ಸುಂದರಿ ಮೊಗದಲ್ಲಿ ಸುಂದರ ನಗು

Team Udayavani, Jun 6, 2019, 3:00 AM IST

ಕಳೆದ ವಾರ ಬಿಡುಗಡೆಯಾದ ಬಹುತೇಕ ಹೊಸ ಪ್ರತಿಭೆಗಳ “ಸುವರ್ಣ ಸುಂದರಿ’ ಚಿತ್ರ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಚಿತ್ರ ಬಿಡುಗಡೆಯ ನಂತರ ಮಾಧ್ಯಮಗಳ ಮುಂದೆ ಬಂದಿದ್ದ “ಸುವರ್ಣ ಸುಂದರಿ’ ಚಿತ್ರತಂಡ, ಬಿಡುಗಡೆಯ ನಂತರದ ಬೆಳವಣಿಗೆಗಳು ಮತ್ತು ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಗಳ ಬಗ್ಗೆ ಮಾತನಾಡಿತು.

ಚಿತ್ರದ ಬಗ್ಗೆ ಮೊದಲು ಮಾತನಾಡಿದ ನಿರ್ದೇಶಕ ಎಂ.ಎಸ್‌.ಎನ್‌.ಸೂರ್ಯ, “ಚಿತ್ರ ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಚಿತ್ರದ ಟೈಟಲ್‌ ಮತ್ತು ಸಬ್ಜೆಕ್ಟ್ ಎರಡೂ ಪ್ರೇಕ್ಷಕರಿಗೆ ಇಷ್ಟವಾಗಿದೆ. ಚಿತ್ರವನ್ನು ನೋಡಿದವರು ಮೆಚ್ಚುಗೆಯ ಮಾತುಗಳನ್ನ ಆಡುತ್ತಿರುವುದರಿಂದ, ನಮ್ಮ ಶ್ರಮ ಸಾರ್ಥಕವಾಗಿದೆ. ಕಥೆಗೆ ಪೂರಕವಾಗಿ 50 ನಿಮಿಷ ಗ್ರಾಫಿಕ್ಸ್‌ ಇರುವುದು ಪ್ರೇಕ್ಷಕರಿಗೆ ಬೋನಸ್‌ ಆಗಿದೆ. ವಿಮರ್ಶಕರು ಕೂಡ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ’ ಎಂದರು.

ಇನ್ನು “ಸುವರ್ಣ ಸುಂದರಿ’ ಬಿಡುಗಡೆಯ ನಂತರ ಉತ್ತಮ ವಿಮರ್ಶೆಗಳು ಬಂದ ಕಾರಣ ಗಳಿಕೆಯಲ್ಲಿ ಕೂಡ ಚೇತರಿಕೆ ಕಂಡುಬರುತ್ತಿದೆಯಂತೆ. ಈ ಬಗ್ಗೆ ಮಾತನಾಡಿದ ನಿರ್ಮಾಪಕಿ ಎಮ್‌.ಎನ್‌ ಲಕ್ಷ್ಮೀ, “ಎಲ್ಲರ ಸಹಕಾರದಿಂದ ಚಿತ್ರ ಚೆನ್ನಾಗಿ ಪ್ರದರ್ಶನವಾಗುತ್ತಿದೆ. “ಸಂಗೊಳ್ಳಿ ರಾಯಣ್ಣ’ ನಂತರ ಜಯಪ್ರದ ನಟಿಸಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ. ಮೊದಲ ಚಿತ್ರ ಯಶಸ್ವಿಯಾಗಿರುವುದರಿಂದ ಮುಂದೆ ಸ್ಟಾರ್‌ ನಟರ ಸಿನಿಮಾ ನಿರ್ಮಾಣ ಮಾಡುವ ಯೋಚನೆ ಇದೆ. ಸದ್ಯದಲ್ಲೇ ಅದರ ಬಗ್ಗೆ ಮಾಹಿತಿ ನೀಡುವುದಾಗಿ’ ಹೇಳಿದರು.

ಇನ್ನು “ಸುವರ್ಣ ಸುಂದರಿ’ ಪ್ರಚಾರದ ಜವಾಬ್ದಾರಿ ವಹಿಸಿಕೊಂಡ ಸಂಸ್ಥೆಯೊಂದು ಚಿತ್ರತಂಡಕ್ಕೆ ಮೋಸ ಮಾಡಿದೆ. ಈ ಬಗ್ಗೆ ಮಾತನಾಡಿದ ನಿರ್ಮಾಪಕರು “ಪ್ರಚಾರದ ಸಲುವಾಗಿ ಎರಡು ಭಾಷೆಯಲ್ಲಿ ಜಾಹೀರಾತು ಹಾಕಲು ಖಾಸಗಿ ಸಂಸ್ಥೆಯೊಂದರ ಜೊತೆ ಒಪ್ಪಂದ ಮಾಡಿಕೊಂಡು ಮುಂಗಡವಾಗಿ ಹದಿಮೂರು ಲಕ್ಷ ನೀಡಲಾಗಿತ್ತು. ಆದರೆ ಚಿತ್ರ ಬಿಡುಗಡೆ ವೇಳೆ ಆ ಸಂಸ್ಥೆ ಜಾಹೀರಾತು ಹಾಕದೆ ಮೋಸ ಮಾಡಿದೆ.

ಇದರಿಂದ ಚಿತ್ರದ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ತಲುಪಲಿಲ್ಲ. ಈ ಬಗ್ಗೆ ವಾಣಿಜ್ಯ ಮಂಡಳಿಗೆ, ಪೊಲೀಸರಿಗೆ ದೂರು ಕೊಡಲು ನಿರ್ಧರಿಸಿದ್ದೇವೆ. ಇಂಥ ಸಂಸ್ಥೆಗಳಿಂದ ನಿರ್ಮಾಪಕರಿಗೆ ನಷ್ಟವಾಗುತ್ತಿದೆ. ನಮಗೆ ಆದಂತೆ ಮುಂದೆ ಯಾವುದೇ ನಿರ್ಮಾಪಕರಿಗೆ ಆಗಬಾರದು ಹಾಗಾಗಿ ಮೋಸ ಮಾಡಿದವರ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗಿದ್ದೇವೆ’ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸ್ವಾತಿ, ರಾಜ್‌ ಕಿರಣ್‌, ಕಾರ್ಯಕಾರಿ ನಿರ್ಮಾಪಕ ಶ್ರೀಕಾಂತ್‌ ಸೇರಿದಂತೆ ಚಿತ್ರದ ಕಲಾವಿದರು, ತಂತ್ರಜ್ಞರು ಹಾಜರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ