ಪ್ರೀತಿ ನಿರಾಕರಿಸಿ… ಕತ್ತಲು ತುಂಬಿಕೊಂಡ ಬದುಕಿನಲ್ಲೂ ಅರಳಿದ “ಲಕ್ಷ್ಮೀ”!

ಸುಹಾನ್ ಶೇಕ್, Nov 6, 2019, 6:30 PM IST

ಕಷ್ಟಗಳು ನಮ್ಮನ್ನು ಕುಗ್ಗಿಸಿ ಬಿಡುತ್ತವೆ. ಕೆಲವು ಕಷ್ಟಗಳು ನಮ್ಮನ್ನು ಸಾಧಕರನ್ನಾಗಿ ಮಾಡುತ್ತವೆ. ಅಂಥ ಕಷ್ಟದ ಸಾಗರದಲ್ಲಿ ಗೆದ್ದು ಬಂದವರ ಜೀವನದ ಯಶೋಗಾಥೆಗಳು ಸಮಾಜದ ನಾಲ್ಕು ಕಣ್ಣಿಗೆ ಮಾದರಿ ಆಗುತ್ತವೆ ಹಾಗೂ ಸ್ಪೂರ್ತಿ ತುಂಬುತ್ತದೆ.

ಲಕ್ಷ್ಮೀ ಅಗರವಾಲ್. ದೆಹಲಿಯ ಮಧ್ಯಮ‌ ಕುಟುಂಬದಲ್ಲಿ ಹುಟ್ಟಿದ ಲಕ್ಷ್ಮೀ ಸಣ್ಣ ವಯಸ್ಸಿನಿಂದಲೇ ಪುಸ್ತಕದ ಅಂಗಡಿಯೊಂದಕ್ಕೆ ಕೆಲಸಕ್ಕೆ ಸೇರಿಕೊಂಡು ಹಣ ಸಂಪಾದಿಸಲು ಆರಂಭಿಸುತ್ತಾಳೆ. ಮುಂದೊಂದು ದಿನ ತಾನು ಒಬ್ಬ ಹಾಡುಗಾರ್ತಿ ಆಗಬೇಕೆನ್ನುವ ಕನಸು ಹೊತ್ತುಕೊಂಡಿದ್ದ ಲಕ್ಷ್ಮೀ ಅದಕ್ಕಾಗಿ ತನ್ನದೇ ರೀತಿಯಲ್ಲಿ ತಯಾರಿಯನ್ನು ನಡೆಸಿಕೊಂಡು ಇರುತ್ತಾಳೆ.

ಕತ್ತಲು ತುಂಬಿದ ಬದುಕು :  2005 ಲಕ್ಷ್ಮೀ ಆಗತಾನೆ ಹದಿನೈದರ ಹರೆಯದ ಹುಡುಗಿ. ಅದೊಂದು ಸಮಯ ಅವಳ ಹಿಂದೆ ಗುಡ್ಡು ಎನ್ನುವ ಮೂವತ್ತೆರಡು ವರ್ಷದ ವ್ಯಕ್ತಿಯೊಬ್ಬ ಪ್ರತಿದಿನ ಕೆಲಸಕ್ಕೆ ಹೋಗುವಾಗ ಪೀಡಿಸಲು ಆರಂಭಿಸುತ್ತಾನೆ. ಇದು ಅತಿಯಾಗಿ ಒಂದು ದಿನ ಆ ವ್ಯಕ್ತಿ ಲಕ್ಷ್ಮೀ ಬಳಿ ತನ್ನನ್ನು ಮದುವೆಯಾಗು ಎಂದು ನಿವೇದನೆಯನ್ನು ಮಾಡುತ್ತಾನೆ. ಇದನ್ನು ನಿರಾಕರಿಸಿದ್ದ ಒಂದೇ ಒಂದು ಕಾರಣಕ್ಕೆ ಲಕ್ಷ್ಮೀ ಬಾಳಿನಲ್ಲಿ ಎಂದೂ ಮರೆಯಾಗದ ಕಲೆಯೊಂದು ಅಚ್ಚಾಗಿ, ಅವಮಾನಿತವಾಗಿ, ಸೋಲಾಗಿ ಉಳಿಯುತ್ತದೆ.

ತನ್ನ ಪ್ರೇಮವನ್ನು ನಿರಾಕರಿಸಿದ ಲಕ್ಷ್ಮೀಯನ್ನು  ಮರುಕ್ಷಣವೇ ಗುಡ್ಡು ಆ್ಯಸಿಡನ್ನು ಲಕ್ಷ್ಮೀಯ ಅಂದವಾದ ಮುಖಕ್ಕೆ ಎರಚುತ್ತಾನೆ. ಲಕ್ಷ್ಮೀ ಸ್ಥಳದಲ್ಲೇ ನೋವಿನಿಂದ ಚೀರುತ್ತಾಳೆ. ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಾಳೆ. ಬದುಕಿಗಾಗಿ ಅಗಲಾಚುತ್ತಾಳೆ. ತನಗೆ ಏನು ಆಗುತ್ತಿದೆ ಅನ್ನೋದರ ಅರಿವೇ ಇಲ್ಲದ ಲಕ್ಷ್ಮೀ ಮರು ಗಳಿಗೆಯಲ್ಲಿ ದೆಹಲಿಯ ಲೋಹಿಯಾ ಆಸ್ಪತ್ರೆಯಲ್ಲಿ ದಾಖಲಾಗುತ್ತಾಳೆ.

ಅಂದ ಸತ್ತ ಮೇಲೆ ಕನ್ನಡಿ ಯಾಕೆ..! : ಆ್ಯಸಿಡ್ ತೀವ್ರತೆ ಎಷ್ಟು ಇತ್ತು ಅಂದರೆ ಆಸ್ಪತ್ರೆಗೆ ಬಂದ ತಂದೆಯನ್ನು ನೋಡಿ‌ ಅಪ್ಪಿಕೊಳ್ಳುವ ಮಗಳು ಲಕ್ಷ್ಮೀಯ ಅಪ್ಪುಗೆಯಿಂದ ತಂದೆ ಅಂಗಿ ಸುಟ್ಟು ಹೋಗಿ ಹೊಗೆ ಬರಲು ಆರಂಭವಾಗುತ್ತದೆ. ಲಕ್ಷ್ಮೀಯ ಮುಖ, ಹಣೆ, ಕೂದಲಿನ‌ ಭಾಗ ಎಲ್ಲಾ ಅರ್ಧ ಅರ್ಧಕ್ಕೆ  ಆ್ಯಸಿಡ್ ನಿಂದ ಸುಟ್ಟು ಹೋಗುತ್ತದೆ. ಕಣ್ಣಿನ ಭಾಗದ ಚರ್ಮವನ್ನು ಕಿತ್ತು, ಕಿತ್ತು ಎಳೆದು ತೆಗೆಯುತ್ತಾರೆ. ಬೆಂಕಿಯಲ್ಲಿ ಪ್ಲಾಸ್ಟಿಕ್ ಕರಗುವಂತೆ ಆ್ಯಸಿಡ್ ನಲ್ಲಿ ಲಕ್ಷ್ಮೀಯ ಚರ್ಮ ಸುಟ್ಟು ಕರಗುತ್ತದೆ.

ಲಕ್ಷ್ಮೀ ಎರಡು ತಿಂಗಳು ತನ್ನ ಮುಖವನ್ನು ಮುಟ್ಟದೇ ಆಸ್ಪತ್ರೆಯ ಬೆಡ್ ನಲ್ಲಿ ತನಗಾದ ಆಘಾತದ ಭೀಕರತೆಯನ್ನು ನೆನೆಯುತ್ತಾ ಇರುತ್ತಾಳೆ. ಆಸ್ಪತ್ರೆಯಿಂದ ಮನೆಗೆ ಬಂದ ಮಗಳಿಗೆ ಮನೆಯಲ್ಲಿ ಒಂದೇ ಒಂದು ಕನ್ನಡಿಯನ್ನು ಇಟ್ಟುಕೊಳ್ಳದೇ ಪೋಷಕರು ನೋಡಿಕೊಳ್ಳುತ್ತಾರೆ.

ನೋವು ಮಾಸಲು ನ್ಯಾಯದ ಮೆಟ್ಟಿಲು ಹತ್ತಿದ ಲಕ್ಷ್ಮೀ :  ಆ್ಯಸಿಡ್ ನಿಂದ ಕಳೆದುಕೊಂಡ ಅಂದ ಮಾಸಿದ ಮುಖವನ್ನು ಜನ ನೋಡಲು ಭಯ ಪಡುತ್ತಿದ್ದರು. ಮಕ್ಕಳು ಹೆದರುತ್ತಾರೆ ಹೊರಗೆ ಬರಬೇಡ ಅನ್ನುವ ಉಪದೇಶ, ಹೀಗೆ ಎಲ್ಲಾ ಬಗೆಯ ಅವಮಾನವನ್ನು ಸಹಿಸಿಕೊಂಡು ಕೊನೆಗೆ ‌ಮೌನ‌ ಸ್ಫೋಟಗೊಂಡ ಮನಸ್ಸಿನ ನಿರ್ಧಾರವನ್ನು 2005 ರಲ್ಲಿ ಸುಪ್ರೀಂಕೋರ್ಟ್ ನಲ್ಲಿ ಪಿ.ಐ.ಎಲ್ ‌ಸಲ್ಲಿಸಿ ಭಾರತದಲ್ಲಿ ಆ್ಯಸಿಡ್ ಮಾರಾಟ ಮಾಡಬಾರದು ಎನ್ನುವ ಮನವಿಯನ್ನು ಮಾಡುತ್ತಾರೆ.

ಈ ಪಿ.ಐ.ಎಲ್  ಚರ್ಚೆ ಸುದೀರ್ಘವಾಗಿ ನಡೆದು 2013 ರಲ್ಲಿ ಸುಪ್ರೀಂಕೋರ್ಟ್ ಆ್ಯಸಿಡ್ ಮಾರಾಟದ ಬಗ್ಗೆ ಕಠಿಣ ನಿಬಂಧನೆಯನ್ನು ಹಾಕುತ್ತದೆ ಜೊತೆಗೆ ಲಕ್ಷ್ಮೀ ಗೆ ಈ ದುರ್ಗತಿಯನ್ನು ಮಾಡಿದ ವ್ಯಕ್ತಿಗಳನ್ನು ಜೈಲು ಶಿಕ್ಷೆಯನ್ನು ನೀಡುತ್ತದೆ. ಇದು ಲಕ್ಷ್ಮೀ ಗೆಲ್ಲುವುದಕ್ಕೆ ಸಾಕಿತ್ತು. ಆದರೆ ಲಕ್ಷ್ಮೀಗೆ ಬೇಕಿದದ್ದು ತಾನು ಈ ರೀತಿಯಾದ್ರೆ ತನ್ನ ಹಾಗೆ ಇರುವ ಇಂಥವರನ್ನು ಧೈರ್ಯ ತುಂಬಬೇಕು ಸಮಾಜಕ್ಕೆ ನಾವು ಮಾದರಿ ಆಗಿ ನಿಲ್ಲಬೇಕೆನ್ನುವ ಹಟ.

ಬೀದಿಗಿಳಿದ ಸಂತ್ರಸ್ತರ ದನಿ :  ಲಕ್ಷ್ಮೀ ತನ್ನ ಜೊತೆಗಾದ ಕೃತ್ಯಕ್ಕೆ ಸಮಾಜದಲ್ಲಿ ಇನ್ಯಾರು ಇದನ್ನು ಅನುಭವಿಸಬಾರದೆನ್ನುವ ನಿರ್ಧಾರದದಿಂದ ‘ ಸ್ಟಾಪ್ ಆ್ಯಸಿಡ್ ಅಟ್ಯಾಕ್’ ಹಾಗೂ ‘ಸ್ಟಾಪ್ ಸೇಲ್ ಆ್ಯಸಿಡ್’ ಎನ್ನುವ ಅಭಿಯಾನವನ್ನು ಆ್ಯಸಿಡ್ ದಾಳಿ ಪೀಡಿತರೊಂದಿಗೆ ಶುರು ಮಾಡುತ್ತಾರೆ. ನೋಡ ನೋಡುತ್ತಿದ್ದಂತೆ ಇವರ ಒಂದು ಕರೆಗೆ ನೂರಾರು ಜನರ ಬೆಂಬಲ ಸಿಗುತ್ತದೆ. ಶಾಲಾ- ಕಾಲೇಜಿನ ಆವರಣದಲ್ಲಿ ಈ ಅಭಿಯಾನಕ್ಕೆ ಅಪಾರ ಬೆಂಬಲ ಸಿಗುತ್ತದೆ.

ಇದೇ ಸಮಯದಲ್ಲಿ ಲಕ್ಷ್ಮೀಯ ತಮ್ಮ ರಾಹುಲ್ ಅಗರವಾಲ್ ಟಿಬಿ ಕಾಯಿಲೆಯಿಂದ ಬಳಲುತ್ತಾನೆ. ಇದರ ಆಘಾತದಿಂದ ಲಕ್ಷ್ಮೀಯ ತಂದೆ ಹೃದಯಘಾತದಿಂದ ಇಹಲೋಕ ತ್ಯಜಿಸುತ್ತಾರೆ. ನಂತರ ವೈದ್ಯರ ಹೇಳಿಕೆಯಂತೆ ಲಕ್ಷ್ಮೀಯ ತಮ್ಮ ಕೆಲವೇ ವರ್ಷದಲ್ಲಿ ಸಾವನ್ನಪ್ಪುತ್ತಾನೆ. ಈ ನೋವುಗಳಿಂದ ಬೇಸತ್ತ ಲಕ್ಷ್ಮೀ ಬ್ಯೂಟಿಷಿಯನ್ ಕೆಲಸಕ್ಕೆ ಹೋಗಿ ಹಣಗಳಿಸಲು ಆರಂಭಿಸುತ್ತಾಳೆ. ಸತ್ತ ತನ್ನ ಅಂದವನ್ನು ಮರೆತು ಇನ್ನೊಬ್ಬರ ಅಂದಕ್ಕೆ ಕನ್ನಡಿಯಾಗುವ ಕಾಯಕವನ್ನು ಮಾಡುತ್ತಾಳೆ.

ಮುನ್ನುಗ್ಗಿದ ದಿಟ್ಟೆ :  ಲಕ್ಷ್ಮೀ ತನ್ನ ನೋವಿನಗಾಥೆಯನ್ನು, ಹೋರಾಡಿದ ದಿನವನ್ನು, ಅನುಭವನ್ನು ಖಾಸಗಿ ವಾಹಿನಿಯೊಂದರ ‘ಉಡಾನ್’ ಕಾರ್ಯಕ್ರಮದಲ್ಲಿ ಹಂಚಿಕೊಳ್ಳುತ್ತಾರೆ ಜೊತೆಗೆ  ಆ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಟೆಡ್ ಎಕ್ಸ್, ದೂರದರ್ಶನ ಹಾಗೂ ಇತರ ಕಡೆಯಲ್ಲಿ ಲಕ್ಷ್ಮೀಯ ಸಂದರ್ಶನಗಳು ಪ್ರಸಾರವಾಗಿದೆ. ತನ್ನ ಜೀವನದ ಹೋರಾಟವನ್ನು ಲಕ್ಷ್ಮೀ ಯಾವ ಮುಚ್ಚು ಮರೆ ಇಲ್ಲದೆ ಮುಕ್ತವಾಗಿ ಹೇಳಿಕೊಂಡು ಸ್ಪೂರ್ತಿಯ ಮಾದರಿ ಆಗುತ್ತಾರೆ.

2014 ರ ವೇಳೆ ಪತ್ರಕರ್ತ ಹಾಗೂ ಸಾಮಾಜಿಕ ಕಾರ್ಯಕರ್ತ ಅಲೋಕ್ ದೀಕ್ಷಿತ್ ಜೊತೆಗಿನ ಸ್ನೇಹ ಆತ್ಮೀಯವಾಗಿ ಬೆರೆಯುತ್ತದೆ. ಮದುವೆ ಆಗುವ ನಿರ್ಧಾರ ಮಾಡಿದ್ದರೂ ಅದರಿಂದ ದೂರ ಉಳಿದು ಲಿವಿಂಗ್ ರಿಲೇಶನ್ ಶೀಪ್ ನಲ್ಲಿ ಜೊತೆ ಆಗಿ ಇರುತ್ತಾರೆ. 2015 ರಲ್ಲಿ ಈ ಇಬ್ಬರಿಗೆ ಒಂದು ಹೆಣ್ಣು ಮಗು ಹುಟ್ಟುತ್ತದೆ. ಇಬ್ಬರೂ ಜತೆಗೂಡಿ ‘ಚಾವ್’ ಫೌಂಡೇಷನ್ ಎನ್ನುವ ಆ್ಯಸಿಡ್ ಪೀಡಿತರಿಗೆ ಧ್ವನಿಯಾಗುವ ಸಂಸ್ಥೆಯನ್ನು ಸ್ಥಾಪಿಸುತ್ತಾರೆ.

ಮುಖದ ಮೇಲಿನ ಕಲೆ, ಧೈರ್ಯದ ನೆಲೆ ಆಯಿತು :  ಲಕ್ಷ್ಮೀ ತನ್ನ ಹೋರಾಟದ ಧ್ವನಿಯಿಂದ ಜಗತ್ತಿಗೆ ಪರಿಚಯವಾಗುತ್ತಾಳೆ. 2014 ರಲ್ಲಿ ಅಮೇರಿಕಾದ ಮಿಶೆಲ್ ಒಬಾಮಾ, ಲಕ್ಷ್ಮೀ ಅವರಿಗೆ ಧೈರ್ಯವಂತ ಮಹಿಳೆ ಎನ್ನುವ ಪ್ರಶಸ್ತಿಯನ್ನು ಪ್ರಧಾನ ಮಾಡುತ್ತಾರೆ. ನಾನಾ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಲಕ್ಷ್ಮೀ 2016 ರಲ್ಲಿ ಲಂಡನ್ ಫ್ಯಾಶನ್ ವೀಕ್ ನಲ್ಲಿ ವೇದಿಕೆ ಮೇಲೆ ಹೆಜ್ಜೆ ಇಡುತ್ತಾರೆ. ಪ್ರಸ್ತುತ ಇವರ ಜೀವನ ಆಧಾರಿತದ ಮೇಲೆ ಬಾಲಿವುಡ್ ನಿರ್ದೇಶಕಿ ಮೇಘಾನ ಗುಲ್ಜಾರ್ ‘ ಚಪಾಕ್’ ಎನ್ನುವ ಚಿತ್ರವನ್ನು ಮಾಡಲು ರೆಡಿ  ಆಗಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಮೊದಲ ಪೋಸ್ಟರ್ ಇತ್ತೀಚೆಗಷ್ಟೇ ಬಿಡುಗಡೆ ಆಗಿತ್ತು.

 

-ಸುಹಾನ್ ಶೇಕ್

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ: ಸಿಲಿಕಾನ್‌ ಸಿಟಿಯೆಂದೇ ಪ್ರಸಿದ್ಧವಾಗಿರುವ ಬೆಂಗಳೂರಿನಲ್ಲಿ ಮಹಾನಗರ ಪಾಲಿಕೆಯಿಂದ ಸರಬರಾಜಾಗುವ ನೀರು ನೇರವಾಗಿ ಕುಡಿಯಲು ಯೋಗ್ಯವಾಗಿಲ್ಲ ಎಂಬ...

  • ಉಡುಪಿ: ತುಳಸೀ ಎಲೆಗೆ ವಿದ್ಯುನ್ಮಾನ ಉಪಕರಣಗಳಲ್ಲಿರುವ ರೇಡಿಯೇಶನ್‌ (ವಿಕಿರಣಗಳು) ತಡೆಗಟ್ಟುವ ಶಕ್ತಿ ಇದೆ ಎಂದು ಯೋಗಗುರು ಬಾಬಾ ರಾಮದೇವ್‌ ಹೇಳಿದರು. ಶ್ರೀಕೃಷ್ಣ...

  • ಹೊಸದಿಲ್ಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಇನ್ನಷ್ಟು ಸರಳೀ ಕೃತಗೊಳಿಸುವ ಮತ್ತು ಜಿಎಸ್‌ಟಿ ರಿಟರ್ನ್ಸ್ ಫೈಲಿಂಗ್‌ ಪ್ರಕ್ರಿಯೆಯನ್ನು ಬಳಕೆದಾರ...

  • ಮನುಷ್ಯ ಚಟುವಟಿಕೆಯಿಂದ ಇರಲು ಮೆದುಳಿನ ಆರೋಗ್ಯವೂ ಅತಿ ಮುಖ್ಯ. ಮೆದುಳಿನ ನರಮಂಡಲದಲ್ಲಿ ಏರುಪೇರಾಗಿ ಅದು ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದು ಕೆಲವರಿಗೆ...

  • ಬೆಂಗಳೂರು: ಹದಿನೈದು ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಕಾಣಿಸಿಕೊಂಡಿದ್ದ ಬಂಡಾಯ ಶಮನಗೊಳಿಸಿ ನಿಟ್ಟುಸಿರು ಬಿಟ್ಟಿದ್ದ...