ಒಂದೊಳ್ಳೆ ಕ್ಯಾಮರಾ ಕೊಳ್ಳುವ ಯೋಚನೆ ನಿಮಗಿದ್ದರೆ ಇದನ್ನು ತಪ್ಪದೇ ಓದಿ

ಕ್ಯಾಮರ ಬಳಸುವಾಗ ಯಾವೆಲ್ಲಾ ಅಂಶಗಳು ನಿಮ್ಮ ಗಮನದಲ್ಲಿರಬೇಕು ಗೊತ್ತೇ?

ಮಿಥುನ್ ಪಿಜಿ, Oct 1, 2019, 8:32 PM IST

“ಸಾವಿರ ಪದಗಳು ಹೇಳಲಾಗದ್ದನ್ನು ಒಂದು ಚಿತ್ರ ಹೇಳಬಲ್ಲದು” ಎಂಬ ಮಾತು ಛಾಯಾಚಿತ್ರ ಅರ್ಥಾತ್ ಫೊಟೋಗ್ರಾಫಿ ಕ್ಷೇತ್ರವನ್ನು ಇಂದು ಬಹಳ ಎತ್ತರಕ್ಕೆ ಕೊಂಡೊಯ್ದಿದೆ. ಯಾವುದೇ ಸಭೆ-ಸಮಾರಂಭಗಳು, ಮದುವೆ ನಿಶ್ಚಿತಾರ್ಥದಂತಹ ಶುಭ ಸಮಾರಂಭಗಳು, ಪ್ರವಾಸ ಪ್ರಯಾಣದಂತಹ ಇನ್ನಿತರ ವಿಶೇಷ ಕ್ಷಣಗಳ ಸಂದರ್ಭದಲ್ಲಿ ನಮ್ಮ ಜೊತೆ ಒಬ್ಬ ಫೊಟೋಗ್ರಾಫರ್ ಅಥವಾ ಒಂದೊಳ್ಳೆ ಕ್ಯಾಮರಾ ಇಲ್ಲದಿರುವುದನ್ನು ಕಲ್ಪಿಸಿಕೊಳ್ಳುವುದಕ್ಕೆ ಹೇಗೆ ಸಾಧ್ಯ ಹೇಳಿ. ಕ್ಯಾಮರದಲ್ಲಿ ತೆಗೆಯಲಾಗುವ ಪ್ರತಿ ಪೋಟೋದ ಹಿಂದೆ, ಸಂತೋಷ, ದುಃಖ, ಸೇರಿದಂತೆ ನಾನಾ ಭಾವನೆಗಳಿರುತ್ತದೆ. ಒಂದು ಪೋಟೋ ನೋಡಿದೊಡನೇ ವಾವ್ ಎಂಬ ಉದ್ಗಾರ ಬಂದರೆ ಕ್ಷಣವನ್ನು ಸೆರೆ ಹಿಡಿದ ಆ ಪೋಟೋಗ್ರಾಫರ್ ಗೆದ್ದ ಎಂದೇ ಲೆಕ್ಕ!

ಪೋಟೋಗ್ರಫಿ ಎಂಬುದು ಮೊದಲು ಆಸಕ್ತಿಯಾಗಿ, ನಂತರ ಹವ್ಯಾಸವಾಗಿ, ಕೊನೆಗೊಮ್ಮೆ ಚಟವಾಗಿ, ಬಿಟ್ಟರೂ ಬಿಡದೆಂಬಂತೆ ಕಾಡುತ್ತದೆ. ಪ್ರಕೃತಿಯ ಅನನ್ಯ ಸೌಂದರ್ಯವನ್ನೆಲ್ಲ ಒಂದು ಪುಟ್ಟ ಪೆಟ್ಟಿಗೆಯಲ್ಲಿ ಸೆರೆಹಿಡಿದು ಬೀಗುವ ಫೋಟೋಗ್ರಾಫರ್ ಗಳೆಂಬ ಆಧುನಿಕ ರವಿವರ್ಮರಿಗೆ ಸಾಟಿಯಾರು? ಕಣ್ಮನ ಸೆಳೆಯುವಂತಹ ಒಂದು ಉತ್ತಮ ಪೋಟೋ ಮೂಡಿ ಬರಬೇಕಾದರೇ ಪೋಟೋಗ್ರಾಫರ್ ಗೆ  ತಾಳ್ಮೆ ಇರಬೇಕು. ಪಕ್ಷಿಯೊಂದು ತನ್ನ ಮರಿಗೆ ಗುಟುಕು ತರುವುದನ್ನೇ ಕಾಯುತ್ತ ದಿನಗಟ್ಟಲೆ ತಾಳ್ಮೆಯಿಂದ ಕಾದ ಅದೆಷ್ಟೋ ಛಾಯಾಚಿತ್ರಗಾರರಿದ್ದಾರೆ.

ಮಾನವನ ಅತ್ಯುತ್ತಮ ಅವಿಷ್ಕಾರಗಳಲ್ಲಿ ಕ್ಯಾಮಾರ ಕೂಡ ಒಂದು. ಕತ್ತಲೆ ಕೋಣೆಯಿಂದ ಇಂದಿನ DSLR ಹಾಗೂ ಮೊಬೈಲ್ ಕ್ಯಾಮೆರಾದವರೆಗಿನ ಪಯಣವೇ ಒಂದು ಸೋಜಿಗ. ಆದರೆ ಇಂದು ಸ್ಮಾರ್ಟ್‌ಫೋನ್‌ ಗಳಲ್ಲಿ ಅತ್ಯುತ್ತಮ ಮೆಗಾಫಿಕ್ಸೆಲ್ ಕ್ಯಾಮರ ಇರುವುದರಿಂದ, DSLR ಕ್ಯಾಮರಾವನ್ನು ಖರೀದಿಸುವ ಅವಶ್ಯಕತೆ ಏನಿದೆ ಎಂದು ಹಲವರು ಯೋಚಿಸಬಹುದು. ಇಂದು ಅತ್ಯುತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳು ಬಂದರೂ DSLR ಕ್ಯಾಮರಗಳಿಗೆ ಬೇಡಿಕೆ ಕಡಿಮೆಯಾಗಲಿಲ್ಲ.

ಸುಮಾರು 15-20 ವರುಷಗಳ ಹಿಂದೆ ನಾವು ಪೋಟೋ ಸ್ಟುಡಿಯೋಗಳಿಗೆ ಹೋಗಿದ್ದಾಗ ಅನ್ ಲ್ಯಾಗ್ ಅಥವಾ ರೀಲ್ ಕ್ಯಾಮರಾವನ್ನು ಗಮನಿಸಿದ್ದಿರಬಹುದು. ಎರಡು ಮೂರು ದಿನಬಿಟ್ಟು ಫೋಟೋ ಕೊಡುತ್ತೇವೆ ಎಂಬ ಉತ್ತರ ಮಾಮೂಲಿ. ಅವಾಗ ಫೋಟೋ ಜೊತೆ ನೆಗೆಟಿವ್ ಗಳನ್ನು ಕೂಡ ಕೊಡುತ್ತಿದ್ದರು. ನಂತರದ ವರುಷಗಳಲ್ಲಿ ಡಿಜಿಟಲ್ ಜಗತ್ತಿನ ಒಂದು ಉತ್ತಮ ಕ್ಯಾಮರ ಅವಿಷ್ಕಾರಗೊಳ್ಳುವ ಮೂಲಕ ಫೊಟೋಗ್ರಾಫಿ ಕ್ಷೇತ್ರದಲ್ಲೂ ಸಹ ಡಿಜಿಟಲ್ ಯುಗ ಪ್ರಾರಂಭಗೊಂಡಿತು.

DSLR ಕ್ಯಾಮರ
ಡಿಜಿಟಲ್ ಸಿಂಗಲ್ ಲೆನ್ಸ್ ರಿಫ್ಲೆಕ್ಸ್ ಕ್ಯಾಮೆರಾಗಳಲ್ಲಿ ಕನ್ನಡಿ ಇರುತ್ತದೆ. ಈ ಕನ್ನಡಿ ತಿರುಗುವ ಮೂಲಕ ಕ್ಯಾಮೆರಾದಲ್ಲಿನ ಸೆನ್ಸಾರ್ ಗೆ ಬೆಳಕು ಹೋಗಿ, ಚಿತ್ರಗಳನ್ನು ಸೆರೆಹಿಡಿಯಲಾಗುತ್ತದೆ. ಆದುದರಿಂದ ಚಿತ್ರಗಳ ಗುಣಮಟ್ಟ ಉತ್ತಮವಾಗಿರುತ್ತವೆ.

ಕ್ಯಾಮರಾ ಸ್ವಂತಕ್ಕೆ ಕೊಳ್ಳುವುದಾದರೆ ಯಾವುದು ಸೂಕ್ತ?
ಫೋಟೋಗ್ರಫಿಗೆ ಹೊಸಬರಾದರೆ ಎಂಟ್ರಿ ಲೆವೆಲ್ ಕ್ಯಾಮರ ಸೂಕ್ತ.  ಈ ವರ್ಗದಲ್ಲಿ ಪ್ರೊಫೇಶನಲ್ ಕ್ಯಾಮರದಲ್ಲಿರುವ ಎಲ್ಲ ವೈಶಿಷ್ಟ್ಯಗಳು ಇರುತ್ತವೆ. ಆದರೆ ಅದರಷ್ಟು ಅಡ್ವಾನ್ಸ್ಡ್ ತಂತ್ರಜ್ಞಾನ ಇರುವುದಿಲ್ಲ.

ಕ್ಯಾನನ್ 1200ಡಿ ಮತ್ತುನಿಕಾನ್ 3200ಡಿ. ಇನ್ನೂ ಕೊಂಚ ಉತ್ತಮವಾದ ಕ್ಯಾಮರಾ ಬೇಕೆಂದರೆ ಕ್ಯಾನನ್ 700ಡಿ ಅಥವಾ ನಿಕಾನ್ 5500ಡಿ ಖರೀದಿಸಬಹುದು. ನಿಕಾನ್ ಕ್ಯಾಮರ ಕೊಳ್ಳುವುದೋ ಅಥವಾ ಕ್ಯಾನನ್ ಕ್ಯಾಮರ ಕೊಳ್ಳುವುದೋ ಎಂಬ ದ್ವಂದ್ವದಲ್ಲಿದ್ದರೇ ಪರಿಣಿತರ ಸಲಹೆ ಪಡೆಯಿರಿ. ಎರಡು ಕೂಡ ಉತ್ತಮವಾದ ಕ್ಯಾಮೆರಾಗಳೇ.

ಡಿಜಿಟಲ್ ಕ್ಯಾಮರಾ ಖರೀದಿಸುವ ಮುನ್ನ ನಿಮಗೆ ಗೊತ್ತಿರಲೇಬೇಕಾದ ಅಂಶಗಳಿವು:
ಮೆಗಾಪಿಕ್ಸೆಲ್: DSLR ಕ್ಯಾಮೆರಾ ಕೊಳ್ಳುವಾಗ ಹಲವರು ಮೆಗಾಪಿಕ್ಸೆಲ್ ಹೆಚ್ಚಿದ್ದರೆ ಮಾತ್ರ ಅತ್ಯುತ್ತಮ ಕ್ಯಾಮೆರಾ ಎಂಬ ನಿರ್ಧಾರಕ್ಕೆ ಬರುತ್ತಾರೆ. ಆದರೇ ಮೆಗಾಪಿಕ್ಸೆಲ್ ಎಂಬುದು ಇಲ್ಲಿ ಮುಖ್ಯವಾಗುವುದಿಲ್ಲ. ಅದರ ಬದಲು ಒಂದು ಫೋಟೋವನ್ನು ವಿಭಿನ್ನ ದೃಷ್ಟಿಕೋನದಿಂದ ಹೇಗೆ ತೆಗೆಯುತ್ತೀರಿ ಎಂಬುದು ಬಹಳ ಮುಖ್ಯವಾಗುತ್ತದೆ.

ಲೆನ್ಸ್: ಕ್ಯಾಮೆರಾ ಕೊಳ್ಳುವಾಗ ಅದರ ಜೊತೆ ಎರಡು ಕಿಟ್ ಲೆನ್ಸ್ ಗಳನ್ನು ಕೊಡುತ್ತಾರೆ. ವೈಡ್  ಆ್ಯಂಗಲ್ ಲೆನ್ಸ್ (18-55 mm) ಮತ್ತು ಟೆಲಿ ಫೋಟೋ ಲೆನ್ಸ್ / ಜೂಮ್ ಲೆನ್ಸ್ (55-250/55-300 mm ). ವೈಡ್  ಆ್ಯಂಗಲ್ ಲೆನ್ಸ್ ನಲ್ಲಿ ಜೂಮ್ ಕೊಂಚವಷ್ಟೇ ಮಾಡಬಹುದು. ಇದನ್ನು ಬೆಟ್ಟಗುಡ್ಡ, ಮದುವೆ, ಹುಟ್ಟು-ಹಬ್ಬದಂತಹ ಸಮಾರಂಭಗಳಲ್ಲಿ ಮತ್ತು ಕ್ಯಾಂಡಿಡ್ ಚಿತ್ರಗಳನ್ನು ಸೆರೆಹಿಡಿಯಲು ಬಳಸುತ್ತೇವೆ. ವನ್ಯಜೀವಿ, ಚಂದಿರನ ಛಾಯಾಗ್ರಹಣ ಮತ್ತು ಇತರೆ ಸಂಧರ್ಭಗಳಲ್ಲಿ ಟೆಲಿಫೋಟೋ  ಲೆನ್ಸ್ ಗಳನ್ನು ಬಳಸುತ್ತೇವೆ.

ಇನ್ನು ಮ್ಯಾಕ್ರೋ ಲೆನ್ಸ್ ಗಳನ್ನು ಇರುವೆಯಂಥ ಸಣ್ಣಕೀಟ, ಹೂವಿನ ದಳಗಳು ತೆಗೆಯಲು ಬಳಸುತ್ತೇವೆ.  ಇನ್ನು ಪ್ರೈಮ್ ಲೆನ್ಸ್ ಗಳು ಸ್ಥಿರವಾಗಿರುತ್ತದೆ. ಅದನ್ನು ಝೂಮ್ ಮಾಡಲು ಆಗುವುದಿಲ್ಲ. ಈ ಲೆನ್ಸ್ ಗಳಿಂದ ಮೂಡಿಬರುವ ಚಿತ್ರಗಳು ಅತ್ಯದ್ಭುತವಾದ ಗುಣಮಟ್ಟದ್ದಾಗಿರುತ್ತವೆ. ಆಯಾಯಾ ಕ್ಯಾಮರಗಳಿಗೆ ಅನುಗುಣವಾಗಿಯೇ ಲೆನ್ಸ್ ಆಯ್ಕೆ ಮಾಡಿಕೊಳ್ಳಿ. ನಿಕಾನ್  ಕ್ಯಾಮರಾದಲ್ಲಿನ ಲೆನ್ಸ್ ಅನ್ನು ಕೆನಾನ್, ಸೋನಿ ಕ್ಯಾಮರಾದಲ್ಲಿ ಬಳಸಲು ಸಾಧ್ಯವಿಲ್ಲ.

DSLRನಲ್ಲಿ ಸೆನ್ಸಾರ್ ಗಾತ್ರ  ದೊಡ್ಡದಿದ್ದಷ್ಟೂ ಒಳ್ಳೆಯದು. ಇದರಲ್ಲಿ ಸಿಸಿಡಿ (CCD) ಮತ್ತು ಸಿಮೋಸ್ (CMOS) ಎಂಬ ಸೆನ್ಸರ್‌ಗಳು ಇವೆ.

ಸೆನ್ಸರ್‌ ಕ್ಲೀನಿಂಗ್: DSLR ಕ್ಯಾಮರಾಗಳಲ್ಲಿ ಲೆನ್ಸ್ ಬದಲಿಸುವಾಗ ಸೆನ್ಸರ್ ಮೇಲೆ ಧೂಳು ಕುಳಿತುಕೊಳ್ಳುವುದು ಸಾಮಾನ್ಯ. ಸೆನ್ಸರ್‌ ಕ್ಲೀನಿಂಗ್ ವ್ಯವಸ್ಥೆ ಇದ್ದರೆ ಸಂವೇದಕವನ್ನು ಸ್ವಚ್ಛ ಮಾಡಬಹುದು. ಆದುದರಿಂದ ಇಂತಹ ವ್ಯವಸ್ಥೆ ಇದೆಯೇ ಎಂದು ಪರಿಶೀಲಿಸಿ.

ಕ್ಯಾಮೆರಾ ಬ್ಯಾಟರಿ: ಒಮ್ಮೆ ಪೂರ್ತಿ ಚಾರ್ಜ್ ಆದರೆ ಎಷ್ಟು ಫೋಟೋ ತೆಗೆಯಬಹುದು ಎಂಬುದರ ಕಡೆಗೂ ಗಮನಹರಿಸಬೇಕು. ಒಮ್ಮೆ ಚಾರ್ಜ್‌ ಮಾಡಿದರೆ 2,500 ಫೋಟೋ ತೆಗೆಯಬಹುದಾದ ಬ್ಯಾಟರಿ ಸಾಮರ್ಥ್ಯದ ಕ್ಯಾಮರಾಗಳನ್ನು ಖರೀದಿಸಿದರೆ ಒಳ್ಳೆಯದು.

ಪೋಟೋಗ್ರಫಿಯಲ್ಲಿ ಗಮನಿಸಬೇಕಾದ ಅಂಶಗಳು:

  1. ಎಕ್ಸ್ ಪೋಸರ್ (Exposure): ಒಂದು ವಸ್ತುವನ್ನು ಸೆರೆಹಿಡಿಯುವಾಗ ಅತಿಯಾದ ಬೆಳಕು, ಚಿತ್ರವನ್ನು ತೀರಾ ಬೆಳ್ಳಗಾಗಿಸುತ್ತೆ, ಅದೇ ರೀತಿ ಕಡಿಮೆ ಬೆಳಕು ಕಪ್ಪಾಗಿಸುತ್ತದೆ. ಕ್ಯಾಮೆರಾ ಸೆನ್ಸರ್ ಇಲ್ಲವೆ ಪರದೆಯ ಮೇಲೆ ಬೆಳಕು ಎಷ್ಟು ಪ್ರಮಾಣದಲ್ಲಿ ಬೀಳಬೇಕು ಎಂಬುದನ್ನು ಎಕ್ಸ್ ಪೋಸರ್ ಆಯ್ಕೆಯ ಮೂಲಕ ತೀರ್ಮಾನಿಸಬಹುದು.
  2. ಅಪಾರ್ಚರ್: ಬೆಳಕಿನ ಒಳ ಹರಿವಿನ ಪ್ರಮಾಣವನ್ನು ನಿಯಂತ್ರಿಸುವ ಕಿಂಡಿ. ಸಾಮಾನ್ಯವಾಗಿ f/2. f/22 ಎಂದೂ ನಮೂದಿಸಲಾಗುತ್ತೆ. ಸರಳವಾಗಿ ಹೇಳುವುದಾದರೆ ಕಿಂಡಿಯ ಅಂಕಿ ಕಡಿಮೆಯಿದ್ದರೆ ಅದು ಕಿಂಡಿಯನ್ನು ದೊಡ್ಡದಾಗಿ ತೆರೆದಿಟ್ಟು ಹೆಚ್ಚು ಬೆಳಕು ಒಳಬರುವಂತೆ ಮಾಡುತ್ತದೆ. ಹಾಗೆಯೇ, ಕಿಂಡಿಯ ಅಂಕಿ ಹೆಚ್ಚಿದ್ದರೆ ಅದು ಕಿಂಡಿಯನ್ನು ಚಿಕ್ಕದಾಗಿ ತೆರೆದಿಟ್ಟು ಕಡಿಮೆ ಬೆಳಕನ್ನು ಒಳ ಬಿಟ್ಟುಕೊಳ್ಳುತ್ತದೆ.
  3. ಶಟರ್ ಸ್ಪೀಡ್: ಕ್ಯಾಮೆರಾದ ಲೆನ್ಸ್ ಮೇಲೆ ಎಷ್ಟು ಹೊತ್ತು ಬೆಳಕನ್ನು ಗ್ರಹಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂಬುದನ್ನು ಶಟರ್ ಸ್ಪೀಡ್ ತೀರ್ಮಾನಿಸುತ್ತದೆ. ಸಾಮಾನ್ಯವಾಗಿ ಇದನ್ನು 1/4 ಸೆಕೆಂಡ್. 1/250, 1/4000 ಸೆಕೆಂಡ್‍ಗಳಲ್ಲಿ ನಮೂದಿಸಲಾಗಿರುತ್ತೆ.

    ಶಟರ್ ಸ್ಪೀಡ್ 1/4000 ಆಗಿದ್ದರೆ ಆಗ ಬೆಳಕು ಕಡಿಮೆ ಹೊತ್ತು ಗಾಜಿನ ಮೇಲೆ ಬೀಳುತ್ತದೆ. ಒಂದು ವೇಳೆ ಶಟರ್ ಸ್ಪೀಡ್ ಅಂಕಿ 1/4 ಆಗಿದ್ದರೆ ಆಗ ಹೆಚ್ಚಿನ ಹೊತ್ತು ಬೆಳಕು ಗಾಜಿನ ಮೇಲೆ ಬೀಳುತ್ತದೆ. ಸಾಮಾನ್ಯವಾಗಿ ಹೊರಾಂಗಣದಲ್ಲಿ ಬೆಳಕಿನ ಪ್ರಮಾಣ ಜಾಸ್ತಿ ಇರುವಾಗ ಶಟರ್ ಸ್ಪೀಡ್ ಇರಬೇಕು.

  4. ಐಎಸ್‍ಓ(ISO): ಐಎಸ್‍ಓ ಸೆಟ್ಟಿಂಗ್ ಮೂಲಕ ಚಿತ್ರದ ಹೊಳಪನ್ನು (ಬೆಳಕಿನಪ್ರಮಾಣ) ನಿಯಂತ್ರಿಸಬಹುದು. ಕ್ಯಾಮೆರಾಗಳಲ್ಲಿ ಐಎಸ್‍ಓ 100ರಿಂದ ಐಎಸ್‍ಓ 6400 ಎಂದು ಬರೆದಿರುತ್ತೆ. ಕಡಿಮೆ ಐಎಸ್‍ಓ ಅಂಕಿ ಇದ್ದರೆ ಕಡಿಮೆ ಹೊಳಪು. ಐಎಸ್‍ಒ ಅಂಕಿ ಹೆಚ್ಚಿಸಿದಂತೆ ಚಿತ್ರದ ಹೊಳಪೇನೋ ಹೆಚ್ಚಾಗುತ್ತೆ, ಆದರೆ ಚಿತ್ರದ ಗುಣಮಟ್ಟ ಕಡಿಮೆಯಾಗಿಬಿಡುತ್ತದೆ.

ಛಾಯಾಗ್ರಹಣ ಮಾಡುವಾಗ ಕೆಲವು ಎಚ್ಚರಿಕೆಗಳು:
ಕ್ಯಾಮರಾಗಳಿಗೆ ನೀರು ತಗುಲಬಾರದು. ಮಳೆಯಲ್ಲಿ ಛಾಯಾಗ್ರಹಣ ಮಾಡುವುದು ಬೇಡ. ನೀರು ತಗುಲಿದಲ್ಲಿ ಫಂಗಸ್ ಉಂಟಾಗಿ ಕ್ಯಾಮರಾ ಹಾಳಾಗುತ್ತದೆ. ಲೆನ್ಸ್ ಗಳನ್ನು ಬದಲಿಸುವಾಗ ಧೂಳು ಹೋಗದಂತೆ ನೋಡಿಕೊಳ್ಳಿ. ಲೆನ್ಸ್ ಗಳು ಸ್ಕ್ರಾಚ್ ಆಗದಂತೆ ನೋಡಿಕೊಳ್ಳಿ. ಸ್ಕ್ರಾಚ್ ಆದರೆ ನಿಮ್ಮ ಚಿತ್ರಗಳ ಗುಣಮಟ್ಟ ಕಡಿಮೆಯಾಗುತ್ತದೆ. ಇದನ್ನು ತಡೆಯಲು ಫಿಲ್ಟರ್ ಗಳನ್ನು ಬಳಸಬಹುದು.

ಈ ಎಲ್ಲಾ ಅಂಶಗಳ ಜೊತೆಗೆ ಫೊಟೋಗ್ರಾಫಿಗೆ ಸಂಬಂಧಿಸಿದ ಮತ್ತು ಕೆಮರಾ ತಂತ್ರಜ್ಞಾನಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ಆಗಾಗ್ಗೆ ಗಮನಿಸುತ್ತಿರುವುದರಿಂದ ಮತ್ತು ಈ ಕ್ಷೇತ್ರದಲ್ಲಿ ಈಗಾಗಲೇ ಪರಿಣತಿಯನ್ನು ಹೊಂದಿರುವ ವ್ಯಕ್ತಿಗಳ ಸಕಾಲಿಕ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುವ ಮೂಲಕ ನಿಮ್ಮೊಳಗಿರುವ ಛಾಯಾಚಿತ್ರಗ್ರಾಹಕನನ್ನು ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಅಗತ್ಯವಿರುವ ಛಾಯಾಚಿತ್ರಗಾರನನ್ನಾಗಿ ರೂಪಿಸಿಕೊಳ್ಳುವ ಹೊಣೆ ನಿಮ್ಮ ಮೇಲಿದೆ..
ಹಾಗಾಗಿ, ಹ್ಯಾಪಿ ಫೊಟೋಗ್ರಾಫಿ ಟೈಮ್!

– ಮಿಥುನ್ ಮೊಗೇರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ