ದಿಗಂತ್ ಹುಟ್ಟುಹಬ್ಬಕ್ಕೆ ಕವಿತಾ ನಾಯಕಿ
ಚಿತ್ರಕ್ಕೆ ಇಂದು ಮುಹೂರ್ತ
Team Udayavani, May 1, 2019, 3:00 AM IST
ನಟ ದಿಗಂತ್ “ಹುಟ್ಟುಹಬ್ಬದ ಶುಭಾಶಯಗಳು’ ಎಂಬ ಸಿನಿಮಾ ಒಪ್ಪಿಕೊಂಡಿರುವ ವಿಚಾರ ನಿಮಗೆ ಗೊತ್ತಿರಬಹುದು. ನಾಗರಾಜ್ ಬೇತೂರ್ ಈ ಸಿನಿಮಾದ ನಿರ್ದೇಶಕರು. ಇವರಿಗಿದು ಚೊಚ್ಚಲ ಸಿನಿಮಾ. ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿದ್ದ ನಾಗರಾಜ್, ಈಗ ದಿಗಂತ್‌ಗೆ ಹುಟ್ಟುಹಬ್ಬದ ಶುಭಾಶಯ ಹೇಳುತ್ತಿದ್ದಾರೆ.
ಈ ಚಿತ್ರಕ್ಕೆ ಇಂದು ಮುಹೂರ್ತ ನಡೆಯುತ್ತಿದೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ಈಗ ಒಬ್ಬ ನಾಯಕಿಯ ಆಯ್ಕೆಯಾಗಿದೆ. ಅದು ಕವಿತಾ ಗೌಡ. ಬಿಗ್‌ಬಾಸ್‌ನಿಂದ ಬಂದ ಕವಿತಾ ಗೌಡ, ಇತ್ತೀಚೆಗೆ ಡ್ಯಾನ್ಸ್ ರಿಯಾಲಿಟಿ ಶೋವೊಂದರಲ್ಲಿ ಬಿಝಿಯಾಗಿದ್ದರು. ಈಗ ದಿಗಂತ್ ಸಿನಿಮಾದಲ್ಲಿ ನಾಯಕಿಯಾಗುವ ಅವಕಾಶ ಸಿಕ್ಕಿದೆ. ಚಿತ್ರದಲ್ಲಿ ಕವಿತಾ ಪಾತ್ರ ಕೂಡಾ ವಿಭಿನ್ನವಾಗಿದೆಯಂತೆ.
ಒಂದರ ಹಿಂದೊಂದರಂತೆ ಸಿನಿಮಾ ನಿರ್ಮಿಸುತ್ತಿರುವ ಕ್ರಿಸ್ಟಲ್ ಪಾರ್ಕ್‌ನ ಟಿ.ಆರ್.ಚಂದ್ರಶೇಖರ್ ಈ ಚಿತ್ರದ ನಿರ್ಮಾಪಕರು. ಈಗಾಗಲೇ “ಚಮಕ್’, “ಅಯೋಗ್ಯ’, “ಬೀರ್‌ಬಲ್’ ಚಿತ್ರಗಳನ್ನು ನಿರ್ಮಿಸಿರುವ ಚಂದ್ರಶೇಖರ್, ಸದ್ಯ ಉಪೇಂದ್ರ, ಅಜೇಯ್ ಹಾಗೂ ರಾಜ್ ಬಿ ಶೆಟ್ಟಿ ಜೊತೆ ಸಿನಿಮಾ ಮಾಡುತ್ತಿದ್ದಾರೆ.
ಈಗ ದಿಗಂತ್ ಜೊತೆ “ಹುಟ್ಟುಹಬ್ಬದ ಶುಭಾಶಯಗಳು’ ಮಾಡಲು ಹೊರಟಿದ್ದಾರೆ. ಈ ಚಿತ್ರದ ಟೈಟಲ್ ಡಿಸೈನ್ ನೋಡಿದಾಗ ಇದೊಂದು ಥ್ರಿಲ್ಲರ್ ಸಿನಿಮಾ ಎಂಬುದು ಗೊತ್ತಾಗುತ್ತದೆ. ರಕ್ತ, ಕತ್ತಿ, ಸುತ್ತಿಗೆಯನ್ನು ಬಳಸಿ ಟೈಟಲ್ ಡಿಸೈನ್ ಮಾಡಲಾಗಿದೆ. ಚಿತ್ರಕ್ಕೆ ಮಿಥುನ್ ಮುಕುಂದನ್ ಸಂಗೀತವಿದೆ. ಇಂದು ಮುಹೂರ್ತ ಆಚರಿಸುತ್ತಿರುವ ಚಿತ್ರ ಸತತವಾಗಿ ಚಿತ್ರೀಕರಣ ಮಾಡಲಿದೆ.