ಯಾರಿವಳೀ ಹುಡುಗಿ ಡೆಂಟಲ್‌ ಹುಡುಗಿ, ಸೆಂಟಿಮೆಂಟಲ್‌ ಮಾತು

Team Udayavani, Oct 27, 2017, 4:37 PM IST

ರಂಗ-ನರ್ತಕಿಯ ಚಿತ್ರರಂಗಾಕರ್ಷಣೆ

ಇಂದು ಸಿನಿಮಾದಲ್ಲಿ ನಾಯಕಿಯರಾಗಿ ಬಿಝಿಯಾಗಿರುವವರಲ್ಲಿ ಬಹುತೇಕರು ನೇರವಾಗಿ ಹೀರೋಯಿನ್‌ ಆಗಿ ಬಂದವರಲ್ಲ. ಸಾಕಷ್ಟು ಕಷ್ಟಪಟ್ಟು, ಸಣ್ಣಪುಟ್ಟ ಪಾತ್ರಗಳಲ್ಲಿ ತೃಪ್ತಿ ಕಾಣುತ್ತಾ ಇವತ್ತು ಹೀರೋಯಿನ್‌ ಆದವರು ಅನೇಕರಿದ್ದಾರೆ. ಇನ್ನು ಕೆಲವರು ಡ್ಯಾನ್ಸರ್‌ ಆಗಿ ಬಂದು ತಮ್ಮ ಪ್ರತಿಭೆ ಮೂಲಕ ನಾಯಕಿ ನಟಿಯಾಗಿ ಬಡ್ತಿ ಪಡೆದವರಿದ್ದಾರೆ. ಈಗ ಇವರ ಸಾಲಿಗೆ ಹೊಸ ಸೇರ್ಪಡೆ ಜಾನ್ವಿ ಜ್ಯೋತಿ. ಯಾವ ಜಾನ್ವಿ ಜ್ಯೋತಿ ಎಂದರೆ ಈಗಷ್ಟೇ ಚಿತ್ರರಂಗಕ್ಕೆ ಕಾಲಿಟ್ಟ ನವನಟಿ ಎನ್ನಬಹುದು.  ನೂರಾರು ಬಣ್ಣದ ಕನಸುಗಳೊಂದಿಗೆ ಚಿತ್ರರಂಗಕ್ಕೆ ಬಂದಿರುವ ಜಾನ್ವಿ ಜ್ಯೋತಿಗೆ ಒಳ್ಳೆಯ ಡ್ಯಾನ್ಸರ್‌ ಕೂಡಾ. ಈಗಾಗಲೇ ಅವರಿಗೆ ಒಂದಷ್ಟು ಅವಕಾಶಗಳು ಸಿಗುವ ಮೂಲಕ ಭವಿಷ್ಯದ ಭರವಸೆ ಮೂಡಿದೆ. ಮುಂದೆ ಚಿತ್ರರಂಗದಲ್ಲಿ ಗಟ್ಟಿ ನೆಲೆ ನಿಲ್ಲುವ ವಿಶ್ವಾಸ ಬಂದಿದೆ. ಜಾನ್ವಿ ಜ್ಯೋತಿ ನಾಯಕಿಯಾಗಿ ನಟಿಸಿದ ಸಿನಿಮಾಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಆದರೆ, ಹಾಡು ಹಾಗೂ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ “ಜಾತ್ರೆ’ ಹಾಗೂ “ಮಿಸ್ಟರ್‌ ಮೊಮ್ಮಗ’ ಚಿತ್ರ ಈಗಾಗಲೇ ಬಿಡುಗಡೆಯಾಗಿದೆ. “ಜಾತ್ರೆ’ ಚಿತ್ರದ ಕಲರ್‌ಫ‌ುಲ್‌ ಹಾಡೊಂದರಲ್ಲಿ ಜಾನ್ವಿ ಜ್ಯೋತಿ ಸಖತ್ತಾಗಿ ಸ್ಟೆಪ್‌ ಹಾಕಿದ್ದಾರೆ. ಜೊತೆಗೆ “ಮಿಸ್ಟರ್‌ ಮೊಮ್ಮಗ’ ಚಿತ್ರದಲ್ಲಿ ರಂಗಾಯಣ ರಘು ಅವರೊಂದಿಗೆ ಒಂದು ಸಣ್ಣ ಪಾತ್ರದಲ್ಲಿ ನಟಿಸಿದ್ದಾರೆ.

ಡೆಂಟಿಸ್ಟ್‌ ಜಾನ್ವಿ
ಕೆಲವರು ಸಿನಿಮಾವನ್ನೇ ಪ್ರೊಫೆಶನ್‌ನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಪ್ರೊಫೆಶನ್‌ ಬೇರೆ ಇದ್ದರೂ ಪ್ಯಾಶನ್‌ಗಾಗಿ ಸಿನಿಮಾ ರಂಗಕ್ಕೆ ಬರುತ್ತಾರೆ. ಚಿಕ್ಕಂದಿನಲ್ಲಿನ ಆಸಕ್ತಿ ಮುಂದೆ ಅವರನ್ನು ಈ ಕ್ಷೇತ್ರದತ್ತ ಬರುವಂತೆ ಮಾಡುತ್ತದೆ. ಈ ಜಾನ್ವಿ ಜ್ಯೋತಿ ಕೂಡಾ ಇದಕ್ಕೆ ಹೊರತಾಗಿಲ್ಲ. ಕೈಯಲ್ಲಿ ಉದ್ಯೋಗವಿದೆ. ಅದು ಡೆಂಟಿಸ್ಟ್‌. ಸಿನಿಮಾದ ಆಸೆಗಾಗಿ ಜಾನ್ವಿ ಶಿಕ್ಷಣವನ್ನು ಮೊಟಕುಗೊಳಿಸಲಿಲ್ಲ. ಡೆಂಟಿಸ್ಟ್‌ ಆಗಬೇಕೆಂಬ ತನ್ನ ಗುರಿಯನ್ನು ತಲುಪಿದ ಜಾನ್ವಿ ಈಗ ಡೆಂಟಿಸ್ಟ್‌ ಆಗಿ ಪ್ರಾಕ್ಟೀಸ್‌ ಮಾಡುತ್ತಿದ್ದಾರೆ. ಹೀಗೆ ಶಿಕ್ಷಣದ ಜೊತೆಗೆ ಸಿನಿಮಾ ಆಸಕ್ತಿಯನ್ನು ಬೆಳೆಸಿಕೊಂಡು ಬಂದ ಜಾನ್ವಿ ಮೊದಲ ಹಂತವಾಗಿ ಸೇರಿಕೊಂಡಿದ್ದು ಡ್ಯಾನ್ಸ್‌ ತಂಡವೊಂದನ್ನು. ನೇರವಾಗಿ ನಾಯಕಿಯಾಗಲು ಹೋದರೆ ಯಾರೂ ಅವಕಾಶ ಕೊಡುವುದಿಲ್ಲ ಎಂಬುದನ್ನು ಚೆನ್ನಾಗಿ ಮನದಟ್ಟು ಮಾಡಿಕೊಂಡಿದ್ದ ಜಾನ್ವಿ “ಶಾಡೋಸ್‌’ ತಂಡದೊಂದಿಗೆ ಸೇರಿಕೊಂಡು ಅನೇಕ ಕಾರ್ಯಕ್ರಮಗಳನ್ನು ಕೊಡುತ್ತಾರೆ. ನಿಜ ಹೇಳಬೇಕೆಂದರೆ ಜಾನ್ವಿಗೆ ಆ ನೃತ್ಯತಂಡ ಒಂದು ಒಳ್ಳೆಯ ವೇದಿಕೆಯನ್ನು ಒದಗಿಸಿಕೊಟ್ಟಿತ್ತೆಂದರೆ ತಪ್ಪಲ್ಲ. “ನನಗೆ ನೃತ್ಯದಲ್ಲಿ ತುಂಬಾ ಆಸಕ್ತಿ. ನಾನು ಭರತನಾಟ್ಯ ನೃತ್ಯಗಾತಿ ಕೂಡಾ. ಡ್ಯಾನ್ಸರ್‌ ಆಗಿದ್ದ ನನಗೆ ಮೊದಲು ಅವಕಾಶ ಸಿಕ್ಕಿದ್ದು ಶಾಡೋಸ್‌ ತಂಡದಲ್ಲಿ. ಆ ತಂಡದ ಜೊತೆ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾದೆ. ಅದು ನನಗೊಂದು ಒಳ್ಳೆಯ ವೇದಿಕೆಯನ್ನು ಒದಗಿಸಿಕೊಟ್ಟಿದ್ದು ಸುಳ್ಳಲ್ಲ. ಡ್ಯಾನ್ಸ್‌ ಮಾಡುತ್ತಲೇ ಸಿನಿಮಾದ ಕನಸು ಕಾಣುತ್ತಾ ಬಂದೆ’ ಎಂದು ತಾವು ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ಬಗ್ಗೆ ಹೇಳುತ್ತಾರೆ ಜಾನ್ವಿ. ಜಾನ್ವಿ ಡ್ಯಾನ್ಸರ್‌ ನಿಜ. ಆದರೆ ನಟಿಯಾಗಿ ಕೋರ್ಸ್‌ ಏನಾದರೂ ಮಾಡಿದ್ದಾರಾ ಎಂದರೆ ಖಂಡಿತಾ ಇಲ್ಲ. ಇವರ ಆಸಕ್ತಿಯೇ ಇಂದು ನಾಯಕಿಯನ್ನಾಗಿ ಮಾಡಿದೆಯಂತೆ. ಬಹುತೇಕ ನಟಿಯರಂತೆ ಕನ್ನಡಿ ಮುಂದೆ ನಿಂತು ಅಭಿನಯಿಸುವ ಮೂಲಕ ಕ್ಯಾಮರಾ ಎದುರಿಸುವ ಧೈರ್ಯ ಬೆಳೆಸಿಕೊಂಡವರು ಜಾನ್ವಿ. ಮಗಳು ಡೆಂಟಿಸ್ಟ್‌ ಓದಿ ಸಿನಿಮಾ ಕಡೆ ಹೋದರೆ ಹೇಗೆ ಎಂದು ಫ್ಯಾಮಿಲಿ ಅಂದುಕೊಳ್ಳೋದು ಸಹಜ. ಆದರೆ ಜಾನ್ವಿ ಮನೆಯವರು ಮಾತ್ರ ಅವರ ಆಸಕ್ತಿಗೆ ಬೆಂಬಲವಾಗಿ ನಿಂತರಂತೆ. ಓದು ಮುಗಿಸಿದ ನಂತರ ಸಿನಿಮಾದತ್ತ ವಾಲಿದ್ದರಿಂದ ಕುಟುಂಬದವರು ಕೂಡಾ ಖುಷಿಯಿಂದ ಒಪ್ಪಿಕೊಂಡರು ಎನ್ನುತ್ತಾರೆ ಜಾನ್ವಿ ಜ್ಯೋತಿ. 

ಡ್ಯಾನ್ಸರ್‌ ಆಗಿ ಬಿಝಿಯಾಗಿದ್ದ ಜಾನ್ವಿ ಮೊದಲ ಬಾರಿಗೆ ಕ್ಯಾಮರಾ ಎದುರಿಸಿದ್ದು “ಸಾಗರ ಸಂಗಮ’ ಧಾರಾವಾಹಿ ಮೂಲಕ.  ಆ ಧಾರಾವಾಹಿ ಟೈಟಲ್‌ ಟ್ರ್ಯಾಕ್‌ನಲ್ಲಿ ನೃತ್ಯ ಮಾಡಲು ಒಬ್ಬ ಡ್ಯಾನ್ಸರ್‌ ಬೇಕಿತ್ತು. ಹೇಗೂ ಒಳ್ಳೆಯ ಡ್ಯಾನ್ಸರ್‌ ಆಗಿದ್ದ ಜಾನ್ವಿಗೆ ಈ ಅವಕಾಶ ಸಿಗುತ್ತದೆ. ಪಾಲಿಗೆ ಬಂದಿದ್ದೇ ಪಂಚಾಮೃತ ಎಂದುಕೊಂಡ ಜಾನ್ವಿ ಅದನ್ನು ಒಪ್ಪಿಕೊಳ್ಳುತ್ತಾರೆ. ಹಾಗಾಗಿ, ಜಾನ್ವಿಗೆ “ಸಾಗರ ಸಂಗಮ’ ಮೂಲಕ ಮೊದಲ ಬಾರಿಗೆ ಕ್ಯಾಮರಾ ಎದುರಿಸಿದಂತಾಯಿತು. ಹೀಗೆ ಧಾರಾವಾಹಿಯ ಹಾಡೊಂದರ ಮೂಲಕ ಕ್ಯಾಮರಾ ಎದುರಿಸಿದ ಜಾನ್ವಿಗೆ ಸಿನಿಮಾದಲ್ಲಿ ನಟಿಸುವ ಆಸೆ ಮೊಳಕೆಯೊಡೆಯುತ್ತದೆ. 

ಹೀಗಿರುವಾಗ ಸಿಕ್ಕಿದ್ದು “ಜಾತ್ರೆ’. ಚೇತನ್‌ ಚಂದ್ರ ನಾಯಕರಾಗಿರುವ “ಜಾತ್ರೆ’ ಚಿತ್ರದ ಕಲರ್‌ಫ‌ುಲ್‌ ಹಾಡೊಂದರಲ್ಲಿ ಸ್ಟೆಪ್‌ ಹಾಕುವ ಅವಕಾಶ ಜಾನ್ವಿಗೆ ಸಿಗುವ ಮೂಲಕ ಸಿನಿಮಾ ಪಯಣ ಆರಂಭವಾಗುತ್ತದೆ. ಮಾಸ್‌ ಫೀಲ್‌ ಕೊಡುವ ಈ ಸಿನಿಮಾದಲ್ಲಿ ಜಾನ್ವಿ ಸಖತ್ತಾಗಿ ಸ್ಟೆಪ್‌ ಹಾಕುವ ಮೂಲಕ ಭರವಸೆ ಮೂಡಿಸುತ್ತಾರೆ. ಹೀಗೆ ಆರಂಭವಾದ ಜಾನ್ವಿಗೆ ಎರಡನೇ ಆಫ‌ರ್‌ ಆಗಿ ಸಿಗೋದು “ಮಿಸ್ಟರ್‌ ಮೊಮ್ಮಗ’ ಚಿತ್ರ. ಹಾಗಂತ ನಾಯಕಿಯಾಗಿಯಲ್ಲ. ಚಿತ್ರದ ಒಂದು ಸಣ್ಣ ಪಾತ್ರವಾಗಿ. ರಂಗಾಯಣ ರಘು ಜೊತೆ ಒಂದು ಸಣ್ಣ ಪಾತ್ರದಲ್ಲಿ ನಟಿಸಿದ ತೃಪ್ತಿಯೊಂದಿಗೆ “ಮೊಮ್ಮಗ’ ತಂಡದಲ್ಲಿ ಜಾನ್ವಿ ಗುರುತಿಸಿಕೊಳ್ಳುತ್ತಾರೆ. ಹೀಗೆ ಎರಡು ಸಿನಿಮಾಗಳ ಸಣ್ಣ ಪಾತ್ರದಲ್ಲಿ ಗುರುತಿಸಿಕೊಂಡ ಜಾನ್ವಿಗೆ ನಾಯಕಿಯಾಗುವ ಅವಕಾಶ ಸಿಕ್ಕಿದ್ದು “ಉರ್ವಿ’ ಸಿನಿಮಾ ಮೂಲಕ.

ಹೌದು, ಜಾನ್ವಿ ಕಂಡ ಕನಸು ಈಗ ಈಡೇರಿದೆ. ನಿಧಾನವಾಗಿಯಾದರೂ ಹೀರೋಯಿನ್‌ ಅವಕಾಶ ಸಿಗುತ್ತದೆಂದು ನಂಬಿದ್ದ ಜಾನ್ವಿಗೆ “ಉರ್ವಿ’ ಚಿತ್ರದ ಮೂಲಕ ಆ ಅವಕಾಶ ಸಿಕ್ಕಿದೆ. ಆ ಚಿತ್ರದ ನಾಲ್ವರು ನಾಯಕಿಯರಲ್ಲಿ ಜಾನ್ವಿ ಕೂಡಾ ಒಬ್ಬರು. ಈ ಚಿತ್ರದಲ್ಲಿ ಜಾನ್ವಿಗೆ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. “ತುಂಬಾ ಖುಷಿಯಾಗುತ್ತಿದೆ. ಉರ್ವಿಯಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ಪಾತ್ರದ ಟ್ರಿಟ್‌ಮೆಂಟ್‌ನಿಂದ ಹಿಡಿದು ಗೆಟಪ್‌ ಕೂಡಾ ವಿಭಿನ್ನವಾಗಿದೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಗೆ ರೆಡಿಯಾಗಿದೆ. 

ನಾಯಕಿಯಾಗಿ ನನಗೆ ಸಿಕ್ಕಿದ ಮೊದಲ ಸಿನಿಮಾದ ನನಗೆ ಖುಷಿ ಇದೆ. ಒಳ್ಳೆಯ ಪಾತ್ರ’ ಎನ್ನುವುದು ಜಾನ್ವಿ ಜ್ಯೋತಿ ಮಾತು. ಈ ನಡುವೆಯೇ ಜಾನ್ವಿಗೆ ನಾಯಕಿಯಾಗಿ ಒಂದಷ್ಟು ಪಾತ್ರಗಳು ಹುಡುಕಿಕೊಂಡು ಬರುತ್ತಿವೆ. ಈಗಾಗಲೇ “ಸೆಕೆಂಡ್‌ ಶೋ’ ಎಂಬ ಹಾರರ್‌ ಸಿನಿಮಾದಲ್ಲೂ ಜಾನ್ವಿಗೆ ಅವಕಾಶ ಸಿಕ್ಕಿದೆ. ಜೊತೆಗೆ “ಕಾಣದ ಕಡಲಿಗೆ’ ಎಂಬ ಸಿನಿಮಾವೂ ಇವರ ಕೈಯಲ್ಲಿದೆ. 

ಇಂತಿಪ್ಪ ಜಾನ್ವಿ ಜ್ಯೋತಿ ರಂಗಭೂಮಿಯಲ್ಲೂ ತೊಡಗಿಕೊಂಡಿದ್ದಾರೆ. “ಆಸ್ಕ್ ಮಿಸ್ಟರ್‌ ವೈಎನ್‌ಕೆ’ ಎಂಬ ನಾಟಕದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ನಾಟಕ ನೋಡಿದವರಿಂದ ಜಾನ್ವಿ ಜ್ಯೋತಿಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ವಿಭಿನ್ನ ಪಾತ್ರಗಳಲ್ಲಿ ತೊಡಗಿಕೊಳ್ಳುವ ವಿಶ್ವಾಸ ಮೂಡಿದೆ.  “ನನಗೆ ಸಿನಿಮಾ ಜೊತೆಗೆ ರಂಗಭೂಮಿಯಲ್ಲೂ ತೊಡಗಿಕೊಳ್ಳಬೇಕೆಂಬ ಆಸೆ ಇತ್ತು. ಅದಕ್ಕಾಗಿ ಈಗ ನಾಟಕ ಮಾಡುತ್ತಿದ್ದೇನೆ. ಇತ್ತ ಕಡೆ ಸಿನಿಮಾಗಳಿಂದಲೂ ಒಳ್ಳೆಯ ಪಾತ್ರಗಳು ಬರತೊಡಗಿವೆ’ ಎನ್ನುತ್ತಾರೆ. ಇನ್ನು, ಜಾನ್ವಿಗೆ ದೇವಿಯ ಪಾತ್ರದಲ್ಲಿ ನಟಿಸಲು ಇಷ್ಟವಂತೆ. ಆ ಪಾತ್ರದಲ್ಲಿ ಪರ್‌ಫಾರ್ಮೆನ್ಸ್‌ಗೆ  ಅವಕಾಶವಿರುತ್ತದೆ ಎಂಬುದು ಅವರ ಮಾತು.  ಸದ್ಯ ನಟಿಯಾಗಿ ಬಿಝಿಯಾಗುತ್ತಿರುವ ಜಾನ್ವಿ ಮುಂದೆ ವೈದೈ ವೃತ್ತಿಗೆ ಗುಡ್‌ಬೈ ಹೇಳುತ್ತಾರಾ ಎಂದು ನೀವು ಕೇಳಬಹುದು. ಆದರೆ, ಜಾನ್ವಿ ಮಾತ್ರ ಯಾವುದೇ ಕಾರಣಕ್ಕೂ ವೃತ್ತಿಯನ್ನು ಬಿಡುವುದಿಲ್ಲವಂತೆ. “ಸಿನಿಮಾ ಚಿತ್ರೀಕರಣ ತಿಂಗಳುಪೂರ್ತಿ ಇರೋದಿಲ್ಲ. ಹಾಗಾಗಿ ವೃತ್ತಿಗೆ ಗುಡ್‌ ಬೈ ಹೇಳುವ ಪ್ರಶ್ನೆಯೇ ಇಲ್ಲ. ಅದು ಅದರ ಪಾಡಿಗೆ ನಡೆಯುತ್ತದೆ’ ಎನ್ನುತ್ತಾರೆ. 

ಬರಹ: ರವಿಪ್ರಕಾಶ್‌ ರೈ; ಚಿತ್ರಗಳು: ಸಂಗ್ರಹ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ