ಚಿಂದಿ ಉಡಾಯಿಸುತ್ತಿದೆ ಅಪ್ಪು ಪಾರ್ಟಿ ಸಾಂಗ್: Watch
Team Udayavani, Jan 1, 2019, 6:12 AM IST
ಪವರ್ಸ್ಟಾರ್ ಪುನೀತ್ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ “ನಟಸಾರ್ವಭೌಮ’ ಸಿನಿಮಾದ ಪೋಸ್ಟರ್ ಹಾಗೂ ಟೀಸರ್ ಈಗಾಗಲೇ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದರೆ, ಇತ್ತ ಚಿತ್ರತಂಡ ಚಿತ್ರದ ಪಾರ್ಟಿ ಸಾಂಗ್ ರಿಲೀಸ್ ಮಾಡಿದೆ.
ಹೌದು, “ಏಳೂವರೆಗೆ ತುಟಿ ಒಣಗುತ್ತೆ ಏನು ಮಾಡೋಣ ಹಾಳು ಎಣ್ಣೆ ಚಟ ಬಿಡಬೇಕು ಕಮ್ಮಿ ಕುಡಿಯೋಣ’ ಎಂಬ ಹಾಸ್ಯ ಮಿಶ್ರಿತ ಸಾಹಿತ್ಯ ಇರುವ ಗೀತೆ ಬಿಡುಗಡೆಯಾಗಿದೆ. ಯೋಗರಾಜ್ ಭಟ್ ಸಾಹಿತ್ಯವಿರುವ ಈ ಹಾಡಿಗೆ ಧ್ವನಿಯಾಗಿದ್ದು ಕಿಕ್ಕೇರಿಸುವ ಕಂಠದ ಗಾಯಕ ವಿಜಯ ಪ್ರಕಾಶ್. ಅಲ್ಲದೇ ಡಿ ಇಮ್ಮಾನ್ ಸಂಗೀತ ಸಂಯೋಜಿಸಿದ್ದು, ಹೊಸ ವರ್ಷಕ್ಕೆ ಒಂದು ದಿನ ಬಾಕಿ ಇರುವಂತೆ ಈ ಹಾಡು ಹೊರ ಬಂದಿದೆ.
ಪವರ್ ಸ್ಟಾರ್ ಪುನೀತ್ರಾಜಕುಮಾರ್ ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ “ನಟಸಾರ್ವಭೌಮ’ ಚಿತ್ರದಲ್ಲಿ ಪಾರ್ಟಿಯಲ್ಲಿ ಕುಡಿತದ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಅಲ್ಲದೇ ಹಾಡು ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೂ 6 ಲಕ್ಷಕ್ಕೂ ಹೆಚ್ಚು ಸಿನಿಪ್ರಿಯರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಯೂಟ್ಯೂಬ್ ಟ್ರೆಂಡಿಂಗ್ನಲ್ಲಿ ಸ್ಥಾನವನ್ನು ಪಡೆದಿದೆ.
ಇನ್ನು ಅಪ್ಪು ಮೊದಲ ಬಾರಿಗೆ ಫೋಟೋ ಜರ್ನಲಿಸ್ಟ್ ಪಾತ್ರ ಮಾಡುತ್ತಿದ್ದು, ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಈ ಸಿನಿಮಾವನ್ನು ಪವನ್ ಒಡೆಯರ್ ನಿರ್ದೇಶಿಸುತ್ತಿದ್ದಾರೆ. ಪುನೀತ್ ಜೊತೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಮಲಯಾಳಂ ಚೆಲುವೆ ಅನುಪಮ ಪರಮೇಶ್ವರನ್ ನಟಿಸಿದ್ದಾರೆ. ಇಮಾನ್ ಡಿ ಸಂಗೀತ ಹಾಗೂ ವೈದಿ ಛಾಯಾಗ್ರಹಣ ಚಿತ್ರಕ್ಕಿದ್ದು, ಫೆಬ್ರವರಿ 7 ರಂದು ಬಿಡುಗಡೆಯಾಗಲಿದೆ.