ಲಕ್ಕಿಮ್ಯಾನ್ ನಲ್ಲಿ ದೇವರ ರೂಪದಲ್ಲಿ ಅಭಿಮಾನಿಗಳಿಗೆ ಪುನೀತ್ ದರ್ಶನ: ರಿಲೀಸ್ ಗೆ ರೆಡಿ
Team Udayavani, Jul 14, 2022, 11:54 AM IST
ಪವರ್ಸ್ಟಾರ್ ಪುನೀತ್ ರಾಜಕುಮಾರ್ ಕೊನೆಯದಾಗಿ ಅಭಿನಯಿಸಿರುವ “ಲಕ್ಕಿ ಮ್ಯಾನ್’ ಸಿನಿಮಾ ಇದೇ ಆಗಸ್ಟ್ನಲ್ಲಿ ಬಿಡುಗಡೆಯಾಗಲಿದೆ.
ಹೌದು, ಡಾರ್ಲಿಂಗ್ ಕೃಷ್ಣ ಮತ್ತು ರೋಷನಿ ಪ್ರಕಾಶ್ ಜೋಡಿಯಾಗಿ ಅಭಿನಯಿಸಿರುವ “ಲಕ್ಕಿ ಮ್ಯಾನ್’ ಸಿನಿಮಾದಲ್ಲಿ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅತಿಥಿ ಪಾತ್ರವೊಂದರಲ್ಲಿ ಬಣ್ಣಹಚ್ಚಿದ್ದರು. ಚಿತ್ರತಂಡದ ಮೂಲಗಳ ಪ್ರಕಾರ, ತಮಿಳಿನ “ಓ ಮೈ ಕಡವುಲೆ’ ಸಿನಿಮಾದ ಎಳೆಯನ್ನು ಇಟ್ಟುಕೊಂಡು ನಿರ್ಮಾಣವಾಗುತ್ತಿರುವ “ಲಕ್ಕಿ ಮ್ಯಾನ್’ ಸಿನಿಮಾದಲ್ಲಿ ಪುನೀತ್ ದೇವರ ರೂಪದಲ್ಲಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ.
ಇನ್ನು “ಲಕ್ಕಿ ಮ್ಯಾನ್’ ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ಜೊತೆ ನಟ ಪ್ರಭುದೇವ ಕೂಡ ಕಾಣಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಇಬ್ಬರು ಡ್ಯಾನಿಂಗ್ಸ್ ಸ್ಟಾರ್ ಹಾಡೊಂದರಲ್ಲಿ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ.
ಜಾನಿ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡನ್ನು ಬೆಂಗಳೂರಿನಲ್ಲೇ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದ್ದು, ಪುನೀತ್ ಮತ್ತು ಪ್ರಭುದೇವ ಜುಗಲ್ಬಂದಿಯ ಸಿಗ್ನೇಚರ್ ಸ್ಟೆಪ್ಸ್ ಹಾಕಿರುವ ಈ ಡ್ಯಾನ್ಸಿಂಗ್ ಹಾಡು ಈಗಾಗಲೇ ವೈರಲ್ ಆಗಿದೆ.
ಇದನ್ನೂ ಓದಿ:ದುರಂತ; ಒಮಾನ್ ಬೀಚ್ ನಲ್ಲಿ ಪ್ರವಾಸಿಗರ ಕಣ್ಮುಂದೆ ಕೊಚ್ಚಿಕೊಂಡು ಹೋದ ತಂದೆ, ಮಕ್ಕಳು
ಇನ್ನು ತಮಿಳಲ್ಲಿ ಹಲವಾರು ಯಶಸ್ವಿ ಸಿನಿಮಾಗಳನ್ನು ನಿರ್ಮಿಸಿರುವ ಪಿ. ಆರ್ ಮೀನಾಕ್ಷಿ ಸುಂದರಂ, ಪಿ. ಕಾಮರಾಜ್ ಮೊದಲ ಬಾರಿಗೆ ಕನ್ನಡದಲ್ಲಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ಈ “ಲಕ್ಕಿ ಮ್ಯಾನ್’ ಸಿನಿಮಾವನ್ನು ನಿರ್ದೇಶಿಸಿದ್ದಾರೆ.
ಈಗಾಗಲೇ ತನ್ನ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ “ಲಕ್ಕಿ ಮ್ಯಾನ್’ ಸಿನಿಮಾವನ್ನು ಆಗಸ್ಟ್ ತಿಂಗಳಲ್ಲಿ ತೆರೆಗೆ ತರಲು ನಿರ್ಮಾಪಕರು ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.
ಒಟ್ಟಾರೆ, “ಜೇಮ್ಸ್’ ಸಿನಿಮಾದ ನಂತರ ಮತ್ತೂಂದು ಸಿನಿಮಾದಲ್ಲಿ ತೆರೆಮೇಲೆ ಪುನೀತ್ ರಾಜಕುಮಾರ್ ದರ್ಶನವಾಗುತ್ತಿದ್ದು, ಅಪ್ಪು ಅಭಿಮಾನಿಗಳು ಈ ಸುದ್ದಿಯನ್ನು ಕೇಳಿ ಫುಲ್ ಖುಷಿಯಾಗಿದ್ದಾರೆ.