Web special; ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ “ವಂಡರ್ ಗರ್ಲ್ “ ಎಂಬ ಬಾಲಕಿಯ ವಿಡಿಯೋ!

ಸುಹಾನ್ ಶೇಕ್, Aug 3, 2019, 5:30 PM IST

ಸಾಧನೆಗೆ ವಯಸ್ಸು ಬೇಡ ಮನಸ್ಸು ಬೇಕು. ಈ ಮಾತಿಗೆ ಪುಷ್ಟಿಯಾಗಿ ನಿಲ್ಲುವ ಎಷ್ಟೋ ಸಾಧಕರ ಯಶೋಗಾಥೆಯನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ ಮತ್ತು ಅನುಸರಿಸುವ ಒಂದು ಪುಟ್ಟ ಪ್ರಯತ್ನ ಮಾಡಿದ್ದೇವೆ ಅಲ್ವಾ ?..

ಸಾಧನೆ ಎಲ್ಲರಿಂದ ಸಾಧ್ಯ.ಅದಕ್ಕೆ ಪೂರಕವಾಗುವ ಪ್ರಯತ್ನ ನಮ್ಮದಾಗ ಬೇಕು ಅಷ್ಟೆ. ಹರಿಯಾಣದ ಹದಿನಾಲ್ಕರ ಪುಟ್ಟ ಪೋರಿ ನಾವು ನೀವು ಅಂಗನವಾಡಿಯ ಹೊಸ್ತಿಲು ದಾಟಿ ಒಂದೊಂದೆ ಅಕ್ಷರಗಳನ್ನು ಜೋಡಿಸಿ ಪದಗಳನ್ನು ಬರೆಯುತ್ತಿದ್ದ ಸಮಯದಲ್ಲಿ ಈ ಹುಡುಗಿ ಅರ್ಥವಾಗದ ಇಂಗ್ಲಿಷ್ ಪದಗಳನ್ನು ಆಸಕ್ತಿಯಿಂದ ಆಲಿಸುತ್ತಿದ್ದಳು. ಅಂದಿನ ಅವಳ ಆ ಆಸಕ್ತಿಯೇ ಇಂದು ಅವಳನ್ನು ಎಲ್ಲರೂ ತಿರುಗಿ ಶಹಬ್ಬಾಸ್ ಹೇಳುವಂತೆ ಮಾಡಿದ್ದಾಳೆ ಹರಿಯಾಣದ ಮಲ್ಪುರ್ ಗ್ರಾಮದ ಸಮಾಲಕದ ಜಾಹ್ನವಿ ಪನ್ವಾರ್.

ಬಾಲ್ಯದಲ್ಲೇ ಚಿಗುರಿದ ಸಾಧನೆ : ಜಾಹ್ನವಿಯನ್ನು ಅಂಗನವಾಡಿಗೆ ಸೇರಿಸದೆ ನೇರವಾಗಿ ಯುಕೆಜಿಗೆ ದಾಖಲು ಮಾಡಿದ ತಂದೆ ಬ್ರಿಜ್ ಮೋಹನ್ ಹಲವಾರು ವಿಷಯಗಳನ್ನು ಇಂಗ್ಲಿಷ್ ನಲ್ಲೆ ಓದಿಸುವುದು, ಪರಿಚಯಿಸುವುದನ್ನು ಮಾಡುತ್ತಿದ್ದರು. ಜಾಹ್ನವಿ ಪುಟ್ಟ ವಯಸ್ಸಿನಿಂದಲೇ ಇದನ್ನೆಲ್ಲ ಅರಿಯುತ್ತಾಳೆ, ಬೆಳೆಯುತ್ತಾಳೆ. ಇಂಗ್ಲಿಷ್ ಶಬ್ದಗಳ ಪರಿಚಯವನ್ನು ಮಾಡಿಕೊಳ್ಳುತ್ತಾಳೆ. ಜಾಹ್ನವಿ ಉತ್ತಮ ಅಂಕಗಳನ್ನು ಪಡೆಯುತ್ತಾಳೆ. ವಿಶೇಷವಾಗಿ ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಸಾಧಿಸುತ್ತಾಳೆ. ಇವಳ ವಿಶೇಷ ಪರಿಣತಿಯನ್ನು ಮನಗಂಡ ಶಾಲಾ ಮ್ಯಾನೇಜ್ ಮೆಂಟ್ ಜಾಹ್ನವಿಗೆ ಒಂದೇ ತರಗತಿಯಲ್ಲಿ ಎರಡು ವರ್ಷದ ಪರೀಕ್ಷೆಯನ್ನು ಬರೆಯಲು ಅವಕಾಶ ಕಲ್ಪಿಸುತ್ತದೆ. ಇಲ್ಲಿಂದ ಇವಳ ಉಮೇದಿಗೆ ನಾಲ್ಕು ರೆಕ್ಕೆಯ ಶಕ್ತಿ ಬಂದ ಹಾಗೆ ಆಗುತ್ತದೆ.

ಜಾಹ್ನವಿ ಕಲಿಯುತ್ತಿದ್ದ ಶಾಲಾ ಶಿಕ್ಷಕರು ಹೆಚ್ಚಾಗಿ ಬಳಕೆ ಮಾಡುತ್ತಿದ್ದದ್ದು ಹಿಂದಿ ಮತ್ತು ಸ್ಥಳೀಯ ಭಾಷೆ ಹರಿಯಾನ್ವಿ.ಅದೆಲ್ಲವನ್ನೂ ಜಾಹ್ನವಿ ಕಲಿಯುತ್ತಾ ಸಾಗುತ್ತಾಳೆ.ಅದೊಂದು ದಿನ ಜಾಹ್ನವಿ ತನ್ನ ಅಪ್ಪ ಅಮ್ಮನ ಜೊತೆ ಕೆಂಪು ಕೋಟೆಗೆ ಹೋಗಿದ್ದಾಗ ಅಲ್ಲಿ ಕಂಡ ವಿದೇಶಿ ಯಾತ್ರಿಕರಿಗೆ ಇಂಗ್ಲಿಷ್ ಭಾಷೆಯಲ್ಲಿ ಸ್ಪಷ್ಟ ಉಚ್ಛಾರಣೆಯಲ್ಲಿ ಆ ಸ್ಥಳದ ವೈಶಿಷ್ಟ್ಯವನ್ನು ಹೇಳುತ್ತಾಳೆ.ತನ್ನ ಮಗಳು ಸಾಮಾನ್ಯಳಲ್ಲ ಅವಳನ್ನು ಬೆಂಬಲಿಸಿದ್ರೆ ಅವಳು ಮುಂದೊಂದು ದಿನ ಸಾಧನೆ ಮಾಡುತ್ತಾಳೆ ಅನ್ನುವುದನ್ನು ಮನಗಂಡ ತಂದೆ ಆ ದಿನದಿಂದಲೆ ಮಗಳ ಭಾಷಾ ಜ್ಙಾನಕ್ಕೆ ಬೆಂಬಲವಾಗಿ ನಿಲ್ಲುತ್ತಾರೆ.

ಕಲಿಕೆಗೆ ಜೊತೆಯಾಯಿತು ಅಪ್ಪನ ಆಸರೆ:  ಜಾಹ್ನವಿಯ ತಂದೆ ಬ್ರಿಜ್ ಮೋಹನ್ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕ. ತಾಯಿ ಗೃಹಿಣಿ. ಇಂಗ್ಲಿಷ್ ನಲ್ಲಿ ಇನ್ನು ಮುಂದೆ ಸಾಗಬೇಕು ಅನ್ನುವ ಮಗಳ ಆಸಕ್ತಿಗೆ ತಂದೆ ಮೊಬೈಲ್ ನಲ್ಲಿ ಬಿಬಿಸಿ ಸುದ್ಧಿ ವಾಹಿನಿಯ ವೀಡೀಯೋ ಕ್ಲಿಪಿಂಗ್ ಗಳನ್ನು ಹಾಕಿಕೊಟ್ಟಿರುತ್ತಿದ್ದರು. ಇದನ್ನು ಗಂಟೆಗಟ್ಟಲೆ ನೋಡುತ್ತಾ ಕೂರುವ ಜಾಹ್ನವಿಯೊಳಗೆ ಆದಾಗಲೇ  ಒಬ್ಬಳು ಆ್ಯಂಕರ್ ಆಗುವ ಕನಸು ಹುಟ್ಟಿಕೊಂಡಿತ್ತು. ಬಿಬಿಸಿಯಲ್ಲಿ ಬರುವ ಉಚ್ಚಾರಣೆಯನ್ನು ಸ್ಪಷ್ಟವಾಗಿ ಕಲಿತ ಜಾಹ್ನವಿ ಸಮರ್ಥವಾಗಿ ಬ್ರಿಟಿಷ್ ಭಾಷೆಯ ಶೈಲಿಯಲ್ಲಿ ಮಾತನಾಡುವುದನ್ನು ಕಲಿಯುತ್ತಾಳೆ. ನಂತರ ಬ್ರಿಜ್ ಮೋಹನ್ ಜಾಹ್ನವಿಯನ್ನು ಭಾಷಾಶಾಸ್ತ್ರಜ್ಞೆ ರೇಖಾರಾಜ್ ಬಳಿ ಕಳುಹಿಸಿ ಕೊಡುತ್ತಾರೆ.ರೇಖಾರಾಜ್ ಅವರಿಂದ ವಿವಿಧ ಭಾಷಾ ಶೈಲಿಯ ಶಬ್ದ ಸ್ಪಷ್ಟತೆಯನ್ನು ಬಹು ಬೇಗನೆ ಕಲಿಯುತ್ತಾಳೆ ಜಾಹ್ನವಿ.

ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು:

ಇಂಗ್ಲೀಷ್ ಭಾಷೆಯಲ್ಲಿ ‌ಪರಿಣತಿ ಹೊಂದಿದ ಮೇಲೆ ಜಾಹ್ನವಿಗೆ ಜಗತ್ತಿನ ಬೇರೆ ಬೇರೆ ಭಾಷೆಯಲ್ಲಿ ಪರಿಣತಿ ಹೊಂದಬೇಕೆನ್ನುವ ಆಸಕ್ತಿ ಹುಟ್ಟುತ್ತದೆ. ಅದರಂತೆ ತಂದೆ ಬ್ರಿಜ್ ಮೋಹನ್ ಆನ್ಲೈನ್ ನಲ್ಲಿ ಅಮೇರಿಕಾ ಹಾಗೂ ಲಂಡನ್ ಭಾಷಾ ಉಚ್ಚಾರಣೆಯ ಕುರಿತ ತರಬೇತಿಗೆ ಒಗ್ಗಿಕೊಳ್ಳುವ ಹಾಗೆ ಮಾಡುತ್ತಾರೆ. ಮುಂದೆ ಜಾಹ್ನವಿ ಜಗತ್ತಿನ ಎಂಟು ಭಾಷೆಯನ್ನು ಕಲಿಯುತ್ತಾಳೆ‌ ಕಲಿಯುವುದು ಮಾತ್ರವಲ್ಲ,ಅಮೇರಿಕಾ ,ಬ್ರಿಟಿಷ್, ಜಪಾನೀಸ್, ಸ್ಕಾಟ್ ಲ್ಯಾಂಡ್,ಫ್ರೆಂಚ್ ಜನರು ಉಚ್ಚಾರಿಸುವ ಹಾಗೆ ಜಾಹ್ನವಿ ಸ್ಪಷ್ಟವಾಗಿ ಉಚ್ಚಾರಣೆ ಮಾಡುವ ಮೂಲಕ ದಾಖಲೆ ಬರೆಯುತ್ತಾಳೆ. ತನ್ನ ಒಂಬತ್ತನೇ ವಯಸ್ಸಿನಲ್ಲಿ ಜಾಹ್ನವಿ ಎಲ್ಲಾ ಕಡೆಯೂ ‘ವಂಡರ್ ಗರ್ಲ್’ ಆಗಿ ಮಿಂಚುತ್ತಾಳೆ. ರಾಷ್ಟ್ರಪತಿಯಿಂದ ‘ವಂಡರ್ ಗರ್ಲ್’‌ ಬಿರುದನ್ನು ಪಡೆಯುವ ಮೂಲಕ ಅತ್ಯಂತ ಸಣ್ಣ ವಯಸ್ಸಿನಲ್ಲಿ ವಂಡರ್ ಗರ್ಲ್ ಮನ್ನಣೆ ಪಡೆದವಳು ಎಂಬ ಹೆಗ್ಗಳಿಕೆಗೆ ಪಾತ್ರಗಳಾಗುತ್ತಾಳೆ. ಆ್ಯಂಕರ್ ಆಗಿ ಕಾಣಬೇಕಾದ ಕನಸು ಕೂಡ ಸಾಕಾರಗೊಳ್ಳುತ್ತದೆ. ಸಿ.ಎನ್.ಎನ್ ಹಾಗೂ ಬಿಬಿಸಿ ವಾಹಿನಿಯಲ್ಲಿ ಆ್ಯಂಕರ್ ಆಗಿ ಕಾಣಿಸಿಕೊಳ್ಳುವ ಮೂಲಕ ಜಗತ್ತಿನಾದ್ಯಂತ ಅಚ್ಚರಿ ಮೂಡಿಸುತ್ತಾಳೆ. ಸೂಪರ್ 30ಯ‌ ಸ್ಥಾಪಕ ಆನಂದ್ ಕುಮಾರ್ ಇವಳನ್ನು ತನ್ನ ಸಂಸ್ಥೆಯಲ್ಲಿ ನೇರವಾಗಿ ವಿದ್ಯಾರ್ಥಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.

ಜಾಹ್ನವಿ ಜಗತ್ತಿನ ಎಂಟು ಭಾಷೆಯಲ್ಲಿ ಮಾಸ್ಟರ್ಸ್‌ ಮಾಡಿದ್ದಾಳೆ.ಇನ್ನೂ ಮುಂದೆಯೂ ಬೇರೆ ಭಾಷೆಯಲ್ಲಿ ಮಾಡುವ ಇರಾದೆ ಹೊಂದಿದ್ದಾಳೆ. ಹದಿನಾಲ್ಕರ ಈ ಪೋರಿ ಐಎಎಸ್‌ ಪರೀಕ್ಷೆಗೆ ತಯಾರಿಯಾಗಲು ಬರುವ ಸಾವಿರಾರು ವಿದ್ಯಾರ್ಥಿಗಳಿಗೆ ಮತ್ತು ಆಫೀಸರ್ ಗಳಿಗೂ ಸ್ಪೂರ್ತಿದಾಯಕ ಮಾತುಗಳನ್ನು ಆಡಿ‌‌ ಅವರಲ್ಲಿ ಆತ್ಮಸ್ಥೈರ್ಯವನ್ನು ಮತ್ತು ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತಿದ್ದಾಳೆ. ತಾನು ಕೂಡ ಒಬ್ಬ ಐಎಎಸ್‌ ಆಫೀಸರ್ ಆಗಬೇಕು ಅನ್ನುವ ಕನಸು ಕಟ್ಟಿಕೊಂಡಿರುವ ಜಾಹ್ನವಿ ಆ ತಯಾರಿಯನ್ನು ಮಾಡುತ್ತಿದ್ದಾಳೆ.

ಜಾಹ್ನವಿ ಪನ್ವಾರ್ ಸ್ಪೂರ್ತಿದಾಯಕ ಮಾತಿನ ವೀಡಿಯೋಗಳು ಯೂಟ್ಯೂಬ್ ನಲ್ಲಿ ಜಗತ್ತಿನ ನಾನಾ ಭಾಗಕ್ಕೆ ತಲುಪಿ‌‌ ಸದ್ದು ಮಾಡಿದೆ. “ವಂಡರ್ ಗರ್ಲ್ ಜಾಹ್ನವಿ” ಅನ್ನುವ  ತನ್ನದೆ ಯೂಟ್ಯೂಬ್ ಚಾನೆಲ್ ಹೊಂದಿದ್ದಾಳೆ.ಕವರ್ ಸಾಂಗ್ಸ್ ಗಳನ್ನು ಹಾಡುತ್ತಾಳೆ. ಪುಸ್ತಕವನ್ನೂ ಬರೆದಿದ್ದಾಳೆ.ತನ್ನ ಹದಿನಾಲ್ಕರ ವಯಸ್ಸಿನಲ್ಲಿ ಈ ಜಾಹ್ನವಿ ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಎರಡನೇ ವರ್ಷದ ಬಿ.ಎ ಪದವಿಯನ್ನು ಮಾಡುತ್ತಿದ್ದಾಳೆ. ನಾವು ನೀವೂ ಆಗಿದ್ರೆ ಈ ವಯಸ್ಸಿನಲ್ಲಿ ಎಂಟನೇ ತರಗತಿಯಲ್ಲಿ ಇರುತ್ತಾ ಇದ್ದೀವಿ..! ಈಗ ಹೇಳಿ ಸಾಧನೆಗೆ ವಯಸ್ಸು ಬೇಡ, ಮನಸ್ಸು ಬೇಕು ಅನ್ನುವುದು ನಿಜ ಅಲ್ವಾ..?

 

.ಸುಹಾನ್ ಶೇಕ್

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ