ಕುರುಕ್ಷೇತ್ರ ಬಗ್ಗೆ ಏನೂ ಕೇಳಬೇಡಿ

Team Udayavani, Jan 24, 2019, 5:47 AM IST

ದರ್ಶನ್‌ ಅಭಿನಯದ “ಕುರುಕ್ಷೇತ್ರ’ ಚಿತ್ರ ಯಾವಾಗ ಬಿಡುಗಡೆಯಾಗುತ್ತೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಚಿತ್ರ ಬಿಡುಗಡೆ ಕುರಿತಂತೆ ಸ್ವತಃ ದರ್ಶನ್‌ ಅವರೇ, “ಕುರುಕ್ಷೇತ್ರ’ ಬಿಡುಗಡೆ ಬಗ್ಗೆ ನಿರ್ಮಾಪಕ ಮುನಿರತ್ನ ಅವರ ಬಳಿಯೇ ಕೇಳಬೇಕು’ ಅಂತ ಈ ಹಿಂದೆ ಹೇಳಿದ್ದರು. “ಕುರುಕ್ಷೇತ್ರ’ ಚಿತ್ರ ತೆರೆಗೆ ಬರಲು ಸಂಪೂರ್ಣ ಸಿದ್ಧಗೊಂಡಿದ್ದರೂ, ಯಾಕೆ ಬಿಡುಗಡೆಯಾಗುತ್ತಿಲ್ಲ ಎಂಬ ಪ್ರಶ್ನೆಗೆ ಇದೀಗ ಸ್ವತಃ ನಿರ್ಮಾಪಕ ಮುನಿರತ್ನ ಅವರೇ ಉತ್ತರ ಕೊಟ್ಟಿದ್ದಾರೆ.

“ಕುರುಕ್ಷೇತ್ರ’ ಚಿತ್ರದ ಬಗ್ಗೆ ಏನನ್ನೂ ಕೇಳಬೇಡಿ. ಟೈಮ್‌ ಬಂದಾಗ ಎಲ್ಲವನ್ನೂ ನಾನೇ ಹೇಳ್ತೀನಿ…’ ಹೀಗೆಂದು ಮುನಿರತ್ನ ಹೇಳಿಕೊಂಡಿದ್ದಾರೆ. ಮೊದಲು ನನಗೆ ಆ ಸಿನಿಮಾ ಇಷ್ಟ ಆಗಬೇಕು. ಆ ನಂತರ ಮಾತ್ರ ಅದು ಚಿತ್ರಮಂದಿರಕ್ಕೆ ಬರಲಿದೆ. ಆದರೆ, ಯಾವಾಗ, ಬರುತ್ತೆ ಎಂಬುದನ್ನು ಈಗಲೇ ಹೇಳಲ್ಲ. ಆದಷ್ಟು ಬೇಗ ಆ ವಿಷಯ ಹೇಳುತ್ತೇನೆ’ ಎಂಬುದು ಮುನಿರತ್ನ ಅವರ ಮಾತು. ಅಷ್ಟಕ್ಕೂ ಅವರು “ಕುರುಕ್ಷೇತ್ರ’ ಕುರಿತು ಹೇಳಲು ಕಾರಣವಾಗಿದ್ದು, “ಸೀತಾರಾಮ ಕಲ್ಯಾಣ’ ಪತ್ರಿಕಾಗೋಷ್ಠಿ.

ಬುಧವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ “ಕುರುಕ್ಷೇತ್ರ’ ಬಿಡುಗಡೆ ಬಗ್ಗೆ ಪತ್ರಕರ್ತರಿಂದ ತೂರಿ ಬಂದ ಪ್ರಶ್ನೆಗಳಿಗೆ ಮುನಿರತ್ನ, ಟೈಮ್‌ ಬಂದಾಗ ನಾನೇ ಹೇಳ್ತೀನಿ’ ಅಂದರು. ಈಗ “ಕುರುಕ್ಷೇತ್ರ’ ಬಗ್ಗೆ ಏನನ್ನೂ ಕೇಳಬೇಡಿ. “ಕುರುಕ್ಷೇತ್ರ’ ಚಿತ್ರದಲ್ಲಿ ನಿಖೀಲ್‌ಕುಮಾರ್‌ ಅಭಿಮನ್ಯು ಪಾತ್ರ ನಿರ್ವಹಿಸಿದ್ದಾರೆ. ಅವರಿಗೆ ಶುಭಾಶಯ ಹೇಳಲು ಬಂದಿದ್ದೇನೆ. ಹಾಗಾಗಿ, “ಕುರುಕ್ಷೇತ್ರ’ ಬಗ್ಗೆ ಹೆಚ್ಚೇನೂ ಹೇಳುವುದಿಲ್ಲ.

ಮೊದಲು “ಸೀತಾರಾಮ ಕಲ್ಯಾಣ’ ಚಿತ್ರ ಬಿಡುಗಡೆಯಾಗುತ್ತಿದೆ. ಇದರ ಬಗ್ಗೆ ಮಾಹಿತಿ ಕೊಡಿ. “ಕುರುಕ್ಷೇತ್ರ’ ಚಿತ್ರದ ಬಗ್ಗೆ ನಾನೇ ನಿಮ್ಮ ಬಳಿ ಆಮೇಲೆ ಮಾತನಾಡುತ್ತೇನೆ. ಮೊದಲು ಪ್ರೇಕ್ಷಕನಾಗಿ ನನಗೆ ಆ ಸಿನಿಮಾ ಇಷ್ಟವಾಗಬೇಕು. ಅಲ್ಲಿಯವರೆಗೆ ಬಿಡುಗಡೆ ಮಾಡಲ್ಲ. ಅಷ್ಟಕ್ಕೂ ಚಿತ್ರ ತಡವಾಗೋಕೆ ಕಾರಣ, ತಾಂತ್ರಿಕ ವಿಷಯಗಳು. ಈಗಾಗಲೇ 2ಡಿಯಲ್ಲಿ “ಕುರುಕ್ಷೇತ್ರ’ ಚಿತ್ರ ರೆಡಿಯಾಗಿದೆ.

ನಾನು ಬೇಕಾದರೆ, ಮುಂದಿನ ಹದಿನೈದು ದಿನಗಳಲ್ಲೇ 2ಡಿ ವರ್ಷನ್‌ನಲ್ಲಿರುವ “ಕುರುಕ್ಷೇತ್ರ’ ಚಿತ್ರವನ್ನು ಬಿಡುಗಡೆ ಮಾಡಬಹುದು. ಆದರೆ, ನನಗೆ 3ಡಿಯಲ್ಲೂ “ಕುರುಕ್ಷೇತ್ರ’ವನ್ನು ಸಿದ್ಧಗೊಳಿಸಿ, ಪ್ರೇಕ್ಷಕರ ಮುಂದೆ ತರಬೇಕೆಂಬ ಆಸೆ ಇದೆ. ಅದಕ್ಕಾಗಿ ಈಗಾಗಲೇ ಎಲ್ಲಾ ತಯಾರಿಯೂ ನಡೆದಿದೆ. ಜೋರಾಗಿಯೇ ಕೆಲಸಗಳು ನಡೆಯುತ್ತಿವೆ. ಸದ್ಯದಲ್ಲೇ 3ಡಿ ತಾಂತ್ರಿಕ ಕೆಲಸಗಳು ಮುಗಿಯಲಿವೆ. ಆ ನಂತರ “ಕುರುಕ್ಷೇತ್ರ’ ಹೊರತರುತ್ತೇನೆ’ ಎಂಬುದು ಮುನಿರತ್ನ ಅವರ ಮಾತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ