ಸದ್ದಿಲ್ಲದೇ ಭರ್ಜರಿ ಸದ್ದು ಮಾಡುತ್ತಿದೆ ಯಶ್ ಕೆಜಿಎಫ್ 2ನೇ ಟ್ರೈಲರ್!
Team Udayavani, Dec 5, 2018, 4:28 PM IST
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಗೊಂಡು ಭರ್ಜರಿ ಹವಾ ಎಬ್ಬಿಸಿರುವ ಬೆನ್ನಲ್ಲೇ ಇದೀಗ ಚಿತ್ರ ಬಿಡುಗಡೆಗೂ ಮುನ್ನ ಚಿತ್ರತಂಡ 2ನೇ ಟ್ರೈಲರ್ ಅನ್ನು ರಿಲೀಸ್ ಮಾಡುವ ಮೂಲಕ ಮತ್ತಷ್ಟು ಕುತೂಹಲವನ್ನು ಹುಟ್ಟಿಸಿದೆ.
ಎಕ್ಸೆಲ್ ಮೂವೀಸ್ ಡಿಸೆಂಬರ್ 4ರಂದು ಕೆಜಿಎಫ್ ನ ಹಿಂದಿ ಅವತರಿಣಿಕೆಯ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದು ಯೂಟ್ಯೂಬ್ ನಲ್ಲಿ ಭರ್ಜರಿ ಟ್ರೆಂಡ್ (10 ಲಕ್ಷ ವೀಕ್ಷಣೆ ಸಮೀಪಿಸುತ್ತಿದೆ) ಆಗಿದೆ. ಇದೀಗ ಕೆ.ಜಿ.ಎಫ್.ನ ಕನ್ನಡ ಅವತರಣಿಕೆಯೂ ಬಿಡುಗಡೆಗೊಂಡಿದ್ದು ಈಗಾಗಲೇ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಮತ್ತು ಬಿಡುಗಡೆಗೊಂಡ ಕೆಲವೇ ಗಂಟೆಗಳಲ್ಲಿ 75 ಸಾವಿರಕ್ಕೂ ಅಧಿಕ ಮಂದಿಯಿಂದ ವೀಕ್ಷಿಸಲ್ಪಟ್ಟ ದಾಖಲೆಗೆ ಪಾತ್ರವಾಗಿದೆ.
ಕೆಜಿಎಫ್ ಸಿನಿಮಾದ ಮೊದಲ ಟ್ರೈಲರ್ ಬಿಡುಗಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅಷ್ಟೇ ಅಲ್ಲ ಹಿಂದಿ, ಕನ್ನಡ, ತಮಿಳು, ತೆಲುಗು ಚಿತ್ರರಂಗ ಸಹ ಟ್ರೈಲರ್ ವೀಕ್ಷಿಸಿದ ನಂತರ ನಿಬ್ಬೆರಗಾಗಿತ್ತು. ಆದರೆ ಈಗ ಕೆಜಿಎಫ್ ನ ಹಿಂದಿ ಭಾಷೆಯ ಟ್ರೈಲರ್ ಸದ್ದಿಲ್ಲದೆ ರಿಲೀಸ್ ಆಗಿದ್ದರೂ ಕೂಡಾ ಯೂಟ್ಯೂಬ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.
ಟ್ರೈಲರ್ ವೀಕ್ಷಿಸುತ್ತಿದ್ದರೆ ಹಾಲಿವುಡ್ ಸಿನಿಮಾದ ಗುಂಗು ಹಿಡಿಸುವುದಂತೂ ಸತ್ಯ. ಮೊದಲು ಯಾರು ಹೊಡೆಯುತ್ತಾರೆ ಎಂಬುದು ಮುಖ್ಯವಲ್ಲ, ಮೊದಲು ಯಾರು ನೆಲಕ್ಕೆ ಉರುಳುತ್ತಾನೆ ಎಂಬುದು ಮುಖ್ಯ. ಗ್ಯಾಂಗ್ ಕರೆದುಕೊಂಡು ಬರುವವನು ಗ್ಯಾಂಗ್ ಸ್ಟರ್, ಒಬ್ಬನೇ ಬರುವವನು ಮಾನ್ ಸ್ಟರ್…ಹೀಗೆ ಹಲವು ಪಂಚಿಂಗ್ ಡೈಲಾಗ್ ಗಳು, ಗುಂಡಿನ ಭೋರ್ಗರೆತ ಹೇಗಿದೆ ಎಂಬುದನ್ನು ಟ್ರೈಲರ್ ಅನ್ನು ವೀಕ್ಷಿಸಿ…