ನಮ್ಮಿಬ್ಬರನ್ನು ಹ್ಯಾಂಡಲ್‌ ಮಾಡುವ ನಿರ್ದೇಶಕರು ಸಿಕ್ಕಾಗ ಜೊತೆಯಾಗಿ ನಟನೆ

ಶಿವಣ್ಣ ಜೊತೆಗಿನ ಸಿನಿಮಾ ಕುರಿತು ದರ್ಶನ್‌ ಮಾತು

Team Udayavani, Nov 23, 2019, 6:02 AM IST

ಸಾಮಾನ್ಯವಾಗಿ ಯಾವುದೇ ಚಿತ್ರರಂಗವಿರಲಿ, ಅಲ್ಲಿನ ಸ್ಟಾರ್‌ ನಟರು ಒಟ್ಟಾಗಿ ಅಭಿನಯಿಸುತ್ತಾರೆ ಅಂದ್ರೆ ಚಿತ್ರರಂಗದಲ್ಲಿ ಒಂದಷ್ಟು ಸಂಚಲನ ಸೃಷ್ಟಿಯಾಗೋದು ಸಹಜ. ಕನ್ನಡ ಚಿತ್ರರಂಗದಲ್ಲೂ ಇಂಥ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಡಾ. ರಾಜಕುಮಾರ್‌-ವಿಷ್ಣುವರ್ಧನ್‌ ಅವರಿಂದ ಹಿಡಿದು ಇತ್ತೀಚಿನ ಶಿವರಾಜಕುಮಾರ್‌-ಸುದೀಪ್‌ ಅವರ ಚಿತ್ರಗಳವರೆಗೆ, ಸ್ಟಾರ್‌ ನಟರು ಒಟ್ಟಾಗಿ ಅಭಿನಯಿಸಿದ ಚಿತ್ರಗಳೆಲ್ಲವೂ ಸೆಟ್ಟೇರೋದಕ್ಕೂ ಮುಂಚಿನಿಂದಲೇ ಸುದ್ದಿಯಾಗಿ, ತೆರೆಗೆ ಬರುವವರೆಗೂ ಸುದ್ದಿಯಾಗುತ್ತಲೇ ಇರೋದನ್ನ ಸ್ಯಾಂಡಲ್‌ವುಡ್‌ ಕಂಡಿದೆ.

ಇನ್ನು ಕನ್ನಡ ಚಿತ್ರರಂಗದ ಇಬ್ಬರು ಸ್ಟಾರ್‌ಗಳಾದ ಶಿವರಾಜಕುಮಾರ್‌ ಮತ್ತು ದರ್ಶನ್‌ ಕೂಡ ಒಟ್ಟಿಗೆ ಅಭಿನಯಿಸುತ್ತಾರೆ ಎಂಬ ಸುದ್ದಿ ಕೂಡ ಆಗಾಗ್ಗೆ ಚಿತ್ರರಂಗದಲ್ಲಿ ಹರಿದಾಡಿ ತಣ್ಣಗಾಗುತ್ತಿತ್ತು. ಆಗಾಗ ಸುದ್ದಿಯಾಗುತ್ತಿದ್ದ ಈ ವಿಷಯದ ಬಗ್ಗೆ ಇಬ್ಬರೂ ನಟರು ಎಲ್ಲೂ ನೇರನೇರಾ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರಲಿಲ್ಲ. ಆದರೆ ಇದೀಗ ಶಿವಣ್ಣ ಮತ್ತು ದರ್ಶನ್‌ ಇಬ್ಬರು ಒಟ್ಟಿಗೇ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಶುಕ್ರವಾರ ಬೆಳಿಗ್ಗೆ ಕಂಠೀರವ ಸ್ಟುಡಿಯೋದಲ್ಲಿ ನಡೆದ ಹೊಸಬರ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಇಬ್ಬರು ಒಟ್ಟಿಗೆ ಅತಿಥಿಗಳಾಗಿ ಕಾಣಿಸಿಕೊಂಡಿದ್ದರು.

ಈ ಸಮಯದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಶಿವಣ್ಣ ಮತ್ತು ದರ್ಶನ್‌ ಒಟ್ಟಿಗೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಆದರೆ ಇಬ್ಬರಿಗೂ ಹೊಂದಿಕೆಯಾಗುವಂತ ಕಥೆ ಇರಬೇಕು ಎಂಬುದು ಇಬ್ಬರು ಹಾಕಿರುವ ಕಂಡೀಷನ್‌. ಮೊದಲಿಗೆ “ಇಬ್ಬರು ಒಟ್ಟಿಗೆ ನಟಿಸುವ ಸಮಯ ಬರುತ್ತೆ ಹೇಳಲಿಕ್ಕೆ ಆಗಲ್ಲ’ ಎಂದು ಶಿವಣ್ಣ ಮಾತು ಪ್ರಾರಂಭಿಸುತ್ತಿದ್ದಂತೆ, ದರ್ಶನ್‌, “ನಮ್ಮಿಬ್ಬರನ್ನು ಹ್ಯಾಂಡಲ್‌ ಮಾಡುವ ನಿರ್ದೇಶಕರಿಲ್ಲ. ಜೊತೆಗೆ ಇಬ್ಬರಿಗೂ ಆಗುವಂತಹ ಕಥೆ ಮಾಡಿಕೊಂಡು ಬರಲಿ ಖಂಡಿತಾ ಇಬ್ಬರು ಮಾಡುತ್ತೀವಿ’ ಎಂದರು. “ಇನ್ನು ಆ ಚಿತ್ರದಲ್ಲಿ ಲಾಂಗ್‌ ಹಿಡಿಯುವ ಸನ್ನಿವೇಶ ಬಂದರೆ ಶಿವಣ್ಣ ಸೀನಿಯರ್‌ ಅವರೇ ಹಿಡಿಯುತ್ತಾರೆ ನಾನು ಪಕ್ಕದಲ್ಲಿ ಇರ್ತೀನಿ’ ಎಂದಿದ್ದಾರೆ.

ಇನ್ನು ಶಿವಣ್ಣ ಮಾತನಾಡಿ, “ಒಳ್ಳೆಯ ಸಬ್ಜೆಕ್ಟ್ ಬಂದರೆ ಖಂಡಿತಾ ಮಾಡುತ್ತೇನೆ, ಅದರಲ್ಲಿ ಏನಿದೆ. ನಾವು ಮಾಡುತ್ತೇವೆ ಅಂತ ಹೋಗಬಾರದು. ಅದಾಗೆ ಬರಬೇಕು. ಹಾಗೆ ಬಂದಾಗಲೇ ಚೆನ್ನಾಗಿ ಇರುತ್ತೆ. ದರ್ಶನ್‌ ಮತ್ತು ನಾನು ಮಾತನಾಡುವಾಗ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಕಥೆ ಚೆನ್ನಾಗಿದ್ದರೆ ಖಂಡಿತ ಮಾಡುತ್ತೇವೆ’ ಎಂದು ಹೇಳಿದ್ದಾರೆ. ಒಟ್ಟಾರೆ ಕಳೆದ ಕೆಲ ವರ್ಷಗಳಿಂದ ಶಿವಣ್ಣ-ದರ್ಶನ್‌ ಒಟ್ಟಾಗಿ ಅಭಿನಯಿಸುತ್ತಾರೆ ಎಂದು ಹರಿದಾಡುತ್ತಿದ್ದ ಸುದ್ದಿಗೆ ಮತ್ತೆ ರೆಕ್ಕೆ ಬಂದಿದ್ದು, ಇದು ಎಷ್ಟರ ಮಟ್ಟಿಗೆ ನಿಜವಾಗುತ್ತದೆ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ