ಇದು ಕೂಲಿಯ ಮಗ “ಐಡಿ ಫ್ರೆಶ್ ಫುಡ್” ಸಂಸ್ಥೆಯ ಒಡೆಯನಾದ ಯಶೋಗಾಥೆ…

ಸುಹಾನ್ ಶೇಕ್, Sep 25, 2019, 6:30 PM IST

ಸೋತವನಿಗೆ ಸಾವಿರ ದಾರಿಗಳಲ್ಲಿ ನಡೆದ ಅನುಭವಗಳಿರುತ್ತವೆ . ಗೆದ್ದವನಲ್ಲಿ ನೂರು ದಾರಿಯಲ್ಲಿ ನಡೆಯುವ ಜಾಣ್ಮೆ ಅಡಗಿರುತ್ತದೆ. ಜೀವನದಲ್ಲಿ ಎಂಥಾ ಸೋಲುಗಳೇ ಬರಲಿ ಆಶಯವಾಗುವ ಒಂದೇ ಒಂದು ದೀಪವನ್ನು ಬೆಳಗುವ ವ್ಯಕ್ತಿ ಬಂದರೆ ಅಲ್ಲಿ ಸೋತವನಲ್ಲೂ‌ ಗೆಲುವಿನ ಮೊದಲ ಚಿಗುರು ಮೊಳಕೆ ಒಡೆಯುತ್ತದೆ.

ಬಡತನದಲ್ಲಿ ಹುಟ್ಟಿ ನೂರು ಕೋಟಿ ಲಾಭಗಳಿಸುವ ಉದ್ಯಮವನ್ನು ಕಟ್ಟಿ ಬೆಳೆಸಿದ ಪಿ.ಸಿ.‌ಮುಸ್ತಾಫ ಎನ್ನುವವರ ಯಶೋಗಾಥೆ ಇದು.

ಕೇರಳದ ವಯನಾಡ್ ನ ಕಲ್ಪಟ್ಟ ಬಳಿಯ ಚೆನ್ನಾಲೋಡ್ ನಲ್ಲಿ ಬೆಳೆದ ಮುಸ್ತಾಫ ಅವರ ಬಾಲ್ಯದಲ್ಲಿ ಬಣ್ಣದ‌ ಕನಸುಗಳಿರಲಿಲ್ಲ. ಆಸೆ – ಅಕ್ಷಾಂಕೆಗಳಿರಲಿಲ್ಲ. ಸರಿಯಾದ ಪಾಠ, ಖುಷಿಯ ಆಟ, ಎಲ್ಲದಕ್ಕೂ ಬಡತನ ಅಡ್ಡಿ ಆಗಿತ್ತು.‌ ಕಾಫಿ ತೋಟದಲ್ಲಿ ಬೆವರು ಸುರಿಸಿ ಕೂಲಿ ಆಳಾಗಿ ದುಡಿಯುವ ಅಪ್ಪ, ಎರಡು ಹೊತ್ತಿನ ಅನ್ನಕ್ಕೆ ಒಲೆಯ ಮುಂದೆ ಹೊಗೆ ತಿನ್ನುತ್ತಿದ್ದ ಅಮ್ಮ. ಇಂಥ ಪರಿಸ್ಥಿತಿ ಹಾಗೂ ಪರಿಸರದಲ್ಲಿ ಬೆಳೆದವರು ಮುಸ್ತಾಫ.

ನೂರು ಹಾಳೆ,ಖಾಲಿ ತಲೆ : ಮುಸ್ತಾಫರವರ ಗ್ರಾಮದಲ್ಲಿ ಸರಿಯಾದ ವಿದ್ಯುತ್ ವ್ಯವಸ್ಥೆ, ನೀರಿನ ವ್ಯವಸ್ಥೆ ಯಾವುದೂ ಸಮರ್ಪಕವಾಗಿ ಇರಲಿಲ್ಲ. ಅಲ್ಲಿ ಇದ್ದದ್ದು ಪ್ರಾಥಮಿಕ ಶಾಲೆ ಮಾತ್ರ. ಪ್ರತಿದಿನ ನಾಲ್ಕು ಕಿ.ಮಿ.‌ ದೂರ ನಡೆದುಕೊಂಡು ಶಾಲೆಗೆ ಹೋಗಬೇಕಾದ ಸಂದರ್ಭದಲ್ಲಿ ನೂರಾರು ಮಂದಿ ಅರ್ಧದಲ್ಲೇ ಶಾಲೆ ಬಿಟ್ಟು ಬಿಡುತ್ತಿದ್ದರು.  ಓದಿನಲ್ಲಿ ಆಸಕ್ತಿಯೇ ಇಲ್ಲದ ಮುಸ್ತಾಫ ತನ್ನ ಆರನೇ ತರಗತಿಯಲ್ಲಿ ಫೇಲ್ ಆಗುತ್ತಾರೆ. ತಂದೆಯ ಮಾತಿನಿಂತೆ ಕಲಿಯುವುದನ್ನು ನಿಲ್ಲಿಸಿ ತಂದೆಯ ಕೂಲಿ ಕೆಲಸದಲ್ಲಿ ನೆರವಾಗುತ್ತಾರೆ.

ಯೋಚನಾಕಕ್ಷೆಬದಲಾಯಿಸಿದ ಶಿಕ್ಷಕಿ :  ಮುಸ್ತಾಫ ಕಲಿಕೆಯಲ್ಲಿ  ಹಿಂದೆ ಉಳಿದಿದ್ರು, ಗಣಿತ ವಿಷಯದಲ್ಲಿ ಆಸಕ್ತಿ ಹೊಂದಿದ್ದರು. ಎಲ್ಲರಿಗೂ ಕಬ್ಬಿಣದ ಕಡಲೆ ಕಾಯಿ ಅನ್ನಿಸುವ ಗಣಿತವನ್ನು ಮುಸ್ತಾಫ  ಕರಗತ ಮಾಡಿಕೊಂಡಿದ್ದರು.  ಈ ವಿಷಯವನ್ನು ಮನಗಂಡಿದ್ದ ಗಣಿತ ವಿಷಯದ ಶಿಕ್ಷಕಿ ಮುಸ್ತಾಫರಿಗೆ ” ನೀನು ನಿನ್ನ ತಂದೆಯ ಹಾಗೆ ಕೂಲಿ ಆಗ್ತೀಯಾ? ಅಥವಾ ನನ್ನ ಹಾಗೆ ಶಿಕ್ಷಕರ ಕೆಲಸ ಮಾಡುತ್ತೀಯಾ ?  ಎಂದು ಕೇಳುತ್ತಾರೆ. ಈ ಮಾತು ಮುಸ್ತಾಫರನ್ನು ಕಾಡುತ್ತದೆ. ಶಿಕ್ಷಕರ ಮಾತಿನಿಂದ ಮತ್ತೆ ಶಾಲೆಯ ಮೆಟ್ಟಿಲು ಹತ್ತುವ ಅವರು ಮುಂದೆ ಸಾಧಿಸಿದ್ದು, ಸೋತವರ ಬಾಳಿನಲ್ಲಿ ಬೆಳಗುವ ನಂದಾ ದೀಪದಂತೆ ಪ್ರಕಾಶಮಾನವಾಗುವ ಸ್ಪೂರ್ತಿ.

ಓದಿನಲ್ಲಿ ಪಾಪರ್ ಆದವನು ಟಾಪರ್ ಆದ : ಮುಸ್ತಾಫರ ತನ್ನ ಗಣಿತ ಶಿಕ್ಷಕರ ಮಾತು ಗಾಢವಾಗಿ ಪ್ರಭಾವ ಬೀರುತ್ತದೆ. ಏಳನೇ ಕ್ಲಾಸ್ ನಲ್ಲಿ ಉತ್ತಮ ಅಂಕಗಳಿಸಿ ಟಾಪರ್ ಆಗುತ್ತಾರೆ. ಹತ್ತನೇ ತರಗತಿಯ ಪರೀಕ್ಷೆಯಲ್ಲೂ ಟಾಪರ್ ಸ್ಥಾನವನ್ನು  ಪಡೆಯುತ್ತಾರೆ.  ಆಗಿನ ಫಾರೋಕ್ ಕೋಜ್ಹಿಕೋಡೆ ( ಈಗಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ) ಕ್ಯಾಲಿಕಟ್  ಅಲ್ಲಿ  ಕಂಪ್ಯೂಟರ್ ಹಾಗೂ ಇಂಜಿನಿಯರಿಂಗ್ ಪದವಿ ಪಡೆಯುತ್ತಾರೆ. ಮುಸ್ತಾಫರ ಆರ್ಥಿಕ ಸ್ಥಿತಿ ಅರಿತಿದ್ದ ಕಾಲೇಜು ಮಂಡಳಿ   ಅವರನ್ನು ಮಧ್ಯಾಹ್ನದ ಉಚಿತ ಊಟ ಹಾಗೂ ಇರಲು ಹಾಸ್ಟೆಲ್ ಸೌಲಭ್ಯವನ್ನು ಕಲ್ಪಿಸುವ ವಿದ್ಯಾರ್ಥಿಗಳ ಪಟ್ಟಿಗೆ ಸೇರಿಸುತ್ತಾರೆ. ಪದವಿಯ ನಂತರ ಮುಸ್ತಾಫ ಅವರಿಗೆ ಅಮೇರಿಕಾದ ಮೊಟೊರೊಲಾ ಎನ್ನುವ ಖಾಸಗಿ  ಕಂಪೆನಿ ಬೆಂಗಳೂರಿನಲ್ಲಿ ಉದ್ಯೋಗವನ್ನು ನೀಡುತ್ತದೆ. ಕೆಲ ಸಮಯದ ನಂತರ ಮುಸ್ತಾಫ ಆ ಕೆಲಸವನ್ನು ಬಿಟ್ಟು ಅರಬ್ ದೇಶ ದುಬೈ ಅಲ್ಲಿ ಸಿಟಿ ಬ್ಯಾಂಕ್ ನ ತಾಂತ್ರಿಕ ವಿಭಾಗದಲ್ಲಿ ಏಳು ವರ್ಷ ಕೆಲಸ ಮಾಡುತ್ತಾರೆ. ‌ನಂತರ ನೇರವಾಗಿ ಬೆಂಗಳೂರಿಗೆ ಬಂದು  ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ  ಎಂ.ಬಿ.ಎ ಪದವಿಯನ್ನು ಕಲಿಯಲು ಆರಂಭಿಸುತ್ತಾರೆ.

ಯಶಸ್ಸಿನ ಮೊದಲ ಹೆಜ್ಜೆ : ಎಂ.ಬಿ.ಎ ಕಲೊಯುವ ಹೊತ್ತಿನಲ್ಲಿ ಮುಸ್ತಾಫರ ಜೊತೆ ಮಾತಿಗೆ ಸಿಗುತ್ತಿದ್ದ ಅವರ ಸಂಬಂಧಿಕರಲ್ಲಿ ಒಬ್ಬರಾಗಿರುವ ಶಮ್ಸಿ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಒಂದು ದಿನ ಹೆಂಗಸರು ದೋಸೆ ತಯಾರಿಸಲು ಹಿಟ್ಟನ್ನು ಪ್ಲಾಸ್ಟಿಕ್ ಕವರಿ ನಲ್ಲಿ  ತೆಗೆದುಕೊಂಡು ಹೋಗುತ್ತಿರುವುದನ್ನು ನೋಡುತ್ತಾರೆ. ‌ಆಗ ಶಮ್ಸಿ ಮುಸ್ತಾಫರ ಬಳಿ ಒಳ್ಳೆ ಗುಣಮಟ್ಟದ ದೋಸಾ ಹಿಟ್ಟನ್ನು ಹೇಗೆ ತಯಾರಿಸಬಹುದು ಎಂದು ಕೇಳುತ್ತಾರೆ. ಈ ಪ್ರಶ್ನೆ ಮುಸ್ತಾಫ ಅವರನ್ನು ಕಾಡುತ್ತದೆ. ಮನಸ್ಸು ಏನಾದರೂ ಮಾಡಲು ಪೀಡಿಸುತ್ತದೆ ಅಷ್ಟೇ. ಅಲ್ಲಿಂದ ಶುರುವಾದ ಐಡಿ ಫ್ರೆಶ್ ಫುಡ್ ಪಯಣ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ.

ಕೆಲಸ ಬಿಟ್ಟು ಉಳಿದ ಹಣವೇ ಸಾಧನೆಗೆ ಸಾಕಿತ್ತು :  ಮುಸ್ತಾಫ ‌ಎಂ.ಬಿ.ಎ ಪದವಿಯ ಮುನ್ನ ಹೋಗುತ್ತಿದ್ದ ಕೆಲಸದಿಂದ ಬಂದ ಹಣವನ್ನು ಉಳಿಸಿಕೊಂಡಿದ್ದರು 25 ಸಾವಿರ ರೂಪಾಯಿ ವೆಚ್ಚದಲ್ಲಿ ಮುಸ್ತಾಫ ಮತ್ತು ಅವರ ಐದು ಸಂಬಂಧಿಕರು  550 ಚದರ ಅಡಿ ಉದ್ದದ ಕೋಣೆಯಲ್ಲಿ  ಎರಡು  ಎರಡು ಗ್ರೈಂಡರ್, ಮಿಕ್ಸರ್ ಮತ್ತು ಸೀಲಿಂಗ್ ಯಂತ್ರವನ್ನು ಬಳಸಿಕೊಂಡು ಇಡ್ಲಿ ದೋಸೆಯ ಹಿಟ್ಟನ್ನು ತಯಾರಿಸಲು ಆರಂಭಿಸುತ್ತಾರೆ. 2006 ರಲ್ಲಿ ಪ್ರಾರಂಭವಾಗುವ  ಈ ಕಾಯಕವನ್ನು ಮುಂದೆ ಮುಸ್ತಾಫ ತನ್ನ ಎಂ.ಬಿ.ಎ ಪದವಿ ಮುಗಿಸಿ 2007 ರಲ್ಲಿ ಐಡಿ ಫ್ರೆಶ್ ಫುಡ್ ಜವಾಬ್ದಾರಿಯನ್ನು ಸಂಪೂರ್ಣವಾಗಿ ವಹಿಸಿಕೊಳ್ಳುತ್ತಾರೆ.

ಮನೆ ಮನ ಮೆಚ್ಚಿದ ಐಡಿ ಫ್ರೆಶ್ :   ಇಡ್ಲಿ ದೋಸೆಯ ಹಿಟ್ಟನ್ನು ತಯಾರಿಸಿ ಅದನ್ನು ಮೊದಲು 20 ಅಂಗಡಿಗಳಿಗೆ ತಲಾ ನೂರು ಹಿಟ್ಟಿನ ಪ್ಯಾಕೆಟ್ ಅನ್ನು ಮಾರುವ ಉದ್ದೇಶ ಹೊಂದಿದ್ದ ತಂಡಕ್ಕೆ ಜನರಿಂದ ಅಭೂತಪೂರ್ವ ಸ್ಪಂದನೆ ಸಿಗುತ್ತದೆ. ಬೆಂಗಳೂರಿನ ಇಂದಿರಾನಗರದಲ್ಲಿ ತನ್ನ ಮೊದಲ ಸಣ್ಣ ಉದ್ಯಮವನ್ನು ಆರಂಭಿಸುವ ಐಡಿ ಫ್ರೆಶ್ ಇಡ್ಲಿ ದೋಸಾ ಹಿಟ್ಟಿನ ಪ್ಯಾಕೆಟ್ ನೋಡ ನೋಡುತ್ತಿದ್ದಂತೆ ಜನರಲ್ಲಿ ದಿನ ಬಳಕೆಯ ಮೊದಲ ಆಯ್ಕೆ ಆಗಿ ನಿಲ್ಲುತ್ತದೆ.

ವಹಿವಾಟನ್ನು ವಿಸ್ತರಣೆ ಮಾಡುವ ಉದ್ದೇಶದಿಂದ ಚೆನ್ನೈ ನಗರದಲ್ಲಿ ಐಡಿ ಫ್ರೆಶ್ ಮಾರುಕಟ್ಟೆ ಪ್ರವೇಶ ಮಾಡಲು ಸಿದ್ಧವಾಗುತ್ತದೆ. ಅಲ್ಲಿಯ ಜನರಲ್ಲಿ ಅಡುಗೆ ಸೋಡಾ ಮಿಶ್ರಿತ ಹಿಟ್ಟು ಹೆಚ್ಚು ಆಪ್ತವಾಗಿರುತ್ತದೆ. ಯಾವುದೇ ಮಿಶ್ರಣವಿಲ್ಲದೆ ಶುದ್ದ ಹಿಟ್ಟಿನ ಐಡಿ ಫ್ರೆಶ್ ಚೆನ್ನೈ ಅಲ್ಲಿ ಅಸ್ತಿತ್ವ ಪಡೆಯಲು ಆಗುವುದಿಲ್ಲ. ಆದರೆ ಮುಸ್ತಾಫ ಸೋಲು ಒಪ್ಪಿಕೊಳ್ಳುವುದಿಲ್ಲ.ಮುಂದೆ ತನ್ನ ಐಡಿ ಫ್ರೆಶ್ ಉದ್ಯಮ ಹೈದಾರಬಾದ್ ಚನ್ನೈ, ಮುಂಬಯಿ ನಲ್ಲಿ ಬೆಳೆದು ನಿಲ್ಲುತ್ತದೆ.

ಪ್ರಯತ್ನಕ್ಕೆ ಪ್ರತಿಫಲ ಕೊಟ್ಟ ಹೊಡಿಕೆದಾರರು : 2014 ರಲ್ಲಿ ಹೆಲಿಯನ್ ವೆನ್ ಚರ್ ಸಂಸ್ಥೆ  ಮುಸ್ತಾಫರ ವಹಿವಾಟಿನಲ್ಲಿ ಹೊಡಿಕೆ ಮಾಡುತ್ತಾರೆ.ಇದರಿಂದ ಐಡಿ ಫ್ರೆಶ್ ಫುಡ್ ಹೊರದೇಶಕ್ಕೂ ತಲುಪುವಂತೆ ಆಗುತ್ತದೆ. ದುಬೈ ದೇಶದಲ್ಲಿ ಇಂದಿಗೂ ಐಡಿ ಫ್ರೆಶ್ ಫುಡ್ ಗೆ ಪ್ರತ್ಯೇಕವಾದ ಮಾರುಕಟ್ಟೆ ಇದೆ ಅನ್ನುವ ಖುಷಿಯನ್ನು ವ್ಯಕ್ತ ಪಡಿಸುತ್ತಾರೆ ಮುಸ್ತಾಫ.

ಪರೋಟ,ಚಪಾತಿ, ಪನ್ನೀರ್ ನಲ್ಲೂ ಇದೆ ಈ ಐಡಿ ರುಚಿ : 550 ಚದರ ಉದ್ದದ ಜಾಗ ನೋಡು ನೋಡುತ್ತಿದ್ದಂತೆ 15 ಸಾವಿರ ಚದರ ವಿಸ್ತರಣೆಗೊಳ್ಳುತ್ತದೆ ಅಲ್ಲಿಂದ ಇನ್ನೂ ಹೆಚ್ಚು ಬೆಂಗಳೂರಿನ ಹೊಸಕೋಟೆಯಲ್ಲಿ 75 ಸಾವಿರ ಚದರ ಉದ್ದದ ವಿಸ್ತರಣೆವುಳ್ಳ ಜಾಗದಲ್ಲಿ ಐಡಿ ಫ್ರೆಶ್ ಉದ್ಯಮವನ್ನು ನಡೆಸುತ್ತದೆ. ಇಡ್ಲಿ ದೋಸಾ ಹಿಟ್ಟಿನಿಂದ ಆರಂಭವಾದ ಉದ್ಯಮ ಮುಂದೆ ಪರೋಟ,ಚಪಾತಿ,ಮೊಸರು,ವಡ ಹೀಗೆ ಎಲ್ಲಾ ಬಗೆಯ ರುಚಿಯನ್ನು ಜನರಿಗೆ ಪ್ಯಾಕ್ಯೇಜ್ ಮಾಡಿ ಮಾರುಕಟ್ಟೆಗೆ ತಲುಪಿಸಿ ಯಶಸ್ಸುಗಳಿಸುತ್ತದೆ.

25 ಸಾವಿರದಿಂದ ಆರಂಭವಾದ  ಉದ್ಯಮ ಇಂದು  100 ಕೋಟಿ ಲಾಭಗಳಿಸುವ ಮಟ್ಟಕ್ಕೆ ಬೆಳೆದು ನಿಂತಿದೆ. ಸಾವಿರಾರು ಬಡ ಜನರಿಗೆ ಮುಸ್ತಾಫ ಕೆಲಸವನ್ನು ನೀಡುತ್ತಿದ್ದಾರೆ.

ಇಂದು ಐಡಿ ಫ್ರೆಶ್ ವಿಶ್ವದ ಯಶಸ್ವಿ  ಸ್ಟಾರ್ಟಪ್ ಗಳ ಪಟ್ಟಿಯಲ್ಲಿ  ನಿಲ್ಲುವಂಥ ಮಟ್ಟಕ್ಕೆ ಬೆಳೆದು ನಿಂತಿದೆ. ಪ್ರತಿದಿನ 60  ಕೆ.ಜಿಗೂ ಹೆಚ್ಚಿನ ಹಿಟ್ಟನ್ನು ತಯಾರಿಸಿ ದೇಶ ವಿದೇಶದ ನಾನಾ ಭಾಗದ ಮಾರುಕಟ್ಟೆಗೆ ತಲುಪಿ 5 ಮಿಲಿಯನ್ ಗೂ ಅಧಿಕ ಪ್ಯಾಕೇಜ್ ಐಡಿ ಫ್ರೆಶ್ ಫುಡ್ ಮಾರಾಟವಾಗುತ್ತಿದೆ. ಮುಸ್ತಾಫ ಅವರಿಗೆ ಐಐಎಂ ಬೆಂಗಳೂರಿನಿಂದ “ ಟೈಕೂನ್ಸ್ ಆಫ್ ಟುಮಾರೊ” ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ದೊರಕಿವೆ.

ದೇಶ ವಿದೇಶಗಳಿಗೆ ಹೋಗಿ ಮುಸ್ತಾಫ ತಮ್ಮ ಬದುಕಿನ ಯಶೋಗಾಥೆಯನ್ನು ಹಂಚಿಕೊಳ್ಳುತ್ತಿದ್ದಾರೆ.ಎಲ್ಲಾ ವೇದಿಕೆಯಲ್ಲೂ ತನ್ನ ಬಡತನದ ದಿನಗಳನ್ನು ಹೇಳಿಕೊಂಡೇ ತಮ್ಮ ಮಾತನ್ನು ಆರಂಭಿಸುತ್ತಾರೆ.

 

-ಸುಹಾನ್ ಶೇಕ್

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ