ಚೇತನ್ ಮತ್ತೆ ಬಿಝಿ
ಖನನ ನಿರ್ದೇಶಕರ ಚಿತ್ರದಲ್ಲಿ ನಟನೆ ಕೈಯಲ್ಲಿವೆ ಎರಡು ಸಿನಿಮಾ
Team Udayavani, Aug 17, 2020, 6:13 PM IST
“ಆದಿನಗಳು’ ಚೇತನ್ ಸಿನಿಮಾದಿಂದ ದೂರವಾಗಿ ತಮ್ಮದೇ ಒಂದಷ್ಟು ಕೆಲಸ ಕಾರ್ಯಗಳಲ್ಲಿ ಬಿಝಿಯಾಗಿದ್ದರು. ಸಹಜವಾಗಿಯೇ ಅನೇಕರಿಗೆ ಒಂದು ಪ್ರಶ್ನೆ ಇತ್ತು. ಅದೇನೆಂದರೆ ಚೇತನ್ ಮತ್ತೆ ಯಾವಾಗ ಸಿನಿಮಾ ಮಾಡುತ್ತಾರೆಂದು. ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಚೇತನ್ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.
ಆ ಎರಡು ಸಿನಿಮಾಗಳು ಒಂದರ ಹಿಂದೊಂದರಂತೆ ಆರಂಭವಾಗಲಿದೆ. ಮೋಹನ್ ಎನ್ನುವವರ ನಿರ್ದೇಶನದಲ್ಲಿ ಒಂದು ಸಿನಿಮಾವಾದರೆ, ಇನ್ನೊಂದು ಸಿನಿಮಾ ರಾಧ ಅವರ ನಿರ್ದೇಶನದಲ್ಲಿ. ಈ ಹಿಂದೆ “ಖನನ’ ಸಿನಿಮಾ ನಿರ್ದೇಶಿಸಿದ ನಿರ್ದೇಶಕ ರಾಧ ಅವರು ದೊಡ್ಡ ಗ್ಯಾಪ್ ತಗೊಂಡಿದ್ದರು. ಈಗ ಚೇತನ್ ಅವರ ಜೊತೆಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಮಾತುಕತೆ ನಡೆದು ಎಲ್ಲವೂ ಅಂತಿಮವಾಗಿದೆ.
ಶೀಘ್ರದಲ್ಲಿ ಸಿನಿಮಾ ಆರಂಭವಾಗಲಿದೆ. ಇದೊಂದು ಲವ್ ಕಂ ಫ್ಯಾಮಿಲಿ ಎಂಟರ್ಟೈನರ್ ಚಿತ್ರವಾಗಿದ್ದು, ಹೊಸ ಬಗೆಯ ಕಥೆಯನ್ನು ತೆರೆಮೇಲೆ ತರಲು ರಾಧ ಸಿದ್ಧರಾಗಿದ್ದಾರೆ. ಈ ಹಿಂದಿನ ಅವರ “ಖನನ’ ಚಿತ್ರಕ್ಕೂ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಚೇತನ್ ಜೊತೆಗೆ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ ಮಾಡಲು ರಾಧ ಮುಂದಾಗಿದ್ದಾರೆ.
ಸದ್ಯ ತಾರಾಬಳಗ ಹಾಗೂ ತಾಂತ್ರಿಕ ಬಳಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಈ ಚಿತ್ರವನ್ನು ಗುರುಸಾರ್ವಭೌಮ ಬ್ಯಾನರ್ನಡಿಯಲ್ಲಿ ನಾರಾಯಣ ಮೂರ್ತಿ ನಿರ್ಮಿಸುತ್ತಿದ್ದು, ನಿರ್ಮಾಣದಲ್ಲೂ ರಾಧಾ ಕೈ ಜೋಡಿಸಲಿದ್ದಾರೆ. ಇನ್ನು ಚೇತನ್ ಅವರ ಮತ್ತೂಂದು ಸಿನಿಮಾಕ್ಕೆ “ಮಾರ್ಗ’ ಎಂದು ಟೈಟಲ್ ಇಡಲಾಗಿದ್ದು, ಶೀಘ್ರದಲ್ಲೇ ಚಿತ್ರ ಸೆಟ್ಟೇರಲಿದೆ.