ಬಂದ ನೋಡು ಪೈಲ್ವಾನ್‌…

ನಿರೀಕ್ಷೆಗಳ ಮಹಾಪೂರ

Team Udayavani, Sep 12, 2019, 3:01 AM IST

ನಟ ಕಿಚ್ಚ ಸುದೀಪ್‌ ಅಭಿನಯದ “ಪೈಲ್ವಾನ್‌’ ಚಿತ್ರ ಇಂದು ವಿಶ್ವದಾದ್ಯಂತ ತೆರೆಗೆ ಬರುತ್ತಿದೆ. “ಪೈಲ್ವಾನ್‌’ ಬಿಡುಗಡೆಗೂ ಮುನ್ನ ನಡೆದ ಚಿತ್ರದ ಪ್ರೀ-ರಿಲೀಸ್‌ ಇವೆಂಟ್‌ನಲ್ಲಿ ಭಾಗವಹಿಸಿದ ಚಿತ್ರತಂಡ, “ಪೈಲ್ವಾನ್‌’ ಬಗ್ಗೆ ಕುತೂಹಲ ಸಂಗತಿಗಳನ್ನು ತೆರೆದಿಟ್ಟಿದೆ. ನಾಯಕ ಸುದೀಪ್‌, ನಾಯಕಿ ಆಕಾಂಕ್ಷಾ ಸಿಂಗ್‌, ನಿರ್ದೇಶಕ ಎಸ್‌.ಕೃಷ್ಣ, ನಿರ್ಮಾಪಕಿ ಸ್ವಪ್ನಾ ಕೃಷ್ಣ, ರವಿಚಂದ್ರನ್‌, ವಿತರಕ ಕಾರ್ತಿಕ್‌ ಗೌಡ, ಚಿತ್ರದ ಬಗ್ಗೆ ಹೇಳಿದ್ದಿಷ್ಟು.

ಪೈಲ್ವಾನ್‌ ನೋಡಲಿರುವ ಸಲ್ಮಾನ್‌ಖಾನ್‌: ಹಿಂದಿಯಲ್ಲಿ ಬಿಡುಗಡೆಯಾಗುತ್ತಿರುವ “ಪೈಲ್ವಾನ್‌’ ಚಿತ್ರ ನೋಡಲು ನಟ ಸಲ್ಮಾನ್‌ ಖಾನ್‌ ಕಾತುರರಾಗಿದ್ದಾರಂತೆ. ಸ್ವತಃ ನಟ ಸುದೀಪ್‌ ಅವರೇ ಈ ಸಂಗತಿ ಹಂಚಿಕೊಂಡಿದ್ದಾರೆ. “ಮೊದಲಿನಿಂದಲೂ “ಪೈಲ್ವಾನ್‌’ ಚಿತ್ರದ ಬಗ್ಗೆ ಸಲ್ಮಾನ್‌ ಖಾನ್‌ ವಿಶೇಷ ಆಸಕ್ತಿ ಹೊಂದಿದ್ದಾರೆ. ಆರಂಭದಿಂದಲೂ ಚಿತ್ರತಂಡಕ್ಕೆ ಬೆಂಬಲಿಸುತ್ತ ಬಂದಿದ್ದಾರೆ. ಅಲ್ಲದೆ ಅವರೊಂದಿಗೆ “ದಬಾಂಗ್‌-3′ ಚಿತ್ರದಲ್ಲಿ ಅಭಿನಯಿಸುತ್ತಿರುವ ವೇಳೆಯಲ್ಲಿ, “ಪೈಲ್ವಾನ್‌’ ಬಗ್ಗೆಯೂ ಅನೇಕ ಬಾರಿ ಮಾತನಾಡಿದ್ದಾರೆ. ಚಿತ್ರವನ್ನು ಅವರೇ ನೋಡುವುದಾಗಿ ಹೇಳಿದ್ದಾರೆ. ಒಂದೆರಡು ದಿನದಲ್ಲಿ ಸಲ್ಮಾನ್‌ ಖಾನ್‌ “ಪೈಲ್ವಾನ್‌’ಅನ್ನು ನೋಡಲಿದ್ದಾರೆ’ ಎಂದಿದ್ದಾರೆ ಸುದೀಪ್‌.

ಪ್ಯಾನ್‌ ಇಂಡಿಯಾ ರಿಲೀಸ್‌ ಸುಲಭವಲ್ಲ: “ಪೈಲ್ವಾನ್‌’ ಏಕಕಾಲಕ್ಕೆ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ವಿದೇಶಗಳಲ್ಲೂ ತೆರೆ ಕಾಣುತ್ತಿದೆ. ಕನ್ನಡದ ಚಿತ್ರವೊಂದು ಹೀಗೆ ಏಕಕಾಲಕ್ಕೆ ಐದು ಭಾಷೆಗಳಲ್ಲಿ ಪ್ಯಾನ್‌ ಇಂಡಿಯಾ ರಿಲೀಸ್‌ ಆಗೋದು ದೊಡ್ಡ ವಿಷಯ ಅನ್ನೋದು ಸುದೀಪ್‌ ಮಾತು. “ಇವತ್ತು ಎಲ್ಲಾ ಚಿತ್ರರಂಗಗಳಿಗೆ ಅವುಗಳದ್ದೇ ಆದ ಮಾರುಕಟ್ಟೆ ಇದೆ. ಕನ್ನಡ ಚಿತ್ರವೊಂದರ ಪ್ರೊಡಕ್ಷನ್‌ಗೆ ಆಗುವ ಬಜೆಟ್‌ನ ಅಷ್ಟೇ ಮೊತ್ತವನ್ನು ಹಿಂದಿ, ತಮಿಳು, ತೆಲುಗು ಚಿತ್ರರಂಗದಲ್ಲಿ ರಿಲೀಸ್‌ಗೆ ತೆಗೆದಿರಿಸಬೇಕಾಗುತ್ತದೆ. ಅಲ್ಲದೆ ಚಿತ್ರದ ಕಂಟೆಂಟ್‌ ನೋಡಿ ಅಲ್ಲಿನ ವಿತರಕರು, ಪ್ರದರ್ಶಕರು ಚಿತ್ರ ತೆಗೆದುಕೊಳ್ಳಲು ಮುಂದೆ ಬರುತ್ತಾರೆ. ಹೀಗಿರುವಾಗ ಇವತ್ತು ಕನ್ನಡದ ಚಿತ್ರವೊಂದು ಪ್ಯಾನ್‌ ಇಂಡಿಯಾ ರಿಲೀಸ್‌ ಆಗ್ತಿದೆ ಅಂದ್ರೆ ಅದು ಸುಲಭದ ಮಾತಲ್ಲ’ ಎನ್ನುತ್ತಾರೆ ಸುದೀಪ್‌.

ಎಲ್ಲೆಡೆ ಭರ್ಜರಿ ಸಪೋರ್ಟ್‌ ಸಿಕ್ತಿದೆ: ಕಳೆದ ಕೆಲ ತಿಂಗಳಿನಿಂದ ಕನ್ನಡದ ಜೊತೆ ಜೊತೆಗೆ ಬೇರೆ ಬೇರೆ ಭಾಷೆಗಳಲ್ಲೂ “ಪೈಲ್ವಾನ್‌’ ಚಿತ್ರದ ಪ್ರಮೋಶನ್‌ನಲ್ಲಿರುವ ಚಿತ್ರತಂಡಕ್ಕೆ ಎಲ್ಲಾ ಭಾಷೆಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆಯಂತೆ. ಈ ಬಗ್ಗೆ ಮಾತನಾಡುವ ಸುದೀಪ್‌ ಮತ್ತು ನಿರ್ದೇಶಕ ಕೃಷ್ಣ, “ಕನ್ನಡದಲ್ಲಿ “ಪೈಲ್ವಾನ್‌’ಗೆ ಮೊದಲಿನಿಂದಲೂ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ಅದರ ಜೊತೆಗೆ ಹಿಂದಿ, ತೆಲುಗು ಮತ್ತು ತಮಿಳಿನಲ್ಲೂ ಕೂಡ ನಾವು ನಿರೀಕ್ಷೆ ಮಾಡಿರುವುದಕ್ಕಿಂತ ಹೆಚ್ಚಿನ ಪ್ರತಿಕ್ರಿಯೆ ಸಿಗುತ್ತಿದೆ. ಬೇರೆ ಭಾಷೆಯ ಸ್ಟಾರ್, ಅಲ್ಲಿನ ಆಡಿಯನ್ಸ್‌ ಕೂಡ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡುತ್ತಿದ್ದಾರೆ. ಈಗಾಗಲೇ ಹಲವು ಕಡೆಗಳಲ್ಲಿ ಚಿತ್ರದ ಪ್ರಮೋಶನ್‌ ನಡೆಸಿದ್ದು, ಒಂದೊಂದು ಕಡೆಗಳಲ್ಲೂ ಸಿಕ್ಕ ರೆಸ್ಪಾನ್ಸ್‌ ಅದ್ಭುತ’ ಎನ್ನುತ್ತಾರೆ.

ಮುಂದೆ ಕ್ರಿಕೆಟರ್‌ ಆಗ್ತಾರಾ ಸುದೀಪ್‌..?: ಇನ್ನು “ಪೈಲ್ವಾನ್‌’ ಚಿತ್ರದಲ್ಲಿ ಕುಸ್ತಿಪಟುವಾಗಿ ಮಿಂಚಿರುವ ಸುದೀಪ್‌ ಮುಂಬರುವ ಚಿತ್ರಗಳಲ್ಲೂ ಇಂಥದ್ದೇ ಪಾತ್ರಗಳು ಸಿಕ್ಕರೆ ಮಾಡುತ್ತಾರಾ ಎಂಬ ಪ್ರಶ್ನೆ ಅವರ ಅಭಿಮಾನಿಗಳದ್ದು. “ಪೈಲ್ವಾನ್‌’ ಬಿಡುಗಡೆ ವೇಳೆ “ಮುಂದೆ ಕ್ರಿಕೆಟ್‌ ಬಗ್ಗೆ ಸಿನಿಮಾ ಮಾಡುತ್ತೀರಾ?’ ಎಂಬ ಪ್ರಶ್ನೆ ಎದುರಾಯಿತು. ಈ ಬಗ್ಗೆ ಸ್ಪಷ್ಟಪಡಿಸಿದ ಸುದೀಪ್‌, “ಮೊದಲು ನಾನು ಕೂಡ “ಪೈಲ್ವಾನ್‌’ನಂಥ ಚಿತ್ರ ಮಾಡುತ್ತೇನೆ ಎಂದುಕೊಂಡಿರಲಿಲ್ಲ. ಎಲ್ಲವೂ ಕೂಡಿ ಬಂದಿದ್ದರಿಂದ ಈ ಚಿತ್ರ ಮಾಡಿದೆ. ಈಗ ಇಂಥದ್ದೊಂದು ಚಿತ್ರ ಮಾಡಿರುವುದಕ್ಕೆ ಖುಷಿ, ಸಮಾಧಾನ, ಹೆಮ್ಮೆ ಎಲ್ಲವೂ ಇದೆ. ಮುಂದೆ ಕ್ರಿಕೆಟ್‌ ಮೇಲೆ ಚಿತ್ರ ಮಾಡುವ ಅವಕಾಶ ಬಂದರೆ ಮಾಡುತ್ತೇನೆ. ಇವರು ಹೇಳಿದಾದ ಆ ಚಿತ್ರ ಶುರುವಾಗುತ್ತದೆ’ ಎಂದು ಪಕ್ಕದಲ್ಲಿದ್ದ ವಿತರಕ ಕಾರ್ತಿಕ್‌ ಗೌಡರನ್ನು ತೋರಿಸಿದರು.

ಟ್ರೇಲರ್‌ನಲ್ಲೇ ಫೈರ್‌ ಕಾಣ್ತಿದೆ: “ಸಿನಿಮಾದಲ್ಲಿ ಒಂದು ಫೈರ್‌ ಕಾಣಿಸಬೇಕು. “ಪೈಲ್ವಾನ್‌’ ಟ್ರೇಲರ್‌ ನೋಡಿದ ಮೇಲೆ ಅದರಲ್ಲಿ ನನಗೊಂದು ಫೈರ್‌ ಕಾಣಿಸಿತು. ಟ್ರೇಲರ್‌ ನೋಡಿದ ಮೇಲೆ ನನಗೆ ಸಿನಿಮಾ ನೋಡಬೇಕು ಅನಿಸಿತು. “ಪೈಲ್ವಾನ್‌’ನಲ್ಲಿ ಚಾರ್ಮ್ ಇದೆ. ಈ ಚಿತ್ರಕ್ಕೆ ಬೇಕಾದ ಚಾರ್ಮ್, ತೂಕ ಸುದೀಪ್‌ ಅವರಲ್ಲೂ ಇದೆ, ನಿರ್ದೇಶಕರ ನಿರ್ದೇಶನದಲ್ಲೂ ಇದೆ. ಆ ತೂಕ ಖಂಡಿತ ಸಿನಿಮಾದಲ್ಲಿದೆ’ ಎಂಬುದು ರವಿಚಂದ್ರನ್‌ ಮಾತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ