2ನೇ ಮಹಾಯುದ್ಧದ ಸೈನಿಕರ ಅಚ್ಚುಮೆಚ್ಚಿನ ಪಾರ್ಲೆಜಿ ಯಶಸ್ಸಿನ ಮೆಟ್ಟಿಲೇರಿದ್ದು ಹೇಗೆ?

ಸುಹಾನ್ ಶೇಕ್, Oct 9, 2019, 6:30 PM IST

ಅದು ಸ್ವಾತಂತ್ರ್ಯ ಪೂರ್ವದ ಹೊತ್ತು. ಎಲ್ಲೆಡೆಯೂ ಆಂಗ್ಲರು ಭಾರತೀಯರನ್ನು ಹಾಗೂ ಭಾರತವನ್ನು ತನ್ನ ತೆಕ್ಕೆಯಲ್ಲಿಡಿದು ವ್ಯಾಪಾರ ವಹಿವಾಟಿನಲ್ಲಿ ತಮ್ಮ ಕಪಿಮುಷ್ಟಿಯನ್ನು ಗಟ್ಟಿಗೊಳಿಸಿಕೊಂಡ ಯುಗ. ಎಲ್ಲಾ ವಸ್ತುಗಳಿಗೂ ಆಂಗ್ಲರ ಹಿಡಿತ ಇರುತ್ತಿದ್ದ ಕಾಲ. ಇನ್ನೊಂದೆಡೆ ಸ್ವದೇಶಿ ಆಂದೋಲನದ ಕೂಗು ಕೇಳಿ ಬರುತ್ತಿದ್ದ ಸಮಯ.

ಹುಟ್ಟಿನ ಹಿಂದೆ ಸ್ವದೇಶಿ ಆಂದೋಲನದ ಗುಟ್ಟುಮೋಹನ್ ಲಾಲ್ ದಯಾಳ್ ಎನ್ನುವ ರೇಷ್ಮೆ ವ್ಯಾಪಾರಿ ಸ್ವದೇಶಿ ಆಂದೋಲನದಲ್ಲಿ ಪ್ರಭಾವ ಬೀರಿರುತ್ತಾರೆ. ಎಲ್ಲಾ ಕಡೆ ಬ್ರಿಟೀಷ್ ಅಸ್ತಿತ್ವದ ವಸ್ತುಗಳು ಮಾರಾಟವಾಗುತ್ತಿರುವುದರಿಂದ, ನಮ್ಮ ದೇಶದಲ್ಲಿ , ನಾವೇ ತಯಾರಿಸುವ ವಸ್ತುಗಳು ಅಗ್ಗದಲ್ಲಿ ಸಿಗಬೇಕು ಅನ್ನುವ ಉದ್ದೇಶದಿಂದ ಮೋಹನ್ ಲಾಲ್ ದಯಾಳ್ ಅವರು ಜರ್ಮನಿ ದೇಶದಲ್ಲಿ  ಟಾಫಿ (ಟೋಫಿ ಕ್ಯಾಂಡಿ) ತಯಾರಿಸುವುದನ್ನು ಕಲಿಯುತ್ತಾರೆ. ಅದೇ ಸಮಯದಲ್ಲಿ 1929 ರಲ್ಲಿ ಚಾಕ್ಲೇಟ್ ತಯಾರಿಸುವ ಯಂತ್ರವನ್ನು ಜರ್ಮನಿಯಿಂದ ಭಾರತಕ್ಕೆ 60 ಸಾವಿರ ವೆಚ್ಚದಲ್ಲಿ ತರುತ್ತಾರೆ.

ವಿದೇಶದಿಂದ ಯಂತ್ರವನ್ನು ತಂದು ಮುಂಬಯಿಯ  ಇರ್ಲಾ ಹಾಗೂ ಪಾರ್ಲಾದಲ್ಲಿ ಸಣ್ಣ  ಕಾರ್ಖಾನೆಯಲ್ಲಿ ತಮ್ಮ ಕುಟುಂಬದ 12 ಜನರನ್ನು ಇಟ್ಟುಕೊಂಡು ಆರೇಂಜ್ ಟಾಫಿಯನ್ನು ತಯಾರಿಸಲು ಆರಂಭಿಸುತ್ತಾರೆ. ಮೊದ ಮೊದಲು ಕಂಪೆನಿಯ ಉತ್ತುಂಗಕ್ಕಾಗಿ ಪರಿಶ್ರಮ ಪಡುವ ಬರದಲ್ಲಿ ಕಂಪೆನಿಗೊಂದು ಹೆಸರನ್ನು ಇಡಲು ಮರೆಯುತ್ತಾರೆ. ಆ ವೇಳೆಯಲ್ಲಿ ಪಾರ್ಲಾದಲ್ಲಿ ಇದ್ದ ಸಂಸ್ಥೆ ಕೊಂಚ ಬದಲಾಯಿಸಿಕೊಂಡು ಸಂಸ್ಥೆಗೆ ಪಾರ್ಲೆ ಎಂದು ಹೆಸರಿಡುತ್ತದೆ.

ಪಾರ್ಲೆಯ ಪ್ರಾರಂಭ :  ಆರೇಂಜ್ ಕ್ಯಾಂಡಿಯನ್ನು ತಯಾರಿಸಲು ಆರಂಭಿಸುವ ಕಂಪೆನಿ ಮುಂದೆ 10 ವರ್ಷದ ನಂತರ ನಂತರ 1939 ರಲ್ಲಿ ಭಾರತದ ಮೊದಲ ಸ್ವದೇಶಿ ಬಿಸ್ಕಟ್  ತಯಾರಿಸಲು ಆರಂಭಿಸುತ್ತದೆ. ಅದುವೇ ಪಾರ್ಲೆ ಗ್ಲೂಕೋ. ಗೋಧಿಯಿಂದ ತಯಾರಿಸುವ ಈ ಬಿಸ್ಕೆಟ್ ನೋಡು ನೋಡುತ್ತಿದ್ದಂತೆ ಅಪಾರವಾಗಿ ಪ್ರಸಿದ್ಧಿಗಳಿಸುತ್ತದೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಸಹ ಪಾರ್ಲೆ ಗ್ಲೂಕೋ ಸೈನಿಕರಿಗೆ ಹಾಗೂ ಜನಸಾಮಾನ್ಯರಿಗೆ ಅಚ್ಚುಮೆಚ್ಚು ಆಗುತ್ತದೆ. ಆದರೆ ಭಾರತ ಸ್ವಾತಂತ್ರ್ಯ ಹೊಂದಿದ ನಂತರ ಪಾರ್ಲೆ ತನ್ನ ವ್ಯಾಪಾರದಲ್ಲಿ ಅಪಾರ ನಷ್ಟ ಅನುಭವಿಸುತ್ತದೆ. ಗೋಧಿಯ ಕೊರತೆಯಿಂದ ಪಾರ್ಲೆ ನಷ್ಟವನ್ನು ಅನುಭವಿಸುತ್ತದೆ. ಪಾರ್ಲೆ ಗ್ಲೂಕೋ ಎಷ್ಟು ಜನಪ್ರಿಯವಾಗಿತ್ತೆಂದರೆ, ಮಾರುಕಟ್ಟೆಯಲ್ಲಿ ಪಾರ್ಲೆಯ ಲಭ್ಯತೆ ಕಡಿಮೆಯಾದಾಗ ಜನ ಆಕ್ರೋಶ ವ್ಯಕ್ತಪಡಿಸಲು ಆರಂಭಿಸುತ್ತಾರೆ. ಕೆಲವೇ ಸಮಯದ ಬಳಿಕ ಪಾರ್ಲೆ ಮತ್ತೆ  ತನ್ನ ವಹಿವಾಟನ್ನು ಆರಂಭಿಸುತ್ತದೆ. ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಬೇಡಿಕೆವುಳ್ಳ ಬಿಸ್ಕೆಟ್ ಆಗಿ ಮಾರ್ಪಾಡಾಗುತ್ತದೆ.

ಬೇಡಿಕೆ ಹೆಚ್ಚಿಸಿದ  ಬಾಲೆ” : ಪಾರ್ಲೆ ಗ್ಲೂಕೋ ಮತ್ತೆ ಮಾರುಕಟ್ಟೆಗೆ ಬಂದು ನೆಲೆಯಾದದ್ದು ಬಿಸ್ಕೆಟ್ ಪ್ಯಾಕ್ ನಲ್ಲಿರುವ ಪುಟ್ಟ ಬಾಲಕಿಯ ಚಿತ್ರದಿಂದ. 1960 ರ ವೇಳೆಯಲ್ಲಿ ಕಂಪೆನಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ನಾನಾ ಪ್ರಚಾರ ಕಾರ್ಯವನ್ನು ಮಾಡುತ್ತದೆ. ಆ ಸಮಯದ ಜಾಹೀರಾತು ಜನರನ್ನು ಪಾರ್ಲೆಯ ಬಗ್ಗೆ ಇದ್ದ ಪ್ರೀತಿಯನ್ನು ಇನ್ನಷ್ಟು ಆತ್ಮೀಯನ್ನಾಗಿ ಮಾಡುತ್ತದೆ. ಅದೇ ಸಮಯದಲ್ಲಿ  ಮಂಗನ್ಲಾಲ್ ದಯಾ ಎನ್ನುವ ಕಲಾವಿದ ಬಿಡಿಸಿದ ಮಗುವಿನ ಚಿತ್ರವೊಂದು ಎಷ್ಟು ಪ್ರಸಿದ್ಧಿ ಆಗುತ್ತದೆ ಅಂದ್ರೆ ಇವತ್ತಿಗೂ ಪಾರ್ಲೆ ಬಿಸ್ಕೆಟ್ ಅನ್ನು ಜನ ಗುರುತಿಸೋದು ಇದೇ ಬಾಲಕಿಯ ಚಿತ್ರದ ಮೂಲಕ.

ಈ ಚಿತ್ರದಲ್ಲಿರುವ ಮಗುವಿನ ಬಗ್ಗೆ ಹತ್ತು ಹಲವಾರು ಗೊಂದಲಗಳು ಸೃಷ್ಟಿಯಾಗಿದ್ದು, ಚರ್ಚೆಗಳಾಗಿದ್ದು ಇದರಲ್ಲಿರುವ ಫೋಟೋ ಇನ್ಫೋಸಿಸ್ ಸ್ಥಾಪಕಿ ಸುಧಾಮೂರ್ತಿ ಅವರದ್ದು ಎನ್ನುವ ಕೆಲವರು, ನೀರೂ ದೇಶ್ ಪಾಂಡೆಯದು, ಅಲ್ಲ ಗುಂಜನ್ ಗುಂಡಾನಿಯಾ ಅವರದು ಎನ್ನುವ ಅಂತೆ ಕಂತೆಯ ಕಥೆಗಳು ಎಲ್ಲೆಡೆ ಹರಿದಾಡುತ್ತಲೇ ಇದೆ. ಮೂಲಗಳ ಪ್ರಕಾರ ಇದು ಆ ಸಮಯದಲ್ಲಿ ಪ್ರಚಾರಕ್ಕಾಗಿ ಬಳಸಿದ ಚಿತ್ರ ಅಷ್ಟೇ, ಆದರೆ ಇದರ ಗೊಂದಲಕ್ಕೆ ಕೊನೆ ಇಲ್ಲ.

ಹೆಸರು ಬದಲಾಯಿಸಿದ ಪಾರ್ಲೆ :  1989 ರಲ್ಲಿ ಪಾರ್ಲೆ ಗ್ಲೂಕೋ ಬಿಸ್ಕೆಟ್ ತನ್ನ ಹೆಸರನ್ನು ಬದಲಾಯಿಸುತ್ತದೆ. ಗ್ಲೋಕೋ ಎನ್ನುವ ಹೆಸರನ್ನು ತೆಗೆದು “ಜಿ” ಯನ್ನು ಸೇರಿಸುತ್ತದೆ. ಇದಕ್ಕೆ ಕೆಲವೊಂದು ಕಾರಣಗಳಿದ್ದವು ಪಾರ್ಲೆಯ ಗ್ಲೂಕೋ ಹೆಸರಿನಲ್ಲಿ ಹಲವಾರು ಬಿಸ್ಕೆಟ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತದೆ. ಇದರ ಪ್ರಭಾವ ಪಾರ್ಲೆ ತನ್ನ ವ್ಯಾಪಾರದ ಮೇಲೆ ಅಪಾರ ನಷ್ಟವನ್ನು ಅನುಭವಿಸುತ್ತದೆ. ಈ ಕಾರಣದಿಂದ ಪಾರ್ಲೆ ಗ್ಲೂಕೋ ಪಾರ್ಲೆಜಿ ಆಗಿ ಮಾರುಕಟ್ಟೆಯಲ್ಲಿ ಪರಿಚಯವಾಗುತ್ತದೆ.

ಕಡಿಮೆ ದರ;ಹೆಚ್ಚು ರುಚಿ : ಪಾರ್ಲೆಜಿ ಅಂದರೆ ಅದೊಂದು ಬಿಸ್ಕೆಟ್ ಮಾತ್ರವಲ್ಲ. ಭಾವನೆಗಳನ್ನು ಬೆಸೆಯಲು, ಸ್ನೇಹವನ್ನು ಗಾಢವಾಗಿಸಲು ಇರುವ ಸೇತುವೆ!. ಹೌದು ಪಾರ್ಲೆಜಿ ಬಿಸ್ಕೆಟ್ ಎಲ್ಲರ ಮನೆ ಮನದಲ್ಲಿ ಎಂದೂ ಮರೆಯಾದ ಶಾಶ್ವತ ರುಚಿ. 2 ರೂಪಾಯಿಯ ಪುಟ್ಟ ಪ್ಯಾಕೆಟ್ ನಿಂದ ಆರಂಭವಾದ ಮುಂದೆ 5 ರೂಪಾಯಿ ದರದಲ್ಲಿ  ಸಿಗಲು ಆರಂಭವಾಗುತ್ತದೆ. ಪ್ರತಿ ಮನೆಯ ಚಹಾದ ಜೊತೆ ಪಾರ್ಲೆಯ ರುಚಿಯನ್ನು ಸವಿಯುವ ನಾಲಗೆ ಪುಣ್ಯ ಮಾಡಿರಬೇಕು ಅಂಥ ಅದ್ಭುತ ಪಾರ್ಲೆಜಿ, ಅನ್ನುವಷ್ಟರ ಮಟ್ಟಿಗೆ ಆತ್ಮೀಯವಾಗಿ ಬೆಳೆದಿದೆ. 90 ದಶಕದಲ್ಲಿ ಬೆಳೆದ ಪ್ರತಿಯೊಬ್ಬರಲ್ಲಿ ಪಾರ್ಲೆಜಿ ಬಿಸ್ಕೆಟ್ ಸೇವಿಸಿದ ರುಚಿಯ ಅನುಭವ ಇಂದಿಗೂ ಹಸಿ ಆಗಿಯೇ ಇದೆ. 2003 ಹಾಗೂ 2014 ರಲ್ಲಿ ಪಾರ್ಲೆಜಿ ದೇಶದ ಭರವಸೆವುಳ್ಳ ಉತ್ಪಾದನೆ ಅನ್ನುವ ಹಿರಿಮೆಯನ್ನು ಪಡೆದುಕೊಂಡಿದೆ. 2005 ರ ಹೊತ್ತಿನಲ್ಲಿ ಪಾರ್ಲೆಜಿ ತನ್ನ ಮಾರಾಟ ದರವನ್ನು ಹೆಚ್ಚು ಮಾಡಿತ್ತು ಈ ಸಮಯದಲ್ಲಿ ಇದು ಪಾರ್ಲೆಜಿಯ ಮಾರಾಟದ ಮೇಲೆ ಪ್ರಭಾವ ಬೀರಿ ವಹಿವಾಟಿನಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಕೆಲ ಸಮಯದ ಬಳಿಕ ಇದನ್ನು ಮನಗಂಡ ಕಂಪೆನಿ ಮತ್ತೆ ಐದು ರೂಪಾಯಿ ದರವನ್ನು ನಿಗದಿಗೊಳಿಸುತ್ತದೆ. ಇವತ್ತು ಪಾರ್ಲೆಜಿ ಬೆಲೆ 5 ರೂಪಾಯಿ ಯಿಂದ 50 ರೂಪಾಯಿವರೆಗೂ ಇದೆ.

 

ಮಿಂಚಿದ ಜಾಹೀರಾತುಗಳು :  ಪಾರ್ಲೆಜಿ ಅಂದಿನಿಂದ ಇಂದಿನವರೆಗೂ ತನ್ನ ವಿಶಿಷ್ಟವಾದ ಜಾಹೀರಾತುಗಳಿಂದ ಸುದ್ದಿ ಆಗುತ್ತಿದೆ. ಜನಪ್ರಿಯ ಶಕ್ತಿಮಾನ್ ಕುರಿತಾದ ಪಾರ್ಲೆಜಿ ಜಾಹೀರಾತು, “ಜಿ ಮಾನೆ ಜಿನಿಯಸ್”, “ ಹಿಂದೂಸ್ತಾನಿ ಕೀ ತಾಕತ್ “,ರೋಕೋ ಮತ್ತ್, ಟೋಕೋ ಮತ್ತ್ “  ಓ ಪೈಯಿಲಿ ವಾಲಿ ಬಾತ್ “ ಎನ್ನುವ ಜಾಹೀರಾತುಗಳು ಪಾರ್ಲೆಜಿಯನ್ನು ಉತ್ತುಂಗಕ್ಕೇರಿಸಿತ್ತು.

ಇಂದು ಪಾರ್ಲೆಯ ಹತ್ತಾರು ಉತ್ಪನ್ನಗಳು ಮಾರುಕಟ್ಟೆಯಲ್ಲಿದೆ. ಆದರೆ ಪಾರ್ಲೆಜಿಯಷ್ಟು ಜನಪ್ರಿಯಗಳಿಸಿಲ್ಲ. 50 ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗವನ್ನು ಮಾಡುತ್ತಿದ್ದಾರೆ. ಪ್ರತಿದಿನ 14 ಕೋಟಿಗೂ ಹೆಚ್ಚು ಬಿಸ್ಕೆಟ್ ಅನ್ನು ತಯಾರಿಸಿ, ಜಗತ್ತಿನ 6 ಮಿಲಿಯನ್ ಸ್ಟೋರ್ ಗಳಿಗೆ ರವಾನೆ ಆಗುತ್ತಿದೆ. ವರ್ಷದಲ್ಲಿ ಪಾರ್ಲೆಜಿ  16 ಮಿಲಿಯನ್ ಆದಾಯ ಗಳಿಸುತ್ತಿದೆ.

 

-ಸುಹಾನ್ ಶೇಕ್

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ