ನೂರು ಕೋಟಿ ಕ್ಲಬ್ ಸೇರಿದ ಕುರುಕ್ಷೇತ್ರ?
ದರ್ಶನ್ ಅಭಿಮಾನಿಗಳ ಸಂಭ್ರಮ
Team Udayavani, Aug 29, 2019, 3:00 AM IST
ದರ್ಶನ್ ಅಭಿನಯದ 50ನೇ ಸಿನಿಮಾ “ಮುನಿರತ್ನ ಕುರುಕ್ಷೇತ್ರ’ 100 ಕೋಟಿ ಕ್ಲಬ್ ಸೇರಿದೆ ಎಂದು ಘೋಷಿಸಿಕೊಂಡ ದರ್ಶನ್ ಅಭಿಮಾನಿಗಳು, ಇತ್ತೀಚೆಗೆ ದರ್ಶನ್ ಅವರನ್ನು ಭೇಟಿ ಮಾಡಿ, ಕೇಕ್ ಕತ್ತರಿಸಿ ಸಂತಸ ಹಂಚಿಕೊಂಡಿದ್ದಾರೆ. ಹೌದು, ದರ್ಶನ್ ಸುಯೋಧನನಾಗಿ ಅಭಿನಯಿಸಿರುವ “ಕುರುಕ್ಷೇತ್ರ’ 100 ಕೋಟಿ ಕ್ಲಬ್ ಸೇರಿದೆ ಎಂದು ದರ್ಶನ್ ಅಭಿಮಾನಿಗಳ ಸಂಘ ಅನೌನ್ಸ್ ಮಾಡಿದೆ.
ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ದರ್ಶನ್ ಜತೆಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಅಭಿಮಾನಿಗಳು ತಮ್ಮ ಟ್ವಿಟ್ಟರ್ನಲ್ಲಿ ಹಾಕಿದ್ದಾರೆ. “ಕುರುಕ್ಷೇತ್ರ’ ರಾಜ್ಯಾದ್ಯಂತ 3ನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್ ಗಳಿಕೆಯಲ್ಲಿ 100 ಕೋಟಿ ಕ್ಲಬ್ ಸೇರಿ ಮುನ್ನುಗ್ಗುತ್ತಿರುವ ಸಂಭ್ರಮಾಚರಣೆಯಲ್ಲಿ ಡಿ ಬಾಸ್ ಮತ್ತು ಅಭಿಮಾನಿಗಳು ಎಂದು ಡಿ ಕಂಪನಿ ಅಫಿಶಿಯಲ್ ಪೋಸ್ಟ್ ತಿಳಿಸಿದೆ.
ಚಿತ್ರದಲ್ಲಿ ದುರ್ಯೋಧನನ ಪಾತ್ರದಲ್ಲಿ ದರ್ಶನ್ ಅಬ್ಬರಿಸಿದ್ದಾರೆ. ಭೀಷ್ಮನಾಗಿ ಅಂಬರೀಶ್, ಕರ್ಣನಾಗಿ ಅರ್ಜುನ್ ಸರ್ಜಾ, ಅಭಿಮನ್ಯು ಆಗಿ ನಿಖಿಲ್, ಶಕುನಿ ಪಾತ್ರದಲ್ಲಿ ರವಿಶಂಕರ್, ದ್ರೌಪದಿಯಾಗಿ ಸ್ನೇಹಾ, ಅರ್ಜುನನಾಗಿ ಸೋನು ಸೂದ್, ಕೃಷ್ಣನಾಗಿ ರವಿಚಂದ್ರನ್ ಹಾಗೂ ಶಲ್ಯನ ಪಾತ್ರದಲ್ಲಿ ರಾಕ್ಲೈನ್ ವೆಂಕಟೇಶ್ ಕೂಡ ನಟಿಸಿದ್ದಾರೆ. ಸದ್ಯಕ್ಕೆ ದರ್ಶನ್ ಅಭಿಮಾನಿಗಳ ಸಂಭ್ರಮ ತುಸು ಜೋರಾಗಿಯೇ ಇದೆ.