ಜಾತ್ರೆಯಲ್ಲಿನ ಒಂದು “ಚಾಕೋಬಾರ್ ಕಥೆ”

Team Udayavani, Nov 13, 2019, 5:17 PM IST

ಆವಾಗೆಲ್ಲಾ ಊರಲ್ಲಿ ಜಾತ್ರೆ ಅಂದ್ರೆ ಅದೇನೋ ಸಂಭ್ರಮ. ನನ್ನ ಅಮ್ಮನ ಊರಲ್ಲಿ ಜಾತ್ರೆ ಮಾರ್ಚ್ ತಿಂಗಳಲ್ಲಿ. ಹಾಗಾಗಿ ರಜಾ ತಗೊಂಡು ಅಲ್ಲಿಗೆ ಹೋಗಿದ್ದೆ. ಜಾತ್ರೆ ಅಂದ ಮೇಲೆ ಸಂತೆಗಳು ,ಐಸ್ ಕ್ರೀಮ್ ಗಾಡಿಗಳನ್ನು ನೋಡೋದೇ ಒಂದು ಮಜಾ. ನಾನು ಜಾತ್ರೆಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದು ಇದನ್ನೇ. ದೇವಸ್ಥಾನಕ್ಕೆ ಹೋಗುವಾಗ ಮೊದಲು ಸ್ವಾಗತಿಸುವುದೇ ತರಹೇವಾರಿ ಅಂಗಡಿಗಳು. ನನ್ನ ಕಣ್ಣುಗಳು ಮನಸ್ಸು ಎರಡು ಸಹ ಅದರ ಮೇಲೆ.

ಆದ್ರೆ ದೇವರ ದರ್ಶನ ಆಗದೆ ಏನೊಂದು ಸಿಗಲಾರದು ಅಂತ ಅಮ್ಮನ ಅಪ್ಪಣೆ. ಅಬ್ಬಾ , ಮತ್ತೆ ಆದರೂ ಸಿಗುತ್ತಲ್ಲ ಅನ್ನೋ ಬಲವಾದ ನಂಬಿಕೆ. ಒಳಗೆ ಹೋದರು ಮನಸ್ಸೆಲ್ಲಾ ಹೊರಗೆ. ಯಾವಾಗ ಆ ಸುಂದರ ಬಳೆಗಳನ್ನು ತೊಡುತ್ತೇನೆ, ಯಾವಾಗ ತಂಪು ಐಸ್ ಕ್ರೀಂ ಹೊಟ್ಟೆ ಸೇರುತ್ತೆ ಅಂತ ಚಿಂತೆ. ದೇವರಲ್ಲಿ ಸಹ ಇದೇ ಪ್ರಾರ್ಥನೆ.

ಸರಿ, ದೇವರ ದರ್ಶನ ಆಯ್ತು. ಹೊರ ಬಂದಿದ್ದೆ ತಡ ಶುರುವಾಯಿತು ನನ್ನ ಬೇಡಿಕೆಗಳು. ಸರ, ಕ್ಲಿಪ್, ಬಳೆ, ಕಿವಿಯೋಲೆ, ಚಪ್ಪಲಿ ಮತ್ತೆ ಕೊನೆಗೆ ಐಸ್ ಕ್ರೀಂ. ಕೇಳಿದ್ದರಲ್ಲಿ ಕೆಲವನ್ನು ಅಮ್ಮ ಕೊಡಿಸಿದರು. ಇನ್ನು ಕೆಲವು ತಾತ ಕೊಡಿಸಿದರು. ಸರಿ, ಮನೆಗ್ ಹೋಗೋ ಸಮಯವಾಯ್ತು. ಇದಕ್ಕೆ ಕಾಯುತ್ತಿದ್ದೆ ನಾನು. ಯಾಕಂದ್ರೆ ಮಾವ ಚಾಕೋಬಾರ್ ಕೊಡಿಸ್ತೀನಿ ಅಂದಿದ್ರು.

ಐಸ್ ಕ್ರೀಂ ಗಾಡಿ ಹತ್ತಿರ ತಲುಪಿದ್ದೆ ತಡ ಬಾಯಲ್ಲಿ ನೀರು ಸುರಿಯೋಕೆ ಶುರು ಆಯ್ತು. ಅಂತೂ ನನ್ ಕೈಗೆ ಚಾಕೋಬಾರ್ ಸಿಕ್ತು.  ತಿನ್ನೋಕೆ ಅಂತ ಹೊರಟೆ. ಆದ್ರೆ ಅಜ್ಜಿ ಬಿಡಲಿಲ್ಲ. ನಡು ರಸ್ತೆಯಲ್ಲಿ ಬೇಡಮ್ಮ ಮನೆಗೆ ಹೋಗಿ ತಿನ್ನುವಂತೆ ಅಂದ್ರು. ಸರಿ ನಡಿಯೋಕೆ ರಾತ್ರಿ ಬೇರೆ. ಅದಕ್ಕೆ ಮಾವ ರಿಕ್ಷಾ ಮಾಡಿದ್ರು. ನನ್ ಚಾಕೋಬಾರ್ ಅಜ್ಜಿ ಚೀಲ ಸೇರಿತ್ತು. ಯಾವಾಗ ಮನೆ ತಲುಪುತ್ತೇನೆ ಅನ್ನೋ ಆತುರ.

ನನ್ನ ಕಷ್ಟಕಾಲ.. ರಿಕ್ಷಾ ಸಿಗೋವಾಗ್ಲೆ, ತಡ ಆಗಿತ್ತು ಮನೆ ತಲುಪಿದಾಗ ಅರ್ಧಗಂಟೆ ಆಗಿತ್ತು. ಇನ್ನೇಕೆ ತಡ ಚಾಕೋಬಾರ್  ತಿಂತಿನಿ ಅಂತ ಅಜ್ಜಿ ಹತ್ತಿರ ಹೇಳಿದೆ ಅವರು ಚೀಲಕ್ಕೆ ಕೈ ಹಾಕಿ ಪ್ಯಾಕೆಟ್ ಹೊರತೆಗೆದರು.

ದಪ್ಪಕ್ಕಿದ್ದ ಪ್ಯಾಕೆಟ್ ತೆಳು ಆಗಿತ್ತು. ಆಗ್ಲೇ ನಂಗೆ ಏನೋ ಸಂಶಯ ಶುರುವಾಗಿತ್ತು. ನೋಡಿದ್ರೆ ಚಾಕೋಬಾರ್ ಪೂರ್ತಿ ಕರಗಿ ಕಡ್ಡಿ ಮಾತ್ರ ಉಳಿದಿತ್ತು. ನನ್ನ ಕಣ್ಣಲ್ಲಿ ನೀರು ಅಜ್ಜಿ ಮುಖದಲ್ಲಿ

ತಪ್ಪಿತಸ್ಥ ಭಾವ . ಪರಿಪರಿಯಾಗಿ ನನ್ನಲ್ಲಿ ಕ್ಷಮೆ ಕೇಳಿದರು. ತುಂಬಾನೇ ನೊಂದುಕೊಂಡರು .ಎಲ್ಲವೂ ತನ್ನಿಂದಾಗಿ ಆಯ್ತು ಎಂದು , ನೂರು ಬಾರಿ ಹೇಳಿದ್ರು. ನನ್ನಮ್ಮ ನನ್ನ ಸಮಾಧಾನ ಪಡಿಸದೆ, ಅವರ ಅಮ್ಮನನ್ನು ಸಮಾಧಾನ ಮಾಡ್ತಾ ಇದ್ದರು. ನನಗಂತೂ ರಾತ್ರಿ  ಆಗಿದ್ದರಿಂದ ಮತ್ತು ಸಂತೆ ತಿರುಗಿ ದಣಿ ವಾಗಿದ್ದರಿಂದ, ಬಹುಬೇಗನೆ ನಿದ್ರಾದೇವಿ ಆವರಿಸಿದ್ದಳು. ಆದ್ದರಿಂದ ಅತ್ತು ರಂಪ ಮಾಡೋಕೆ ಆಗಲಿಲ್ಲ.

ಇವೆಲ್ಲ ಚಿಕ್ಕವಯಸ್ಸಿನ ಸಂಗತಿಗಳು..ಇವಾಗಲು ಸಹ ಐಸ್ಕ್ರೀಮ್ ಗಾಡಿ ಎಲ್ಲೇ ನೋಡಿದ್ರೂ ಅಜ್ಜಿ ಮತ್ತು ಕರಗಿಹೋದ ಚಾಕೋಬಾರ್ ನೆನಪಾಗುತ್ತೆ. ತುಟಿಯಲ್ಲಿ ಕಿರುನಗೆಯೊಂದು ಮೂಡುತ್ತೆ

ತೇಜಸ್ವಿನಿ ಆರ್. ಕೆ

ಎಸ್ ಡಿ ಎಂ ಕಾಲೇಜು, ಉಜಿರೆ

 


ಈ ವಿಭಾಗದಿಂದ ಇನ್ನಷ್ಟು

  • ತೆಲಂಗಾಣದಲ್ಲಿ ನಡೆದ ಯುವತಿಯ ಅತ್ಯಾಚಾರ-ಹತ್ಯೆ ಪ್ರಕರಣವು ದೇಶವನ್ನು ಬೆಚ್ಚಿ ಬೀಳಿಸಿದೆ. ನಿರ್ಭಯಾ ಪ್ರಕರಣದ ನಂತರ ದೇಶದಲ್ಲಿ ಎಷ್ಟೇ ಕಠಿಣ ಕಾನೂನು ತಂದರೂ...

  • ದೇಶದ ಪ್ರಮುಖ ಮೂರು ಖಾಸಗಿ ಟೆಲಿಕಾಂ ಆಪರೇಟರ್‌ಗಳಾದ ವೊಡಾಫೋನ್‌ ಐಡಿಯಾ ಲಿಮಿಟೆಡ್‌, ಭಾರ್ತಿ ಏರ್‌ಟೆಲ್‌, ರಿಲಯನ್ಸ್‌ ಜಿಯೋ ಇನ್ನು ದುಬಾರಿಯಾಗಲಿದೆ. ಡಿಸೆಂಬರ್‌...

  • ಹೆಣ್ಣಾಗಿ ಹುಟ್ಟಿದವರು, ಹೆಣ್ಣನ್ನು ಹೊತ್ತು-ಹೆತ್ತು ಬೆಳೆಸಿದವರು, ಹೆಣ್ಣನ್ನು ಗೌರವಿಸುವವರೆಲ್ಲರನ್ನೂ ಬೆಚ್ಚಿ ಬೀಳಿಸುವ ಭಯಾನಕ ಸುದ್ದಿಯದು. ಮನೆಯಿಂದ ಹೊರ...

  • ನನಗಿನ್ನೂ ನೆನಪಿದೆ. ಕೊಲಂಬೋದಲ್ಲಿ ಟಿ20 ಕ್ರಿಕೆಟ್‌ ನಡೆದಿತ್ತು. ಭಾರತ-ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯಕ್ಕೆ ನಾನೂ ಹೋಗಿದ್ದೆ. ಅಂದು ಶ್ರೀಲಂಕಾದ ಫ್ಯಾನ್‌ಗಳೆಲ್ಲ...

  • ಪೊಲೀಸರ ವಶದಲ್ಲಿರುವಾಗಲೇ ಪ್ರಾಣ ಕಳೆದುಕೊಳ್ಳುತ್ತಿರುವ ಆರೋಪಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅಸ್ವಾಭಾವಿಕವಾಗಿ ದೇಶದಲ್ಲಿ ಒಟ್ಟು 133 ಅಪರಾಧಿಗಳು ಮತ್ತು...

ಹೊಸ ಸೇರ್ಪಡೆ