ಅವತಾರ್‌ ಪುರುಷನ ಜೊತೆ ಕಿಟ್ಟಿ

ಬ್ಲ್ಯಾಕ್‌ ಮ್ಯಾಜಿಶಿಯನ್‌ ಆಗಿ ನಟನೆ

Team Udayavani, Jul 8, 2019, 3:03 AM IST

ಶರಣ್‌ ನಾಯಕರಾಗಿರುವ “ಅವತಾರ್‌ ಪುರುಷ’ ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ನಿರ್ದೇಶಕ ಸುನಿ, ಶರಣ್‌ ಅವರನ್ನು ಹೊಸ ಹೊಸ ಅವತಾರಗಳಲ್ಲಿ ತೋರಿಸುವಲ್ಲಿ ಬಿಝಿಯಾಗಿದ್ದಾರೆ. ಈ ನಡುವೆಯೇ “ಅವತಾರ್‌ ಪುರುಷ’ ಸಿನಿಮಾ ಕುರಿತಾದ ಸುದ್ದಿಯೊಂದು ಹೊರಬಂದಿದೆ. ಅದು ಚಿತ್ರದಲ್ಲಿ ನಟ ಶ್ರೀನಗರ ಕಿಟ್ಟಿ ಗೆಸ್ಟ್‌ ಅಪಿಯರೆನ್ಸ್‌ ಮಾಡಿರುವುದು.

ಹೌದು, “ಅವತಾರ್‌ ಪುರುಷ’ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಗೆಸ್ಟ್‌ ಅಪಿಯರೆನ್ಸ್‌ ಮಾಡಿದ್ದು, ಈಗಾಗಲೇ ಅವರ ಭಾಗದ ಚಿತ್ರೀಕರಣ ನಡೆಸಲಾಗಿದೆ. ಈ ಮೂಲಕ ಕಿಟ್ಟಿ ತುಂಬಾ ಗ್ಯಾಪ್‌ನ ನಂತರ ಬಣ್ಣ ಹಚ್ಚಿದಂತಾಗಿದೆ. ಈ ಹಿಂದೆ ಸುನಿ ನಿರ್ದೇಶನದ “ಬಹುಪರಾಕ್‌’ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದರು. ನಿರ್ದೇಶಕ ಸುನಿ ಹೇಳುವಂತೆ, ಚಿತ್ರದಲ್ಲಿ ಕಿಟ್ಟಿ ಅವರದು ಗೆಸ್ಟ್‌ ಅಪಿಯರೆನ್ಸ್‌ ಎನ್ನುವುದಕ್ಕಿಂತ ಇಡೀ ಚಿತ್ರಕ್ಕೆ ಟ್ವಿಸ್ಟ್‌ ಕೊಡುವ ಪ್ರಮುಖ ಪಾತ್ರ.

“ಚಿತ್ರದಲ್ಲಿ ಫ‌ಸ್ಟ್‌ಹಾಫ್ನಲ್ಲಿ ಶರಣ್‌ ಒಂದು ಉದ್ದೇಶಕ್ಕಾಗಿ ನಾನಾ ಅವತಾರವೆತ್ತಿರುತ್ತಾರೆ. ಆ ಉದ್ದೇಶ ಬಂದು ಕಿಟ್ಟಿ ಎಂಬುದನ್ನು ನಾವು ರಿವೀಲ್‌ ಮಾಡುತ್ತೇವೆ. ಕಿಟ್ಟಿಯವರನ್ನು ಒಂದು ಪಾತ್ರವಾಗಿಯೇ ತೋರಿಸುತ್ತಾ ಹೋಗಿದ್ದು, ಚಿತ್ರದಲ್ಲಿ ಅವರು ಬ್ಲ್ಯಾಕ್‌ ಮ್ಯಾಜಿಷಿಯನ್‌ ಆಗಿ ಕಾಣಿಸಿಕೊಳ್ಳುತ್ತಾರೆ. ಸುಮ್ಮನೆ ಏನೋ ಮಾಟ-ಮಂತ್ರ ಮಾಡುವ ಪಾತ್ರವಲ್ಲ.

ನೈಜ ಘಟನೆಗಳನ್ನು ಬೆರೆಸಿ ಅವರ ಪಾತ್ರವನ್ನು ಸೃಷ್ಟಿಸಲಾಗಿದೆ. ಒರಿಸ್ಸಾದ ಬಿಸ್ತಾದಿಂದ ಬಂದಿರುವ ಹಲವು ವಿದ್ಯೆಗಳನ್ನು ಅಳವಡಿಸಿಕೊಂಡಿರುವ ಪಾತ್ರ. ಕಥೆಗೆ ಪೂರ್ಣ ಟ್ವಿಸ್ಟ್‌ ಹಾಗೂ ಗಂಭೀರತೆ ಬರೋದು ಈ ಪಾತ್ರದಿಂದ. ಇಡೀ ಸಿನಿಮಾದಲ್ಲಿ ಕಿಟ್ಟಿ ಕಪ್ಪು ಬಟ್ಟೆಯಲ್ಲೇ ಕಾಣಿಸಿಕೊಳ್ಳುತ್ತಾರೆ. ಜೊತೆಗೆ ಇವರ ಮಾತು,

ನಡವಳಿಕೆ, ಆಹಾರ ಪದ್ಧತಿ ಎಲ್ಲವೂ ಭಿನ್ನವಾಗಿರಲಿದೆ. ಪಾತ್ರ ನೋಡಿದಾಗ ತಲೆಯಲ್ಲಿ ಗುಂಗು ಕಾಡುತ್ತದೆ. ಹೊಸ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ’ ಎಂದು ಕಿಟ್ಟಿ ಪಾತ್ರದ ಬಗ್ಗೆ ಹೇಳುತ್ತಾರೆ ಸುನಿ. ಅಂದಹಾಗೆ, ಇಂದು ಕಿಟ್ಟಿಯವರ ಹುಟ್ಟುಹಬ್ಬ. ಚಿತ್ರದಲ್ಲಿ ಶರಣ್‌-ಆಶಿಕಾ ನಾಯಕ-ನಾಯಕಿಯಾಗಿದ್ದು, ಪುಷ್ಕರ್‌ ಫಿಲಂಸ್‌ನಡಿ ಈ ಚಿತ್ರ ನಿರ್ಮಾಣವಾಗುತ್ತಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ