ಅನುಷ್ಕ ನಿರ್ದೇಶಕನ “ತಾಜ್‌ಮಹಲ್‌-2′

ಈ ಬಾರಿ ನಾಯಕನಾಗಿಯೂ ನಟನೆ

Team Udayavani, Jun 19, 2019, 3:00 AM IST

“ತಾಜ್‌ಮಹಲ್‌’ ಆರ್‌.ಚಂದ್ರು ನಿರ್ದೇಶನದ ಚೊಚ್ಚಲ ಸಿನಿಮಾ. ಆಗಷ್ಟೇ ಗಾಂಧಿನಗರಕ್ಕೆ ಕನಸು ಕಟ್ಟಿಕೊಂಡು ಬಂದಿದ್ದ ಚಂದ್ರು ಕೈ ಹಿಡಿದ ಸಿನಿಮಾ “ತಾಜ್‌ಮಹಲ್‌’. ಮೊದಲ ಸಿನಿಮಾದಲ್ಲೇ ಗೆಲುವು ನೀಡಿ, ಚಂದ್ರು ಎಂಬ ನಿರ್ದೇಶಕ ಚಿತ್ರರಂಗದಲ್ಲೇ ನೆಲೆನಿಲ್ಲುವಂತೆ ಮಾಡಿದ ಸಿನಿಮಾ “ತಾಜ್‌ಮಹಲ್‌’.

ಎಲ್ಲಾ ಓಕೆ ಈಗ ಯಾಕೆ ಈ “ತಾಜ್‌ಮಹಲ್‌’ ವಿಷಯ ಅಂತೀರಾ, ಅದಕ್ಕೆ ಕಾರಣ “ತಾಜ್‌ಮಹಲ್‌-2′. ಹೌದು, “ತಾಜ್‌ಮಹಲ್‌-2′ ಎಂಬ ಸಿನಿಮಾವೊಂದು ಆರಂಭವಾಗುತ್ತಿದೆ. ಮೊನ್ನೆಯಷ್ಟೇ “ಐ ಲವ್‌ ಯು’ ಬಿಡುಗಡೆ ಮಾಡಿದ ಚಂದ್ರು ಅಷ್ಟು ಬೇಗ ಮತ್ತೂಂದು ಸಿನಿಮಾ ಅನೌನ್ಸ್‌ ಮಾಡಿದ್ರಾ ಎಂದು ನೀವು ಕೇಳಬಹುದು.

ಖಂಡಿತಾ ಇಲ್ಲ, ಈ ಸಿನಿಮಾಕ್ಕೂ ಚಂದ್ರು ಅವರಿಗೂ ಯಾವುದೇ ಸಂಬಂಧವಿಲ್ಲ. ಈ ಚಿತ್ರವನ್ನು ನಿರ್ದೇಶಿಸುತ್ತಿರೋದು ದೇವರಾಜ್‌ ಕುಮಾರ್‌. ಈ ಹಿಂದೆ “ಡೇಂಜರ್‌ ಝೋನ್‌’, “ನಿಶ್ಯಬ್ಧ-2′, “ಅನುಷ್ಕ’ ಚಿತ್ರ ಮಾಡಿದ ದೇವರಾಜ್‌ ಕುಮಾರ್‌ ಈಗ “ತಾಜ್‌ಮಹಲ್‌-2′ ಸಿನಿಮಾ ಮಾಡುತ್ತಿದ್ದಾರೆ.

ಕಳೆದ ಬಾರಿ “ಅನುಷ್ಕ’ ಸಿನಿಮಾ ಮೇಲೆ ಸಿಕ್ಕಾಪಟ್ಟೆ ಭರವಸೆ ಇಟ್ಟಿದ್ದ ದೇವರಾಜ್‌ಕುಮಾರ್‌ಗೆ ಆ ಚಿತ್ರದಿಂದ ಹೆಚ್ಚೇನು ಖುಷಿ ಸಿಕ್ಕಂತಿಲ್ಲ. ಈಗ ತಮ್ಮ ಕನಸನ್ನು “ತಾಜ್‌ಮಹಲ್‌-2’ನತ್ತ ನೆಟ್ಟಿದ್ದಾರೆ. ಇಷ್ಟು ದಿನ ತಮ್ಮ ಸಿನಿಮಾದಲ್ಲಿ ರೂಪೇಶ್‌ ಶೆಟ್ಟಿಗೆ ನಾಯಕನ ಪಾತ್ರ ಕೊಡುತ್ತಿದ್ದ ದೇವರಾಜ್‌ಕುಮಾರ್‌ ಈ ಬಾರಿ ತಾವೇ ಹೀರೋ ಆಗಲು ಹೊರಟಿದ್ದಾರೆ.

ಈ ಮೂಲಕ ಮತ್ತೂಂದು ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಈ ಚಿತ್ರದ ತಾರಾಬಳಗದಲ್ಲಿ ಸಮೃದ್ಧಿ, ಮುಖೇಶ್‌ ತಿವಾರಿ, ತಬಲಾ ನಾಣಿ, ಕಡ್ಡಿಪುಡಿ ಚಂದ್ರು, ಜಿಮ್‌ ರವಿ ವಿಕ್ಚರಿ ವಾಸು ಮುಂತಾದವರಿದ್ದಾರೆ. ವಿಕ್ರಂ ಸೆಲ್ವ ಅವರ ಸಂಗೀತ ನಿರ್ದೇಶನವಿದೆ. ಗಂಗಾಂಬಿಕೆ ಫಿಲಂಸ್‌ನಲ್ಲಿ ಈ ಚಿತ್ರ ತಯಾರಾಗುತ್ತಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ