ಅಮ್ಮ ಐ ಲವ್ ಯು ಚಿತ್ರಕ್ಕೆ ಚಾಲನೆ
Team Udayavani, Oct 31, 2017, 10:35 AM IST
ಈ ಹಿಂದೆ ದ್ವಾರಕೀಶ್ ಬ್ಯಾನರ್ನಲ್ಲಿ 51 ನೇ ಚಿತ್ರ ತಯಾರಾಗುವ ಕುರಿತು ಹೇಳಲಾಗಿತ್ತು. ಆ ಚಿತ್ರಕ್ಕೆ ಇಶಾನ್ ನಾಯಕ ಅಂತಾನೂ ಹೇಳಿದ್ದರು ನಿರ್ಮಾಪಕ ದ್ವಾರಕೀಶ್. ಆದರೆ, ಆ ಚಿತ್ರದ ನಾಯಕ ಬದಲಾಗಿದ್ದು, ಆ ಜಾಗಕ್ಕೆ ಚಿರಂಜೀವಿ ಸರ್ಜಾ ಬಂದಿದ್ದಾರೆ.
ಆ ಚಿತ್ರಕ್ಕೆ “ಅಮ್ಮ ಐ ಲವ್ ಯು’ ಎಂದು ನಾಮಕರಣ ಮಾಡಿದ್ದು, ಇತ್ತೀಚೆಗೆ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಗಣಪತಿ ದೇವಾಲಯದಲ್ಲಿ ಮುಹೂರ್ತವೂ ನೆರವೇರಿದೆ. ಇದು ತಮಿಳಿನ “ಪಿಚ್ಚಕಾರನ್’ ಚಿತ್ರದ ಅವತರಣಿಕೆ.
ಈಗಾಗಲೇ ಗಿರೀಶ್ ದ್ವಾರಕೀಶ್ ಮತ್ತು ಪ್ರಕಾಶ್ ಬೆಳವಾಡಿ ಅವರ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಸುಮಾರು 50 ದಿನಗಳ ಕಾಲ ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ವಿದೇಶದಲ್ಲಿ ಚಿತ್ರೀಕರಣಗೊಳ್ಳಲಿದೆ.
ಚಿತ್ರದಲ್ಲಿ ಸಿತಾರಾ, ಕರಿಸುಬ್ಬು, ನಟನಾ ಪ್ರಶಾಂತ್ ಪ್ರಮುಖ ತಾರಾಗಣದಲ್ಲಿ ನಟಿಸುತ್ತಿದ್ದಾರೆ. ಕೆ.ಎಂ.ಚೈತನ್ಯ ನಿರ್ದೇಶನದ ಈ ಚಿತ್ರಕ್ಕೆ ಗುರುಕಿರಣ್ ಅವರ ಸಂಗೀತವಿದೆ. ನಾಲ್ಕು ಹಾಡುಗಳು ಚಿತ್ರದಲ್ಲಿವೆ. ರವಿ ಕಲಾ ನಿರ್ದೇಶನ ಮಾಡುತ್ತಿದ್ದಾರೆ.