ನವರಸನ ನವ ನಿರ್ಧಾರ

ಜಗ್ಗೇಶ್‌ ಯು-ಟರ್ನ್: ಪ್ರಯೋಗಾತ್ಮಕ ಸಾಕು, ಕಾಮಿಡಿ ಬೇಕು

Team Udayavani, Jun 18, 2019, 3:00 AM IST

ಇನ್ಮುಂದೆ ನಾನು ಕೂಡ ವಯಸ್ಸಾದ, ಪ್ರಯೋಗಾತ್ಮಕ ಪಾತ್ರಗಳನ್ನು ಮಾಡಲ್ಲ. ಅದರ ಬದಲು ನನ್ನನ್ನು ಜನ ಇಷ್ಟಪಟ್ಟ ಹಳೆಯ ಕಾಮಿಡಿ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತೇನೆ … ಇದು ನಟ ಜಗ್ಗೇಶ್‌ ಅವರ ಹೊಸ ನಿರ್ಧಾರ. ಕಲಾವಿದನಾದವ ಹೊಸ ಪಾತ್ರಗಳಿಗೆ ತೆರೆದುಕೊಳ್ಳಬೇಕೆಂದುಕೊಂಡು “8ಎಂಎಂ’, “ಪ್ರೀಮಿಯರ್‌ ಪದ್ಮಿನಿ’ ತರಹದ ಸಿನಿಮಾಗಳಲ್ಲಿ ಜಗ್ಗೇಶ್‌ ಕಾಣಿಸಿಕೊಂಡಿದ್ದು ನಿಮಗೆ ಗೊತ್ತೇ ಇದೆ.

ಈಗ ಏಕಾಏಕಿ ಮತ್ತೆ ಹಳೆಯ ಶೈಲಿಗೆ ಮರಳಲು ಜಗ್ಗೇಶ್‌ ಮನಸ್ಸು ಮಾಡಿದ್ದಾರೆ. ಅಷ್ಟಕ್ಕೂ ಜಗ್ಗೇಶ್‌ ಅವರ ಈ ನಿರ್ಧಾರಕ್ಕೆ ಕಾರಣವೇನು ಎಂದರೆ ಪ್ರೇಕ್ಷಕರು ಇಷ್ಟಪಡುತ್ತಿರುವ ಹಳೆಯ ಶೈಲಿಯ ಪಾತ್ರಗಳು. ಈ ಬಗ್ಗೆ ಮಾತನಾಡುವ ಜಗ್ಗೇಶ್‌, “ಪ್ರತಿಯೊಬ್ಬರಿಗೂ ಅವರದ್ದೇ ಆದ ಒಂದು ಸ್ಟ್ರೆಂಥ್‌ ಇರುತ್ತೆ. ಜನ ಯಾವುದನ್ನ ಇಷ್ಟಪಟ್ಟಿದ್ದಾರೋ ಅದರಲ್ಲೇ ಪ್ರಯೋಗಗಳನ್ನ ಮಾಡಬೇಕು.

ಇತ್ತೀಚೆಗೆ ಉಪೇಂದ್ರ ಅಭಿನಯಿಸಿರುವ “ಐ ಲವ್‌ ಯು’ ಸಿನಿಮಾವನ್ನ ತೆಗೆದುಕೊಳ್ಳಿ. ಮೊದಲು ಜನರು ನೋಡಿದ್ದ ಪಕ್ಕಾ ಉಪೇಂದ್ರ ಸ್ಟೈಲ್‌ ಆ ಸಿನಿಮಾದಲ್ಲಿದೆ. ಅದಕ್ಕೆ ಜನರಿಗೂ ಆ ಸಿನಿಮಾ ಇಷ್ಟವಾಗ್ತಿದೆ. ಇನ್ನು ರಜನಿಕಾಂತ್‌ “ಕಾಲ’ ಸಿನಿಮಾದಲ್ಲೂ ಅವರ ಟಿಪಿಕಲ್‌ ಸ್ಟೈಲ್‌ ಫ್ಯಾನ್ಸ್‌ಗೆ ಇಷ್ಟವಾಯ್ತು. ಹಾಗಾಗಿ ಆ ಸಿನಿಮಾ ಗೆಲ್ತು. ಹಾಗಾಗಿ ಇನ್ಮುಂದೆ ನಾನು ಕೂಡ ವಯಸ್ಸಾದ, ಪ್ರಯೋಗಾತ್ಮಕ ಪಾತ್ರಗಳನ್ನು ಮಾಡಲ್ಲ.

ಅದರ ಬದಲು ನನ್ನನ್ನು ಜನ ಇಷ್ಟಪಟ್ಟ ಹಳೆಯ ಕಾಮಿಡಿ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತೇನೆ’ ಎಂದು ತಮ್ಮ ಹೊಸ ನಿರ್ಧಾರದ ಬಗ್ಗೆ ಹೇಳುತ್ತಾರೆ ಜಗ್ಗೇಶ್‌. “ಯಾರೂ ಏನೇ ಹೇಳಲಿ, ಡಬಲ್‌ ಮೀನಿಂಗ್‌, ತ್ರಿಬಲ್‌ ಮೀನಿಂಗ್‌ ಅಂಥ ಏನಾದ್ರೂ ಅಂದುಕೊಳ್ಳಲಿ. ಜನರು ಇಷ್ಟಪಡುವ ಪಾತ್ರಗಳಲ್ಲಿ ಅವರನ್ನು ಮನರಂಜಿಸುವುದಷ್ಟೇ ನನ್ನ ಕೆಲಸ. ಆದಷ್ಟು ಬೇಗ ನನ್ನ ಹಳೇ ಸ್ಟೈಲ್‌ನಲ್ಲಿ ಮತ್ತೆ ಬರ್ತಿನಿ ನೋಡ್ತೀರಿ’ ಎನ್ನುವುದು ಜಗ್ಗೇಶ್‌ ಮಾತು.

ಜಗ್ಗೇಶ್‌ ಇಂಥದ್ದೊಂದು ಮಾತು ಹೇಳ್ಳೋದಕ್ಕೂ ಕಾರಣವಿದೆ. ಅದು ಜಗ್ಗೇಶ್‌ ಇತ್ತೀಚಿನ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಪಾತ್ರಗಳು. ಹೌದು, ಕನ್ನಡ ಚಿತ್ರರಂಗದಲ್ಲಿ ಸುಮಾರು ಮೂರುವರೆ ದಶಕಗಳ ಸುದೀರ್ಘ‌ ಸಿನಿಪ್ರಯಾಣವನ್ನು ಯಶಸ್ವಿಯಾಗಿ ನಡೆಸಿರುವ ಜಗ್ಗೇಶ್‌ ಅವರನ್ನು ಪ್ರೇಕ್ಷಕರು ಗುರುತಿಸಿದ್ದು ಅವರ ಹಾಸ್ಯ ಪಾತ್ರಗಳ ಮೂಲಕ.

ಆದರೆ ಪ್ರತಿಯೊಬ್ಬ ನಟನಿಗೂ ಒಂದು ಚೇಂಜ್‌ ಓವರ್‌ ಇರಬೇಕು ಎನ್ನುವ ಕಾರಣಕ್ಕೆ ಜಗ್ಗೇಶ್‌ ಕಳೆದ ಮೂರ್‍ನಾಲ್ಕು ವರ್ಷಗಳಿಂದ ಕಾಮಿಡಿಗಿಂತ ಹೆಚ್ಚಾಗಿ ಬೇರೆ ಥರದ ಪ್ರಯೋಗಾತ್ಮಕ ಚಿತ್ರಗಳಿಗೆ ತೆರೆದುಕೊಂಡರು. “8ಎಂಎಂ’, “ಪ್ರೀಮಿಯರ್‌ ಪದ್ಮಿನಿ’ ಚಿತ್ರಗಳಲ್ಲಿ ಹಿಂದೆಂದಿಗಿಂತಲೂ ವಿಭಿನ್ನ ಗೆಟಪ್‌ನಟಲ್ಲಿ ಜಗ್ಗೇಶ್‌ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಪಾತ್ರಗಳಿಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ಬಂದಿದ್ದರಿಂದಲೊ..

ಏನೋ.., ಈ ಥರದ ಪಾತ್ರಗಳು ಜಗ್ಗೇಶ್‌ ಅವರಿಗೆ ಸಾಕು ಅನಿಸಿದಂತಿದೆ. ಹಾಗಾಗಿ ಜಗ್ಗೇಶ್‌ ಮತ್ತೆ ತಮ್ಮ ಔಟ್‌ ಆ್ಯಂಡ್‌ ಔಟ್‌ ಕಾಮಿಡಿ ಜಾನರ್‌ ಪಾತ್ರಗಳತ್ತ ಮುಖ ಮಾಡುವ ಮನಸ್ಸು ಮಾಡಿದ್ದಾರೆ. ಸದ್ಯ ಜಗ್ಗೇಶ್‌ ಕಾಮಿಡಿ ಹಿನ್ನೆಲೆಯ ಎರಡು ಚಿತ್ರಗಳಲ್ಲಿ ಅಭಿನಯಿಸಲು ತೆರೆಮರೆಯ ತಯಾರಿ ನಡೆಸುತ್ತಿದ್ದಾರೆ. ಸದ್ಯ ಈ ಚಿತ್ರಗಳ ಪ್ರೀ-ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿದ್ದು, ಆದಷ್ಟು ಬೇಗ ಈ ಚಿತ್ರಗಳ ಬಗ್ಗೆ ಮಾಹಿತಿ ನೀಡುತ್ತೇನೆ ಎನ್ನುತ್ತಾರೆ.

ಸಿಂಗಲ್‌ ಸ್ಕ್ರೀನ್‌ ಅವ್ಯವಸ್ಥೆ: ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳ ಅವ್ಯವಸ್ಥೆಯ ಬಗ್ಗೆಯೂ ಜಗ್ಗೇಶ್‌ ಗರಂ ಆಗಿದ್ದಾರೆ. “ಇವತ್ತು ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗೆ ಜನ ಬರುತ್ತಿಲ್ಲ. ಅದರಲ್ಲೂ ಪ್ರಬುದ್ದ ಪ್ರೇಕ್ಷಕರು ಯಾರೂ ಥಿಯೇಟರ್‌ ಕಡೆಗೆ ತಲೆ ಹಾಕುತ್ತಿಲ್ಲ. ಅದಕ್ಕೆ ಕಾರಣ ನಮ್ಮ ಥಿಯೇಟರ್‌ಗಳಲ್ಲಿ ಇರುವ ಅವ್ಯವಸ್ಥೆ. ಇಂದು ಎಷ್ಟೋ ಥಿಯೇಟರ್‌ಗಳಲ್ಲಿ ಒಳ್ಳೆ ಸೀಟ್‌ ಇರಲ್ಲ. ಎ.ಸಿ ಇರಲ್ಲ. ಒಳ್ಳೆ ಟಾಯ್ಲೆಟ್‌ ಕೂಡ ಇರಲ್ಲ. ಸರಿಯಾಗಿ ನಿರ್ವಹಣೆ ಮಾಡುವುದಿಲ್ಲ.

ಹೀಗಿರಬೇಕಾದ್ರೆ ಪ್ರೇಕ್ಷಕರು ಹೇಗೆ ತಾನೇ ಸಿನಿಮಾ ನೋಡೋದಕ್ಕೆ ಥಿಯೇಟರ್‌ಗೆ ಬರುತ್ತಾರೆ?’ ಅನ್ನೋದು ಜಗ್ಗೇಶ್‌ ಪ್ರಶ್ನೆ. “ಪ್ರೇಕ್ಷಕ ದುಡ್ಡು ಕೊಟ್ಟು ಬರಬೇಕಾದ್ರೆ ಹತ್ತು ಸಲ ಯೋಚಿಸುತ್ತಾನೆ. ಹಾಗಾಗಿ ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳತ್ತ ಪ್ರೇಕ್ಷಕರು ಬರುತ್ತಿಲ್ಲ. ಅದರ ಬದಲು ತನಗೆ ಕಂಫ‌ರ್ಟ್‌ ಎನಿಸುವಂಥ ಮಾಲ್‌ಗ‌ಳಲ್ಲಿರುವ ಮಲ್ಟಿಫ್ಲೆಕ್ಸ್‌ ಕಡೆಗೆ ಹೋಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಾಲ್‌ಗ‌ಳಲ್ಲಿರುವ ಮಲ್ಟಿಫ್ಲೆಕ್ಸ್‌ಗಳೇ ಕನ್ನಡ ಚಿತ್ರರಂಗಕ್ಕೆ ಜೀವಾಳ’ ಎನ್ನುವುದು ಜಗ್ಗೇಶ್‌ ಮಾತು.

ಥಿಯೇಟರ್‌ ಬಾಡಿಗೆ ಮತ್ತು ನಿರ್ಮಾಪಕರ ಕಷ್ಟ: ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ ಅನ್ನು ಬಾಡಿಗೆ ಆಧಾರದಲ್ಲಿ ನೀಡುವುದರಿಂದ ಅದು ನಿರ್ಮಾಪಕರಿಗೆ ಹೊರೆಯಾಗುತ್ತದೆ ಎನ್ನುವುದು ಜಗ್ಗೇಶ್‌ ಮಾತು. “ಬಾಡಿಗೆ ಆಧಾರದಲ್ಲಿ ಮಲ್ಟಿಫ್ಲೆಕ್ಸ್‌ನಲ್ಲಿ ಸಿನಿಮಾಗಳನ್ನ ಪರ್ಸೆಂಟೇಜ್‌ ಆಧಾರದ ಮೇಲೆ ಪ್ರದರ್ಶಿಸುತ್ತಾರೆ. ಆದ್ರೆ ಅದೇ ಚಿತ್ರವನ್ನ ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳಲ್ಲಿ ಬಾಡಿಗೆ ಆಧಾರದ ಮೇಲೆ ಪ್ರದರ್ಶಿಸುತ್ತಾರೆ. ಒಂದು ಕಡೆ ಸಿಂಗಲ್‌ ಸ್ಕ್ರೀನ್‌ ಥಿಯೇಟರ್ಗೆ ಜನ ಬರುತ್ತಿಲ್ಲ.

ಮತ್ತೊಂದು ಕಡೆ ವಾರಕ್ಕೆ ನಿರ್ಮಾಪಕರು ತಮ್ಮ ಚಿತ್ರಕ್ಕೆ ಲಕ್ಷಾಂತರ ಬಾಡಿಗೆ ಕಟ್ಟಬೇಕು. ಎಷ್ಟೋ ಸಲ ಥಿಯೇಟರ್‌ನಿಂದ ಬಂದ ಕಲೆಕ್ಷನ್ಸ್‌ ಬಾಡಿಗೆ ಕಟ್ಟೋದಕ್ಕೂ ಸಾಕಾಗುವುದಿಲ್ಲ. ಹೀಗಿರುವಾಗ ಬಾಡಿಗೆ ಆಧಾರದ ಮೇಲೆ ಥಿಯೇಟರ್‌ ಕೊಡುವುದು ಎಷ್ಟರ ಮಟ್ಟಿಗೆ ಸರಿ ಅನ್ನೋದು ಜಗ್ಗೇಶ್‌ ಪ್ರಶ್ನೆ. ಥಿಯೇಟರ್‌ಗಳನ್ನ ಪರ್ಸೆಂಟೇಜ್‌ ಆಧಾರದ ಮೇಲೆ ಕೊಟ್ಟರೆ ನಿರ್ಮಾಪಕರಿಗೂ ಅನುಕೂಲವಾಗುತ್ತದೆ’ ಎನ್ನುತ್ತಾರೆ ಜಗ್ಗೇಶ್‌.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ