ಪುನೀತ್ ಹುಟ್ಟುಹಬ್ಬ ಸಂಭ್ರಮ; ಯೂಟ್ಯೂಬ್ ನಲ್ಲಿ “ಯುವರತ್ನ” ಟೀಸರ್ ಟ್ರೆಂಡಿಂಗ್
ಪುನೀತ್ ರಾಜ್ ಕುಮಾರ್ ಮಂಗಳವಾರ ಸರಳವಾಗಿ 45ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
Team Udayavani, Mar 17, 2020, 1:51 PM IST
Puneeth Rajkumar
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಂಗಳವಾರ ಸರಳವಾಗಿ 45ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಆದರೆ ಈ ಬಾರಿ ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಅಭಿಮಾನಿಗಳು ಮನೆ ಬಳಿ ಬರಬಾರದು ಎಂದು ಮನವಿ ಮಾಡಿಕೊಂಡಿದ್ದರು.
ಪ್ರತಿವರ್ಷ ಅಭಿಮಾನಿಗಳು ಮನೆಗೆ ಬಂದು ಶುಭ ಹಾರೈಸುತ್ತಿದ್ದೀರಿ. ಆದರೆ ಈ ಬಾರಿ ಕೊರೊನಾ ವೈರಸ್ ಹಾವಳಿ ಇದ್ದಿರುವುದರಿಂದ ನಾನು ಕೂಡಾ ಮನೆಯಲ್ಲಿ ಇರುವುದಿಲ್ಲ. ನೀವು ಕೂಡಾ ಸುರಕ್ಷಿತವಾಗಿರಬೇಕು. ಸರ್ಕಾರದ ಸೂಚನೆಯನ್ನು ಪಾಲಿಸುವ ನಿಟ್ಟಿನಲ್ಲಿ ಬೆಂಗಳೂರಿನ ನಮ್ಮ ನಿವಾಸದ ಬಳಿ ಸೇರಬಾರದು. ನಿಮ್ಮ ಪ್ರೀತಿ, ಅಭಿಮಾನ ಸದಾ ಎಂದಿನಂತೆ ಇರಲಿ ಎಂದು ಅಪ್ಪು ಮನವಿ ಮಾಡಿಕೊಂಡಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಸ್ಯಾಂಡಲ್ ವುಡ್ ನ ಸ್ಟಾರ್ ನಟ ಸುದೀಪ್, ಜಗ್ಗೇಶ್ , ಶಿವರಾಜ್ ಕುಮಾರ್ ಸೇರಿದಂತೆ ನೂರಾರು ಗಣ್ಯರು, ಹಿತೈಷಿಗಳು, ಅಭಿಮಾನಿಗಳು ಪುನೀತ್ ಹುಟ್ಟುಹಬ್ಬಕ್ಕೆ ಶುಭಹಾರೈಸಿದ್ದಾರೆ.
ಅಪ್ಪು ಹುಟ್ಟುಹಬ್ಬಕ್ಕೆ ಉಡುಗೊರೆ ಎಂಬಂತೆ ಹೊಂಬಾಳೆ ಫಿಲಂಸ್ ಪುನೀತ್ ಅಭಿನಯದ ಯುವರತ್ನ ಸಿನಿಮಾದ ಟೀಸರ್ ಅನ್ನು ಅನಾವರಣಗೊಳಿಸಿದೆ. 1.40 ಸೆಕೆಂಡುಗಳ ಈ ಟೀಸರ್ ಭರ್ಜರಿ ಸ್ಟಂಟ್ ನಲ್ಲಿ ಪುನೀತ್ ಅಬ್ಬರಿಸಿದ್ದಾರೆ. ಯೂಟ್ಯೂಬ್ ನಲ್ಲಿ ಬಿಡುಗಡೆಯಾದ 19ಗಂಟೆಗಳಲ್ಲಿ 12 ಲಕ್ಷ ಮಂದಿ ವೀಕ್ಷಿಸಿದ್ದಾರೆ.