಕೆಯಾಗಲಿಲ್ಲ. 7 ಪಂದ್ಯಗಳ ಸರಣಿಯ ಮೊದಲ ನಾಲ್ಕು ಪಂದ್ಯಗಳಿಗೆ ದ್ರಾವಿಡ್‌ ರನ್ನು ನಾಯಕನನ್ನಾಗಿ ಮಾಡಲಾಯಿತು. ಭಾರತ ಮೊದಲ ನಾಲ್ಕೂ ಪಂದ್ಯಗಳನ್ನು ಗೆದ್ದ ಕಾರಣ ಮುಂದಿನ ಪಂದ್ಯಗಳಿಗೆ ತಂಡವನ್ನು ಬದಲಾಯಿಸಲು ಆಯ್ಕೆ ಸಮಿತಿ ಮನಸ್ಸು ಮಾಡಲಿಲ್ಲ. ಹಾಗಾಗಿ ಗಂಗೂಲಿ ಆಯ್ಕೆಯಾಗಲಿಲ್ಲ. ಇದರಿಂದ ಅಭಿಮಾನಿಗಳು ಕೋಪಗೊಂಡಿದ್ದರು. ಆದರೆ ಮುಂದಿನ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೂ ಗಂಗೂಲಿಯನ್ನು ಕಡೆಗಣಿಸಿದಾಗ ಅಭಿಮಾನಿಗಳ ಆಕ್ರೋಶ ಮುಗಿಲು ಮುಟ್ಟಿತ್ತು.

ಕೊಲ್ಕತ್ತಾದಲ್ಲಿ ಅಭಿಮಾನಿಗಳ ಆಕ್ರೋಶ

ದ. ಆಫ್ರಿಕಾ ವಿರುದ್ಧ ಮೂರನೇ ಪಂದ್ಯವಾಡಲು ಕೋಲ್ಕತ್ತಾದ ಈಡನ್‌ ಗಾರ್ಡನ್‌ ಗೆ ತೆರಳಿದ ಭಾರತ ತಂಡಕ್ಕೆ ಆತಂಕಕಾರಿ ಘಟನೆಗಳೇ  ಎದುರಾಯಿತು. ಪ್ರಿನ್ಸ್‌ ಆಫ್‌ ಕೋಲ್ಕತ್ತಾ ಗಂಗೂಲಿ ಇಲ್ಲದ ತಂಡವನ್ನು ನೆನೆಸಿಕೊಳ್ಳುವುದು ಕೂಡಾ ಬಂಗಾಲಿಗಳಿಗೆ ಕಷ್ಟವಾಗಿತ್ತು. ಭಾರತದ ತಂಡದ ಬಸ್‌ ಅನ್ನು ಅಡ್ಡಗಟ್ಟಿ, ಚಾಪೆಲ್ ವಿರೋಧಿ ಘೋಷಣೆಗಳನ್ನು ಕೂಗಲಾಯಿತು. ಆದರೆ ಇದರಿಂದ ಒಂದು ಚೂರು ತಲೆಕೆಡಿಸದ ಚಾಪೆಲ್‌ ಪ್ರತಿಭಟನಾಕಾರರಿಗೆ ತಮ್ಮ ಮಧ್ಯದ ಬೆರಳನ್ನು ತೋರಿಸಿದ್ದರು. ಇದರಿಂದ ಮತ್ತಷ್ಟು ಕುಪಿತರಾದ ಅಭಿಮಾನಿಗಳು ಪಂದ್ಯ ನಡೆಯುವ ಸಮಯದಲ್ಲಿ ಆಫ್ರಿಕಾ ಆಟಗಾರರನ್ನು ಬೆಂಬಲಿಸಿ ಚಾಪೆಲ್‌ ಮತ್ತು ಬಿಸಿಸಿಐ ವಿರುದ್ಧ ಸೇಡು ತೀರಿಸಿಕೊಂಡರು. ವಿಶೇಷವೆಂದರೆ ಆ ಪಂದ್ಯದಲ್ಲಿ ದಕ್ಷಿಣ ಆಪ್ರಿಕಾ ಗೆದ್ದಿತ್ತು ಕೂಡಾ.

ಸಂಸತ್‌ ನಲ್ಲೂ ಪ್ರತಿಧ್ವನಿಸಿತ್ತು

ಗಂಗೂಲಿ- ಚಾಪೆಲ್‌ ವಿವಾದ ಈಗ ದೇಶದ ಬಹುಚರ್ಚಿತ ವಿಷಯವಾಗಿತ್ತು. ದೇಶದಾದ್ಯಂತ ಅಭಿಮಾನಿಗಳು, ವಿದ್ಯಾರ್ಥಿಗಳು, ರಾಜಕಾರಣಿಗಳು ಸಹ ಚಾಪೆಲ್‌ ವಿರುದ್ದದ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಗಂಗೂಲಿ ತವರು ಪಶ್ಚಿಮ ಬಂಗಾಳದಲ್ಲಿ ರೈಲು ಓಡಾಟವನ್ನು ತಡೆಹಿಡಿಯಲಾಯಿತು. ಹಲವು ಬೀದಿಯಲ್ಲಿ ಬೆಂಕಿ ಹಚ್ಚಲಾಗಿತ್ತು. ಇದರಿಂದಾಗಿ ಕ್ರಿಕೆಟ್‌ ತಂಡದ ಡ್ರೆಸ್ಸಿಂಗ್‌ ರೂಮ್‌ ಒಳಗೆ ಇರಬೇಕಾಗಿದ್ದ ವಿಷಯ ಲೋಕಸಭೆಯಲ್ಲೂ ಚರ್ಚೆಯಾಯಿತು.

ಹೊಸಹುಡುಗರನ್ನು ತಂಡಕ್ಕೆ ಆಯ್ಕೆ ಮಾಡಿದ ಚಾಪೆಲ್‌ ಗಂಗೂಲಿಗೆ ಸುಳ್ಳು ಗಾಯದ ನೆಪವೊಡ್ಡಿ ಬೆಂಚ್‌ ಕಾಯಿಸಿದರು. ಆದರೆ ತಂಡಕ್ಕೆ ಆಯ್ಕೆಯಾದ ಮೊಹಮ್ಮದ್‌ ಕೈಫ್‌ ಉತ್ತಮ ಪ್ರದರ್ಶನ ನೀಡಲು ವಿಫಲಾರದರು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಭಾರತದ ಸಾರ್ವಕಾಲಿಕ ಅತ್ಯುತ್ತಮ ಫೀಲ್ಡರ್‌ ಎಂದು ಕರೆಸಿಕೊಳ್ಳುವ ಕೈಫ್‌ ರಿಗೂ ಚಾಪೆಲ್‌ ನಿನ್ನ ಕ್ಯಾಚ್‌ ಹಿಡಿಯುವ ಶೈಲಿ ಸರಿಯಿಲ್ಲ ಎಂದಿದ್ದರಂತೆ!

ಏಕದಿನ ಮತ್ತು ಟೆಸ್ಟ್‌ ಎರಡೂ ತಂಡಗಳಿಂದ ಹೊರಬಿದ್ದ ಸೌರವ್‌ ಗಂಗೂಲಿಯನ್ನು 2006ರ ಪಾಕ್‌ ಪ್ರವಾಸಕ್ಕೆ ಮತ್ತೆ ತಂಡಕ್ಕೆ ಕರೆಸಲಾಯಿತು. ದಾದಾ ಆಡುತ್ತಿದ್ದ ಮಧ್ಯಮ ಕ್ರಮಾಂಕದಲ್ಲಿ ಯುವರಾಜ್‌ ಆಗಲೇ ತಳವೂರಿದ್ದರಿಂದ ದ್ರಾವಿಡ್‌ ತನ್ನ ಗೆಳೆಯನಿಗಾಗಿ ತಾನು ಆಡುತ್ತಿದ್ದ ಕ್ರಮಾಂಕವನ್ನು ಬಿಟ್ಟು ಕೊಟ್ಟರು. ಆರಂಭಿಕ ಗಂಭೀರ್‌ ಬದಲಿಗೆ ದ್ರಾವಿಡ್‌ ತಾನೇ ಓಪನಿಂಗ್‌ ಆಟಗಾರನಾಗಿ ಕಾಣಿಸಿಕೊಂಡರು. ಹೀಗೆ ಪ್ರಯೋಗ ಮಾಡಿದ ಮೊದಲ ಪಂದ್ಯದಲ್ಲೇ ಆರಂಭಿಕ ವಿಕೆಟ್‌ ಗೆ ದ್ರಾವಿಡ್‌ ಮತ್ತು ಸೆಹವಾಗ್‌ 410 ರನ್‌ ಗಳ ವಿಶ್ವದಾಖಲೆಯ ಜೊತೆಯಾಟ ನಡೆಸಿದರು.

ಏಕದಿನ ಕ್ರಿಕೆಟ್‌ ಗೆ ದಾದಾ ಮತ್ತೆ ಕಮ್‌ ಬ್ಯಾಕ್ ಮಾಡಿ 2007ರ ವಿಶ್ವಕಪ್‌ ಆಡಿದರು. ಅದಾಗಲೇ ಚಾಪೆಲ್‌ ಅರ್ಥವಿಲ್ಲದ ಪ್ರಯೋಗಗಳಿಂದ ತಂಡ ಹಳ್ಳ ಹಿಡಿದಾಗಿತ್ತು.  ವೆಸ್ಟ್‌ ಇಂಡೀಸ್‌ ನಲ್ಲಿ ನಡೆದ ವಿಶ್ವಕಪ್‌ ನಲ್ಲಿ ಭಾರತ, ದುರ್ಬಲ ಬಾಂಗ್ಲಾದೇಶದ ವಿರುದ್ಧ ಸೋತು ಹೊರಬಿತ್ತು. ಇನ್ನು ತನ್ನ ಸ್ಥಾನಕ್ಕೆ ಕುತ್ತು ಬರುವುದು ಖಾತ್ರಿ ಎಂದು ಅರಿತ ಗ್ರೇಗ್‌ ಚಾಪೆಲ್‌ ತನ್ನ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು.  2008 ನವೆಂಬರ್‌ ನಲ್ಲಿ ಸೌರವ್ ಕೂಡಾ ವಿದಾಯ ಹೇಳಿ ಅಂತಾರಾಷ್ಟ್ರೀಯ ಕ್ರಿಕೆಟ್‌ ನಿಂದ ದೂರವಾದರು.

ಹೀಗೆ ದೊಡ್ಡ ಆಸೆಗಳನ್ನು ಭಾರತೀಯ ಕ್ರಿಕೆಟ್‌ ವಲಯದಲ್ಲಿ ಹುಟ್ಟಿಸಿದ್ದ ಚಾಪೆಲ್‌ ಭಾರತೀಯ ತಂಡದ ಒಗ್ಗಟ್ಟನ್ನೇ ಮುರಿದು ಹಾಕಿದ್ದ. ಸಚಿನ್‌ ತೆಂಡುಲ್ಕರ್‌ ಹೇಳುವಂತೆ ಚಾಪೆಲ್‌ ಕೋಚ್‌ ಅಗಿದ್ದ ಎರಡು ವರ್ಷ ಭಾರತೀಯ ಕ್ರಿಕೆಟ್‌ ನ ಅತ್ಯಂತ ಕಷ್ಟಕರವಾದ ಮತ್ತು ಕೆಟ್ಟದಿನಗಳು. ಮುಂದೆ ಗ್ಯಾರಿ ಕರ್ಸ್ಟನ್‌ ತರಬೇತುದಾರರಾಗಿ ಬಂದು ಮತ್ತೆ ಮೇಲೆದ್ದು ಬಂದ ಟೀಂ ಇಂಡಿಯಾ ವಿಶ್ವಕಪ್‌ ಎತ್ತಿ ಹಿಡಿದಿದ್ದು ಈಗ ಇತಿಹಾಸ.

– ಕೀರ್ತನ್ ಶೆಟ್ಟಿ ಬೋಳ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ