ಚೇಸ್ ಟೀಸರ್ ವೈರಲ್ ಆದ ಅಚ್ಚರಿ!

Team Udayavani, Nov 22, 2019, 6:59 PM IST

ವರ್ಷಾಂತರಗಳಿಂದಲೂ ವಿಲೋಕ್ ಶೆಟ್ಟಿ ನಿರ್ದೇಶನದ ಚೇಸ್ ಚಿತ್ರ ಸದಾ ಸುದ್ದಿಯಾಗುತ್ತಲೇ ಇದೆ. ಭಿನ್ನವಾದ ಪೋಸ್ಟರುಗಳ ಮೂಲಕವೇ ಮನಸೆಳೆಯುತ್ತಾ ಬಂದಿದ್ದ ಈ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಅಂತೊಂದು ಕುತೂಹಲ ಪ್ರೇಕ್ಷರನ್ನು ಜ್ವರದಂತೆ ಆವರಿಸಿಕೊಂಡಿರುವಾಗಲೇ ಚೇಸ್ ಬಿಡುಗಡೆಯ ಹೊಸ್ತಿಲಲ್ಲಿದೆ. ಈ ಹೊತ್ತಿನಲ್ಲಿಯೇ ಚಿತ್ರತಂಡ ಪರಿಣಾಮಕಾರಿಯಾದ ಟೀಸರ್ ಅನ್ನು ಲಾಂಚ್ ಮಾಡಿದೆ. ಇದು ಮೂಡಿ ಬಂದಿರೋ ರೀತಿ ಎಂಥಾದ್ದೆಂಬುದಕ್ಕೆ ಅದು ಅತ್ಯಂತ ಕಡಿಮೆ ಅವಧಿಯಲ್ಲಿಯೇ ಪಡೆದುಕೊಂಡಿರೋ ಲಕ್ಷ ಲಕ್ಷ ವೀಕ್ಷಣೆ ಮತ್ತು ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರೋದಕ್ಕಿಂತಲೂ ಬೇರೆ ಪುರಾವೆ ಬೇಕಿಲ್ಲ.

ಇದು ಕ್ರೈಂ , ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರವನ್ನೊಳಗೊಂಡಿರುವ ಚಿತ್ರ. ರಾತ್ರಿ ಹೊತ್ತಿನಲ್ಲಿ ಬೆಂಗಳೂರಿನಂಥಾ ಮಹಾ ನಗರಗಳಲ್ಲಿ ಮಹಿಳೆಯರು ಒಂಟಿಯಾಗಿ ಕ್ಯಾಬ್‌ನಲ್ಲಿ ಓಡಾಡೋದು ಎಷ್ಟು ಸೇಫ್ ಎಂಬಂಥಾ ಬಿಂದುವಿನಿಂದ ಬಿಚ್ಚಿಕೊಳ್ಳುವ ರೋಚಕ ಕಥಾ ಹಂದರವನ್ನು ಈ ಸಿನಿಮಾ ಒಳಗೊಂಡಿದೆ. ಇಲ್ಲಿ ಒಂದು ಮರ್ಡರ್ ಮಿಸ್ಟರಿ ಇದೆ. ಅಂಥಾ ಅಪರಾಧ ಪ್ರಕರಣದ ಸುತ್ತ ಬಿಚ್ಚಿಕೊಳ್ಳುವ ಭಯಾನಕವಾದ ಸನ್ನಿವೇಶಗಳ ಚಿತ್ರಣವೂ ಇದೆ. ಅದೆಲ್ಲವೂ ಎಂಥಾ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬಂದಿದೆ ಎಂಬುದನ್ನು ಚಿತ್ರತಂಡ ಈ ಟೀಸರ್ ಮೂಲಕವೇ ಕಾಣಿಸಿದೆ.

ಇದು ವಿಲೋಕ್ ಶೆಟ್ಟಿ ನಿರ್ದೇಶನದ ಮೊದಲ ಚಿತ್ರ. ಆದರೆ ಅವರು ಈಗಾಗಲೇ ಹಲವಾರು ವರ್ಷಗಳಿಂದಲೂ ಚಿತ್ರರಂಗದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅಖಂಡ ಎರಡು ವರ್ಷಗಳ ಕಾಲ ಪರಿಶ್ರಮ ವಹಿಸಿಯೇ ಈ ಸಿನಿಮಾವನ್ನು ರೂಪಿಸಿದ್ದಾರೆ. ಅದೀಗ ಅಂತಿಮ ಘಟ್ಟ ತಲುಪಿಕೊಂಡಿದೆ. ಇಲ್ಲಿ ರಾಧಿಕಾ ನಾರಾಯಣ್ ಮತ್ತು ಅವಿನಾಶ್ ನರಸಿಂಹುರಾಜು ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಜೇಶ್ ನಟರಂಗ, ಶೀತಲ್ ಶೆಟ್ಟಿ, ಸುಶಾಂತ್ ಪೂಜಾರಿ ಮುಂತಾದವರೆಲ್ಲ ವಿಶಿಷ್ಟವಾದ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅವರೆಲ್ಲರ ಪಾತ್ರಗಳ ಚಹರೆಗಳನ್ನೂ ಈ ಟೀಸರ್ ಅನಾವರಣಗೊಳಿಸಿದೆ. ಇಷ್ಟರಲ್ಲಿಯೇ ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ