ಇದು ಝೋಮ್ಯಾಟೋ ಹಿಂದಿನ ಯಶೋಗಾಥೆ! ಟೊಮೇಟೊ ಹೆಸರೇ ಪ್ರೇರಣೆ

ಸುಹಾನ್ ಶೇಕ್, Aug 28, 2019, 7:00 PM IST

ಕೆಲವರಿಗೆ ತಾನು ಏನಾದರೂ ಮಾಡಬೇಕು ಅನ್ನುವುದು ಯಾವುದೋ ಒಂದು ಸನ್ನಿವೇಶ ಅಥವಾ ಘಟನೆ ನೋಡಿ ಸಾಧಿಸಬೇಕು ಅನ್ನುವ ತುಡಿತ ಹುಟ್ಟುತ್ತದೆ. ಇನ್ನೂ ಕೆಲವರ ಮೇಲೆ ಸಾಧಿಸಿದವರ ಪರಿಣಾಮ ಸಾಧಿಸಲು ಪ್ರೇರಣೆ ಆಗುತ್ತದೆ. ಇಂದು ನಾವು-ನೀವೂ  ನಮ್ಮ ಮನೆ ಬಾಗಿಲಿಗೆ ಆನ್ಲೈನ್ ನಲ್ಲಿ ಫುಡ್ ಆರ್ಡರ್ ಮಾಡಲು ಬಳಸುವ ‘ಝೋಮ್ಯಾಟೋ’ ಅನ್ನು ಕಟ್ಟಿ ಬೆಳೆಸಿರು ಇಬ್ಬರು ಸ್ನೇಹಿತರ ಯಶೋಗಾಥೆ ಇದು.

ಸಾಲು ನಿಂತ ಜನರನ್ನುಕಂಡಾಗ ಕಾಡಿದ ಆಲೋಚನೆ :

ಪಂಜಾಬಿನ  ದೀಪಿಂದರ್ ಗೋಯಲ್  ತಂದೆ-ತಾಯಿ ಇಬ್ಬರು ಶಿಕ್ಷಕರಾಗಿದ್ದು, ದೀಪಿಂದರ್ ಓದಿನಲ್ಲಿ ಚರುಕಾಗಿದ್ದರು. ದಿಲ್ಲಿಯ ಐಐಟಿಯಲ್ಲಿ‌ 2005 ರ ವರ್ಷದಲ್ಲಿ ಮ್ಯಾಕ್ಸ್ & ಕಂಪ್ಯೂಟಿಂಗ್ ನಲ್ಲಿ  ಎಂ.ಟೆಕ್  ಪದವಿ ಮುಗಿಸಿ ಬೇನ್ &ಕಂಪೆನಿಯಲ್ಲಿ ತನ್ನ ಮೊದಲ ಕೆಲಸವನ್ನು ಪ್ರಾರಂಭಿಸಿದರು.

ಪ್ರತಿದಿನ ದೀಪಿಂದರ್ ತನ್ನ ಕಂಪೆನಿಯ ಕೆಫೆಟಿರಿಯಾದಲ್ಲಿ ಏನಾದ್ರು ತಿನ್ನೋದಕ್ಕೆ ಹೋದಾಗ, ಕೆಫೆಟಿರಿಯಾದ ಮುಂದೆ ನೂರಾರು ಮಂದಿ ಮೆನು ಆಯ್ಕೆಯನ್ನು ನೋಡಲು ನಿಂತಿರುವ ದೃಶ್ಯವನ್ನು ನೋಡುತ್ತಾರೆ. ಇದು ದೀಪಿಂದರ್ ಮೇಲೆ ಪರಿಣಾಮ ಬೀರುತ್ತದೆ. ಹೀಗೆ ಸಾಲಾಗಿ ನಿಂತು ಕಾಯುವುದರಿಂದ ಸಮಯ ವ್ಯರ್ಥ ಆಗುತ್ತದೆ ಅನ್ನುವುದನ್ನು ಮನಗಂಡ ದೀಪಿಂದರ್ ತನ್ನ ಇಂಜಿನಿಯರಿಂಗ್ ತಲೆ ಉಪಯೋಗಿಸಿಕೊಂಡು ಅಲೋಚನೆಯೊಂದನ್ನು ಮಾಡುತ್ತಾರೆ. ಅಂದಿನ ಈ ಆಲೋಚನೆಯೇ ಇಂದು ಝೋಮ್ಯಾಟೋ ಇಷ್ಟು ದೊಡ್ಡ ಪ್ರಮಾಣದಲ್ಲಿ ‌ಜನಪ್ರಿಯವಾಗಲು ಕಾರಣವಾಯಿತು.

 

ದೀಪಿಂದರ್‌ ಮೊದಲು ಫುಡ್ ಲೆಟ್ ಅನ್ನುವ ವೈಬ್ ಸೈಟ್ ಅನ್ನ ಪ್ರಾರಂಭಿಸುತ್ತಾರೆ. ಗೆಳೆಯ ಪ್ರಸೂನ್ ಜೊತೆ ಸೇರಿಕೊಂಡು ರಚಿಸಿದ ಈ ವೈಬ್ ಸೈಟ್ ಕೆಲವೊಂದು ಸಮಸ್ಯೆಗಳಿಂದಾಗಿ ಹಿಂದೆ ಉಳಿಯುತ್ತದೆ.  ಪ್ರಸೂನ್ ಹೊಸ  ಉದ್ಯೋಗ ಹುಡುಕಿ ಮುಂಬಯಿ ಹೊರಟಾಗ ಫುಡ್ ಲೆಟ್ ವೈಬ್ ಸೈಟ್ ಅನ್ನು ದೀಪಿಂದರ್ 2008 ರಲ್ಲಿ ‘ಫುಡಿ ಬೇ’ಯನ್ನಾಗಿ ಪರಿವರ್ತಿಸುತ್ತಾರೆ.  ಇವರ  ಆಲೋಚನೆಗೆ ಜೊತೆಯಾಗಿ ಸಾಥ್ ಕೊಟ್ಟವರು ಸ್ನೇಹಿತ ‌ಪಂಕಜ್ ಚಡ್ಡಾ.  ಫುಡಿ ಬೇ ನಗರದಲ್ಲಿರುವ ಜನಪ್ರಿಯ ರೆಸ್ಟೋರೆಂಟ್ ಗಳ ಮೆನು ಕಾರ್ಡ್‌ ಗಳನ್ನು ಸ್ಕ್ಯಾನ್ ಮಾಡಿ ಜನರಿಗೆ ವೇಗವಾಗಿ ರೆಸ್ಟೋರೆಂಟ್ ಮೆನುವಿನ ಆಯ್ಕೆಯನ್ನು ಸುಲಭವಾಗಿ ಕೈಗೆಟುಕುವ  ಹಾಗೆ ಮಾಡುತ್ತದೆ ಹಾಗೂ ಹೊಟೇಲ್ ಗಳ ಬಿಲ್,ರೆಸ್ಟೋರೆಂಟ್ ಇರುವ ಸ್ಥಳವನ್ನು ಸುಲಭವಾಗಿ ಹುಡುಕಿ ಗ್ರಾಹಕರನ್ನು ಸೆಳೆಯುವ ವೈಬ್ ಸೈಟ್ ಫುಡಿ ಬೇ  2009 ರ ವೇಳೆಗೆ ಬಹುಬೇಗನೆ ಜನಪ್ರಿಯವಾಗುತ್ತದೆ.

ಬ್ಯುಸಿನೆಸ್ ಗಾಗಿ ಕೆಲಸ ಬಿಡುವ ನಿರ್ಧಾರ : ಫುಡಿ ಬೇ ದಿನೇ ದಿನೇ ಹೆಚ್ಚು ಜನಪ್ರಿಯವಾಯಿತು. ಈ ನಡುವೆ  ಬಂಡವಾಳ ಹೂಡಿಕೆಯ ಅವಶ್ಯ ಇದ್ದ ಸಮಯದಲ್ಲಿ ದೀಪಿಂದರ್ ಹೆಂಡತಿಗೆ ದಿಲ್ಲಿ ಐಐಟಿಯಲ್ಲಿ ಕೆಲಸ ಸಿಗುತ್ತದೆ.  ಹೆಂಡತಿಯ ಆರ್ಥಿಕ ಸಹಾಯದಿಂದ,ತನ್ನ ಉದ್ಯಮವನ್ನು ಇನ್ನಷ್ಟು ವಿಸ್ತಾರಗೊಳಿಸುವ ನಿಟ್ಟಿನಲ್ಲಿ ಕೈಯಲ್ಲಿದ್ದ ಕೆಲಸವನ್ನು ಬಿಟ್ಟು ತಮ್ಮ ಉದ್ಯಮವನ್ನು ಬೆಳೆಸುವ ನಿರ್ಧಾರ ಮಾಡುತ್ತಾರೆ ಪಂಕಜ್ ಚಡ್ಡಾ ಹಾಗೂ ದೀಪಿಂದರ್.  ನಿರಂತರವಾಗಿ ಫುಡಿ ಬೇ ಜನರ ಮನಸ್ಥಿತಿಯನ್ನು ಅರಿತುಕೊಂಡು ತಕ್ಕುದಾದ ಆಲೋಚನೆಯನ್ನು ಮಾಡಿ‌ ಪರಿಶ್ರಮದಿಂದ ಕಾರ್ಯ ನಿರ್ವಹಿಸುತ್ತದೆ.

ಝೋಮ್ಯಾಟೋಹೆಸರು ಬಂದದು ಹೀಗೆ :

2010 ರಲ್ಲಿ ದೀಪಿಂದರ್ ತನ್ನ ಫುಡಿ ಬೇಯನ್ನು ಝೋಮ್ಯಾಟೋ ಬದಲಾಯಿಸುತ್ತಾರೆ. ಈ ಹೆಸರು ಹುಟ್ಟಿದ್ದರ ಹಿಂದೆ ಎರಡು ಕಾರಣಗಳಿದ್ದವು ಮುಖ್ಯವಾಗಿ ದೀಪಿಂದರ್ ಗೆ ತನ್ನ ಸಂಸ್ಥೆಯ ಹೆಸರು ತಿನ್ನುವ ವಸ್ತುವಿಗೆ ಹಾಗೂ ಸಣ್ಣದಾಗಿ ನೆನಪಿರುವು ದಾಗಿರಬೇಕು ಅನ್ನುವುದಿತ್ತು. ಆದ್ದರಿಂದಲೆ ಟೊಮೇಟೋ ಇದ್ದ ಹಾಗೆ ಸ್ವಲ್ಪ ಬದಲಾಯಿಸಿ ಸುಲಭವಾಗಿ ನೆನಪಲಿ ಉಳಿಯುವ ಹಾಗೆ ಝೋಮ್ಯಾಟೋ ಎಂದು ಇಟ್ಟರು. ಹಾಗೂ ಇ- ಕಾರ್ಮಸ್‌ ವೈಬ್ ಸೈಟ್ ‘ಇ – ಬೇ’ ಹೆಸರಿಗೆ ಹೋಲಿಕೆ ಆಗುವುದರಿಂದ ತನ್ನ ವೈಬ್ ಸೈಟಿನ ಹೆಸರನ್ನು ಬದಲಾಯಿಸುತ್ತಾರೆ.

ಬೆಳೆದು ನಿಂತ ಹಾದಿ :

ಝೋಮ್ಯಾಟೋ ಜನಪ್ರಿಯತೆಯಿಂದ ಉದ್ಯಮಿಗಳು ಬಂಡವಾಳ ಹೊಡಿಕೆ ಮಾಡಲು ಪ್ರಾರಂಭಿಸುತ್ತಾರೆ. ಬಹು ಮುಖ್ಯವಾಗಿ ಝೋಮ್ಯಾಟೋ ಜೊತೆ ಒಂದು ಮಿಲಿಯನ್ ಹೂಡಿಕೆಯನ್ನು ಉದ್ಯಮಿ ಸಂಜಿವ್ ಬೀಚಾಂದನಿ ಮಾಡುತ್ತಾರೆ. ಇಲ್ಲಿಯಿಂದ ಝೋಮ್ಯಾಟೋ ವಿಸ್ತಾರ ಇನ್ನಷ್ಟು ಬೆಳೆಯುತ್ತದೆ. 2012 ರಲ್ಲಿ ಝೋಮ್ಯಾಟೋ ‌ತನ್ನ ಆನ್ಲೈನ್ ಫುಡ್ ಡೆಲಿವರಿ ಆ್ಯಪ್ ಅನ್ನು ಬಿಡುಗಡೆ ಮಾಡುತ್ತದೆ. ದಿಲ್ಲಿ ಎನ್.ಸಿ.ಆರ್ ನಲ್ಲಿ ಈ ಪ್ರಕ್ರಿಯೆಗೆ ಭರ್ಜರಿ ಸ್ಪಂದನೆ ಸಿಗುತ್ತದೆ. ಇಲ್ಲಿಂದ ಪ್ರಾರಂಭವಾದ ಝೋಮ್ಯಾಟೋ ಯಶಸ್ಸಿನ ಪಯಣ ಮುಂದೆ ಇನ್ನೂ ವಿಸ್ತಾರಗೊಳ್ಳುತ್ತ ಹೋಯಿತು.

ಅದೇ ವರ್ಷದಲ್ಲಿ ಅರೇಬಿಕ್ ರಾಷ್ಟ್ರ ಯು.ಎ.ಇ ನಲ್ಲಿ ಝೋಮ್ಯಾಟೋ ತನ್ನ ವ್ಯಾಪಾರ ವಹಿವಾಟಿನ ಶಾಖೆ ಆರಂಭ ಮಾಡಿತ್ತು. ಭಾರತದಲ್ಲಿ ಪ್ರಮುಖ ನಗರವಾದ ಹೈದರಾಬಾದ್, ಮುಂಬಯಿ, ಕೋಲ್ಕತಾ, ಬೆಂಗಳೂರು ಚೆನ್ನೈ, ಮಣಿಪಾಲ್  ಸೇರಿದಂತೆ 19 ದೇಶದ 155 ನಗರದಲ್ಲಿ ಝೋಮ್ಯಾಟೋ ಸೇವೆ ಇಂದು ಸಕ್ರಿಯವಾಗಿದೆ. ಅಲ್ಲದೇ ಅಮೆರಿಕ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಕೆನಡಾ, ಚಿಲಿ,ಇಟಲಿ, ಲಿಬಿನಾನ್, ಬ್ರಿಜಿಲ್, ಮಲೇಷ್ಯಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾ,ಟರ್ಕಿ ಹಾಗೂ ಇತರ ಪ್ರಮುಖ ದೇಶದಲ್ಲಿ ಝೋಮ್ಯಾಟೋ ತನ್ನ ಸೇವೆಯನ್ನು ಹೊಂದಿದೆ.

ಸಾವಿರಾರು ಮಂದಿಗೆ ಉದ್ಯೋಗದ ವರ : ಇಂದು ಝೊಮ್ಯಾಟೋ ವಿಶ್ವದ ಯಶಸ್ವಿ ಉದ್ಯಮಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ. ಜಗತ್ತಿನ ನಾನಾ ಭಾಗದಲ್ಲಿ ಸಾವಿರಾರು ಮಂದಿಗೆ ಡೆಲಿವೆರಿ ಬಾಯ್ಸ್ ಗಳಾಗಿ ಝೊಮ್ಯಾಟೋ ಉದ್ಯೋಗವನ್ನು ನೀಡಿದೆ. ಭಾರತದಲ್ಲಿ ಅಂತೂ ಝೋಮ್ಯಾಟೋ ದಿಂದ ವಾರದಲ್ಲಿ 6 ರಿಂದ 10 ಸಾವಿರದವರೆಗೆ ದುಡಿಯುವವರು ಇದ್ದಾರೆ.ಕೆಲವರು ತಿಂಗಳಿಗೆ 30 ಸಾವಿರದವರೆಗೆ ದುಡಿಯುತ್ತಿದ್ದಾರೆ.

 ಕಂಪೆನಿ ಕಟ್ಟಲು ಬೀದಿ ಬದಿಯ ಅಲೆದಾಟ: ಝೋಮ್ಯಾಟೋ ಬಗ್ಗೆ ಜನಸಾಮಾನ್ಯರಿಗೆ ಆರ್ಥ ಆಗುವ ನಿಟ್ಟಿನಲ್ಲಿ ಹಳ್ಳಿಯ ಭಾಗದಲ್ಲಿ ಅಲ್ಲಿನ ಆಹಾರ ಕ್ರಮ ಹಾಗೂ ಪದ್ಧತಿಯ ಬಗ್ಗೆ ದತ್ತಾಂಶಗಳನ್ನು ಸಮಗ್ರವಾಗಿ ಸಂಗ್ರಹ ಮಾಡುವುದು ದೀಪಿಂದರ್ ಹಾಗೂ  ಪಂಕಜ್ ರಿಗೆ ಸವಾಲು ಆಗಿತ್ತು. ಯಾವುದೇ ನಗರದಲ್ಲಿ ಹೊಸ ಕಛೇರಿಯನ್ನು ಪ್ರಾರಂಭಿಸುವ ಮುನ್ನ ಅಲ್ಲಿಗೆ ತಮ್ಮ ತಂಡ ಒಂದು ತಿಂಗಳ ಮುಂಚಿತವಾಗಿ ಹೋಗಿ ಆ ಭಾಗದ ಜನರ ಆಹಾರ ಕ್ರಮ ಹಾಗೂ ಆಯ್ಕೆಯ ಬಗ್ಗೆ ಸಂಪೂರ್ಣವಾಗಿ ವಿಷಯವನ್ನು ಅಧ್ಯಯನ ಮಾಡಿಕೊಂಡು ಅಲ್ಲಿ ಕಂಪೆನಿಯ ಶಾಖೆಯನ್ನು ಆರಂಭಿಸಲು ಪ್ರಾರಂಭಿಸುತ್ತಿದ್ದರು. ಹೊರ ದೇಶಗಳಿಗೆ ಹೋಗಿ ಅಲ್ಲಿನ ರೆಸ್ಟೋರೆಂಟ್ ಗಳಿಗೆ ಮನದಟ್ಟು ಮಾಡುವುದು ಸವಾಲೇ ಆಗಿತ್ತು ಎನ್ನುತ್ತಾರೆ ದೀಪಿಂದರ್.

ಭಾರತದ ಮೊದಲ ಆನ್ಲೈನ್ ಫುಡ್ ಡೆಲಿವೆರಿ ಝೊಮ್ಯಾಟೋ ಇತ್ತೀಚಿನ ದಿನಗಳಲ್ಲಿ ನಾನಾ ಕಾರಣಗಳಿಂದ ಸುದ್ದಿಯಾಗುತ್ತಲೇ ಇದೆ.ತನ್ನ ಮೇಲೆ ಬಂದ ಆರೋಪಗಳಿಗೆ ಝೋಮ್ಯಟೋ ಸರಿಯಾದ ಉತ್ತರಗಳಿಂದ ಚಾಟಿ ಬೀಸಿದೆ.ಏನೇ ಇರಲಿ ಇಬ್ಬರು ಸ್ನೇಹಿತರು ಜೊತೆಗೂಡಿ ಸ್ಥಾಪಿಸಿದ ಸಣ್ಣ ಉದ್ಯಮ ಇಂದು ಜಗತ್ತು ತಿರುಗಿ ನೋಡುವ ಮಟ್ಟಕ್ಕೆ ಬೆಳೆದು ನಿಂತಿರುವುದು ಇವರ ಪರಿಶ್ರಮದ ಪರಿಣಾಮವಾಗಿ ಸಿಕ್ಕ ಪ್ರತಿಫಲ.

 

ಸುಹಾನ್ ಶೇಕ್

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ