ಆಪ್ತರ ಸಮ್ಮಖದಲ್ಲಿ ಅಂಬರೀಶ್‌ ಪುಣ್ಯತಿಥಿ

Team Udayavani, Dec 5, 2018, 11:15 AM IST

ನಟ ಅಂಬರೀಶ್‌ ನಿಧನದ 11 ದಿನದ ಪುಣ್ಯ ತಿಥಿ ಕಾರ್ಯ ಅಂಬರೀಶ್‌ ನಿವಾಸ ಹಾಗೂ ಕಂಠೀರವ ಸ್ಟುಡಿಯೋದಲ್ಲಿ ನಡೆಸಲಾಯಿತು. ಮನೆಯಲ್ಲಿನ ಪೂಜಾ ಕಾರ್ಯಕ್ರಮದಲ್ಲಿ ಅಂಬಿ ಆಪ್ತರು, ಸಿನಿಮಾ ಗಣ್ಯರು ಮತ್ತು ಕುಟುಂಬದವರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಆರಂಭದಲ್ಲಿ ಮನೆಯಲ್ಲಿ ಪೂಜೆ ಸಲ್ಲಿಸಿದ ಅಂಬರೀಶ್‌ ಪತ್ನಿ ಸುಮಲತಾ, ಪುತ್ರ ಅಭಿಷೇಕ್‌ ಮತ್ತು ಕುಟುಂಬದ ಸದಸ್ಯರು ಬಳಿಕ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್‌ ಸಮಾಧಿಗೆ ತೆರಳಿ ಅಂಬರೀಶ್‌ ಇಷ್ಟದ ತಿಂಡಿ-ತಿನಿಸುಗಳನ್ನಿಟ್ಟು ಪೂಜೆ ಸಲ್ಲಿಸಲಾಯಿತು.

ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತ್ಯಕ್ರಿಯೆ ನಡೆಯಿತು. ಈ ವೇಳೆ ಅಂಬರೀಶ್‌ ಕುಟುಂಬದವರೊಂದಿಗೆ ನಟ ದರ್ಶನ್‌, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಸೇರಿದಂತೆ ಆಪ್ತರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು.  ಇನ್ನು ಕೆಲ ಅಭಿಮಾನಿಗಳು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ತಾವೂ ಕೂಡ ಕೇಶ ಮುಂಡನ ಮಾಡಿಸಿಕೊಂಡರು. ಪುಣ್ಯತಿಥಿ ಕಾರ್ಯಕ್ಕೆ ಬಂದಿದ್ದ ಅಭಿಮಾನಿಗಳಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಭದ್ರತೆಗಾಗಿ ಸುಮಾರು 300ಕ್ಕೂ ಹೆಚ್ಚು ಪೊಲೀಸರನ್ನು ಕಂಠೀರವ ಸ್ಟುಡಿಯೋದಲ್ಲಿ ನಿಯೋಜನೆ ಮಾಡಲಾಗಿತ್ತು.

ಇನ್ನು ಕಂಠೀರವ ಸ್ಟುಡಿಯೊದಲ್ಲಿ ಮಾತ್ರವಲ್ಲದೆ ಮಂಡ್ಯ, ಮದ್ದೂರು ಸೇರಿದಂತೆ ಕೆಲವೆಡೆ ಕೂಡ ಅಭಿಮಾನಿಗಳು ಅಂಬರೀಶ್‌ ಅವರ ಪುಣ್ಯ ತಿಥಿ ಮಾಡಿ ತಮ್ಮ ನೆಚ್ಚಿನ ನಾಯಕನನ್ನು ಸ್ಮರಿಸಿದ್ದಾರೆ. ಇಂದು (ಡಿ.5) ಅಭಿಮಾನಿಗಳ ಸಮ್ಮುಖದಲ್ಲಿ ವೈಕುಂಠ ಸಮಾರಾಧನೆ ಮಾಡಲಾಗುತ್ತಿದ್ದು, ಈ ಕಾರ್ಯಕ್ರಮ ಬೆಂಗಳೂರಿನ ಪ್ಯಾಲೆಸ್‌ ಗ್ರೌಂಡ್‌ ವೈಟ್‌ ಪೆಟಲ್ಸ್ ನಲ್ಲಿ ನಡೆಯಲಿದೆ. ಇದರಲ್ಲಿ ಅಂಬರೀಶ್‌ ಸಂಬಂಧಿಕರು, ಸ್ನೇಹಿತರು, ಉದ್ಯಮದವರು, ರಾಜಕಾರಣಿಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ