ಗುರುನಂದನ್‌ಗೆ ಹರಿಪ್ರಿಯಾ ನಾಯಕಿ

ಬ್ರೇಕ್‌ ಕೆ ಬಾದ್‌ ಹೊಸ ಸಿನ್ಮಾ

Team Udayavani, Sep 9, 2019, 3:04 AM IST

ಕೈ ತುಂಬಾ ಸಿನಿಮಾ ಇಟ್ಟುಕೊಂಡು ಬಿಝಿ ನಟಿ ಎನಿಸಿಕೊಂಡಿರುವ ಅಪ್ಪಟ ಕನ್ನಡದ ನಟಿ ಹರಿಪ್ರಿಯಾ ಕಡೆಯಿಂದ ಇತ್ತೀಚೆಗೆ ಯಾವುದೇ ಹೊಸ ಸಿನಿಮಾದ ಸುದ್ದಿ ಬಂದಿರಲಿಲ್ಲ. ಒಪ್ಪಿಕೊಂಡ ಸಿನಿಮಾಗಳ ಚಿತ್ರೀಕರಣ, ಬಿಡುಗಡೆಗೆ ಸಿದ್ಧವಾಗಿರುವ ಚಿತ್ರಗಳ ಪ್ರಮೋಶನ್‌ ಎಂದು ಬಿಝಿಯಾಗಿದ್ದ ಹರಿಪ್ರಿಯಾ, ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುವ ಮುನ್ನ ಒಂದಷ್ಟು ದಿನ ಬ್ರೇಕ್‌ ತಗೊಂಡಿದ್ದರು. ಈಗ ಹರಿಪ್ರಿಯಾ ಅವರ ಕಡೆಯಿಂದ ಹೊಸ ಸಿನಿಮಾದ ಸುದ್ದಿ ಬಂದಿದೆ.

ಹೌದು, ಹರಿಪ್ರಿಯಾ ಇದೀಗ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಅದು ಗುರುನಂದನ್‌ ನಾಯಕರಾಗಿರುವ ಸಿನಿಮಾ. ಈಗ ಗುರುನಂದನ್‌ಗೆ ನಾಯಕಿಯಾಗಿ ಹರಿಪ್ರಿಯಾ ನಟಿಸುತ್ತಿದ್ದಾರೆ. ಈ ಚಿತ್ರವನ್ನು ವಿಜಯ್‌ ಕಿರಣ್‌ ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರ ನಿರ್ದೇಶನದ “ಸಿಂಗ’ ಬಿಡುಗಡೆಯಾಗಿತ್ತು. ಈಗ ಗುರುನಂದನ್‌ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಜಯಣ್ಣ ಈ ಚಿತ್ರದ ನಿರ್ಮಾಪಕರು.

ಚಿತ್ರದ ಬಗ್ಗೆ ಖುಷಿಯಿಂದ ಮಾತನಾಡುವ ಹರಿಪ್ರಿಯಾ, “ಈ ಹಿಂದೆ ಜಯಣ್ಣ ನಿರ್ಮಾಣದ “ಬುಲೆಟ್‌ ಬಸ್ಯಾ’ ಚಿತ್ರದಲ್ಲಿ ನಟಿಸಿದ್ದೆ. ಈಗ ಮತ್ತೆ ಅವರ ಬ್ಯಾನರ್‌ನಲ್ಲಿ ಅವಕಾಶ ಸಿಕ್ಕಿದೆ. ಪಾತ್ರ ತುಂಬಾ ಚೆನ್ನಾಗಿದೆ. ಇಡೀ ಸಿನಿಮಾ ಸಿನಿಮಾ ಹಾಸ್ಯದೊಂದಿಗೆ ಸಾಗುತ್ತದೆ. ಕಾಮಿಡಿ ಇಷ್ಟಪಡುವವರಿಗೆ ಈ ಚಿತ್ರ ಇಷ್ಟವಾಗುತ್ತದೆ’ ಎನ್ನುವುದು ಹರಿಪ್ರಿಯಾ ಮಾತು. ಈಗಾಗಲೇ ಚಿತ್ರೀಕರಣ ಆರಂಭವಾಗಿದ್ದು, ಹರಿಪ್ರಿಯಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ಹರಿಪ್ರಿಯಾ ಸದ್ಯಕ್ಕೆ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗ “ಕನ್ನಡ್‌ ಗೊತ್ತಿಲ್ಲ’, “ಎಲ್ಲಿದ್ದೆ ಇಲ್ಲಿ ತನಕ’, “ಬಿಚ್ಚುಗತ್ತಿ’ ಹಾಗು “ಕಥಾಸಂಗಮ’ ಚಿತ್ರಗಳು ಬಿಡುಗಡೆಯ ಹಂತದಲ್ಲಿವೆ. “ಕನ್ನಡ್‌ ಗೊತ್ತಿಲ್ಲ’ ಚಿತ್ರದಲ್ಲಿ ಹೊಸಬಗೆಯ ಪಾತ್ರದಲ್ಲಿ ಮಿಂಚಿದರೆ, “ಎಲ್ಲಿದ್ದೆ ಇಲ್ಲಿ ತನಕ’ ಚಿತ್ರದಲ್ಲಿ ಸೃಜನ್‌ ಲೋಕೇಶ್‌ ಅವರೊಂದಿಗೆ ಲವ್ವರ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು, ಐತಿಹಾಸಿಕ “ಬಿಚ್ಚುಗತ್ತಿ’ ಚಿತ್ರದಲ್ಲಿ ಹರಿಪ್ರಿಯಾ ಕೂಡ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. “ಕಥಾಸಂಗಮ’ದಲ್ಲೂ ಅವರದು ವಿಭಿನ್ನ ಪಾತ್ರವಂತೆ. ಅದೇನೆ ಇರಲಿ, ಹರಿಪ್ರಿಯಾ ಕನ್ನಡದ ಮಟ್ಟಿಗೆ ಫ‌ುಲ್‌ ಬಿಝಿ ನಟಿಯಂತೂ ಹೌದು, ಒಂದೊಂದು ಚಿತ್ರದಲ್ಲೂ ಹೊಸ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಹರಿಪ್ರಿಯಾ, ಸದಾ ವಿಶೇಷತೆ ಇರುವ ಕಥೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆ ನಿಟ್ಟಿನಲ್ಲಿ ಗುರುನಂದನ್‌ ಜೊತೆಗಿನ ಸಿನಿಮಾವೂ ಒಂದು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ