ದಿಗಂತ್-ಐಂದ್ರಿತಾ ಮದುವೆಗೆ ಷರತ್ತು ಬದ್ದ ಆಹ್ವಾನ
Team Udayavani, Dec 5, 2018, 11:15 AM IST
ನಟ ದಿಗಂತ್ ಹಾಗೂ ಐಂದ್ರಿತಾ ರೇ ಹಸೆಮಣೆ ಏರಲು ಮುಹೂರ್ತ ನಿಗಧಿಯಾಗಿದೆ. ಇದೇ ಡಿ. 11 ಮತ್ತು 12ರಂದು ದಿಗಂತ್, ಐಂದ್ರಿತಾ ಮದುವೆ ರಾಜರಾಜೇಶ್ವರಿ ನಗರದ ಸುಭಾಶ್ ಭವನದಲ್ಲಿ ಸರಳವಾಗಿ ನೆರವೇರಲಿದೆ.
ಇನ್ನು ಮದುವೆಯ ಅಂತಿಮ ಹಂತದ ತಯಾರಿಯಲ್ಲಿ ಇಬ್ಬರ ಕುಟುಂಬ ವರ್ಗ ತೊಡಗಿಕೊಂಡಿದ್ದರೆ, ಮತ್ತೂಂದೆಡೆ ದಿಗಂತ್, ಐಂದ್ರಿತಾ ಜೋಡಿ ತಮ್ಮ ಮದುವೆಗೆ ಆಪ್ತರು ಮತ್ತು ನೆಂಟರಿಷ್ಟರನ್ನು ಆಹ್ವಾನಿಸುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಎರಡು ಬಗೆಯ ಆಮಂತ್ರಣ ಪತ್ರಿಕೆಗಳನ್ನ ಮುದ್ರಿಸಲಾಗಿದ್ದು, ಕುಟುಂಬದವರಿಗೆ ಹಾಗೂ ಗಣ್ಯರಿಗೆ ಎರಡು ಪ್ರತ್ಯೇಕ ಆಹ್ವಾನ ಪತ್ರಿಕೆ ನೀಡಲಾಗುತ್ತಿದೆ.
ಇನ್ನೊಂದು ವಿಶೇಷವೆಂದರೆ, ಮದುವೆಗೆ ಕುಟುಂಬಸ್ಥರು ಮತ್ತು ತೀರಾ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದ್ದು, ವಿವಾಹಕ್ಕೆ ಬರುವವರು ಕಡ್ಡಾಯವಾಗಿ ಭಾರತೀಯ ಸಾಂಪ್ರದಾಯಿಕ ಶೈಲಿಯ ಉಡುಗೆಯಲ್ಲೇ ಬರುವಂತೆ ತಿಳಿಸಲಾಗಿದೆ. ಇನ್ನು ವಿವಾಹದ ಬಳಿಕ ಡಿ. 16ರಂದು ಚಿತ್ರರಂಗದ ಸ್ನೇಹಿತರು ಮತ್ತು ಹಿತೈಷಿಗಳಿಗಾಗಿ ಖಾಸಗಿ ಹೋಟೆಲ್ನಲ್ಲಿ ಔತಣಕೂಟವನ್ನು ಆಯೋಜಿಸಲಾಗಿದ್ದು, ಚಿತ್ರರಂಗದ ಹಲವು ತಾರೆಯರು, ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.