ತೆರೆಗೆ ಬರಲು ಗರ ಸಿದ್ಧ

Team Udayavani, Apr 21, 2019, 3:00 AM IST

ಸುಮಾರು ಒಂದೂವರೆ ವರ್ಷದಿಂದ ತೆರೆಮರೆಯ ಕೆಲಸಗಳಲ್ಲಿ ನಿರತವಾಗಿದ್ದ “ಗರ’ ಚಿತ್ರ ಅಂತಿಮವಾಗಿ ತೆರೆಗೆ ಬರೋದಕ್ಕೆ ಸಿದ್ಧವಾಗಿದೆ. ಸದ್ಯ ಚಿತ್ರದ ಅಂತಿಮ ಹಂತದ ಪ್ರಮೋಷನ್‌ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ, ಮೇ 3ರಂದು “ಗರ’ ಚಿತ್ರವನ್ನು ತೆರೆಗೆ ತರಲು ಪ್ಲಾನ್‌ ಮಾಡಿಕೊಂಡಿದೆ.

“25ಫ್ರೆಂ ಫಿಲಂಸ್‌’ ಲಾಂಛನದಲ್ಲಿ ನಿರ್ಮಾಣವಾಗಿರುವ “ಗರ’ ಚಿತ್ರಕ್ಕೆ ಕೆ.ಆರ್‌ ಮುರಳಿಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರದ ಹಾಡುಗಳಿಗೆ ಸಾಗರ್‌ ಗುರುರಾಜ್‌ ಸಂಗೀತ ಸಂಯೋಜಿಸಿದ್ದು, ಬಾಲಿವುಡ್‌ನ‌ ಖ್ಯಾತ ನೃತ್ಯ ನಿರ್ದೇಶಕಿ ಸರೋಜ್‌ ಖಾನ್‌ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ.

ಚಿತ್ರದ ದೃಶ್ಯಗಳನ್ನು ಹೆಚ್‌.ಸಿ ವೇಣು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದರೆ, ಉಮಾ ಶಂಕರ್‌ ಬಾಬು ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಉಳಿದಂತೆ ದಿನೇಶ್‌ ಕಲಾ ನಿರ್ದೇಶನ, ರವಿವರ್ಮ ಸಾಹಸ ನಿರ್ದೇಶನ ಚಿತ್ರಕ್ಕಿದೆ.

“ಗರ’ ಚಿತ್ರದಲ್ಲಿ ರೆಹಮಾನ್‌ ಹಾಸನ್‌, ಆವಂತಿಕ, ಆರ್ಯನ್‌, ನೇಹಾ ಪಾಟೀಲ್‌, ಪ್ರಶಾಂತ್‌ ಸಿದ್ದಿ, ರಾಮಕೃಷ್ಣ, ರೂಪಾದೇವಿ, ಮನದೀಪ್‌ ರಾಯ್‌, ತಬಲ ನಾಣಿ, ರೊಹೀತ್‌, ಸುನೇತ್ರ ಪಂಡಿತ್‌, ಸುಚಿತ್ರ, ನಿರಂಜನ್‌, ರಾಜೇಶ್‌ ರಾವ್‌, ಸೋನು, ದಯಾನಂದ್‌, ಗುರುರಾಜ್‌ ಮುಂತಾದವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಚಿತ್ರದ ವಿಶೇಷ ಜೋಡಿಯಾಗಿ ಬಾಲಿವುಡ್‌ನ‌ ಖ್ಯಾತ ನಟ ಜಾನಿ ಲೀವರ್‌ ಹಾಗೂ ಸಾಧುಕೋಕಿಲ ಅಭಿನಯಿಸಿದ್ದಾರೆ. ಚಿತ್ರದ ಬಿಡುಗಡೆಯ ತಯಾರಿ ಬಗ್ಗೆ ಮಾತನಾಡುವ ನಿರ್ದೇಶಕ ಕೆ.ಆರ್‌ ಮುರಳಿ ಕೃಷ್ಣ, ಚಿತ್ರದ ಬಿಡುಗಡೆಗೂ ಮೊದಲೇ ಪ್ರೇಕ್ಷಕರು ಮತ್ತು ಚಿತ್ರರಂಗದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಮಲ್ಟಿಪ್ಲೆಕ್ಸ್‌ಗಳು ಕೂಡ ಚಿತ್ರ ಬಿಡುಗಡೆಗೆ ಉತ್ಸುಕವಾಗಿವೆ. ಒಂದು ಒಳ್ಳೆಯ ಚಿತ್ರ ಸರಿಯಾಗಿ ಪ್ರೇಕ್ಷಕರನ್ನು ತಲುಪಬೇಕು ಎನ್ನುವ ಕಾರಣಕ್ಕೆ, ಸಾಕಷ್ಟು ಯೋಜನೆ ಮಾಡಿಕೊಂಡು ಚಿತ್ರವನ್ನು ತೆರೆಗೆ ತರುತ್ತಿದ್ದೇವೆ. ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುವುದೆಂಬ ನಂಬಿಕೆ ಇದೆ. ಎನ್ನುತ್ತಾರೆ.

ಸದ್ಯ ತೆರೆಗೆ ಬರಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವ “ಗರ’ ಸುಮಾರು 100ಕ್ಕೂ ಅಧಿಕ ಕೇಂದ್ರಗಳಲ್ಲಿ ತೆರೆಗೆ ಬರುತ್ತಿದೆ. ಒಟ್ಟಾರೆ “ಗರ’ ಕನ್ನಡ ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ. “ಗರ’ ಚಿತ್ರತಂಡದ “ಗರ’ ಬದಲಿಸುತ್ತದೆಯಾ ಎಂಬ ಎಲ್ಲಾ ಪ್ರಶ್ನೆಗಳಿಗೆ ಮೇ ಮೊದಲ ವಾರದಲ್ಲಿ ಉತ್ತರ ಸಿಗಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ