ಲಿಪ್‌ಲಾಕ್‌ ಅಲ್ಲ, ಅದು ಕಿಸ್ಸಿಂಗ್‌ ಸೀನ್‌

ಕಾಮ್ರೆಡ್‌ ಹೀರೋ ವಿಜಯ್‌ ದೇವರಕೊಂಡ ಮಾತು

Team Udayavani, Jul 13, 2019, 3:02 AM IST

“ಲಿಪ್‌ಲಾಕ್‌…’ ಆ ಪದವನ್ನೇ ನಾನು ಇಷ್ಟಪಡಲ್ಲ… ಹೀಗೆ ಹೇಳಿದ್ದು ಬೇರಾರೂ ಅಲ್ಲ, ಈಗಾಗಲೇ ತೆಲುಗಿನ “ಗೀತಾ ಗೋವಿಂದಂ’ ಮತ್ತು “ಡಿಯರ್‌ ಕಾಮ್ರೇಡ್‌’ ಚಿತ್ರಗಳಲ್ಲಿ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಜೊತೆ ಲಿಪ್‌ಲಾಕ್‌ ಸೀನ್‌ ಮೂಲಕ ಜೋರು ಸುದ್ದಿಯಾದ ನಟ ವಿಜಯ್‌ ದೇವರಕೊಂಡ.

ಹೌದು, “ಲಿಪ್‌ಲಾಕ್‌ ದೊಡ್ಡ ವಿಷಯವೇ ಅಲ್ಲ, ಆ ಪದವನ್ನು ನಾನು ಇಷ್ಟಪಡುವುದೇ ಇಲ್ಲ’ ಎನ್ನುವ ವಿಜಯ್‌ ದೇವರಕೊಂಡ, ಹೀಗೆ ಹೇಳಿಕೊಂಡಿದ್ದು ಜು. 26 ರಂದು ತೆರೆಗೆ ಬರಲಿರುವ “ಡಿಯರ್‌ ಕಾಮ್ರೇಡ್‌’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ. “ಡಿಯರ್‌ ಕಾಮ್ರೇಡ್‌’ ಚಿತ್ರದಲ್ಲೂ ರಶ್ಮಿಕಾ ಮಂದಣ್ಣ ಜೊತೆ ವಿಜಯ್‌ ದೇವರಕೊಂಡ “ಲಿಪ್‌ಲಾಕ್‌’ ದೃಶ್ಯದಲ್ಲಿ ಕಾಣಿಸಿಕೊಂಡಿರುವ ಟ್ರೇಲರ್‌ ಎಲ್ಲೆಡೆ ಸುದ್ದಿಯಾಗಿದ್ದು ಗೊತ್ತೇ ಇದೆ.

ತಮ್ಮ ಚಿತ್ರದ ಕುರಿತು ಮಾತಿಗಿಳಿದಿದ್ದ ವಿಜಯ್‌ ದೇವರಕೊಂಡ, ಅವರನ್ನು ಪತ್ರಕರ್ತರು “ಲಿಪ್‌ಲಾಕ್‌’ ದೃಶ್ಯದ ಬಗ್ಗೆ ಕೇಳುತ್ತಿದ್ದಂತೆಯೇ, ಮೈಕ್‌ ಹಿಡಿದ ವಿಜಯ್‌ ದೇವರಕೊಂಡ, “ಮೊದಲು ನನಗೆ ಆ “ಲಿಪ್‌ಲಾಕ್‌’ ಪದವನ್ನೇ ಇಷ್ಟಪಡುವುದಿಲ್ಲ. ಅಷ್ಟಕ್ಕೂ ಅದು ಕಥೆಗೆ ಮತ್ತು ದೃಶ್ಯಕ್ಕೆ ಪೂರಕವಾದಂಥದ್ದು. ನಿರ್ದೇಶಕರ ಕಲ್ಪನೆಗೆ ತಕ್ಕಂತಹ ಪಾತ್ರಗಳಷ್ಟೇ.

ಅದರಲ್ಲೇನು ವಿಶೇಷವಿದೆ? ಮುತ್ತಿಡುವುದು, ಅಳುವುದು ಹೀಗೆ ಎಲ್ಲದರಲ್ಲೂ ಒಂದೊಂದು ಎಮೋಷನ್ಸ್‌ ಇದ್ದ ಹಾಗೆ, ಕಿಸ್ಸಿಂಗ್‌ನಲ್ಲೂ ಅಂಥದ್ದೊಂದು ಎಮೋಷನ್ಸ್‌ ಇದ್ದೇ ಇರುತ್ತೆ. ಹಾಗಂತ, ಅದನ್ನು “ಲಿಪ್‌ಲಾಕ್‌’ ಅಂದರೆ ಹೇಗೆ? ಒಂದು ಕಥೆಯಲ್ಲಿ ಈ ರೀತಿಯ ದೃಶ್ಯ ಕಾಮನ್‌. ಹಾಗಂತ ಇಲ್ಲಿ ಅಸಹ್ಯವಾಗುವಂತಹ ದೃಶ್ಯದಲ್ಲಿ ನಟಿಸಿಲ್ಲ.

ಅದನ್ನು ಲಿಪ್‌ಲಾಕ್‌ ಅನ್ನುವ ಬದಲು ಕಿಸ್ಸಿಂಗ್‌ ಅಂದರೆ ತಪ್ಪೇನು? ಅದನ್ನು ಪ್ರಚಾರಕ್ಕಾಗಲಿ ಅಥವಾ ಹೈಪ್‌ ಕ್ರಿಯೇಟ್‌ ಮಾಡುವುದಕ್ಕಾಗಲಿ ಇಟ್ಟಿಲ್ಲ. ಸಿನಿಮಾ ನೋಡಿದಾಗ, ಅದು ಯಾಕೆ ಬರುತ್ತೆ, ಅದು ಅಗತ್ಯವಿತ್ತೋ ಇಲ್ಲವೋ ಅನ್ನೋದು ಗೊತ್ತಾಗುತ್ತೆ’ ಎಂದು ವಿವರ ಕೊಟ್ಟರು ವಿಜಯ್‌ ದೇವರಕೊಂಡ.

ಹೋರಾಟದ ಚಿತ್ರವಲ್ಲ: ಬಿಡುಗಡೆಗೆ ಸಿದ್ಧವಾಗಿರುವ “ಡಿಯರ್‌ ಕಾಮ್ರೇಡ್‌’ ಚಿತ್ರದ ಬಗ್ಗೆ ಮಾತನಾಡುವ ವಿಜಯ್‌, “ಇಲ್ಲಿ “ಕಾಮ್ರೇಡ್‌’ ಅಂದಾಕ್ಷಣ, ಎಲ್ಲರಿಗೂ ಪೊಲಿಟಿಕಲ್‌ ಸಿನಿಮಾ ಇರಬಹುದಾ, ಸ್ಟ್ರಗಲ್‌ ಇರುವಂತಹ ಕಥೆ ಇರಬಹುದಾ ಎಂಬ ಪ್ರಶ್ನೆ ಕಾಡುತ್ತೆ.

“ಕಾಮ್ರೇಡ್‌’ ಅನ್ನೋದು ಪ್ರೀತಿಗೆ, ಒಳ್ಳೆಯ ಉದ್ದೇಶಕ್ಕೆ, ಭಾವನೆ ಮತ್ತು ನೋವುಗಳಿಗೆ ಸ್ಪಂದಿಸುವ ರೂಪವದು. ಹಾಗಂತ, ಇಲ್ಲಿ ಯಾವುದೇ ಹೋರಾಟವಿಲ್ಲ, ಚಳವಳಿಯ ಸಿನಿಮಾನೂ ಅಲ್ಲ. “ಕಾಮ್ರೇಡ್‌’ ಒಂದು ಯೂಥ್‌ಫ‌ುಲ್‌ ಚಿತ್ರ. ಇದು ವಿದ್ಯಾರ್ಥಿ ನಾಯಕನ ಕಥೆ ಹೊಂದಿದೆ.

ಸಿನಿಮಾ ನೋಡಿದವರಿಗೆ “ಕಾಮ್ರೇಡ್‌’ ಶೀರ್ಷಿಕೆ ಪೂರಕ ಎನಿಸದೇ ಇರದು. “ಡಿಯರ್‌ ಕಾಮ್ರೇಡ್‌’ ಚಿತ್ರದಲ್ಲಿ ಮುಖ್ಯವಾಗಿ ಪ್ರೀತಿಗೆ ಹೆಚ್ಚು ಒತ್ತು ಕೊಡಲಾಗಿದೆ. ಅದರ ಜೊತೆ ಜೊತೆಗೆ ಭಾವುಕತೆ, ಎಮೋಷನ್ಸ್‌ಗೂ ಅಷ್ಟೇ ಜಾಗವಿದೆ. ಒಂದೇ ಮಾತಲ್ಲಿ ಹೇಳುವುದಾದರೆ, ಎಲ್ಲರಿಗೂ ಕಾಡುವ ಕಥೆ ಇಲ್ಲಿದೆ’ ಎಂದರು.

ಚಿತ್ರ ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ತೆರೆ ಕಾಣುತ್ತಿದೆ. ಇನ್ನು, ಮುಂದಿನ ದಿನಗಳಲ್ಲಿ ಹಿಂದಿ ಭಾಷೆಯಲ್ಲಿ ರಿಮೇಕ್‌ ಮಾಡುವ ಯೋಚನೆ ತಂಡಕ್ಕಿದೆ. ಆ ಪ್ರದೇಶಕ್ಕೆ ಈ ಕಥೆ ಹೊಂದಾಣಿಕೆ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಹಾಗಾಗಿ, ಸದ್ಯಕ್ಕೆ ನಾಲ್ಕು ಭಾಷೆಯಲ್ಲಿ ಚಿತ್ರ ತೆರೆಗೆ ಬರುತ್ತಿದೆ.

ಕನ್ನಡದಲ್ಲಿ ನನ್ನ ಪಾತ್ರಕ್ಕೆ ಕಲಾವಿದರೊಬ್ಬರು ಧ್ವನಿ ಕೊಟ್ಟಿದ್ದಾರೆ. ಕನ್ನಡ ಭಾಷೆ ಸ್ಪಷ್ಟವಾಗಿ ಬರಲ್ಲ. ಕನ್ನಡ ಕಲಿಯುತ್ತಿದ್ದೇನೆ. ಸದ್ಯಕ್ಕೆ ಒಂದೆರೆಡು ಪದಗಳು ಮಾತನಾಡಲು ಬರುತ್ತದೆ. ಮುಂದೆ ಕಲಿತು ಸ್ಪಷ್ಟವಾಗಿ ಮಾತಾಡ್ತೀನಿ. ಚಿತ್ರದಲ್ಲಿ ರೆಬೆಲ್‌ ಪಾತ್ರವಿದೆಯಾ ಎಂಬ ಪ್ರಶ್ನೆಗೆ ಚಿತ್ರದಲ್ಲೇ ಉತ್ತರ ಸಿಗಲಿದೆ.

ಯಶ್‌ ತುಂಬಾನೇ ಸ್ಟ್ರಗಲ್‌ ಮಾಡಿದ್ದಾರೆ…: ನಟ ಯಶ್‌ ಬಗ್ಗೆ ಮಾತನಾಡಿದ ವಿಜಯ್‌ ದೇವರಕೊಂಡ, “ಯಶ್‌ ಅವರ ವ್ಯಕ್ತಿತ್ವದ ಬಗ್ಗೆ ಎಷ್ಟು ಹೇಳಿದರೂ ಸಾಲದು. ಅವರು ಸಾಕಷ್ಟು ಸ್ಟ್ರಗಲ್‌ ಮಾಡಿ ಈ ಹಂತ ತಲುಪಿದ್ದಾರೆ. ನನ್ನ ರೀತಿಯೇ ಅವರೂ ಕಷ್ಟಪಟ್ಟಿದ್ದಾರೆ. ನಾನೂ ಚಿಕ್ಕಪುಟ್ಟ ಪಾತ್ರ ಮಾಡಿಕೊಂಡು ಬಂದವನು.

ಅವರು ಸಹ ಹಾಗೆಯೇ ಬೆಳೆದು ಬಂದವರು. ಹಾಗಾಗಿ ಅವರು ನನಗೆ ಇಷ್ಟ ಆಗ್ತಾರೆ. ಈ ಹಿಂದೆ ನನ್ನ ಅಭಿನಯದ “ಅರ್ಜುನ್‌ ರೆಡ್ಡಿ’ ಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರು ಕಂಟೆಂಟ್‌ ಮೇಲೆ ನಂಬಿಕೆ ಇಟ್ಟು “ಕೆಜಿಎಫ್’ ಚಿತ್ರ ಮಾಡಿದ್ದಕ್ಕೆ ಇಂದು ದೊಡ್ಡ ಸಕ್ಸಸ್‌ ಕಂಡಿದ್ದಾರೆ. ನಾನೂ ಸಹ ಈ “ಡಿಯರ್‌ ಕಾಮ್ರೇಡ್‌’ ಚಿತ್ರದ ಕಂಟೆಂಟ್‌ ಮೇಲೆ ನಂಬಿಕೆ ಇಟ್ಟಿದ್ದೇನೆ’ ಎಂದರು.

ಆ ಸೀನ್‌ ಬಗ್ಗೆ ಬೇರೆ ರೀತಿ ನೋಡೋದ್ಯಾಕೆ?: ರಶ್ಮಿಕಾ ಮಂದಣ್ಣ ಇಲ್ಲಿ ಕ್ರಿಕೆಟರ್‌ ಪಾತ್ರ ಮಾಡಿದ್ದಾರಂತೆ. ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರಕ್ಕೆ ಅವರೇ ಡಬ್‌ ಮಾಡಿದ್ದಾರೆ. ಆ ಬಗ್ಗೆ ಹೇಳುವ ರಶ್ಮಿಕಾ, “ಕನ್ನಡದಲ್ಲಿ ನನ್ನ ಫ್ಯಾನ್ಸ್‌ಗೆ ನನ್ನ ಧ್ವನಿ ಇಷ್ಟ. ಹಾಗಾಗಿ, ನಾನೇ ಈ ಚಿತ್ರಕ್ಕೆ ಡಬ್‌ ಮಾಡಿದ್ದೇನೆ.

ಕನ್ನಡದಲ್ಲೂ ಈ ಚಿತ್ರ ಬಿಡುಗಡೆಯಾಗುತ್ತಿರುವುದಕ್ಕೆ ಖುಷಿ ಇದೆ. ಕನ್ನಡಿಗರಿಗೂ ಈ ಚಿತ್ರ ರುಚಿಸಲಿದೆ. ಕೇರಳ, ಹೈದರಾಬಾದ್‌, ಲಡಾಕ್‌ನಲ್ಲಿ ಚಿತ್ರೀಕರಣಗೊಂಡಿದೆ. ಇನ್ನು, ವಿಜಯ್‌ ದೇವರಕೊಂಡ ಅವರೊಂದಿಗಿನ ಕೆಲಸ ನನಗೆ ಕಂಫ‌ರ್ಟ್‌ ಎನಿಸಿದೆ.

ಪ್ರತಿ ಸೀನ್‌ನಲ್ಲೂ ಹೀಗೆ ಮಾಡೋಣ, ಹಾಗೆ ಮಾಡೋಣ ಅಂತ ಚರ್ಚಿಸಿ ಕೆಲಸ ಮಾಡಿದ್ದೇವೆ. ಇಲಿ ಟೆನ್ಸ್‌ ಎಮೋಷನ್ಸ್‌ ಇದೆ. ಲಿಪ್‌ಲಾಕ್‌ ಬಗ್ಗೆ ಯಾಕೆ ಅಷ್ಟೊಂದು ಸುದ್ದಿಯಾಯ್ತೋ ಗೊತ್ತಿಲ್ಲ. ಅದನ್ನು ಯಾಕೆ ಬೇರೆ ರೀತಿ ನೋಡುತ್ತಿದ್ದಾರೋ ಗೊತ್ತಿಲ್ಲ. ಅದು ಕಿಸ್ಸಿಂಗ್‌ ಅಷ್ಟೇ, ಲಿಪ್‌ಲಾಕ್‌ ಅಲ್ಲ’ ಎಂದಷ್ಟೇ ಹೇಳುವ ಮೂಲಕ ಸ್ಪಷ್ಟಪಡಿಸುತ್ತಾರೆ ರಶ್ಮಿಕಾ ಮಂದಣ್ಣ.


ಈ ವಿಭಾಗದಿಂದ ಇನ್ನಷ್ಟು

  • ದರ್ಶನ್‌ ನಾಯಕರಾಗಿರುವ "ಒಡೆಯ' ಚಿತ್ರ ಈ ವಾರ (ಡಿ.12) ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ ಸನಾ ತಿಮ್ಮಯ್ಯ ಎಂಬ ಕೊಡಗಿನ ಬೆಡಗಿ ಚಿತ್ರರಂಗಕ್ಕೆ ಲಾಂಚ್‌ ಆಗುತ್ತಿದ್ದಾರೆ....

  • ನಟಿ ಶಾನ್ವಿ ಶ್ರೀವಾತ್ಸವ್‌ ಸಖತ್‌ ಖುಷಿಯಾಗಿದ್ದಾರೆ. ಅವರ ಖುಷಿಗೆ ಮುಖ್ಯವಾಗಿ ಎರಡು ಕಾರಣ. ಮೊದಲನೇಯದಾಗಿ ಅವರ ನಟನೆಯ "ಅವನೇ ಶ್ರೀಮನ್ನಾರಾಯಣ' ಚಿತ್ರ ಬಿಡುಗಡೆಗೆ...

  • ನಟ ರಿಷಿ ಅಭಿನಯದ "ಸಾರ್ವಜನಿಕರಿಗೆ ಸುವರ್ಣಾವಕಾಶ' ಚಿತ್ರದ "ದೇವರೆ ದೇವರೆ...' ವಿಡಿಯೋ ಹಾಡು ಈಗಾಗಲೇ ಬಿಡುಗಡೆಯಾಗಿ ಎಲ್ಲೆಡೆ ಮೆಚ್ಚುಗೆ ಪಡೆದಿದ್ದು ಗೊತ್ತೇ...

  • ಶನಿವಾರ ಬಿಗ್‌ಬಾಸ್‌ ಕನ್ನಡ ನೋಡಿದವರಿಗೆ ಒಂದು ಅಚ್ಚರಿ ಕಾದಿತ್ತು. ಅದು ಬಿಗ್‌ಬಾಸ್‌ ಶೋನಲ್ಲಿ ಸಲ್ಮಾನ್‌ ಖಾನ್‌ ಕಾಣಿಸಿಕೊಂಡಿರೋದು. ಕನ್ನಡ ಕಿರುತೆರೆ ಮೇಲೆ...

  • ಕಲಾವಿದರು ಕಿರುತೆರೆ, ಹಿರಿತೆರೆಯಲ್ಲಿ ತಮಗೆ ಇಷ್ಟವಾದ ಪಾತ್ರಗಳನ್ನು ಮಾಡುತ್ತಾರೆ. ಅದೇ ಕಾರಣದಿಂದ ಸಿನಿಮಾ ಮಂದಿ ಕಿರುತೆರೆಯಲ್ಲಿ, ಕಿರುತೆರೆ ಮಂದಿ ಸಿನಿಮಾದಲ್ಲಿ...

ಹೊಸ ಸೇರ್ಪಡೆ