“ಬಂಪರ್‌’ ಹುಡುಗನಿಗೆ ದರ್ಶನ್‌ ಸಾಥ್‌

ಧನ್ವೀರ್‌ ಚಿತ್ರದ ಫ‌ಸ್ಟ್‌ಲುಕ್‌, ಟೀಸರ್‌ ಬಿಡುಗಡೆ

Team Udayavani, Sep 9, 2019, 3:05 AM IST

ಸುನಿ ನಿರ್ದೇಶನದ “ಬಜಾರ್‌’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದ ಧನ್ವೀರ್‌ ಅಭಿನಯದ “ಬಂಪರ್‌’ ಚಿತ್ರದ ಟೀಸರ್‌ ಹಾಗು ಫ‌ಸ್ಟ್‌ಲುಕ್‌ ಅನ್ನು ದರ್ಶನ್‌ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. “ರಾಬರ್ಟ್‌’ ಚಿತ್ರೀಕರಣದ ಸೆಟ್‌ನಲ್ಲೇ ಚಿತ್ರತಂಡವನ್ನು ಕರೆಸಿಕೊಂಡ ದರ್ಶನ್‌, ಹೀರೋ ಧನ್ವೀರ್‌ ಅವರಿಗೆ ಶುಭಾಶಯ ಹೇಳುವ ಮೂಲಕ “ಬಂಪರ್‌’ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ “ಬಂಪರ್‌’ ಚಿತ್ರದ ಪೋಸ್ಟರ್‌ ಸಖತ್‌ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂದಹಾಗೆ, ನಾಯಕ ಧನ್ವೀರ್‌ ಅವರು ಭಾನುವಾರ ಸೆ.8 ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಇದೇ ಸಂದರ್ಭದಲ್ಲಿ ಚಿತ್ರದ ಟೀಸರ್‌ ಮತ್ತು ಪೋಸ್ಟರ್‌ ಅನ್ನು ದರ್ಶನ್‌ ಅವರಿಂದ ಬಿಡುಗಡೆ ಮಾಡಿಸಿದ್ದು ವಿಶೇಷ. ಇನ್ನೊಮದು ವಿಶೇಷವೆಂದರೆ, ಟೀಸರ್‌ ಬಿಡುಗಡೆಯಾಗಿ, ಗಂಟೆಯಲ್ಲೇ 55 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು ಚಿತ್ರತಂಡದ ಖುಷಿಯನ್ನು ಹೆಚ್ಚಿಸಿದೆ.

ಈ ಚಿತ್ರಕ್ಕೆ ಹರಿ ಸಂತೋಷ್‌ ನಿರ್ದೇಶಕರು. “ಭರಾಟೆ’ ನಿರ್ಮಾಪಕ ಸುಪ್ರೀತ್‌ ಅವರು “ಬಂಪರ್‌’ ಚಿತ್ರಕ್ಕೂ ನಿರ್ಮಾಪಕರಾಗಿದ್ದಾರೆ. ಇನ್ನು, ಚಿತ್ರಕ್ಕೆ “ಬಹದ್ದೂರ್‌’ ಚೇತನ್‌ಕುಮಾರ್‌ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಹಾಗು ಸಾಹಿತ್ಯದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಹಿಂದೆ “ಸುನಿ ನಿರ್ದೇಶನದ “ಬಜಾರ್‌’ ಚಿತ್ರದ ಚಿತ್ರೀಕರಣ ಸಮಯದಲ್ಲೇ, ಧನ್ವೀರ್‌ ಅವರು, ಚೇತನ್‌ ಆವರ ಬಳಿ ಒಳ್ಳೆಯ ಕಥೆ ಬಗ್ಗೆ ಚರ್ಚೆ ನಡೆಸಿದ್ದರು.

ಆಗ, ಚೇತನ್‌ “ಬಂಪರ್‌’ ಚಿತ್ರದ ಒನ್‌ಲೈನ್‌ ಸ್ಟೋರಿ ಹೇಳಿದ್ದರು. ಆ ಕಥೆ ಇಷ್ಟವಾಗಿದ್ದರಿಂದ ಈಗ ಧನ್ವೀರ್‌ “ಬಂಪರ್‌’ಗೆ ಹೀರೋ ಆಗಿದ್ದಾರೆ. ಚಿತ್ರದ ಬಗ್ಗೆ ಹೇಳುವ ನಿರ್ದೇಶಕ ಹರಿ ಸಂತೋಷ್‌, “ಇದೊಂದು ಪಕ್ಕಾ ಮಾಸ್‌ ಸಿನಿಮಾ. ಅದರಲ್ಲೂ ಧನ್ವೀರ್‌ ಅವರಿಗೆ ಹೇಳಿ ಮಾಡಿಸಿರುವ ಕಥೆ ಹೊಂದಿದೆ. ಧನ್ವೀರ್‌ ಕೂಡ ಈ ಚಿತ್ರದ ಪಾತ್ರಕ್ಕೆ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅದೂ ಅಲ್ಲದೆ, ಹೊಸ ಗೆಟಪ್‌, ಲುಕ್‌ನಲ್ಲಿ ಮಿಂಚಲಿದ್ದಾರೆ.

ಬೆಂಗಳೂರು, ಉತ್ತರಕರ್ನಾಟಕ ಸೇರಿದಂತೆ ಹಲವು ಕಡೆ ಚಿತ್ರೀಕರಣ ನಡೆಸುವ ಯೋಚನೆ ಇದೆ. ಈ ಚಿತ್ರದ ಸಬ್ಜೆಕ್ಟ್ ಸ್ಟ್ರಾಂಗ್‌ ಆಗಿರುವುದರಿಂದ ಮೇಕಿಂಗ್‌ ಕೂಡ ನನಗೆ ಚಾಲೆಂಜ್‌’ ಎನ್ನುತ್ತಾರೆ ನಿರ್ದೇಶಕ ಹರಿ ಸಂತೋಷ್‌. ಸದ್ಯಕ್ಕೆ ಚಿತ್ರದ ಹೀರೋ, ನಿರ್ದೇಶಕ, ಟೈಟಲ್‌ ಮಾತ್ರ ಪಕ್ಕಾ ಆಗಿದೆ. ಉಳಿದಂತೆ ಚಿತ್ರದ ನಾಯಕಿ ಹಾಗು ಇತರೆ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯಬೇಕಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಡಿಸೆಂಬರ್‌ನಿಂದ ಚಿತ್ರೀಕರಣ ಶುರುವಾಗಲಿದೆ ಎಂಬುದು ಚಿತ್ರತಂಡದ ಮಾತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ