ಕ್ರೇಜಿ ಸೆಂಟಿಮೆಂಟ್‌

ಮಗಳಿಗಾಗಿ ಭಾವುಕ ಹಾಡು ರಚಿಸಿದ ರವಿಚಂದ್ರನ್‌

Team Udayavani, Apr 16, 2019, 3:00 AM IST

ಸಂಬಂಧಗಳೇ ಹಾಗೆ. ತುಂಬಾನೇ ಕಾಡುತ್ತವೆ. ತುಂಬಾ ವರ್ಷಗಳಿಂದ ಹತ್ತಿರವಿದ್ದವರು ದೂರ ಹೋಗುತ್ತಾರೆಂದರೆ ಮನಸ್ಸು ಭಾರವಾಗುತ್ತದೆ, ಸಣ್ಣದೊಂದು ಚಡಪಡಿಕೆ ಶುರುವಾಗುತ್ತದೆ. ಅದರಲ್ಲೂ ತಂದೆ-ಮಗಳ ಸಂಬಂಧದಲ್ಲಿ ಈ ತರಹದ ಭಾರ ಹೃದಯ, ಚಡಪಡಿಕೆ ಸ್ವಲ್ಪ ಹೆಚ್ಚೇ. ಮಗಳಿಗೆ ತನ್ನ ತಂದೆಯೇ ಹೀರೋ.

ತಂದೆಯೂ ಅಷ್ಟೇ, ಯಾರಿಗೆ ಹೆದರದಿದ್ದರೂ, ಯಾರ ಮಾತಿಗೆ ತಲೆಬಾಗದಿದ್ದರೂ ತನ್ನ ಮಗಳ ಮಾತಿಗೆ ಹೆದರುತ್ತಾನೆ, ತಲೆಬಾಗುತ್ತಾನೆ. ಇಂತಹ ಮಗಳನ್ನು ಮದುವೆ ಮಾಡಿ, ಗಂಡನ ಮನೆಗೆ ಕಳುಹಿಸುವ ಸಮಯ ಬಂದಾಗ ಪ್ರತಿಯೊಬ್ಬ ತಂದೆಯ ಗಂಟಲು ಬಿಗಿಯಾಗುತ್ತದೆ, ತನ್ನ ಮಗಳು ಇನ್ನು ದಿನಾ ನನ್ನ ಕಣ್ಣ ಮುಂದೆ ಇರೋದಿಲ್ಲವಲ್ಲಾ ಎಂಬ ಭಾವನೆ ಕಾಡುತ್ತದೆ.

ಈಗ ನಟ ಕ್ರೇಜಿಸ್ಟಾರ್‌ ರವಿಚಂದ್ರನ್‌ ಕೂಡಾ ಅಂತಹ ಒಂದು ಭಾವನೆಗೆ ಒಳಗಾಗಿದ್ದಾರೆ. ಅದಕ್ಕೆ ಕಾರಣ ಅವರ ಮಗಳ ಮದುವೆ. ರವಿಚಂದ್ರನ್‌ ಪುತ್ರಿ ಗೀತಾಂಜಲಿ ಅವರ ನಿಶ್ಚಿತಾರ್ಥ ಫೆಬ್ರವರಿಯಲ್ಲಿ ನಡೆದಿದೆ. ಮುಂದಿನ ತಿಂಗಳ ಕೊನೆಯ ವಾರದಲ್ಲಿ ಮದುವೆ. ಮದುವೆಯಾಗಿ ಗಂಡನ ಮನೆ ಸೇರಲಿರುವ ಮಗಳನ್ನು ರವಿಚಂದ್ರನ್‌ ತುಂಬಾನೇ ಮಿಸ್‌ ಮಾಡಿಕೊಳ್ಳುತ್ತಿದ್ದಾರೆ.

ಮಗಳ ಬಗೆಗಿನ ಪ್ರೀತಿ, ಆಕೆಯನ್ನು ಮಿಸ್‌ ಮಾಡಿಕೊಳ್ಳುತ್ತಿರುವ ರೀತಿಯನ್ನು ರವಿಚಂದ್ರನ್‌ ಹಾಡೊಂದರ ಮೂಲಕ ಕಟ್ಟಿಕೊಟ್ಟಿದ್ದಾರೆ. ತಾವೇ ಸಾಹಿತ್ಯ ಬರೆದು, ಸಂಗೀತ ನೀಡಿದ್ದಾರೆ. ಈ ಹಾಡಿನಲ್ಲಿ ತನ್ನ ಮಗಳ ಬಗೆಗಿನ ಪ್ರೀತಿ, ಕಾಳಜಿಯನ್ನು ರವಿಚಂದ್ರನ್‌ ವ್ಯಕ್ತಪಡಿಸಿದ್ದಾರೆ.

“ಮಗುವಂತೆ ನೀನು… ಬೆಳೆದ ಮೇಲೆ ಮಗುವಾದೆ ನಾನು …’ ಸೇರಿದಂತೆ ಹಲವು ಭಾವನಾತ್ಮಕ ಸಾಲುಗಳೊಂದಿಗೆ ಈ ಹಾಡನ್ನು ಕಟ್ಟಿಕೊಟ್ಟಿದ್ದಾರೆ ರವಿಚಂದ್ರನ್‌. ತಾನು ಮಗಳನ್ನು ತುಂಬಾನೇ ಮಿಸ್‌ ಮಾಡಿಕೊಳ್ಳುತ್ತಿರುವುದಾಗಿ ಹೇಳುವ ರವಿಚಂದ್ರನ್‌, “ನಾನು ಬೆಳಿಗ್ಗೆ ಎದ್ದ ಕೂಡಲೇ “ಅಂಜು’ ಎಂದು ಕೂಗುತ್ತೇನೆ.

ಆಕೆ ಆ ಕಡೆಯಿಂದ “ಹಾಂ ಡ್ಯಾಡಿ’ ಎನ್ನುತ್ತಾಳೆ. ಅಲ್ಲಿಗೆ ಮನಸ್ಸಿಗೆ ಸಮಾಧಾನ. ನಾನು ನನ್ನ ಜೀವನದಲ್ಲಿ ಹೆದರಿರೋದು ಅಂದರೆ ಅದು ನನ್ನ ತಂದೆಗೆ ಬಿಟ್ಟರೆ ನನ್ನ ಮಗಳಿಗೆ’ ಎನ್ನುವ ರವಿಚಂದ್ರನ್‌, “ಸುಮಾರು 15 ದಿನಗಳಿಂದ ನಾನು ಮನೆಬಿಟ್ಟು ಎಲ್ಲೂ ಹೋಗಿಲ್ಲ.

ಮನೆಯಲ್ಲೇ ಕೂತು, ನನ್ನ ಮಗಳ ಆಚೀಚೆ ಓಡಾಡುವುದನ್ನು, ಆಕೆಯ ಚಟುವಟಿಕೆಯನ್ನೇ ಗಮನಿಸುತ್ತಿದ್ದೇನೆ. ಇನ್ನೇನು ಮುಂದಿನ ತಿಂಗಳು ಮದುವೆ. ಆ ನಂತರ ಆಕೆ ಮತ್ತೂಂದು ಮನೆಗೆ ಹೋಗುತ್ತಾಳೆ’ ಎಂದು ಮಗಳ ಬಗ್ಗೆ ಹೇಳುತ್ತಾರೆ ರವಿಚಂದ್ರನ್‌. ಅಂದಹಾಗೆ, ರವಿಚಂದ್ರನ್‌ ತಮ್ಮ ಮಗಳ ಬಗೆಗಿನ ಮಾತುಗಳನ್ನು ಆಡಿದ್ದು, ಕಲರ್ ವಾಹಿನಿಯ ರಿಯಾಲಿಟಿ ಶೋನಲ್ಲಿ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ