ಚಿತ್ರರಂಗವನ್ನು ಮೂರ್‍ನಾಲ್ಕು ಸ್ಟಾರ್‌ಗಳಿಗಷ್ಟೇ ಸೀಮಿತ ಮಾಡಬೇಡಿ

ಪ್ರೇಕ್ಷಕ ಪ್ರಭುವಿಗೆ ಜಗ್ಗೇಶ್‌ ಮನವಿ

Team Udayavani, Apr 3, 2019, 3:00 AM IST

ಪ್ರತಿ ಭಾಷೆಯ ಚಿತ್ರರಂಗದಲ್ಲಿ ಒಂದಷ್ಟು ಮಂದಿ ಸ್ಟಾರ್‌ಗಳಿದ್ದಾರೆ. ಅದು ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ … ಹೀಗೆ ಯಾವುದೇ ಭಾಷೆಯನ್ನು ನೋಡಿದರೂ ಅಲ್ಲಿ ನಾಲ್ಕೈದು ಮಂದಿ ಸ್ಟಾರ್‌ಗಳಿರುತ್ತಾರೆ. ಆಯಾ ಭಾಷೆಯ ಪ್ರೇಕ್ಷಕರು ಕೂಡಾ ಅವರ ಸಿನಿಮಾಗಳಿಗೆ ಮಾತ್ರ ಮೊದಲ ಆದ್ಯತೆ ಕೊಡುತ್ತಾರೆ.

ಇದರಿಂದ ಹೊಸಬರ ಸಿನಿಮಾಗಳಿಗೆ ಸಿಗಬೇಕಾದ ಮಾನ್ಯತೆ ಸಿಗುವುದಿಲ್ಲ. ಎಷ್ಟೋ ಬಾರಿ ಸ್ಟಾರ್‌ಗಳ ಅಬ್ಬರದ ನಡುವೆ ಹೊಸಬರ ಹೊಸ ಬಗೆಯ ಸಿನಿಮಾಗಳು ಕಳೆದು ಹೋಗುತ್ತವೆ. ಈ ಚಿಂತೆ ಜಗ್ಗೇಶ್‌ ಅವರನ್ನು ಹಲವು ವರ್ಷಗಳಿಂದ ಕಾಡುತ್ತಲೇ ಇದೆಯಂತೆ. ಅದೇ ಕಾರಣದಿಂದ ಜಗ್ಗೇಶ್‌ ಪ್ರೇಕ್ಷಕರಿಗೊಂದು ಕಿವಿಮಾತು ಹೇಳಿದ್ದಾರೆ.

ಚಿತ್ರರಂಗವನ್ನು ಕೇವಲ ನಾಲ್ಕೈದು ಮಂದಿಗೆ ಸೀಮಿತ ಮಾಡಬೇಡಿ. ಹೊಸಬರ ಸಿನಿಮಾವನ್ನು ನೋಡಿ ಪ್ರೋತ್ಸಾಹಿಸಿ. ಪ್ರೇಕ್ಷಕರು ಕೇವಲ ಕೆಲವೇ ಕೆಲವು ಸ್ಟಾರ್‌ಗಳ ಸಿನಿಮಾಕ್ಕಷ್ಟೇ ಸೀಮಿತವಾದರೆ ಹೊಸ ಪ್ರತಿಭೆಗಳಿಗೆ ಅವಕಾಶ ಸಿಗೋದಿಲ್ಲ ಎಂಬುದು ಜಗ್ಗೇಶ್‌ ಕಳಕಳಿ. ಸ್ಟಾರ್‌ಗಳಿಗಷ್ಟೇ ಸೀಮಿತವಾಗಿರುವ ಪ್ರೇಕ್ಷಕ ವರ್ಗಕ್ಕೆ ಜಗ್ಗೇಶ್‌ ಹೇಳಿದ ಕಿವಿಮಾತು ಹೀಗಿದೆ,

“ಕನ್ನಡ ಚಿತ್ರರಂಗ ಕೆಲವರಿಗಷ್ಟೇ ಸೀಮಿತವಾಗೋದು ಬೇಡ. ಕೆಲವೇ ಕೆಲವು ಸ್ಟಾರ್‌ಗಳ ಸಿನಿಮಾಗಳನ್ನಷ್ಟೇ ನೋಡುತ್ತೇನೆ ಎಂದು ಚೌಕಟ್ಟು ಹಾಕಿಕೊಳ್ಳಬೇಡಿ. ಹೀಗಾದರೆ ಎಷ್ಟೋ ಪ್ರತಿಭೆಗಳು ಕೈಗೆ ಸಿಗದೇ ಹೋಗುತ್ತವೆ. ನಾನು ನನ್ನದೇ ದುಡ್ಡಲ್ಲಿ ಹೀರೋ ಆದವನು. ಆದರೆ, ಜನ ನನ್ನನ್ನು ಇಷ್ಟಪಟ್ಟು ಪ್ರತಿಭೆಯನ್ನು ಗುರುತಿಸಿದ್ದರಿಂದ ಇವತ್ತು ಇಷ್ಟು ವರ್ಷ ಚಿತ್ರರಂಗದಲ್ಲಿದ್ದೇನೆ.

ಅದೇ ರೀತಿ ಬರುವ ಹೊಸಬರನ್ನು ಕೈ ಹಿಡಿದರೆ ಅವರು ಇನ್ನೊಂದಷ್ಟು ವರ್ಷ ಚಿತ್ರರಂಗದಲ್ಲಿ ನೆಲೆ ಕಾಣಬಹುದು. ಇವತ್ತು ಯಾವುದೇ ಭಾಷೆಯನ್ನು ನೋಡಿದರೂ ಅಲ್ಲಿನ ಪ್ರೇಕ್ಷಕರು ಕೆಲವೇ ಕೆಲವು ಸ್ಟಾರ್‌ಗಳಿಗೆ ಸೀಮಿತವಾಗಿದ್ದಾರೆ. ತಮಿಳಿಗೆ ಹೋದ್ರೆ ಅಲ್ಲಿ 4 ಜನ. ಮಲಯಾಳಂಗೆ ಹೋದ್ರೆ ಅಲ್ಲೊಂದ್‌ 4 ಜನ. ಕನ್ನಡದಲ್ಲಿ ಒಂದ್‌ 5 ಜನ. ಹಿಂದಿಯಲ್ಲಿ 3 ಜನ.

ಹೀಗಾದರೆ ಹೊಸಬರ ಕಥೆ ಏನು. ಪ್ರೇಕ್ಷಕನ ಹೃದಯ ದೊಡ್ಡದಾಗಬೇಕು. ಸಿನಿಮಾ ಚೆನ್ನಾಗಿದ್ದರೆ ಅದು ಸ್ಟಾರ್‌ ಸಿನಿಮಾ, ದೊಡ್ಡ ಬಜೆಟ್‌, ಕಮ್ಮಿ ಬಜೆಟ್‌, ಹೊಸಬರು ಎಂದು ನೋಡದೇ, ಸಿನಿಮಾವನ್ನು ಪ್ರೋತ್ಸಾಹಿಸಿ’ ಎಂದು ಮನವಿ ಮಾಡಿದರು. ಅಂದಹಾಗೆ, ಜಗ್ಗೇಶ್‌ ಅವರ ಈ ಮಾತಿಗೆ ವೇದಿಕೆಯಾಗಿದ್ದು, ಅವರ ನಟನೆಯ “ಪ್ರೀಮಿಯರ್‌ ಪದ್ಮಿನಿ’ ಚಿತ್ರದ ಪತ್ರಿಕಾಗೋಷ್ಠಿ. ಈ ಚಿತ್ರ ಏಪ್ರಿಲ್‌ 26 ರಂದು ತೆರೆಕಾಣುತ್ತಿದೆ. ಈ ಸಿನಿಮಾ ಮೇಲೆ ಜಗ್ಗೇಶ್‌ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಸೆಕ್ಸ್‌ ಡಾಕ್ಟರ್‌ ಪಾತ್ರ!: ಜಗ್ಗೇಶ್‌ ಅವರಿಗೆ ಸಾಕಷ್ಟು ಅವಕಾಶಗಳು ಬರುತ್ತವೆ. ಆದರೆ, ಅವರಿಗ ಹೊಸ ಬಗೆಯ ಸಿನಿಮಾಗಳನ್ನು ಮಾಡುವತ್ತ ಮನಸ್ಸು ಮಾಡಿದ್ದಾರೆ. ಆದರೆ, ಕೆಲವು ನಿರ್ದೇಶಕರು ತರುವ ಪಾತ್ರ ನೋಡಿ, ಜಗ್ಗೇಶ್‌ ಶಾಕ್‌ ಆಗಿದ್ದಾರೆ. ಇತ್ತೀಚೆಗೆ ಒಬ್ಬ ನಿರ್ದೇಶಕ ಜಗ್ಗೇಶ್‌ ಅವರಿಗೆ ಸೆಕ್ಸ್‌ ಡಾಕ್ಟರ್‌ ಪಾತ್ರದ ಆಫ‌ರ್‌ ನೀಡಿದರಂತೆ.

“ಕೆಲವು ಪಾತ್ರಗಳನ್ನು ಕೇಳಿದಾಗಲೇ ಭಯ ಆಗುತ್ತದೆ. ಇತ್ತೀಚೆಗೆ ಒಬ್ಬ ನಿರ್ದೇಶಕ ನನಗೆ ಸೆಕ್ಸ್‌ ಡಾಕ್ಟರ್‌ ಪಾತ್ರ ಮಾಡುವಂತೆ ಹೇಳಿದ. “ಏನಿಲ್ಲ ಸಾರ್‌, ಕೂತ್ಕೊಂಡು ಆ ಟೈಪ್‌, ಈ ಟೈಪ್‌ ಅನ್ನಿ’ ಅಂದ. ನಾನು ಮಾಡಲ್ಲ ಎಂದು ವಾಪಾಸ್‌ ಕಳುಹಿಸಿದೆ’ ಎಂದು ತಮಗೆ ಬಂದ ಆಫ‌ರ್‌ ಬಗ್ಗೆ ತಮಾಷೆಯಾಗಿಯೇ ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ