25ರ ಸಂಭ್ರಮದಲ್ಲಿ ಭರಾಟೆ ಚಿತ್ರತಂಡ

Team Udayavani, Nov 13, 2019, 6:05 AM IST

ಶ್ರೀಮುರಳಿ ಅಭಿನಯದ “ಭರಾಟೆ’ ಚಿತ್ರತಂಡ ಈಗ ಖುಷಿಯ ಮೂಡ್‌ನ‌ಲ್ಲಿದೆ. ಅದಕ್ಕೆ ಕಾರಣ ಚಿತ್ರ ಈಗ 25 ದಿನಗಳನ್ನು ಯಶಸ್ವಿಯಾಗಿ ಮುಗಿಸಿರುವುದು. ಹೌದು, ನಿರ್ದೇಶಕ ಚೇತನ್‌ ಕುಮಾರ್‌ “ಭರಾಟೆ ಮೂಲಕ ಹ್ಯಾಟ್ರಿಕ್‌ ಗೆಲವು ಸಾಧಿಸಿದ್ದಾರೆ. “ಬಹದ್ದೂರ್‌’ ಮತ್ತು “ಭರ್ಜರಿ’ ಚಿತ್ರಗಳ ನಂತರ ಅವರು “ಭರಾಟೆ’ ನಿರ್ದೇಶಿಸಿದ್ದು, ಆ ಚಿತ್ರ ಈಗ ಗೆಲುವು ಕಂಡಿದೆ. ಈ ವಾರಕ್ಕೆ “ಭರಾಟೆ 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿರುವುದರಿಂದ ಸಿನಿಮಾ ತಂಡಕ್ಕೆ ಸಹಜವಾಗಿಯೇ ಖುಷಿಯನ್ನು ಹೆಚ್ಚಿಸಿದೆ.

ಈ ಸಂಭ್ರಮದ ಹಿನ್ನೆಲೆಯಲ್ಲಿ ಚಿತ್ರತಂಡ ಕಳೆದ ವಾರ ರಾಜ್ಯಾದ್ಯಂತ ಹಲವು ಚಿತ್ರಮಂದಿರಗಳಿಗೆ ಭೇಟಿ ನೀಡಿ, ಅಭಿಮಾನಿಗಳು ಹಾಗು ಪ್ರೇಕ್ಷಕರ ಜೊತೆಗೆ ಕುಳಿತು ಸಿನಿಮಾ ವೀಕ್ಷಿಸಿದೆ. ಇದೇ ಸಂದರ್ಭದಲ್ಲಿ ಕೆಲವು ಚಿತ್ರಮಂದಿರಗಳಲ್ಲಿ ಶ್ರೀಮುರಳಿ ಅವರ ಅಪಾರ ಅಭಿಮಾನಿಗಳು ಕೇಕ್‌ ಕಟ್‌ ಮಾಡಿ ಸಂಭ್ರಮಿಸಿದ್ದಾರೆ. ಹಲವು ಕೈ ಕುಲಕಿ, ಫೋಟೋ ಕ್ಲಿಕ್ಕಿಸಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಇದು ಚಿತ್ರತಂಡಕ್ಕೆ ಮತ್ತಷ್ಟು ಸಂತೋಷವನ್ನು ಹೆಚ್ಚಿಸಿದೆ. ನಿರ್ಮಾಪಕ ಸುಪ್ರೀತ್‌ ಅವರು, ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಕ್ಕೂ “ಭರಾಟೆ’ ಗೆಲುವು ಕೊಟ್ಟಿದ್ದರಿಂದ ಖುಷಿಯಲ್ಲಿದ್ದಾರೆ.

ಇನ್ನು 25ನೇ ದಿನಗಳ ಸಂಭ್ರಮದ ಮೆರುಗು ಹೆಚ್ಚಿಸಲು ಚಿತ್ರದ ಟೈಟಲ್‌ ವೀಡಿಯೋ ಸಾಂಗ್‌ ರಿಲೀಸ್‌ ಮಾಡಿದ್ದು, ಶ್ರೀಮುರಳಿ ಹಾಗೂ ರಚಿತಾ ರಾಮ್‌ ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಶ್ರೀಮುರಳಿ ಈವರೆಗೂ ಕಾಣಿಸಿಕೊಂಡಿರದ ಪಾತ್ರವನ್ನು ಪೋಷಿಸಿದ್ದರಿಂದ ಸಿನಿಮಾ ನೋಡಿದವರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದರಲ್ಲೂ ಶ್ರೀಮುರಳಿ ದ್ವಿಪಾತ್ರದಲ್ಲಿ ಇದೇ ಮೊದಲು ನಟಿಸಿರುವುದರಿಂದ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿಯಾಗಿದೆ. ಸಿನಿಮಾ ನೋಡಿ, ಪ್ರೋತ್ಸಾಹಿಸಿದ ಪ್ರೇಕ್ಷಕರಿಗೆ ಚಿತ್ರತಂಡ ಧನ್ಯವಾದ ಹೇಳಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ