ಸಂಖ್ಯೆಯಲ್ಲಿ ನಿಮ್ಮ ಭವಿಷ್ಯ

Team Udayavani, Jan 1, 2018, 7:14 AM IST

ನಿಮ್ಮ ಸಂಖ್ಯೆ ಯಾವುದು?
ಹುಟ್ಟಿದ ದಿನ + ತಿಂಗಳು + ಈ ವರ್ಷ = ನಿಮ್ಮ ಸಂಖ್ಯೆ

ಉದಾಹರಣೆ 1: ನಿಮ್ಮ ಹುಟ್ಟಿದ ದಿನ  ಆಗಸ್ಟ್‌ 19 ಆಗಿದ್ದರೆ, 19 + 8 + 2018. ಅಂದರೆ,  1+ 9 + 8 + 2 + 0 + 1 + 8 = 29. ನಿಮ್ಮ ಸಂಖ್ಯೆ 2+9=11. ಅಂದರೆ, 1+1= 2. ಕೊನೆಯಲ್ಲಿ ನಿಮ್ಮ ಸಂಖ್ಯೆ 2. 
ಉದಾಹರಣೆ 2: ನಿಮ್ಮ ಹುಟ್ಟಿದ ದಿನ ಏಪ್ರಿಲ್‌ 17 ಆಗಿದ್ದರೆ, 17 + 4+ 2018 ಅಂದರೆ, 1 + 7 + 4 + 2+0+1+8 = 23.
ನಿಮ್ಮ ಸಂಖ್ಯೆ 2 + 3 = 5. ನಿಮ್ಮ ಸಂಖ್ಯೆ 5 

1 ಉದ್ಯೋಗದಲ್ಲಿ ಪ್ರಗತಿ
2018 ನಿಮ್ಮ ಪಾಲಿಗೆ ಸಮೃದ್ಧವಾಗಿದೆ. ವ್ಯಾಪಾರ, ಉದ್ಯೋಗ, ಓದು ಹೀಗೆ ನಿಮ್ಮ ಕ್ಷೇತ್ರ ಯಾವುದೇ ಆದರೂ ಅದರಲ್ಲಿ ನಿರೀಕ್ಷಿತ ಪ್ರಗತಿ ಕಾಣುವಿರಿ. ಅಂದುಕೊಂಡ ಕೆಲಸಗಳು ಕೆಲವೊಮ್ಮೆ ವಿಳಂಬವಾದಂತೆ ಕಂಡರೂ ಕೊಂಚ ಪರಿಶ್ರಮಪಟ್ಟರೆ ಎಲ್ಲವೂ ಕೈಗೂಡುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುತ್ತದೆ. ಆರೋಗ್ಯದ ಬಗ್ಗೆ ಕೊಂಚ ಜಾಸ್ತಿ ಗಮನ ಕೊಡಿ. ಹಳೆಯ ಆರೋಗ್ಯ ಸಮಸ್ಯೆಗಳು ಮತ್ತೆ ನಿಮ್ಮನ್ನು ಕಾಡುವ ಸಾಧ್ಯತೆಗಳು ಇರುವುದರಿಂದ, ಜಾಗ್ರತೆ ಅಗತ್ಯ. ವಿದೇಶ ಪ್ರವಾಸದ ಯೋಗವೂ ನಿಮಗೆ ಒದಗಿ ಬರಲಿದೆ. ಒಟ್ಟಿನಲ್ಲಿ ಈ ವರ್ಷ 1ನೇ ಸಂಖ್ಯೆಯವರು ಎಲ್ಲದರಲ್ಲೂ ನಂಬರ್‌ ಒನ್‌ ಆಗಿ ಮೆರೆಯುವ ವರ್ಷ. ಒಳ್ಳೆಯ ಆಲೋಚನೆ, ಕೆಲಸ, ನಂಬಿಕೆಗಳು ನಿಮ್ಮನ್ನು ಕಾಪಾಡಲಿವೆ. 

2 ಕಂಕಣ ಕೂಡಿ ಬರಲಿದೆ                        
ನಿಮ್ಮ ಪಾಲಿಗೆ 2018 ಬಂಪರ್‌ ವರ್ಷ. ಮದುವೆಯಾಗಿಲ್ಲ ಎಂದು ಕೊರಗುತ್ತಿರುವವರಿಗೆ ಕಂಕಣ ಭಾಗ್ಯ ಬರಲಿದೆ. ಉದ್ಯೋಗದಲ್ಲಿ ಬಡ್ತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವವರು ಸ್ವಲ್ಪ ಜಾಸ್ತಿ ಪರಿಶ್ರಮ ವಹಿಸುವುದು ಅಗತ್ಯ. ವಿದೇಶದಲ್ಲಿ ಇರುವವರಿಗೆ ತಾಯ್ನಾಡಿಗೆ ಮರಳುವ ಅವಕಾಶ ಸಿಗುತ್ತದೆ. ದೀರ್ಘ‌ಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು 2018ರಲ್ಲಿ ಕೊಂಚ ಗುಣಮುಖರಾಗುತ್ತಾರೆ. ಹಳೆಯ ವ್ಯಾಜ್ಯಗಳು, ಕೋರ್ಟ್‌ ಕೇಸುಗಳಿಂದ ಬಿಡುಗಡೆ ಸಿಗುತ್ತದೆ. ಸಂಸಾರದಲ್ಲಿ ಏರುಪೇರು ಉಂಟಾಗಬಹುದು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಪರಸ್ಪರ ಬಗೆಹರಿಸಿಕೊಳ್ಳಿ. ಮೂರನೆಯವರ ಮಾತು ಕೇಳಿ ಉರಿಯುವ ಬೆಂಕಿಗೆ ತುಪ್ಪ ಸುರಿದುಕೊಳ್ಳಬೇಡಿ. ಕಾಯಕವೇ ಕೈಲಾಸ ಎಂಬುದು ನಿಮ್ಮ ಮೂಲ ಮಂತ್ರವಾಗಲಿ.

3 ಹಣಕಾಸಿನಲ್ಲಿ ಚೇತರಿಕೆ
ಈ ವರ್ಷ ಪೂರ್ತಿ ನಿಮ್ಮ ಮೇಲೆ ಧನಲಕ್ಷ್ಮಿಯ ಕೃಪಾಕಟಾಕ್ಷವಿರುತ್ತದೆ. ಸಾಲಗಾರರ ಕಾಟದಿಂದ ಮುಕ್ತಿ ಪಡೆಯುತ್ತೀರಿ. ನಿಮ್ಮಿಂದ ಹಣ ಪಡೆದವರಿಂದ ಹಣ ವಾಪಸ್‌ ಬರುತ್ತದೆ. ಮನೆ, ಚಿನ್ನ, ಪೀಠೊಪಕರಣಗಳ ಖರೀದಿಗೂ ಈ ವರ್ಷ ಯೋಗ ಒದಗಿ ಬರಲಿದೆ. ಆರೋಗ್ಯದಲ್ಲಿ ಮಿಶ್ರಫ‌ಲ. ವಿದ್ಯಾರ್ಥಿಗಳು ಅಧ್ಯಯನದ ಕಡೆಗೆ ಜಾಸ್ತಿ ಗಮನ ಹರಿಸಬೇಕು. ಉದ್ಯೋಗಿಗಳು ಬಾಸ್‌ನ ಮೆಚ್ಚುಗೆಗೆ ಪಾತ್ರರಾಗುತ್ತೀರಿ. ಕಚೇರಿಯ ಕಿರಿಕಿರಿ ವಾತಾವರಣ ನಿಮ್ಮ ನೆಮ್ಮದಿ  ಕೆಡಿಸಬಹುದು. ತಲೆ ಕೆಡಿಸಿಕೊಳ್ಳದೆ ನೀವು ನಿಮ್ಮ ಪಾಡಿಗೆ ಇದ್ದು ಬಿಡಿ. ಹಣದ ಹರಿವು ಚೆನ್ನಾಗಿರುವುದರಿಂದ ಕೈಲಾಗದವರಿಗೆ ಸಹಾಯ ಮಾಡಿ. ಒಳ್ಳೆಯ ಕೆಲಸಗಳನ್ನು ಮಾಡುತ್ತಾ, ಸತ್ಯದಿಂದ ಇರಿ. ವಿದೇಶ ಪ್ರವಾಸದ ಯೋಚನೆಯನ್ನು ಮುಂದಕ್ಕೆ ದೂಡಿದರೆ ಉತ್ತಮ. 

4 ಅತಿಯಾಸೆಗೆ ಕಡಿವಾಣ ಹಾಕಿ
ಈ ವರ್ಷ ನಿಮಗೆ ನಿರೀಕ್ಷಿತ ಫ‌ಲ ಕೊಡಲಿದೆ. ನೀವು ಅಂದುಕೊಂಡ ಕೆಲಸಗಳೆಲ್ಲವೂ ಸಲೀಸಾಗಿ ಆಗುತ್ತದೆ. ಉನ್ನತ ವ್ಯಾಸಂಗಕ್ಕೆ, ವಿದೇಶ ಪ್ರವಾಸ ಮಾಡುವ ಯೋಗವಿದೆ. ವಾಹನ ಖರೀದಿಗೆ ಉತ್ತಮ ವರ್ಷ. ಪ್ರೇಮಿಗಳಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಹಣಕಾಸಿನ ವಿಷಯದಲ್ಲಿ ಜಾಗ್ರತೆ ವಹಿಸಿ. ಹಣ ಹೂಡಿಕೆ, ಚೀಟಿ ವ್ಯವಹಾರ, ಷೇರು ವ್ಯವಹಾರದಿಂದ ಧನಹಾನಿ ಆಗಬಹುದು. ಚಿಂತಿಸುವ ಅಗತ್ಯವಿಲ್ಲ. ಫೈನಾನ್ಷಿಯಲ್‌ ಅಸಿಸ್ಟೆನ್ಸ್‌ ಪಡೆದುಕೊಂಡು ಮುಂದಿನ ಹೆಜ್ಜೆ ಇಡಿ. ಅತಿಯಾದ ಆಸೆಯಿಂದ ಸಾಲ ಮಾಡಿಕೊಳ್ಳಲೇಬೇಡಿ. ಮುಂದೆ ಸಾಲವೇ ಶೂಲವಾಗಿ ಕಾಡಬಹುದು. ಅಗತ್ಯವಿದ್ದಷ್ಟು ಮಾತ್ರ ಖರ್ಚು ಮಾಡಿ. ಬರಹಗಾರರಿಗೆ, ಪುಸ್ತಕ ವ್ಯಾಪಾರಿಗಳಿಗೆ ಶುಭ ಫ‌ಲ. ಯಾವುದಾದರೂ ಹೊಸ ಸಾಹಸಕ್ಕೆ ಮುಂದಾಗಲು ಇಚ್ಛಿಸುವವರಿಗೆ ಇದು ಸುಸಮಯ. ದಿಟ್ಟ ಹೆಜ್ಜೆಯನ್ನಿಡಿ. ಎಲ್ಲಾ ಒಳ್ಳೆಯ ಶಕ್ತಿಗಳು ನಿಮ್ಮನ್ನು ಕಾಪಾಡಲಿವೆ. 

5 ರಾಜಯೋಗ ಪ್ರಾಪ್ತಿ
ಸೂರ್ಯನಿಗೆ ಮೋಡ ಮರೆಯಾಗಿದ್ದರೂ, ಆತ ಶಕ್ತಿ ಕಳೆದುಕೊಳ್ಳುವುದಿಲ್ಲ. ಹಾಗೆಯೇ ನೀವು ಈ ವರ್ಷ ಸೂರ್ಯನಂತೆ ಪ್ರಜ್ವಲಿಸುವಿರಿ. ಹಳೆಯ ಕಷ್ಟ ಕಾರ್ಪಣ್ಯಗಳ ಮೋಡ ಸರಿದು ಮತ್ತೆ ಜೀವನದಲ್ಲಿ ಬೆಳಕು ಮೂಡಲಿದೆ. ಉದ್ಯೋಗದಲ್ಲಿ ಬದಲಾವಣೆ ಕಾಣುವಿರಿ. ನಿಮ್ಮಿಷ್ಟದ ಎಲ್ಲ ಕೆಲಸಗಳೂ ಕೈಗೂಡಲಿವೆ. ಹೊಸ ಹೆಜ್ಜೆಯನ್ನಿಡಲು ಹಿಂಜರಿಕೆ ಬೇಡ. ನಿಮ್ಮ ಆಲಸ್ಯ, ಅಂಜಿಕೆಯ ಸ್ವಭಾವದಿಂದ ಒಳ್ಳೆಯ ಅವಕಾಶಗಳು ಕೈ ತಪ್ಪಿ ಹೋಗಿ ಬಿಡಬಹುದು. ಒಳ್ಳೆಯ ಅವಕಾಶಗಳು ಬಂದಾಗ ತೆರೆದ ಮನಸ್ಸಿನಿಂದ ಸ್ವಾಗತಿಸಿ. ಸ್ಥಿರತೆ ಮತ್ತು ಘನತೆಯೊಂದಿಗೆ ಮುಂದುವರಿಯಿರಿ. ಹಣಕಾಸಿನ ವಿಚಾರದಲ್ಲಿ ಪ್ರಗತಿ ಕಾಣುವಿರಿ. ಆರೋಗ್ಯದ ದೃಷ್ಟಿಯಿಂದ ವ್ಯಾಯಾಮಕ್ಕೆ ಆದ್ಯತೆ ಕೊಡಿ. ಪರವೂರಿನಲ್ಲಿ ಇರುವವರಿಗೆ ಸ್ವಂತ ಊರಿಗೆ ಮರಳುವ ಸುಯೋಗ. ಮನೆ ಖರೀದಿಸಲು, ನಿರ್ಮಿಸಲು ಸಕಾಲ. ನಿಮ್ಮನ್ನು ಪ್ರೀತಿಸುವ ಹೃದಯಗಳಿಗೆ ನೋವುಂಟು ಮಾಡಬೇಡಿ.

6 ತಾಳ್ಮೆಯೇ ಶ್ರೀರಕ್ಷೆ
ಗಡಿಬಿಡಿ, ಗಲಿಬಿಲಿ, ಮುಂಗೋಪಕ್ಕೆ ಈ ವರ್ಷ ಅವಕಾಶ ಮಾಡಿಕೊಡಬೇಡಿ. ವಾಚಾಳಿಗಳು ತಮ್ಮ ಮಾತಿನಿಂದಲೇ ಪೇಚಿಗೆ ಸಿಲುಕಿಕೊಳ್ಳುವ ಸಂಭವ ಹೆಚ್ಚಿದೆ. ತಾಳ್ಮೆ, ಸಮಾಧಾನ ನಿಮ್ಮನ್ನು ಕಾಪಾಡುವ ಶಕ್ತಿಗಳು. ರಾಜಕಾರಣಿಗಳಿಗೆ, ಪುಢಾರಿಗಳಿಗೆ ಈ ವರ್ಷ ಲಾಭದಾಯಕವಲ್ಲ. ವ್ಯಾಪಾರಸ್ಥರಿಗೆ ಆಯ-ವ್ಯಯದಲ್ಲಿ ಹೊಂದಾಣಿಕೆ ಕಂಡು ಬರಲಿದೆ. ವಿದ್ಯಾರ್ಥಿಗಳಲ್ಲಿ ಆಲಸ್ಯ ಸಲ್ಲ. ಪರಿಶ್ರಮದಿಂದ ಉದ್ಯೋಗದಲ್ಲಿ ಬಡ್ತಿ, ಮನ್ನಣೆ ಸಿಗಲಿದೆ. ದೂರದೂರಿಗೆ ಪ್ರವಾಸ ಮಾಡುವ ನಿಮ್ಮ ಕನಸು ನೆರವೇರಲಿದೆ. ಹೆತ್ತವರ ಹಾರೈಕೆಯಿಂದ ಈ ವರ್ಷ ಹಸನಾಗಲಿದೆ. ಸೌಂದರ್ಯ, ಸಿರಿವಂತಿಕೆ, ವಿಲಾಸಗಳ ಅಧಿಪತಿ ಶುಕ್ರ ನಿಮ್ಮ ಕೈ ಹಿಡಿಯಲಿದ್ದಾನೆ. ವಾಹನ ಚಲಾಯಿಸುವಾಗ ಜವಾಬ್ದಾರಿಯಿಂದ ಇರಿ. 

7 ನಡೆ ಮುಂದೆ, ನಡೆ ಮುಂದೆ
“ಆಗುವುದೆಲ್ಲಾ ಒಳ್ಳೆಯದಕ್ಕೆ’ ಎಂಬ ಮಾತಿನ ಮೇಲೆ ನಂಬಿಕೆ ಇಡಿ. ಈ ವರ್ಷ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ ತತ್‌ಕ್ಷಣ ಸಿಗದೆ ಹತಾಶೆ ಉಂಟಾಗಬಹುದು. ಆದರೆ, ಕುಗ್ಗದೆ ತಾಳ್ಮೆ ವಹಿಸಿ ಮುಂದೆ ಸಾಗಿದರೆ, ನಿರೀಕ್ಷಿಸದ ಅಚ್ಚರಿ ಕಾದಿರುತ್ತದೆ. ಧನಾತ್ಮಕ ಶಕ್ತಿ ಸಾಮರ್ಥ್ಯಗಳನ್ನು ನಿಮಗೊದಗಿಸುವ ಮಂಗಳ ನಿಮ್ಮನ್ನು ಆಳುತ್ತಿರುತ್ತಾನೆ. ಹೊಸ ವೃತ್ತಿ ಯೋಜನೆಗಳನ್ನು ಕೊಂಚ ನಿಧಾನಿಸಿ ಮುಂದಡಿ ಇಡಿ. ಲಕ್ಷ್ಮಿ ಕೃಪೆ ನಿಮ್ಮ ಮೇಲಿದೆ. ಆದರೂ, ಆಯ-ವ್ಯಯದ ಬಗ್ಗೆ ಲೆಕ್ಕ ಇಟ್ಟು ಖರ್ಚು ಮಾಡಿ. ತಾಳ್ಮೆ, ಸಂಯಮ, ಸಹನೆ ದೃಢವಾಗಿದ್ದರೆ ಎಲ್ಲವೂ ಶುಭ. ನಕಾರಾತ್ಮಕ ಯೋಚನೆಗಳು ಹತ್ತಿರ ಸುಳಿಯದಂತೆ ನೋಡಿಕೊಳ್ಳಿ. ಉದ್ಯೋಗ ಕ್ಷೇತ್ರವನ್ನು ಬದಲಿಸುವ ಯೋಚನೆ ಇದ್ದರೆ, ಯೋಚಿಸಿ ಹೆಜ್ಜೆ ಇಡಿ. 

8 ಯಶಸ್ಸು, ಶ್ರೇಯಸ್ಸು, ಅದೃಷ್ಟ
ಅಷ್ಟದಿಕ್ಕುಗಳಿಂದಲೂ ನಿಮಗೆ ಈ ವರ್ಷ ಒಳ್ಳೆಯದಾಗುತ್ತದೆ. ಹಾಗಂತ ಕೈ ಕಟ್ಟಿ ಕೂರಬೇಡಿ. ಅದೃಷ್ಟ ಒಲಿಯುವುದು ಪರಿಶ್ರಮಿಗಳಿಗೆ ಮಾತ್ರ ಎಂಬುದು ನೆನಪಿನಲ್ಲಿರಲಿ. ಆಸ್ತಿಪಾಸ್ತಿ, ಯಂತ್ರೋಪಕರಣ ಇತ್ಯಾದಿ ಕ್ಷೇತ್ರಗಳವರು ಎಚ್ಚರಿಕೆಯಿಂದ ವ್ಯವಹರಿಸಿ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಏಕಾಗ್ರತೆಯ ಕೊರತೆ ಎದುರಾಗಬಹುದು, ಆದರೆ ಹಠ ಬಿಡದೆ ಮುಂದುವರಿಯಿರಿ. ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಇನ್ನೊಬ್ಬರನ್ನು ತುಳಿಯುವ, ನೋಯಿಸುವ ಮನೋಭಾವದಿಂದ ನಿಮಗೇ ಮುಳುವಾಗಲಿದೆ. ಕುಟುಂಬದ, ಮಕ್ಕಳ ಜತೆಗೆ ಹೆಚ್ಚು ಸಮಯ ಕಳೆಯಿರಿ, ಜೀವನ ನೆಮ್ಮದಿಯದ್ದಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ ಸ್ವಲ್ಪ ಎಚ್ಚರಿಕೆಯಿಂದಿರಿ. ಯಶಸ್ಸು, ಶ್ರೇಯಸ್ಸು, ಅದೃಷ್ಟ ಕೈ ಹಿಡಿಯಲಿವೆ. ಸಂಗೀತಗಾರರು, ಕಲಾವಿದರು ಜನ ಮೆಚ್ಚುಗೆ ಪಡೆಯುವ ವರ್ಷ. 

9 ನಿಶ್ಚಿಂತೆಯಿಂದ ಇರಿ 
ಜೀವನದಲ್ಲಿ ಅಚ್ಚರಿಯುಂಟು ಮಾಡುವ ಚಮತ್ಕಾರಿ ಸಂಗತಿಗಳು ಘಟಿಸಲಿವೆ. ಜೀವನದ ಏಳು-ಬೀಳುಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಮನಸ್ಥಿತಿ ಬೆಳೆಸಿಕೊಳ್ಳಿ. ಯಶಸ್ಸುಗಳನ್ನು ಆನಂದಿಸಿ, ಸೋಲುಗಳೆದುರು ತಲೆಬಾಗಬೇಡಿ. ಯಶಸ್ಸು ಈ ವರ್ಷ ನಿಮ್ಮ ದಾರಿಯಲ್ಲಿದೆ, ನಿಶ್ಚಿಂತೆಯಿಂದ ಹಸನ್ಮುಖೀಯಾಗಿರಿ. ಉದ್ಯಮಿಗಳು ಹಣ ಹೂಡುವ ಮುನ್ನ ಹತ್ತು ಬಾರಿ ಯೋಚಿಸಿ. ಏನೇ ಆದರೂ ಲಾಭ ಇದ್ದೇ ಇದೆ. ಉದ್ಯೋಗಿಗಳು ನಿಮಗೆ ಸಂಬಂಧಿಸದ ವಿಷಯದಲ್ಲಿ ಮೂಗು ತೂರಿಸಬೇಡಿ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಉದ್ಯೋಗಸ್ಥರಿಗೆ ಬಡ್ತಿ ಹಾಗೂ ಉದ್ಯೋಗ ಬದಲಾವಣೆಗೆ ಅವಕಾಶ ಸಿಗಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಹೆಚ್ಚು ಶ್ರಮ ಹಾಕಿದರೆ ಯಶಸ್ಸಿನ ಬಾಗಿಲು ತೆರೆಯುತ್ತದೆ. ಪ್ರಣಯ ಪಕ್ಷಿಗಳು ಸಂಸಾರ ರಥವನ್ನೇರಲು ಸುಯೋಗ. ದೇಹದ ತೂಕ ಹೆಚ್ಚಬಹುದು, ವ್ಯಾಯಾಮದ ಕಡೆ ಗಮನ ಕೊಡಿ.  ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಸಿಗಲಿದೆ. 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಶ್ರೀ ಮಹಾವಿಷ್ಣುವಿನ ದಶಾವತಾರಗಳಲ್ಲಿ ಕೃಷ್ಣಾವತಾರಕ್ಕೆ ವಿಶಿಷ್ಟ ಮಹಣ್ತೀವಿದೆ. ಕೃಷ್ಣಾವತಾರಕ್ಕೆ ಹೋಲಿಸಿದರೆ ಇನ್ನಿತರ ಅವತಾರಗಳಲ್ಲಿ ದೇವರು ಸಾಮಾನ್ಯ...

  • ಎದೆ, ಹಣೆ, ಕಣ್ಣು, ಮನಸ್ಸು, ಮಾತು, ಕೈಗಳು ಪದಗಳು ಮತ್ತು ಮೊಣಕಾಲುಗಳನ್ನು ನೆಲಕ್ಕೆ ತಾಗಿಸಿ ನೆಲದಲ್ಲಿ ಉದ್ದಂಡ ನಮಸ್ಕಾರ ಮಾಡುವುದಕ್ಕೆ ಸಾಷ್ಟಾಂಗ ನಮಸ್ಕಾರ ಎನ್ನುತ್ತಾರೆ....

  • ಆಡಂಬರವಿಲ್ಲದ, ಶುದ್ದವಾದ ಭಕ್ತಿ ನಮ್ಮೊಳಗೆ ಹುಟ್ಟಬೇಕು. ಯಜ್ಞಮಾಡಿಯೇ ದೇವರನ್ನು ಸಂಪ್ರೀತಿಗೊಳಿಸುತ್ತೇನೆ ಎಂಬುದು ನಮ್ಮೊಳಗಿನ ಅಹಂ ಅಷ್ಟೆ. ಯಜ್ಞದಲ್ಲಿ...

  • ರಾಮಾಯಣದಲ್ಲಿ ಶ್ರೀರಾಮಚಂದ್ರ ಭರತನಿಗೆ ರಾಜ್ಯಭಾರವನ್ನು ಒಪ್ಪಿಸಿ ಹದಿನಾಲ್ಕು ಕಿವಿಮಾತನ್ನು ಹೇಳುತ್ತಾನೆ. ಆ ಹದಿನಾಲ್ಕು ಕಿವಿಮಾತುಗಳು ಇವತ್ತಿಗೂ ಪ್ರಸ್ತುತ....

  • ಅರಿ ಎಂದರೆ ಶತ್ರು ಎಂದರ್ಥ.ಈ ಆರು ವಿಧದ ಮನಸ್ಸಿನ ಭಾವಗಳು ನಮ್ಮ ಬದುಕಿಗೆ ಶತ್ರುವಾಗಿರುವುದರಿಂದ ಇವನ್ನು ಅರಿಷಡ್‌ ವರ್ಗ ಅಂದರೆ ಆರು ವೈರಿಗಳು ಎಂದು ಪರಿಗಣಿಸಲಾಗಿದೆ....

ಹೊಸ ಸೇರ್ಪಡೆ