ಊಟಿಯತ್ತ ಏಕ್ ಲವ್ಯಾ ಚಿತ್ತ
ಲೊಕೇಶನ್ ಹುಡುಕಲು ಹೊರಟ ಪ್ರೇಮ್
Team Udayavani, Oct 10, 2020, 1:39 PM IST
ಲಾಕ್ಡೌನ್ ಸಡಿಲವಾಗುತ್ತಿದ್ದಂತೆ ನಿಧಾನವಾಗಿ ಒಂದೊಂದೇ ಚಿತ್ರತಂಡಗಳು ಬಾಕಿಯಿದ್ದ ತಮ್ಮ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಲು ಮುಂದಾಗುತ್ತಿವೆ. ಇನ್ನು ನಿರ್ದೇಶಕ ಜೋಗಿ ಪ್ರೇಮ್ ಕೂಡ ಸದ್ಯ ಬಾಕಿಯಿರುವ ತಮ್ಮ “ಏಕ್ ಲವ್ ಯಾ’ ಚಿತ್ರದ ಚಿತ್ರೀಕರಣದತ್ತ ಮುಖ ಮಾಡುತ್ತಿದ್ದಾರೆ.
ಹೌದು, ಈಗಾಗಲೇ “ಏಕ್ ಲವ್ ಯಾ’ ಚಿತ್ರದಚಿತ್ರೀಕರಣ ಅರ್ಧದಷ್ಟು ಪೂರ್ಣಗೊಂಡಿದ್ದು, ಬಾಕಿ ಉಳಿದ ಚಿತ್ರೀಕರಣಕ್ಕೆ ಪ್ರೇಮ್ ಪ್ಲಾನ್ ಮಾಡಿಕೊಳ್ಳುತ್ತಿರುವಾಗಲೇ ಕೋವಿಡ್ ಲಾಕ್ಡೌನ್ ಘೋಷಣೆಯಾಗಿತ್ತು. ಇದರಿಂದ ಅನಿವಾರ್ಯವಾಗಿ ಚಿತ್ರತಂಡ, ತಮ್ಮ ಚಿತ್ರೀಕರಣಕ್ಕೆ ಬ್ರೇಕ್ ಹಾಕಿತ್ತು. ಈಗ ಪರಿಸ್ಥಿತಿ ನಿಧಾನವಾಗಿ ಸುಧಾರಿಸುತ್ತಿರುವುದರಿಂದ, ನಿರ್ದೇಶಕ ಪ್ರೇಮ್ ಮತ್ತೆ “ಏಕ್ ಲವ್ ಯಾ’ ಚಿತ್ರದ ಚಿತ್ರೀಕರಣಕ್ಕೆ ಮರು ಚಾಲನೆ ಕೊಟ್ಟಿದ್ದಾರೆ. ಇದಕ್ಕಾಗಿ ಊಟಿಗೆ ತೆರಳಿರುವ ಪ್ರೇಮ್ ಅಲ್ಲಿ ಸುತ್ತಮುತ್ತಲಿನ ಜಾಗಗಳಲ್ಲಿ ತಮ್ಮ ಚಿತ್ರದ ಲೊಕೇಶನ್ಗಾಗಿ ಹುಡುಕಾಟ ನಡೆಸಿದ್ದಾರೆ.
ಈ ಕುರಿತು ತಮ್ಮ ಟ್ವಿಟ್ಟರ್ನಲ್ಲಿ ಕಿರು ವಿಡಿಯೋವೊಂದನ್ನು ಶೇರ್ ಮಾಡಿರುವ ಪ್ರೇಮ್, “ಥಿಯೇಟರ್ ಓಪನ್ ಆದರೆ ಅನ್ನ. ನಾವು ಹೇಗೆ ಭರವಸೆಯಿಂದ ಶೂಟಿಂಗ್ ಹೋಗುತ್ತಿದ್ದೇವೋ, ಅದೇ ರೀತಿ ಇಡೀ ಕರ್ನಾಟಕದ ಜನ ಥಿಯೇಟರ್ಗೆ ಬಂದು ಸಿನಿಮಾ ನೋಡಲಿ. ಎಲ್ಲವೂ ಮೊದಲಿನಂತಾಗಲಿ’ ಎಂದು ಹೇಳಿದ್ದಾರೆ. ಇನ್ನು “ಏಕ್ ಲವ್ ಯಾ’ ಚಿತ್ರದಲ್ಲಿ ನಟಿ ರಕ್ಷಿತಾ ಸೋದರ ರಾಣಾ ನಾಯಕ ನಟನಾಗಿ ಸ್ಯಾಂಡಲ್ ವುಡ್ಗೆ ಪರಿಚಯವಾಗುತ್ತಿದ್ದು, ಚಿತ್ರದಲ್ಲಿ ರಚಿತಾ ರಾಮ್ ಮತ್ತು ರೀಷಾ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.