ಭರಾಟೆಗೆ ರಾಜಸ್ಥಾನ ನಂಟು
Team Udayavani, Sep 25, 2018, 11:13 AM IST
ಮುರಳಿ ನಾಯಕರಾಗಿರುವ “ಭರಾಟೆ’ ಚಿತ್ರದ ಫೋಟೋಶೂಟ್ ಕಳೆದ ಬಾರಿ ರಾಜಸ್ಥಾನದಲ್ಲಿ ನಡೆದಿತ್ತು. ಫೋಟೋಶೂಟ್ ಮುಗಿಸಿಕೊಂಡು ಬಂದ ಚಿತ್ರತಂಡ ಮತ್ತೆ ರಾಜಸ್ತಾನದತ್ತ ಪಯಣ ಬೆಳೆಸಿತ್ತು. ಅದು ಚಿತ್ರೀಕರಣಕ್ಕಾಗಿ. ಸುಮಾರು 20 ದಿನಗಳ ಕಾಲ ರಾಜಸ್ತಾನದಲ್ಲಿ ಚಿತ್ರೀಕರಣ ನಡೆಸಿ, ವಾಪಾಸ್ ಬಂದಿದೆ. ಎಲ್ಲಾ ಓಕೆ “ಭರಾಟೆ’ಗೂ ರಾಜಸ್ತಾನಕ್ಕೂ ಏನು ಸಂಬಂಧ ಎಂದು ನೀವು ಕೇಳಬಹುದು.
ಅದಕ್ಕೆ ಕಾರಣ ಕಥೆ. ಹೌದು, “ಭರಾಟೆ’ ಚಿತ್ರದ ಕಥೆಯ ಹಿನ್ನೆಲೆಯಲ್ಲಿ ರಾಜಸ್ತಾನ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ. ಈ ಕಾರಣದಿಂದ ಚಿತ್ರದ ಫೋಟೋಶೂಟ್ನಿಂದ ಹಿಡಿದು, ಹಾಡನ್ನು ಕೂಡಾ ಅಲ್ಲಿನ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಸುಮಾರು ಐದು ದಿನಗಳ ಕಾಲ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಸುಮಾರು ನೂರಕ್ಕೂ ಹೆಚ್ಚು ಜ್ಯೂನಿಯರ್ ಆರ್ಟಿಸ್ಟ್ಗಳನ್ನು ಸೇರಿಸಿ ಈ ಹಾಡನ್ನು ಸೆರೆಹಿಡಿಯಲಾಗಿದೆ.
ಈ ಹಾಡಿನ ಮತ್ತೂಂದು ವಿಶೇಷವೆಂದರೆ ಈ ಒಂದು ಹಾಡಿನಲ್ಲಿ ಮುರಳಿ ಸುಮಾರು 16 ಕಾಸ್ಟೂಮ್ನಲ್ಲಿ ಕಾಣಿಸಿಕೊಂಡಿದ್ದಾರೆ. ನೃತ್ಯ ನಿರ್ದೇಶಕ ಮುರಳಿ ಈ ಹಾಡನ್ನು ಚಿತ್ರೀಕರಿಸಿದ್ದಾರೆ. “ಬಹದ್ದೂರ್’, “ಭರ್ಜರಿ’ ಚಿತ್ರದ ನಂತರ ಚೇತನ್ ನಿರ್ದೇಶಿಸುತ್ತಿರುವ ಸಿನಿಮಾ “ಭರಾಟೆ’. ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಮುರಳಿ, ಶ್ರೀಲೀಲಾ ಅಲ್ಲದೇ, ಕೇತನ್ ಕರಂಡೆ ವಿಲನ್ ಆಗಿ ನಟಿಸುತ್ತಿದ್ದಾರೆ.